ಶುಭದಿನಕ್ಕೊಂದು ಶುಭನುಡಿ

ಶುಭದಿನಕ್ಕೊಂದು ಶುಭನುಡಿ

ಮರೆಯುವುದು ಎಂಬುದು ಒಳ್ಳೆಯ ಗುಣವೂ ಹೌದು, ಕೆಟ್ಟ ಗುಣವೂ ಹೌದು. ಮರೆತೇ ಹೋಯಿತು, ಎಷ್ಟೋ ಸಲ ಈ ಪದವನ್ನು ನಮ್ಮ ಜೀವನದಲ್ಲಿ ಬಳಸುತ್ತೇವೆ. ಇದು ಮಾನವ ಸಹಜ ಗುಣ. ಮನ್ನಿಸುವುದು ಅಥವಾ ಕ್ಷಮಿಸುವುದು ದೈವೀಗುಣ.To forget is Human.To forgive is Divine--ಇದು ಒಂದು ಆಂಗ್ಲ ಗಾದೆ.

ಇಲ್ಲಿ ನಾವು ಮರೆಯಬೇಕಾದ್ದು ನಮ್ಮ ಕರ್ತವ್ಯವನ್ನು ಅಲ್ಲ, ಇನ್ನೊಬ್ಬರು ಮಾಡಿದ ಉಪಕಾರವನ್ನಲ್ಲ. ಬೇಡದ ವಿಷಯಗಳನ್ನು ಮರೆಯೋಣ. ಮನಸ್ಸಿನಿಂದಲೇ ಬೇರು ಸಹಿತ ಕಿತ್ತು ಎಸೆಯೋಣ. ಆದರೆ ನಾವು ಹಾಗೆ ಮಾಡುತ್ತಿಲ್ಲ,"ಅಂದು ಅವನು ನನಗೆ ಹಾಗೆಯೇ ಅವಮಾನ ಮಾಡಿದ್ದಾನೆ, ನಾನು ಸಮಯ ಕಾದು ಅವನಿಗೆ ಬುದ್ಧಿ ಕಲಿಸಲೇ ಬೇಕು "ಇದು ನಮ್ಮ ತಲೆಯಲ್ಲಿ ಹುಳದ ಹಾಗೆ ಕೊರೆಯುತ್ತಿರುತ್ತದೆ. ಮತ್ತೆ ನೆಮ್ಮದಿ ಎಲ್ಲಿದೆ? ಹಲ್ಲು ಮಸೆಯುವುದೇ ಆಯಿತು. ಅದಕ್ಕಾಗಿ ನಾವು ನಮ್ಮ ಜೀವನದ ಹಾದಿಯಲ್ಲಿ, ಕೆಟ್ಟದ್ದನ್ನು ಮರೆಯಲು ಪ್ರಯತ್ನಿಸೋಣ. ಇರುವಷ್ಟು ದಿನ ಎಲ್ಲರೊಂದಿಗೆ ನಲಿದು, ಬೆರೆತು ಸಾಗೋಣ.

ಕಷ್ಟ ಕಾಲದಲ್ಲಿ ಮಾಡಿದ ಉಪಕಾರವನ್ನು ಯಾವತ್ತೂ ಮರೆತು ಕೃತಘ್ನರಾಗಬಾರದು. ಎಷ್ಟೋ ಜನರು ಪುಸ್ತಕವನ್ನು ಪಡೆದು, ಪುನಃ ಮರಳಿಸುವ ಅಭ್ಯಾಸವೇ ಇಲ್ಲ. ಕಷ್ಟಕಾಲದಲ್ಲಿ ಪಡೆದ ಹಣವನ್ನು ಹಿಂದಿರುಗಿಸದೇ ಇರುವವರು ಸಾಕಷ್ಟು ಮಂದಿ ಇದ್ದಾರೆ. ತಪ್ಪೆಸಗುವುದು ಮಾನವ ಸಹಜ ಗುಣ. ಆದರೆ ಇಲ್ಲಿ ಗೊತ್ತಿದ್ದೂ ತಪ್ಪು ಮಾಡುವುದು.ಇದಕ್ಕೆ ಕ್ಷಮೆ ಇಲ್ಲ.

