ಶುಂಠಿ ಬೆಳೆ ನಾಟಿ ಮಾಡುವ ಸೂಕ್ತ ಕ್ರಮ

ಶುಂಠಿ ಬೆಳೆ ನಾಟಿ ಮಾಡುವ ಸೂಕ್ತ ಕ್ರಮ

ಶುಂಠಿ ಒಂದು ಉತ್ತಮ ಆದಾಯ ನೀಡಬಲ್ಲ ಬೆಳೆ. ಕುಂಭ ಮಾಸ ಪ್ರಾರಂಭವಾಗುವಾಗ ಶುಂಠಿ ನಾಟಿ ಮಾಡುವುದು ಸಾಂಪ್ರದಾಯಿಕವಾಗಿ ನಡೆದು ಬಂದ ಪ್ರತೀತಿ. ಸರಿಯಾದ ಕ್ರಮದಲ್ಲಿ ಶುಂಠಿಯನ್ನು ನಾಟಿ ಮಾಡಿದರೆ ಇಳುವರಿಯ ಪ್ರಮಾಣವೂ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಹವಾಮಾನ ವೈಪರೀತ್ಯಗಳು ಸಂಭವಿಸದೇ ಹೋದಲ್ಲಿ ಶುಂಠಿಗೆ ಉತ್ತಮ ಧಾರಣೆಯೂ ದೊರೆಯುತ್ತದೆ.

ಶುಂಠಿ ನಾಟಿ ಮಾಡುವ ವಿಧಾನದ ಮೇಲೆ ಮುಂದಿನ ಇಳುವರಿ ನಿರ್ಧರಿತವಾಗುತ್ತದೆ ಎಂದರೆ ತಪ್ಪಾಗಲಾರದು. ಸಾಂಬಾರ ಬೆಳೆಯಾದರೂ ಗಡ್ಡೆ ಗೆಣಸು ಜಾತಿಗೆ ಸೇರಿದ ಶುಂಠಿ - ಅರಶಿನಗಳು ಈ ಸಮಯದಲ್ಲಿ ಸುಪ್ತಾವಸ್ತೆಯಿಂದ ಮೊಳಕೆ  ಬರುವ ಸ್ಥಿತಿಗೆ ಬರುತ್ತವೆ. ಯಾವುದೇ ಬೆಳೆಯ ನಾಟಿ ಸಮಯ ಅದರ ಬೇರು ಬಿಡುವಿಕೆಗೆ ಅನುಕೂಲಕರವಾಗಿರಬೇಕು. ಈ ಸಮಯದಲ್ಲಿ ಮಣ್ಣಿನಲ್ಲಿ ಬಿಸಿ ಇರುತ್ತದೆ. ಆದ ಕಾರಣ ಬೇರು ಚೆನ್ನಾಗಿ ಮೂಡುತ್ತದೆ. ಕೆಲವು ಕಡೆ ಮಳೆಗಾಲದಲ್ಲಿ  ನಾಟಿ ಮಾಡುವುದಿದೆ. ಆ ಸಮಯದಲ್ಲಿ ಮಣ್ಣು ಶೀತವಾಗುವುದರಿಂದ  ಬೇರು ಬೆಳವಣಿಗೆಗೆ ಅನನುಕೂಲವಾಗಿ ಹೆಚ್ಚು ಮೊಳಕೆ ಬರುವುದಿಲ್ಲ. ಇದರಿಂದ ಇಳುವರಿ ಕುಂಠಿತವಾಗುತ್ತದೆ. ಮಾರ್ಚ್ ಎರಡನೇ ವಾರದಿಂದ ಪ್ರಾರಂಭಿಸಿ ಎಪ್ರಿಲ್ ಕೊನೇ ತನಕವೂ ನಾಟಿ ಮುಂದುವರಿಸಬಹುದು. ಈ ರೀತಿ ನಾಟಿ ಮಾಡಿದ ಬೆಳೆಯಲ್ಲಿ ಉತ್ತಮ ಇಳುವರಿ ಬರುತ್ತದೆ. ನೀರಾವರಿ ಮಾತ್ರ ಕಡ್ಡಾಯವಾಗಿ ಮಾಡಲೇ ಬೇಕಾಗುತ್ತದೆ.

