ಶಿಶು ಗೀತೆ-*ಪುಟ್ಟ*
ಕವನ
ನಾನೂ ಮೋನಾ ಕೂಡಿ ಚಿನ್ನೀ ದಾಂಡು ಆಡಿ
ಸೋತು ಗೆದ್ದು ಕುಣಿದೆವು ಎಲ್ಲರ ಜೋಡಿ
ನಮ್ಮ ಮನೆಯ ಮುದ್ದು ಪಾಪು ನಾಯಿಮರಿ
ಎಂಥ ಚೆಂದ ಅವನು ಪ್ರೀತಿ ಮಾಡುವ ಪರಿ
ಬಟ್ಟೆಚೂರು ಚೆಂಡು ಮಾಡಿ ನಾನೆಸೆಯುವೆ
ಓಡಿಹೋಗಿ ತಾರೆಂದು ಸನ್ನೆ ಮಾಡುವೆ
ನೆಗೆದು ನೆಗೆದು ಓಡುವನು ನಮ್ಮ ಪಾಪು
ಆಟ ಆಡಲವಗೆ ಇಷ್ಟ ತೆಂಗಿನ ತೋಪು
ಅವನ ಹೆಸರು ಪುಟ್ಟ ಮನೆಮಂದಿಗಿಷ್ಟ
ಸಿಟ್ಟು ಬಂದರವಗೆ ಮುಟ್ಟುವುದೆ ಕಷ್ಟ
ಆಚೆಮನೆ ಕೋಳಿ ಬರುವುದೆಮ್ಮ ಅಂಗಳಕ್ಕೆ
ಹಿತ್ತಲಿನ ಕಸದಗುಂಡಿ ಕೆದಕಲಿಕ್ಕೆ
ಅದನು ನೋಡಿ ಪುಟ್ಟ ಬೌ ಬೌ ಎನ್ನುವನು
ನಮ್ಮ ಹಿತ್ತಲಿಂದ ಹೊರಗೆ ಹೋಗಿರೆಂಬನು
ಉದ್ದುದ್ದ ರೋಮವಿದೆ ನಮ್ಮ ಬೆಕ್ಕು ಜೂಲಿಗೆ
ಜೂಲಿ ಜೊತೆ ಆಡಲು ತುಂಬ ಖುಷಿ ಪುಟ್ಟುಗೆ
ತಿಂಡಿ ತಿನ್ನುವಾಗ ಜೂಲಿಯನ್ನು ಕರೆವನು
ಸಿಟ್ಟು ಸೆಡವು ಮಾಡದೆ ಪ್ರೀತಿ ತೋರ್ವನು
ಅಮ್ಮನನ್ನು ಕಂಡರೆ ಬಹಳ ಪ್ರೀತಿ ಅವನಿಗೆ
ಎಲ್ಲಿ ಹೋದರೂನು ಅಮ್ಮ ಹಿಂದೆ ನಡೆವನು.
-*ಶಾಂತಾ ಜೆ ಅಳದಂಗಡಿ*
ಚಿತ್ರ: ಇಂಟರ್ನೆಟ್ ತಾಣ
ಚಿತ್ರ್