ಶುಂಠಿ ಬೆಳೆಯಲ್ಲಿ ಕೊಳೆರೋಗ ನಿಯಂತ್ರಣ ಹೇಗೆ?

ಶುಂಠಿ ಬೆಳೆಯಲ್ಲಿ ಕೊಳೆರೋಗ ನಿಯಂತ್ರಣ ಹೇಗೆ?

ಮಳೆಗಾಲದಲ್ಲಿ ಎಡೆಬಿಡದೇ ಮೂರು ನಾಲ್ಕು ದಿನಗಳ ತನಕ ಸುರಿಯುವ ಮಳೆ ಶುಂಠಿ ಬೆಳೆಯಲಾಗುವ ಪ್ರದೇಶದಲ್ಲಿ ಕೊಳೆ ರೋಗಕ್ಕೆ ಆಮಂತ್ರಣ ನೀಡುತ್ತದೆ. ಇನ್ನೇನು ಒಂದೆರಡು ತಿಂಗಳಲ್ಲಿ ಒಕ್ಕಣೆಯಾಗುವ ಶುಂಠಿಬೆಳೆ ಕೊಳೆ ಬಂದು ಹೋದರೆ ಭಾರೀ ನಷ್ಟ. ಆದ ಕಾರಣ ಕೊಳೆ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು.

ಗೆಡ್ಡೆ ಗೆಣಸಿನ ಬೆಳೆಯಾದ ಶುಂಠಿಯನ್ನು ಹೆಚ್ಚಿನ ರೈತರು ಮಾಗಿ ತಿಂಗಳ ನಂತರ (ಕುಂಭ ಮಾಸ ಮಾರ್ಚ್ ತಿಂಗಳ ಎರಡನೇ ವಾರದ ನಂತರ) ನಾಟಿ ಮಾಡುತ್ತಾರೆ. ಈ ಸಮಯದಲ್ಲಿ ನೆಟ್ಟು ನೀರಾವರಿ ಮಾಡಿ ಬೆಳೆಸಿದರೆ ಅಕ್ಟೋಬರ್  ನವೆಂಬರ್‌ಗೆ ಒಕ್ಕಣೆ ಸಾಧ್ಯವಾಗುತ್ತದೆ. ಮಳೆಗಾಲ ಬರುವ ಸಮಯಕ್ಕೆ ಇದು ಮೊಳಕೆ ಬಂದು ಸಸಿಯಾಗಿರುತ್ತದೆ. ನಾಟಿ ಮಾಡುವಾಗ ಕೊಳೆ ರೋಗ ಬರದಂತೆ ಹೆಚ್ಚಾದ ನೀರು ಬಸಿದು ಹೋಗಲು ಸಣ್ಣ ಸಣ್ಣ ಪಾತಿಯೋಪಾದಿಯ ಸಾಲನ್ನು ಮಾಡಿ ಆಳ ಬಸಿಗಾಲುವೆಗಳನ್ನು ಮಾಡಿರುತ್ತಾರೆ. ಆದರೂ  ಬೆಳೆ ಬೆಳೆಯಲಾಗುವ ಮಲೆನಾಡಿನ ಮಣ್ಣು ಅಂಟು ಮಣ್ಣಾಗಿರುವುದರಿಂದ ಮಳೆ ಬಂದರೆ ೨-೩ ದಿನ ನೀರು ಸಮರ್ಪಕವಾಗಿ ಬಸಿಯದೆ ಹಾಗೂ ಗಡ್ಡೆ ಜನ್ಯವಾಗಿ ಏನಾದರೂ ರೋಗ ಕುರುಹುಗಳಿದ್ದರೆ ರೋಗಗಳು ಬರುವುದು ಸಾಮಾನ್ಯ. ಶುಂಠಿ ನೆಟ್ಟ ಪಾತಿಯಲ್ಲಿ  ೧-೨ ಗಂಟೆ ನೀರು ನಿಂತರೆ ರೋಗ ಬರುವುದು ಖಾತ್ರಿ. ಶುಂಠಿ ಬೆಳೆಯನ್ನು ಕಾಡುವ ಹೆಚ್ಚು ನಷ್ಟ ತಂದೊಡ್ಡುವ ರೋಗ ಕೊಳೆ ರೋಗ. ಇದರಲ್ಲಿ ಬಹಳಷ್ಟು ಬೆಳೆ ಹಾನಿಯಾಗುತ್ತದೆ. ಮುಂಜಾಗ್ರತಾ ಕ್ರಮ ಕೈಗೊಂಡರೆ ಮಾತ್ರವೇ ಈ ಕೊಳೆ ರೋಗದಿಂದ ಬಚಾವಾಗಲು ಸಾಧ್ಯ.