ಬೇರೆಯವರಿಂದ ನಮಗಾದ ನೋವು,ದ್ವೇಷ,ಅಪರಾಧ ಇವುಗಳನ್ನು ಮರೆಯದಿದ್ದರೆ, ನಮ್ಮ ಮನಸ್ಸು ಕಸದ ರಾಶಿಯಾಗುತ್ತದೆ. ಸದಾ ಸೇಡೆಂಬ ಬೆಂಕಿ ಹೊಗೆಯಾಡುತ್ತಿರುತ್ತದೆ. ಅದಕ್ಕಾಗಿ ಕಹಿಯನ್ನೆಲ್ಲಾ ಮರೆತು ಒಲವನ್ನು ನಮ್ಮದಾಗಿಸಿಕೊಳ್ಳೋಣ.

ಇನ್ನೊಬ್ಬರಿಂದ ನಮಗಾದ ನೋವನ್ನು ಮರೆಯುವುದೇ ದೈವೀ ಗುಣ. ದಾಸರು ಒಂದೆಡೆ 'ಭಿನ್ನಹಕೆ ಬಾಯಿಲ್ಲವಯ್ಯ ಅನಂತ ಅಪರಾಧ ಎನ್ನಲ್ಲಿ ಇರಲಾಗಿ'ಎಂದು ಹಾಡಿದ್ದು ಎಷ್ಟು ಸೂಕ್ತ ವಲ್ಲವೇ?

ತಪ್ಪು ಮಾಡುವುದು ಬೇರೆ,ತಪ್ಪಾಗುವುದು ಬೇರೆ ಮತ್ತು ಮತ್ತೂ ತಪ್ಪನ್ನೇ ಎಸಗಿದರೆ ,ಆ ದೇವರು ಸಹ ಕ್ಷಮಿಸಲಾರ.

ಮಹಾಭಾರತದಲ್ಲಿ ಧರ್ಮರಾಯನು ತಿಳಿದು ತಿಳಿದೂ  ಜೂಜಾಟವಾಡಿ,ಎಲ್ಲವನ್ನೂ ಕಳಕೊಂಡಾಗ ಕೃಷ್ಣ ಸಹಾಯಕ್ಕೆ ಬರಲಿಲ್ಲ, ಅಲ್ಲಿ ಕ್ಷಮೆ ಇಲ್ಲ. ಕ್ಷಮೆಗೂ ಒಂದು ಮಿತಿಯಿಲ್ಲವೇ?

ಕ್ಷಮೆ ದೋಷಿಗಳಲಿ,ಕೆಚ್ಚೆದೆ ವಿಧಿಯ ಬಿರುಬಿನಲಿ!

ಸಮತೆ ನಿರ್ಮತ್ಸರತೆ ಸೋಲ್ಗೆಲವುಗಳಲಿ//

ಶಮವಂ ನೀಂ ಗಳಿಸಲೀ ನಾಲ್ಕು ತಪಗಳೇ ಸಾಕು/

 ಭ್ರಮೆಯೋ ಮಿಕ್ಕೆಲ್ಲ ತಪ---ಮಂಕುತಿಮ್ಮ//

ಕಾಲ ಕಳೆದಂತೆ ಮರೆವು ಎನ್ನುವುದು ತಾನಾಗಿ ಬರುತ್ತದೆ. ಆದರೆ ಕ್ಷಮೆ ಹಾಗಲ್ಲ. ಕ್ಷಮಾಗುಣ ಎನ್ನುವುದು ಸಂಸ್ಕಾರ ಬಲದಿಂದ ಬರುವಂತಹುದು.

ನಾವೆಲ್ಲರೂ ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡು ಇರುವಷ್ಟು ದಿನ ಚಂದದ ಜೀವನ ಮಾಡೋಣ.

ಸಂಗ್ರಹ: ರತ್ನಾ ಭಟ್ ತಲಂಜೇರಿ