ಶುಭವನ್ನು ಕರುಣಿಸುವ ಶುಭಕರಿ ಕಾಲರಾತ್ರಿ ಮಾತೆ

ಶುಭವನ್ನು ಕರುಣಿಸುವ ಶುಭಕರಿ ಕಾಲರಾತ್ರಿ ಮಾತೆ

ಕವನ

ಶ್ರೀ ದುರ್ಗೆಯ ಸಪ್ತಮಾ ಅವತಾರ

ಕಾಲರಾತ್ರೀ ದೇವೀ ಶಕ್ತಿ ಪರಮ ಪವಿತ್ರೆ|

ಕರಿಯ ಬಣ್ಣದ ಮೈಯ ಹೊಳಪಿನ ತೇಜೋಪುಂಜ

ಕೆದರಿ ಹರವಿದ ಕೇಶ ರಾಶಿಯ ಸುರುಳಿಗಳು||

 

ಕಂಠದೊಳು ಹೊಳೆಯುವ ಆಭರಣದ ಶೋಭೆ 

ನಾಸಿಕದಿ ಉಗುಳುವ ಕೆಂಡದುಂಡೆಗಳ ಪ್ರಭೆ|

ಒಲಿದ ಭಕುತ ನಿಧಿಗಳು ನಿನ್ನನರ್ಚಿಪರು ತಾಯೆ

ಮನಸಾರೆ ಬಂದು ಹರಸುತ ಅನವರತ ಪೊರೆ||

 

ನಾಲ್ಕು ಕರಗಳಲಿ ಧರಿಸಿದ ವಿಶೇಷ ಆಯುಧ

ಅಭಯಮುದ್ರೆ ಖಡ್ಗ ವರ ಮುಳ್ಳು ಶಸ್ತ್ರ|

ಶರಣಾಗತರಿಗೆ ಶುಭವನು ಕರುಣಿಸು ಶುಭಕರಿ

ದುಷ್ಟತನಗಳ ಕುಟ್ಟಿ ಓಡಿಸು ಶಿಷ್ಟರನು ರಕ್ಷಿಸು||

 

ನೀಲಿಯ ವಸ್ತ್ರದಿ ಶೋಭಿಪ ಮಾತೆ

ಸಹಸ್ರ ಚಕ್ರವ ಸಾಧನೆಗೊಲಿದು ನೀಡುವದಾತೆ|

ಮನದ ಭೀತಿಯ ತೊಲಗಿಸಿ ಪೊರೆವಳು

ಶತ್ರು ಅಗ್ನಿ ಜಲ ಭಯಂಗಳ  ನೀಗಿಪಳು||

 

ಮಾತೆಯ ಪೂಜೆಗೆ ಪ್ರಶಸ್ತ ಕಾಲವದು ರಾತ್ರಿಯು

ಇರುಳಿನ ನೀರವತೆಯ ಸೀಳಿ ವಿಜೃಂಭಿಪ ಪೂಜೆ/ 

ಸಪ್ತಮಿ ದಿನದಿ ಒಲಿಯುತ ಅರ್ಚನೆಗೆ

ಪ್ರಾರ್ಥನೆ ಗೈಯುತ ಒಂದಾಗಿ ನಮಿಸುವೆವು ಪೊಡಮಡುತ||

 

ತಂತ್ರಸಾಧಕರು ಉಪಾಸಕರಿಗೆ ಸಿದ್ಧಿಯ ಕರುಣಿಸುತ

ಮನದ ಭೀತಿ ಅಧೈರ್ಯ ಅಂಜಿಕೆಯ ಕಳೆಯುತ/

ಶತ್ರುಭಯ ಅಗ್ನಿಭಯ ಜಲಭಯಂಗಳ ದೂರಮಾಡುತ

ಕೃಪಾಕಟಾಕ್ಷದಿ ಚಕ್ಷುಗಳ ಮಕ್ಕಳ ಶಿರದ ಮೇಲೆ ಹರಿಸು ನಮೋ ತಾಯೆ//

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್