ನಿರಂತರ ಒಂದೆರಡು ದಿನ ಮಳೆ ಬಂದರೆ ಸಾಕು, ವಾತಾವರಣದಲ್ಲಿ ತೇವಾಂಶ ಹೆಚ್ಚುತ್ತದೆ. ಆಗ ಶುಂಠಿ ಸಸಿಗಳ ಎಲೆಗಳ ಬಣ್ಣದಲ್ಲಿ ಬದಲಾವಣೆ ಕಂಡು ಬರುತ್ತದೆ. ಹಚ್ಚ ಹಸಿರಾಗಿದ್ದ ಗಿಡದ ಎಲೆಗಳು ಸ್ವಲ್ಪ ತಿಳಿ ಹಸುರು ಬಣ್ಣಕ್ಕೆ ತಿರುಗುತ್ತವೆ. ಹಾಗೆಯೇ  ಮುಂದುವರಿದು ಕೆಲವು ದಿನಗಳಲ್ಲಿ ಸುಳಿ ಭಾಗದ ಎಲೆಗಳು ಹಳದಿಯಾಗಲಾರಂಭಿಸುತ್ತವೆ. ನಂತರ ಮುಂದುವರಿದು ಕೆಳ ಭಾಗದ ಎಲೆಗಳಿಗೂ ಇದು ವ್ಯಾಪಿಸುತ್ತದೆ. ದಂಟಿನ ಭಾಗ ನೀರು ತುಂಬಿ ಕೊಂಡಂತೆ ಕಂಡು ಬರುತ್ತದೆ. ಕಾಂಡ ಭಾಗವನ್ನು ಲಘುವಾಗಿ ಒತ್ತಿದರೂ ಅದರಲ್ಲಿ ನೀರು ತುಂಬಿರುವುದರಿಂದ ಜಜ್ಜಲ್ಪಡುತ್ತದೆ. ಇಂಥ ಸಸಿಗಳು ಕೆಲವೇ ದಿನಗಳಲ್ಲಿ ಬುಡ ಸಮೇತ ಕೊಳೆಯುತ್ತವೆ.

ಇದು ಕೊಳೆ ಶಿಲೀಂದ್ರದಿಂದಾಗಿ  ಉಂಟಾಗುವ ರೋಗವೇ, ಬ್ಯಾಕ್ಟೀರಿಯಾದಿಂದ ಉಂಟಾಗುವ ಸಮಸ್ಯೆಯೇ ಎಂದು ತಿಳಿಯಲು, ಸೋಂಕಿಗೊಳಗಾದ ಸಸ್ಯವನ್ನು ಕಾಂಡ ಸಮೇತ ತುಂಡು ಮಾಡಿ ತೆಗೆದು ಒಂದು ಗ್ಲಾಸು ನೀರಿನಲ್ಲಿ ಅದನ್ನು ಮುಳುಗಿಸಿರಿ. ಆಗ ತುಂಡು ಮಾಡಿದ ಭಾಗದಲ್ಲಿ ನೊರೆಯೋಪಾದಿಯ ಗುಳ್ಳೆಗಳು ಹೊರ ಬಂದರೆ ಅದು ಬ್ಯಾಕ್ಟೀರಿಯ ಸೋಂಕು ಆಗಿರುತ್ತದೆ. ಇಲ್ಲವಾದರೆ ಅದು ಶಿಲೀಂದ್ರ ಸೋಂಕು. ಸಾಮಾನ್ಯವಾಗಿ ಶಿಲೀಂದ್ರ ಸೋಂಕು ಉಂಟಾಗುವುದೇ ಜಾಸ್ತಿ. ಆಗ ಗಿಡವು ಹಗುರವಾಗಿ ಎಳೆದರೂ ಕಿತ್ತುಕೊಂಡು ಬರುತ್ತದೆ. ಶಿಲೀಂದ್ರ ಸೋಂಕಿಗೆ ಒಳಗಾದ ಸಸ್ಯಗಳ ಕಾಂಡ ಭಾಗ ಬೆಂದಂತೆ ಇರುತ್ತದೆ. ದುರ್ವಾಸನೆಯನ್ನು ಹೊಂದಿರುತ್ತದೆ. ಈ ಶಿಲೀಂದ್ರ ಸೋಂಕು ಅಥವಾ ಬ್ಯಾಕ್ಟೀರಿಯಾ ಸೋಂಕು ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ನೀರಿನ ಮೂಲಕ ಪ್ರಸಾರವಾಗುತ್ತದೆ.