ಶುಂಠಿ ಬೆಳೆಸಲು ಮಲೆನಾಡು ಕರಾವಳಿ ಪ್ರದೇಶಗಳು ಮಾತ್ರವೇ ಸೂಕ್ತ ಎಂಬ ಮಾತು ಇತ್ತಾದರೂ ಈಗ ಇದು ಬದಲಾಗಿದೆ. ಬಯಲು ಸೀಮೆಯ ಪ್ರದೇಶಗಳಲ್ಲೂ  ಇದನ್ನು ಬೆಳೆಸಬಹುದು. ಈಗಾಗಲೇ ಅರಶಿನ ಬೆಳೆಯಲಾಗುತ್ತಿರುವ ಬಾಗಲಕೊಟೆ ಜಿಲ್ಲೆಯಲ್ಲಿ ಹಲವಾರು ಜನ ಶುಂಠಿ ಬೆಳೆಸಲು ಪ್ರಾರಂಭಿಸಿದ್ದಾರೆ. ಅದೇ ರೀತಿ ಚಾಮರಾಜನಗರ, ಚಿತ್ರದುರ್ಗದ ಕೆಲವು  ಕಡೆಗಳಲ್ಲೂ ಬೆಳೆಸುವುದನ್ನು  ಕಾಣಬಹುದು.  

ಬಿತ್ತನೆ ಗಡ್ಡೆ: ಬಿತ್ತನೆ ಮಾಡುವ ಗಡ್ಡೆ ರೋಗ ಮುಕ್ತವಾಗಿರಬೇಕು. ಯಾವುದೇ ಕೊಳೆತ ಚಿನ್ಹೆ ಇರಬಾರದು. ಇಂತಹ ಗಡ್ಡೆಗಳನ್ನು ಮಾತ್ರವೇ ಬಳಕೆ ಮಾಡಬೇಕು. ಒಂದು ಹೆಕ್ಟೇರ್ ಬಿತ್ತನೆಗೆ ೧೮೦೦ ದಿಂದ ೨೫೦೦ ಕಿಲೋ ತನಕ ಬಿತ್ತನೆ ಗಡ್ಡೆ ಬೇಕಾಗುತ್ತದೆ.  ಬಿತ್ತನೆ ಗಡ್ಡೆಯನ್ನು ಅವರವರೇ ಮಾಡಿಕೊಂಡಿದ್ದರೆ ಅದನ್ನು ಸ್ವಲ್ಪ ದೊಡ್ಡದಾಗಿಯೇ ಇರುವಂತೆ ನಾಟಿಗೆ ಬಳಕೆ ಮಾಡಿಕೊಳ್ಳಬಹುದು. ಒಂದು ವೇಳೆ  ಕೊಂಡು ತರುವುದಾದರೆ ಗಡ್ಡೆಯು ಕನಿಷ್ಟ ೧೫ ಗ್ರಾಂ ಇರುವಷ್ಟು ದೊಡ್ಡದಿರಬೇಕು. ಪ್ರತೀ ಗಡ್ಡೆಯಲ್ಲಿ ಕನಿಷ್ಟ ೨ ಆದರೂ ಮೊಳಕೆಗಳು ಇರಬೇಕು.

