ಶುಚಿ ಮತ್ತು ರುಚಿ
ಶುಚಿ ಮತ್ತು ರುಚಿಗಳಿಗೆ ಬಹಳ ಪ್ರಾಮುಖ್ಯತೆಯನ್ನು ಕೊಡಬೇಕಾದುದು ಮನುಷ್ಯನ ಕರ್ತವ್ಯ. ಶುಚಿ-ರುಚಿಗಳು ದೇಹ ಮತ್ತು ಸಮಾಜದ ಆರೋಗ್ಯಕ್ಕೂ ಅಗತ್ಯ. ಲೇಖನದಲ್ಲಿ ಶುಚಿಯ ಬಗ್ಗೆ ಒಂದೆರಡು ಅನಿಸಿಕೆಗಳನ್ನು ವ್ಯಕ್ತಗೊಳಿಸುವುದು ಸೂಕ್ತ ಎಂದೆನಿಸುತ್ತದೆ. ಶುಚಿಯೆಂದೊಡನೆ ಸ್ವಚ್ಛತೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕೆಲವರು ಸ್ನಾನ ಮಾಡಿ ನಾನು ಶುಚಿಯಾಗಿದ್ದೇನೆ ಎಂದು ಹೇಳುವರು. ಆದರೆ ದೇಹದ ಹೊರಗಿನ ಶುಚಿಯು ಮಾತ್ರ ಸಾಕೇ...? ದೇಹ ಶುಚಿಯು ವ್ಯಕ್ತಿಗತವಾದ ಆರೋಗ್ಯಕ್ಕೆ ಸಹಾಯಕವಾದರೂ, ವ್ಯಕ್ತಿತ್ವದ ಔನ್ನತ್ಯಕ್ಕೆ ಬಾಹ್ಯ ದೇಹ ಸ್ನಾನದ ಶುಚಿತ್ವ ಸಾಲದು. ಬಾಹ್ಯ ದೇಹದ ಸ್ನಾನ ಮಾಡಿ ಶುಚಿಯಾದೆ ಎಂದರೆ ಅದು ಅನುಚಿತ ಮಾತು.
ಶುಚಿಯಾದ ನಾಲಿಗೆ, ಶುಚಿಯಾದ ಯೋಚನೆ, ಶುಚಿಯಾದ ಭಾವನೆ, ಶುಚಿಯಾದ ಮನಸ್ಸು, ಶುಚಿಯಾದ ಹೃದಯ, ಶುಚಿಯಾದ ನೋಟ ಹೀಗೆ ಶುಚಿ ಜೋಡಿತ ಪದಗಳನ್ನು ಗಮನಿಸಿದ್ದೇವೆ. ಬಸವಣ್ಣನವರು ಅಂತರಂಗದ ಶುದ್ಧಿಯ ಮಹತ್ವವನ್ನು ಜಾಹೀರುಗೊಳಿಸಿದ್ದಾರೆ. ದೈನಂದಿನ ವ್ಯವಹಾರಗಳು ಶುಚಿಯಾಗಿರಲು ಅಂತರಂಗದ ಶುಚಿತ್ವವು ನಿರ್ಣಾಯಕವಾಗುತ್ತದೆ. ಬಾಹ್ಯ ಶುಚಿತ್ವ ದೃಗ್ಗೋಚರವಾದುದು. ಆದರೆ ಅಂತರಂಗದ ಶುಚಿತ್ವವನ್ನು ಶಸ್ತ್ರ ಚಿಕಿತ್ಸೆಯ ಮೂಲಕವೂ ವೀಕ್ಷಿಸಲಾಗದು. ಒಳದೇಹದ ಎಲ್ಲ ದೋಷಗಳನ್ನು ‘ಸ್ಕ್ಯಾನಿಂಗ್’ ಯಂತ್ರ ಓದುತ್ತದೆ. ಆದರೆ ಆಂತರಿಕ ಶುಚಿತ್ವವನ್ನು ಓದ ಬಲ್ಲ ಯಂತ್ರಗಳನ್ನು ನಾವು ಇನ್ನೂ ಅನ್ವೇಷಿಸಿಲ್ಲ.
ಮನಸ್ಸಿನ ಶುಚಿತ್ವಕ್ಕೆ ಮುಖವೇ ಕನ್ನಡಿಯೆಂಬ ಮಾತಿದೆ. ಅಂತರಂಗವು ಮಲಿನವಾಗಿದ್ದಾಗ ಎಲ್ಲ ವರ್ತನಾ ಭಾವಗಳು ಮುಖ ಮತ್ತು ಅಂಗಾಂಗಗಳಲ್ಲಿ ಪ್ರತಿಫಲಿತವಾಗುತ್ತವೆ. ಸತ್ಯದಿಂದ ಹೊರಗಾದ ಮಾತು ಮುಖದ ಕಾಂತಿಯನ್ನು ಮ್ಲಾನಗೊಳಿಸುತ್ತದೆ. ಬೆವರಿಳಿಸುವುದೂ ಇದೆ. ದೇಹದಲ್ಲಿ ಒಂದು ರೀತಿಯ ಕಂಪನವೂ ಗೋಚರಿಸುತ್ತದೆ. ನಾಲಿಗೆ ತೊದಲಲು ಆರಂಭವಾಗಿ ಅಸ್ಪಷ್ಟ ಪದಗಳು ಬಾಯಿಯಿಂದ ಹೊರಡುತ್ತವೆ. ಮಾತು ನಿಯಂತ್ರಣ ತಪ್ಪಿ ಹೋಗುತ್ತದೆ. ದೇಹದಲ್ಲಿನ ಜಲಪ್ರಮಾಣವನ್ನು ಒಮ್ಮೆಲೇ ಇಳಿಮುಖಗೊಳಿಸತೊಡಗುತ್ತದೆ. ಅತಿಯಾದ ಬೆವರುವಿಕೆಯೇ ಇದಕ್ಕೆ ಕಾರಣ. ಒಟ್ಟಿನಲ್ಲಿ ಅಂತರಂಗದ ಅಶುಚಿತ್ವ ದೇಹಾರೋಗ್ಯದ ಮೇಲೆ ಋಣಾತ್ಮಕ ಪ್ರಭಾವವನ್ನುಂಟು ಮಾಡುತ್ತದೆ. ಮನದೊಳಗಿನ ಎಲ್ಲ ಮಾಲಿನ್ಯಗಳೂ ದೇಹದ ಅನಾರೋಗ್ಯಕ್ಕೆ ಹೇತುವಾಗುತ್ತವೆ.
ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರಗಳು ಮಲಿನತೆಗೆ ಮೂಲ ಕಾರಣ. ಈ ಆರು ವಿಷಯಗಳೂ ಮಾನವನಿಗೆ ಶತ್ರುಗಳು ಎಂದು ಹೇಳುತ್ತೇವೆ. ಈ ಶತ್ರುಗಳು ಮನಸ್ಸಿನ ಭಾವನೆಗಳಿಗೆ ಸಂಬಂಧಿಸಿವೆ. ಈ ನಾಗರಿಕ ಸಮಾಜದಲ್ಲಿ ವಸ್ತುಗಳೂ ನಮಗೆ ಶತ್ರುಗಳಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಚರವಾಣಿ ಮತ್ತು ದೂರದರ್ಶನಗಳ ಅತಿಯಾದ ಬಳಕೆಯೂ ನಮಗೆ ಶತ್ರುಗಳಾಗಿವೆ. ಆದುದರಿಂದ ಅರಿ ಷಡ್ವರ್ಗವನ್ನು ಅರಿ ಅಷ್ಟವರ್ಗವೆಂದು ಬದಲಾಯಿಸಿದರೆ ತಪ್ಪಾಗದು. ಹಾಗೆಯೇ ಈ ಸಾಧನಗಳ ಮೂಲಕ ನಾವು ಜಾಲತಾಣಗಳಲ್ಲಿ ಓಡಾಡುತ್ತಾ ಸಮಯವನ್ನು ದುರ್ಬಳಕೆ ಮಾಡುವುದರೊಂದಿಗೆ ಕೆಡುಕುಗಳಿಗೆ ಶರಣಾಗುವ ಸಾಧ್ಯತೆಯೂ ಇದೆ. ಚರವಾಣಿಯಲ್ಲಿ ಸ್ಪರ್ಷಪರದೆಯವು ಹೆಚ್ಚು ಅಪಾಯಕಾರಿ. ಆದರೆ ಅದೇ ವಸ್ತುಗಳನ್ನು ವ್ಯಕ್ತಿತ್ವ ವಿಕಾಸಕ್ಕೂ ಬಳಸುವುದು ನಮ್ಮ ಜಾಣ್ಮೆಯಾಗಿರಬೇಕು. ಚಾಕು ತರಕಾರಿ ಕತ್ತರಿಸಲು ಬೇಕೇ ಬೇಕು. ರುಂಡ ಕತ್ತರಿಸ ಬಾರದು ಎಂಬ ಪ್ರಜ್ಞೆಯಿದ್ದಾಗ ಚಾಕು ಅಪಾಯಕರವಾಗದು. ಜಾಲತಾಣಗಳನ್ನೂ ಬಳಸುವ ವಿಧಾನದಲ್ಲಿಯೇ ನಮ್ಮ ಉತ್ಕರ್ಷವಿದೆ.
ಅಂತರಂಗದ ಶುಚಿತ್ವದಲ್ಲಿ ನಮ್ಮ ಆಹಾರ ಕ್ರಮವೂ ಪರಿಣಾಮ ಬೀರುತ್ತದೆ. ಅಶಾಂತ ಮನಸ್ಸಿನೊಂದಿಗೆ ಸೇವಿಸಿದ ಆಹಾರವು ಭಾವನೆಗಳಲ್ಲಿ ವಿಚಲನೆಯನ್ನುಂಟುಮಾಡುತ್ತದೆ. ಅದೇ ರೀತಿ ಅತ್ಯವಸರದ ಆಹಾರ ಸೇವನೆಯೂ ಮಾನಸಿಕ ವಿಚಾರಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಿತಿ ಮೀರಿದ ಆಹಾರವೂ ದೈಹಿಕತೆ ಮತ್ತು ಮಾನಸಿಕತೆಯಲ್ಲಿ ಏರುಪೇರುಗಳನ್ನು ತರುತ್ತದೆ. ಸಂತುಲಿತವಲ್ಲದ ಆಹಾರವೂ ಅಂತರಂಗದ ಅಶುಚಿತ್ವಕ್ಕೆ ಕಾರಣವಾಗುತ್ತದೆ. ಅಂತರಂಗ ಮತ್ತು ಬಹಿರಂಗಗಳೆರಡರಲ್ಲೂ ಶುಚಿತ್ವ ಅನುಸರಿಸೋಣ.
-ರಮೇಶ ಎಂ. ಬಾಯಾರು, ಬಂಟ್ವಾಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