ರೋಗಾಣು ಮತ್ತು ಪೂರಕ ವಾತಾವರಣ: ಗಡ್ಡೆ ಕೊಳೆಯುವ ರೋಗವು ‘ಪೀಥಿಯಂ ಅಪಾನಿಡರ್ಮ್ಯಾಟಮ್’ ಎಂಬ ಶಿಲೀಂದ್ರದಿಂದ ಬರುತ್ತದೆ. ಇದು ಬಿತ್ತನೆ ಬೀಜ ಮತ್ತು  ಮಣ್ಣಿನ ಮೂಲಕ ಪ್ರಸಾರವಾಗುತ್ತದೆ. ವಾತಾವರಣದ ಉಷ್ಣಾಂಶ ೨೬ ಡಿಗ್ರಿಯಿಂದ ೩೬ ಡಿಗ್ರಿ ತನಕ ಹಾಗೂ ಆರ್ಧ್ರತೆ ೮೫ ಶೇ. ಮೀರುವ ಸಮಯದಲ್ಲಿ, ಬಿಸಿಲು ಮಳೆಯಿಂದ ಕೂಡಿದ ವಾತಾವರಣ ಇರುವಾಗ ಅಧಿಕವಾಗಿ ಪ್ರಸಾರವಾಗುತ್ತದೆ.

ರೋಗ ಸೋಂಕು ತಗಲಿದ ಗಡ್ಡೆಯನ್ನು ನಾಟಿ ಮಾಡಿದಾಗ ಪ್ರಾರಂಭದಲ್ಲಿ ಇದು ಗೊತ್ತಾಗದಿದ್ದರೂ ಅನುಕೂಲ ವಾತಾವರಣ ದೊರೆತಾಗ ಸುಪ್ತಾವಸ್ಥೆಯಲ್ಲಿದ್ದ ರೋಗಾಣು ಚಟುವಟಿಕೆ ಪ್ರಾರಂಭಿಸುತ್ತವೆ. ಮೊದಲ ಮಳೆಗೆ ಹಾಗೂ ಕೊನೆಯ ಮಳೆಗೆ ಇದು ಹೆಚ್ಚು. ಮಳೆಗಾಲಕ್ಕೆ ಹತ್ತಿರವಾಗಿ ನಾಟಿ ಮಾಡಿದರೆ, ಬಿತ್ತನೆ ಸಾಲುಗಳಿಗೆ ಭತ್ತದ ಹುಲ್ಲನ್ನು ಮೇಲು ಹಾಸಲು ಹಾಕಿದ್ದರೆ, ಒಮ್ಮೆ ಬೆಳೆ ಬೆಳೆದ ಹೊಲದಲ್ಲಿ ಮತ್ತೆ ಬೆಳೆದಿದ್ದರೆ ಹಾಗೂ ನೀರು ನಿಲ್ಲುವಂತಿದ್ದರೆ ರೋಗ ಬರುತ್ತದೆ.

ನಿರ್ವಹಣೆ: ನಾಟಿ ಮಾಡುವಾಗ ಮುನ್ನೆಚ್ಚರಿಕೆಯಾಗಿ ಗಡ್ಡೆಯನ್ನು ಶಿಲೀಂದ್ರ ನಾಶಕದಿಂದ ಉಪಚಾರ ಮಾಡಬೇಕು. ಬಿತ್ತನೆ ಬೀಜವನ್ನು ರೋಗ ಇಲ್ಲದ ಹೊಲದಿಂದಲೇ ಆಯ್ಕೆ ಮಾಡಬೇಕು. ಬಿತ್ತನೆಗೆ ಮುಂಚೆ ನೆಲವನ್ನು ಪೂರ್ತಿ ಉಳುಮೆ ಮಾಡಿ ನೆಲವನ್ನು ಬಿಸಿಲಿಗೆ ನಾಲ್ಕು ಐದು ದಿನ ಒಣಗಲು ಬಿಡಬೇಕು. ಇನ್ನು ಬರುವ ಕೊಳೆ ರೋಗವನ್ನು  ನಿಯಂತ್ರಿಸಲು ಇರುವ ಆಯ್ಕೆ ಶಿಲೀಂದ್ರ ನಾಶಕದ ಬಳಕೆ ಮಾತ್ರ. ಬೆಳೆಯುತ್ತಿರುವ ಸಸಿಗೆ ಯಾವುದೇ ಮುನ್ನೆಚ್ಚರಿಕೆಯ ಶಿಲೀಂದ್ರ ನಾಶಕ ಫಲಿತಾಂಶ ಕೊಡಲಾರದು. ಈಗ ಹವಾಮಾನವೂ ಸಹ ಇಂಥಃ ಶಿಲೀಂದ್ರ ನಾಶಕದ ಬಳಕೆಗೆ ಅನುಕೂಲಕರವಾಗಿಲ್ಲ. ಆದ ಕಾರಣ ಅಂತರ್ವ್ಯಾಪೀ ಶಿಲೀಂದ್ರ ನಾಶಕದ ಬಳಕೆಯೇ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಬರೇ ಶಿಲೀಂದ್ರ ನಾಶಕ ಒಂದೇ ಅಲ್ಲ ಅದರ ಜೊತೆಗೆ ಬ್ಯಾಕ್ಟೀರಿಯಾ ನಾಶಕವನ್ನೂ ಬಳಕೆ ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ ಎಂಬುದು ಮಾಡಿ ನೋಡಿದ ರೈತರ ಅನುಭವ.