ಬೀಜೋಪಚಾರ: ಬಿತ್ತನೆಗೆ ಬಳಕೆ ಮಾಡುವ ಬಿತ್ತನೆ ಗಡ್ಡೆಗಳನ್ನು ೩೦ ನಿಮಿಷ ಕಾಲ ಶೇ. ೩ರ ಮ್ಯಾಂಕೋಜೆಬ್ ಅಂಶ ಉಳ್ಳ ದ್ರಾವಣದಲ್ಲಿ ಅದ್ದಬೇಕು. ಇದರಿಂದ ಯಾವುದಾರರೂ ಶಿಲೀಂದ್ರ ಸೋಂಕು ಇದ್ದಲ್ಲಿ ಅದರ ನಿವಾರಣೆ ಸಾಧ್ಯ. ಇಷ್ಟಲ್ಲದೆ ಯಾವುದಾದರೂ ಕೀಟ ಸೋಂಕು ಇರುವ ಸಾಧ್ಯತೆಗಾಗಿ ೦.೦೫ % ಮೆಲಾಥಿಯಾನ್ ಕೀಟನಾಶಕ ಮತ್ತು ಬ್ಯಾಕ್ಟೀರಿಯಾ ಸೋಂಕು ಇದ್ದಲ್ಲಿ ೨೦೦ ಪಿ ಪಿ ಎಂ ನ ಸ್ಟೆಪ್ಟೋಸೈಕ್ಲಿನ್ ದ್ರಾವಣದಲ್ಲಿ ಅದ್ದಿ, ನೆರಳಿನಲ್ಲಿ ೨-೩ ಗಂಟೆ ಕಾಲ ಒಣಗಿಸಿ ನಂತರ ನಾಟಿ ಮಾಡಬೇಕು. ಕೆಲವು ರೈತರು ಮಾತ್ರ ಬೇರೆ ಬೇರೆ ಶಿಲೀಂದ್ರ ನಾಶಕ ಮತ್ತು ಕೀಟನಾಶಕ ಬಳಸುತ್ತಾರೆ.

ಭೂಮಿ ಸಿದ್ದತೆ: ನಾಟಿಗೆ ಮುಂಚೆ ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ಮಣ್ಣನ್ನು ಸಡಿಲ ಮಾಡಿಕೊಳ್ಳಬೇಕು. ೪-೫ ಬಾರಿಯಾದರೂ ಭೂಮಿಯ ಉಳುಮೆ ಅಗತ್ಯ. ಭೂಮಿ ಉಳುಮೆ ಮಾಡಿ ಜೋಡಿ ಸಾಲು ಪದ್ದತಿಯಲ್ಲಿ ಅಥವಾ ಏಕ ಸಾಲು ಪದ್ದತಿಯಲ್ಲಿ ಸಾಲುಗಳನ್ನು ತೆಗೆಯಬೇಕು. ಸ್ಪ್ರಿಂಕ್ಲರ್ ನೀರಾವರಿ ಮಾಡುವವರು ಜೊಡಿ ಸಾಲು ಪದ್ದತಿಯನ್ನು ಅನುಸರಿಸುವುದು ಉತ್ತಮ. ಹನಿ ನೀರಾವರಿ ಮಾಡುವವರು ಒಂಟಿ ಸಾಲುಗಳನ್ನು ಮಾಡಿಕೊಳ್ಳಬೇಕು. ಜೋಡಿ ಸಾಲು ಪದ್ದತಿಯನ್ನು ೩ಮೀ ಅಗಲ ಮತ್ತು ಮಧ್ಯಂತರದಲ್ಲಿ ೧ ಮೀ. ಖಾಲಿ ಸ್ಥಳ ಇರುವಂತೆ  ಮಾಡಿಕೊಳ್ಳಿ. ಒಂಟಿ ಸಾಲುಗಳನ್ನು ೧ ಮೀ X ೧ ಮೀ ಅಂತರದಲ್ಲಿ ಮಾಡಿಕೊಳ್ಳಬೇಕು. ಮಳೆಗಾಲದಲ್ಲಿ ನೀರು ಹೆಚ್ಚು ನಿಲ್ಲುವ ಸ್ಥಳವಾದರೆ ಎರಡು ಸಾಲುಗಳ ಮಧ್ಯೆ ೨ ಅಡಿ ಆಳದ ಬಸಿಗಾಲುವೆ ಮಾಡಿಕೊಳ್ಳಬೇಕು.

