ಶುಭದಿನದ ಶುಭ ಸಮಾಚಾರ

ಶುಭದಿನದ ಶುಭ ಸಮಾಚಾರ

ಗುಣೇಷ್ವಪಿ ಹಿ ಕರ್ತವ್ಯಾಃ ಪ್ರಯತ್ನಾಃ ಪುರುಷೈಃ ಸದಾ/

ಗುಣಯುಕ್ತೋ ದರಿದ್ರೋಪಿ ನೈಶ್ಚರೈರಗುಣೈಃ ಸಮಃ//

ಮನುಷ್ಯನು ಯಾವಾಗಲೂ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಬೇಕು. ಇದರಿಂದ ಅವನ ಘನತೆ ಹೆಚ್ಚುವುದು.

ಬಡತನವಿದ್ದರೂ ಆತ ಸದ್ಗುಣಂಗಳ ಒಡೆಯನಾಗಿದ್ದರೆ ,ಅವನನ್ನು ಎಲ್ಲರೂ ಮೆಚ್ಚುತ್ತಾರೆ. ಸಂಪತ್ತಿನಿಂದ ದೊಡ್ಡವ ಎನಿಸಿಕೊಂಡವನಿಗಿಂತ ,ಈ ಬಡವನೇ ಮಿಗಿಲು.ನಾವು ಕಂಡ ಹಾಗೆ ಐಶ್ವರ್ಯವಂತನಲ್ಲಿ ಸದ್ಗುಣಂಗಳ ಕೊರತೆ ಎದ್ದು ಕಾಣುತ್ತದೆ.

ಒಳ್ಳೆಯ ಬುದ್ಧಿ,ಗುಣಗಳು ನಮ್ಮನ್ನು ಉತ್ಕೃಷ್ಟ ಮಟ್ಟಕ್ಕೇರಿಸುತ್ತದೆ.ಹೇಗೆ ಕಸ್ತೂರಿಯ ಸುವಾಸನೆಯನ್ನು ಬಚ್ಚಿಡಲು ಸಾಧ್ಯವಿಲ್ಲವೋ ಅದೇ ರೀತಿ ಸದ್ಗುಣಿಯ ವಿಷಯ ಎಲ್ಲಾ ಕಡೆ ಪಸರಿಸುತ್ತದೆ.

ಈ ಲೋಕದಲ್ಲಿ ಗುಣಗಳಿಗಿದ್ದ ಬೆಲೆ ಸಂಪತ್ತಿಗಿಲ್ಲ.ಸಂಪತ್ತು ಒಮ್ಮೆಗೆ ಮಾತ್ರ.ಆತ ವಿಜೃಂಭಿಸಬಹುದು.ಕೊನೆಗೆ ಸಿಕ್ಕಿಬಿದ್ದಾಗಲೇ ಎಲ್ಲಾ ಸಂಪತ್ತಿನ ಗುಟ್ಟು ಹೊರಬಿದ್ದು ಆತನ ಬದುಕು ಮೂರಾಬಟ್ಟೆಯಾಗುವುದು.

ಸೌಂದರ್ಯಕ್ಕೆ ವಿಶೇಷ ಶೋಭೆಯನ್ನು ತರುವುದೇ ಸದ್ಗುಣಗಳೆಂಬ ಆಭರಣಗಳು. ಸದಾಚಾರ,ವಿದ್ಯೆ,ಸತ್ ಚಿಂತನೆ ಈ ಎಲ್ಲವನ್ನೂ ಬಾಳಿನ ಪಥದಲ್ಲಿ ಅಳವಡಿಸಿಕೊಳ್ಳೋಣ,ಮುಂದಿನ ಪೀಳಿಗೆಗೂ ದಾಟಿಸೋಣ.

ಆಧಾರ:ಗುಣರತ್ನಂ.

*******

ಒಳ್ನುಡಿಗಳು

ಮತಿ ನಯನದಂತೆ ಮುಂದಿರ್ಪುದನು ನೋಡುವುದು/

ಮಿತವದರ ಕೆಲಸ ಹೆಳವನ ಚಲನೆಯಂತೆ//

ಗತಿಶಕ್ತಿಯದಕೆ ಮನವೆಂಬ ಚರಣದ ಬಲದೆ/

ಮತಿ ಬಿಟ್ಟ ಮನ ಕುರುಡು--ಮಂಕುತಿಮ್ಮ//

ಮತಿ ಎಂದರೆ ನಮ್ಮ ಬುದ್ಧಿ,ವಿವೇಕ.ಒಳ್ಳೆಯದನ್ನು ಕೆಟ್ಟದನ್ನು ಆಲೋಚಿಸಿ ,ಮುಂದೆ ಏನು ಮಾಡಬಹುದು ಎಂಬ ತೀರ್ಮಾನ ತೆಗೆದುಕೊಳ್ಳುವ ಮತಿ ಇರುವುದು ಮನುಷ್ಯರಿಗೆ ಮಾತ್ರ.ಈ ಭಗವಂತನಿತ್ತ ವರ ಅದು.ಈ ಬುದ್ಧಿಯಿಂದಲೇ ಬದುಕೆಂಬ ಮಹಲಿನ ಮಾರ್ಗದರ್ಶನವಾಗುತ್ತದೆ.ಆದರೆ ಬುದ್ಧಿಗೆ ಕಾಲಿಲ್ಲ,ತಲೆ ಇದೆ.ಬುದ್ಧಿಯ   ವಿವೇಕತೆ ವಿವೇಚನೆ ಮನಸ್ಸಿನ ಗತಿಶಕ್ತಿಯನ್ನು ನಿಯಂತ್ರಿಸಲು ಸಾಧ್ಯ.

ನಮ್ಮ ಮನಸ್ಸಿಗೆ ಕಣ್ಣಿಲ್ಲ,ಆದರೆ ಕಾಲುಂಟು.ಮನಸ್ಸೆಂಬ ಚರಣ ಮತಿದೋರಿದ ಸರಿದಾರಿಯಲ್ಲಿ ಹೆಜ್ಜೆ ಹಾಕಬೇಕು. ಆಗ ಎಲ್ಲವೂ ಸರಿದಾರಿಯಲ್ಲಿ ಸಾಗಬಹುದು.

ಮತಿ ಮನಗಳ ಹೊಂದಾಣಿಕೆಯಿಂದ ಜೀವನ ಪಾವನವಾದೀತು.ವಿಚಾರಗಳನ್ನು ವಿವೇಚನೆಗೆ ಒಡ್ಡಿ ಮುಂದುವರಿಯೋಣ.ಬಾಳಿನಲ್ಲಿ ಸಾಧನೆ,ವ್ಯಕ್ತಿತ್ವಕ್ಕೆ ಪೂರ್ಣತೆಯನ್ನು ತರಬಲ್ಲುದು.

ಮತಿ ಬಿಟ್ಟ ಮನ ಕುರುಡು!ಮನ ಬಿಟ್ಟ ಮತಿ ಹೆಳವ!

ನಡೆ ಬಿಟ್ಟ ನುಡಿಯಂತೂ ಬರಡೋ ಬರಡು!

ಆಧಾರ:ಚಿಂತನಾಮೃತ

ಸಂಗ್ರಹ: ರತ್ನಾ ಭಟ್ ತಲಂಜೇರಿ