ಶುಂಠಿ ಸಸ್ಯಕ್ಕೆ ಕೊಳೆ ರೋಗದ ಚಿನ್ಹೆ ಉಂಟಾಗಿದೆ ಎಂದಾಗ ಅಂತರ್ವ್ಯಾಪೀ ಶಿಲೀಂದ್ರ ನಾಶಕವಾದ ಸೆಕ್ಟಿನ್ ( ೧ ಲೀ ನೀರಿಗೆ ೧ ಗ್ರಾಂ ನಂತೆ) ಮತ್ತು ಅದರ ಜೊತೆಗೆ ಸ್ತೆಪ್ಟೋಸೈಕ್ಲಿನ್ ಉಳ್ಳ ಪ್ಲಾಂಟೋಮೈಸಿನ್ ಬೆರೆಸಿ ಸಿಂಪರಣೆ ಮಾಡಿದರೆ ಕೊಳೆ ರೋಗ ನಿಯಂತ್ರಣಕ್ಕೆ  ಬರುತ್ತದೆ. ಇನ್ನೂ ಕೆಲವು ರೈತರು ಪ್ಲಾಂಟೋಮೈಸಿನ್ ಹಾಗೂ ಪೊಟ್ಯಾಶಿಯಂ ಫೋಸ್ಫೋನೇಟ್ ಬೆರೆಸಿ ಸಿಂಪರಣೆ ಮಾಡಿ ಕೊಳೆ ಬಂದದ್ದನ್ನು  ಹತೋಟಿ ಮಾಡಿದ ನಿದರ್ಶನವಿದೆ. ಆದರೆ ಇದನ್ನು ಬಳಸಿದಾಗ ಕನಿಷ್ಟ ೬ ಗಂಟೆಯಾದರೂ ಅದು ಒಣಗಿ ಪತ್ರಗಳ ಮೂಲಕ ಹೀರಿಕೊಳ್ಳಬೇಕು.

ಶುಂಠಿಗೆ ಕೊಳೆ ರೋಗ ಬಂದಾಗ ಬೇರು ವಲಯಕ್ಕೆ ಪೆಟ್ಟಾಗುತ್ತದೆ. ಕೆಲವು ಬೇರುಗಳು ಸಾಯಲೂ ಬಹುದು. ಇದರಿಂದ ಗಡ್ಡೆಯ ಬೆಳವಣಿಗೆ ಕುಂಠಿತವಾಗುತ್ತದೆ. ಈ ಸಮಯದಲ್ಲಿ ಬೇರು ವ್ಯವಸ್ಥೆಯನ್ನು ಉತ್ತಮ ಪಡಿಸಲು ನೀರಿನಲ್ಲಿ ಕರಗುವ ಅಥವಾ ದ್ರವರೂಪದ ಹ್ಯೂಮಿಕ್ ಅಸಿಡ್ ಅನ್ನು ಲೀಟರಿಗೆ ೧ ಗ್ರಾಂ ನಂತೆ ಮಿಶ್ರಣ ಮಾಡಿ ಬುಡಕ್ಕೆ ಡ್ರೆಂಚಿಂಗ್ ಮಾಡುವುದು ಒಳ್ಳೆಯದು. ಇದರಿಂದ ಹೊಸ ಬೇರುಗಳು ಹುಟ್ಟಿಕೊಳ್ಳುತ್ತವೆ. ಇರುವ ಬೇರುಗಳು ಹೆಚ್ಚು ಕ್ರಿಯಾತ್ಮಕವಾಗುತ್ತವೆ.