ಸಾಲು ಮಾಡಿದ ನಂತರ ೨೦-೨೫ ಸೆಂ. ಮೀ. ಅಂತರದಲ್ಲಿ ಕೈಯಿಂದ ಮಣ್ಣು ತೆಗೆದು ಸಣ್ಣ  ಗುಳಿ ಮಾಡಿ ಅದಕ್ಕೆ ಕಾಂಪೋಸ್ಟು ಗೊಬ್ಬರ ಹಾಕಿ ಅದರ ಮೇಲೆ ಬಿತ್ತನೆ ಗಡ್ಡೆಯನ್ನು ನಾಟಿ ಮಾಡಬೇಕು. ಕಾಂಪೋಸ್ಟು ಗೊಬ್ಬರಕ್ಕೆ  ಒಂದು ಟನ್ ಗೆ ೧ ಕಿಲೋ ಪ್ರಮಾಣದಲ್ಲಿ ಟ್ರೈಕೋಡರ್ಮಾ ಮತ್ತು ೧ ಕಿಲೋ ಗ್ರಾಂ ಜೀವಾಣು ಗೊಬ್ಬರ, ೨ ಟನ್ ಬೇವಿನ ಹಿಂಡಿ ಮಿಶ್ರಣ ಮಾಡಿದರೆ ಗಡ್ಡೆಯ ಬೆಳವಣಿಗೆಗೆ ತುಂಬಾ ಅನುಕೂಲವಾಗುತ್ತದೆ. ಇದರಿಂದ ಕೊಳೆ ರೋಗ, ಜಂತು ಹುಳ ಕಡಿಮೆಯಾಗುತ್ತದೆ. ಬಿತ್ತನೆ ಸಮಯದಲ್ಲಿ ಸಾಲುಗಳ ಉದ್ದ ಅಗಲವನ್ನು ಅಂದಾಜು ಮಾಡಿ ಹೆಕ್ಟೇರಿಗೆ ೫೦ ಕಿಲೋ ರಂಜಕ ಗೊಬ್ಬರ, ೨೫ ಕಿಲೋ ಪೊಟ್ಯಾಶಿಯಂ ಗೊಬ್ಬರವನ್ನು  ಮಣ್ಣಿಗೆ ಸೇರಿಸಿರಬೇಕು. ಗಡ್ಡೆಯ ಮೊಳಕೆ ಮೇಲ್ಭಾಗಕ್ಕಿರುವಂತೆ ನಾಟಿ ಮಾಡಬೇಕು. ಗಡ್ಡೆ ಇಟ್ಟು ಅದರ ಮೇಲೆ ಒಂದೊಂದು ಮುಷ್ಟಿಯಷ್ಟು ಮತ್ತೆ ಕಾಂಪೋಸ್ಟು ಗೊಬ್ಬರವನ್ನು ಹಾಕಿ ಅಗತ್ಯವಿದ್ದರೆ ತೆಳುವಾಗಿ ಮಣ್ಣು ಏರಿಸಬಹುದು. ನಂತರ ಅದರ ಮೇಲೆ ತರಗೆಲೆ ಅಥವಾ ಭತ್ತದ ಹುಲ್ಲನ್ನು ಹಾಕಿ ಮುಚ್ಚಬೇಕು. ನಾಟಿ ಮಾಡುವ ಮುನ್ನ ನೀರಾವರಿ ಮಾಡಿ ಮಣ್ಣು ನೆನೆನೆಸಿರಬೇಕು. ನಾಟಿ ಮಾಡಿದ ನಂತರ ನೀರಾವರಿ ಮಾಡಬೇಕು.

ನಾಟಿ ಮಾಡುವ ಸಮಯದಲ್ಲಿ ಕಳಿತ ಕಾಂಪೋಸ್ಟು ಗೊಬ್ಬರವನ್ನು ಹೆಕ್ಟೇರಿಗೆ ೨೦-೨೫ ಟನ್ ನಷ್ಟು ಕೊಡಬೇಕು. ನಾಟಿ ಮಾಡಿದ ನಂತರ ೪೦ ದಿನಕ್ಕೆ - ೬೦ ದಿನಕ್ಕೆ  ಕಳೆ ತೆಗೆದು ಗೊಬ್ಬರ ಕೊಡಬೇಕು. ನೀರಾವರಿ ಕಡಿಮೆ ಇರುವ ಕಡೆ ಸಾಲುಗಳಿಗೆ ಪಾಲಿಥೀನ್ ಶೀಟು ಹೊದಿಸಿ ಗಡ್ಡೆ ನಾಟಿ ಮಾಡಿದರೆ ಇಳುವರಿ ಉತ್ತಮವಾಗುತ್ತದೆ.

ಚಿತ್ರಗಳು: ರಾಧಾಕೃಷ್ಣ ಹೊಳ್ಳ