ಇನ್ನು ಮಳೆಗಾಲದಲ್ಲಿ ಶುಂಠಿ ಸಸ್ಯಗಳ ಕಾಂಡವನ್ನು ಕೊರೆದು ಒಳ ಸೇರುವ ಹುಳದ ಉಪಟಳ ಇರುತ್ತದೆ. ಮರಿ ಹುಳಗಳು ಕಾಂಡದ ಬುಡಭಾಗದಿಂದ ಒಳ ಸೇರಿ ಸುರಂಗವನ್ನು ಕೊರೆದು ತಿನ್ನುತ್ತದೆ. ಮಧ್ಯದ ಎಲೆಗಳ ಮೇಲೆ ಅಡ್ಡಲಾಗಿ ಸಾಲಾದ ರಂದ್ರಗಳನ್ನು ಕಾಣಬಹುದು. ನಂತರ ಸಸ್ಯದ ಸುಳಿ ಭಾಗ ಒಣಗುತ್ತದೆ. ಇದೂ ಸಹ ಮೇಲ್ನೋಟಕ್ಕೆ ಕೊಳೆ ರೋಗದ ಚಿನ್ಹೆಯನ್ನೇ ತೋರ್ಪಡಿಸುತ್ತದೆಯಾದರೂ ಆಂಥಃ ಸಸ್ಯವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕೀಟ ಕೊರೆದುದು ಕಾಣುತ್ತದೆ. ಇದನ್ನು ನಿಯಂತ್ರಣ ಮಾಡದಿದ್ದಲ್ಲಿ  ಹಾನಿ ಹೆಚ್ಚಾಗಿ, ಅಲ್ಲಿಗೇ ಕೊಳೆತು ಸುಳಿ ಕೊಳೆಯಾಗಿ ಪರಿವರ್ತನೆಯಾಗಲೂ ಬಹುದು.ಇದು ಮಳೆಗಾಲ ಮುಗಿಯುವ ಹಂತದಲ್ಲಿ ಶುಂಠಿಗೆ ಬರುವ ತೊಂದರೆ.ಇದರ ಹತೋಟಿಗೆ ಮಳೆಗಾಲದಲ್ಲಿ ಎರಡು ಭಾರಿ ಡೈಮಿಥೋಯೇಟ್ ಇಲ್ಲವೇ ಮೋನೋಕ್ರೋಟೋಫಾಸ್, ಇಲ್ಲವೇ ಮೆಲಾಥಿಯಾನ್ ಕೀಟನಾಶಕವನ್ನು ಸಿಂಪರಣೆ ಮಾಡಬೇಕು.

ಶುಂಠಿಯನ್ನು ರೋಗ ಮುಕ್ತವಾಗಿ ಬೆಳೆಯಲು ಯವಾಗಲೂ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡು ಬೆಳೆಯುವುದೇ ಉತ್ತಮ. ಮಣ್ಣಿಗೆ ಜೈವಿಕ ಶಿಲೀಂದ್ರ ನಾಶಕವಾದ ಟ್ರೈಕೋಡರ್ಮಾ, ಸುಡೋಮೋನಸ್ ಮುಂತಾದವುಗಳನ್ನು ಬಳಕೆ ಮಾಡಬೇಕು. ಬಸಿ ಗಾಲುವೆಗಳನ್ನು ಸ್ವಚ್ಚ ಮಾಡಿ ನೀರು ಚೆನ್ನಾಗಿ ಬಸಿಯುವಂತೆ  ಮಾಡಬೇಕು. ಸಾಲುಗಳಲ್ಲಿ ನೀರು ನಿಲ್ಲದಂತೆ ಮಾಡಬೇಕು. ನಾಟಿ ಮಾಡಲು ಒಂಟಿ ಸಾಲುಗಳು ಉತ್ತಮ. ಸಾಲಿನ ಎತ್ತರ ೧ ಅಡಿಯಷ್ಟಾದರೂ ಇರಬೇಕು. ಮರಳು ಮಿಶ್ರಿತ ಮಣ್ಣಾಗಿದ್ದರೆ ಬಸಿಯುವಿಕೆಗೆ ಉತ್ತಮ. ಹೀಗೆಲ್ಲಾ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡರೆ ಶುಂಠಿ ಬೆಳೆ ಹಾಳಾಗದೇ ಸಿಗುವ ಸಾಧ್ಯತೆ ಇದೆ.

ಚಿತ್ರ ಮತ್ತು ಮಾಹಿತಿ: ರಾಧಾಕೃಷ್ಣ ಹೊಳ್ಳ