ಶುಭಾಂಶು ದೈತ್ಯ ಜಿಗಿತದಿಂದ ಭಾರತೀಯರ ಭರವಸೆ ಗಗನಕ್ಕೆ…

ಯುದ್ಧ, ಅಣು ಬಾಂಬು, ಕ್ಷಿಪಣಿ, ಸಾವು! ಜಗತ್ತಿಗೂ ಕೇಳಿ ಕೇಳಿ ಸಾಕಾಗಿ ಹೋಗಿತ್ತು. ಮನುಕುಲವನ್ನು ಆಪತ್ತಿಗೆ ತಳ್ಳುವ, ವಿಧ್ವಂಸಕ ವಿದ್ಯಮಾನಗಳ ವಿಚಾರಗಳೇ ಮೇಲುಗೈ ಸಾಧಿ ಸುತ್ತಿದ್ದ ಹೊತ್ತಿನಲ್ಲಿ ಭಾರತೀಯ ಗಗನಯಾನಿ ಶುಭಾಂಶು ಶುಕ್ಲಾ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ ಯಶಸ್ವಿಯಾಗಿ ಸಾಗುವ ಮೂಲಕ ಜಗದ ಮನಗಳಲ್ಲಿ ಹೊಸ ಭರವಸೆ ಬಿತ್ತಿದ್ದಾರೆ. ಇಂದು? ನಾಳೆ? ನಾಡಿದ್ದು? ಐತಿಹಾಸಿಕ ಜಿಗಿತಕ್ಕೆ ಎದುರಾಗಿದ್ದ ಹತ್ತಾರು ತಾಂತ್ರಿಕ ತೊಂದರೆಗಳೆಲ್ಲ ಬದಿಗೆ ಸರಿದು, ಭಾರತೀಯ ಬಾಹ್ಯಾಕಾಶ ಪರಿಶೋಧನೆಯ ಬಾಗಿಲನ್ನು ಶುಭಾಂಶು ತೆರೆಯುವಲ್ಲಿ ಸಫಲರಾಗಿರುವುದು ಶತಕೋಟಿ ಭಾರತೀಯರಿಗೆ ಹೆಮ್ಮೆಯ ವಿಚಾರ.
೧೯೮೪ರಲ್ಲಿ ಸೋವಿಯತ್ ರಷ್ಯಾ ಕಾರ್ಯಾಚರಣೆಯ ಭಾಗವಾಗಿ ರಾಕೇಶ್ ಶರ್ಮಾ 'ಸಲ್ಯೂಟ್ 7' ಬಾಹ್ಯಾಕಾಶ ನಿಲ್ದಾಣವನ್ನು ತಲುಪಿ, ಅಲ್ಲಿ ೭ ದಿನ ೨೧ ಗಂಟೆ ೪೦ ನಿಮಿಷಗಳನ್ನು ಕಳೆದಿದ್ದರು. ಈ ೪೧ ವರ್ಷದ ಸುದೀರ್ಘ ಅಂತರದ ಪ್ರತಿನಿಧಿಯಾಗಿ ಗಗನ ತಲುಪಿದ ೨ನೇ ಭಾರತೀಯ ಗಗನಯಾನಿ ಶುಭಾಂಶು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್) ತಲುಪಿದ ಮೊಟ್ಟ ಮೊದಲ ಭಾರತೀಯ ಗಗನಯಾತ್ರಿಯೂ ಹೌದು, ಐಎಎಸ್ ೧೪ ದಿನಗಳ 'ಯಾತ್ರೆಯಲ್ಲಿ ಶುಭಾಂಶು ಪಡೆದುಕೊಳ್ಳುವ ಅನುಭವಗಳು ಹಾಗೂ ಬಾಹ್ಯಾಕಾಶದ ಆಳ ಜ್ಞಾನಗಳು, ಭಾರತದ ಭವಿಷ್ಯದ ಗಗನ ಕಾರ್ಯಾಚರಣೆಗೆ ಬಹುದೊಡ್ಡ ಅಡಿಪಾಯವನ್ನೇ ಹಾಕುವ ನಿರೀಕ್ಷೆಯಿದೆ. ವಿಶೇಷವಾಗಿ, ೨೦೩೫ರ ಭಾರತದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ನಿಲ್ದಾಣದ ನಿರ್ಮಾಣ ಹಾಗೂ ೨೦೪೦ರಲ್ಲಿ ಮನುಷ್ಯನನ್ನು ಚಂದ್ರನ ಮೇಲೆ ನಡೆದಾಡಿಸುವ ಇಸ್ರೋದ ಕನಸಿಗೆ ಇದು ಪೂರಕವಾಗಲಿದೆ.
ಭಾರತೀಯ ವಾಯುಪಡೆ ಅನುಭವಿ ಹಾಗೂ ಪರೀಕ್ಷಾ ಪೈಲಟ್ ಆಗಿ ೨ ಸಾವಿರ ಗಂಟೆಗಳಿಗೂ ಹೆಚ್ಚು ಹಾರಾಟದ ಅನುಭವವುಳ್ಳ ಶುಭಾಂಶು, ಬಾಹ್ಯಾಕಾಶದಲ್ಲಿ ೬೦ಕ್ಕೂ ಹೆಚ್ಚು ಸಂಶೋಧನಾ ಸಾಹಸ ಕೈಗೊಳ್ಳಲಿದ್ದಾರೆ. ಆಕ್ಸಿಯಮ್ -4 ಬಾಹ್ಯಾಕಾಶ ಯೋಜನೆ ನಾಲ್ವರು ಗಗನಯಾತ್ರಿಗಳೂ ಈ ಸಂಶೋಧನೆಗಳ ಭಾಗವಾಗಲಿದ್ದು, ಭವಿಷ್ಯದಲ್ಲಿ ಮಧುಮೇಹ 'ಹೊಂದಿರುವ ವ್ಯಕ್ತಿಗಳೂ ಗಗನಯಾತ್ರಿಗಳಾಗಲು ನೆರವಾಗುವಂಥ 'ಸೂಟ್ ರೈಡ್' ಸಂಶೋಧನೆಗಳನ್ನೂ ನಡೆಸಲಿದ್ದಾರೆ. ಅಲ್ಲದೆ, ಬಾಹ್ಯಾಕಾಶದಲ್ಲಿರುವ ಸೂಕ್ತ ಪಾಚಿಗಳ (ಮೈಕ್ರೋ ಅಲ್ಲೇ) ಮತ್ತು ಸ್ಪಿರುಲಿನಾಗಳ ಮೇಲಿನ ಪ್ರಯೋಗವೂ ಹೊಸ ಭಾಷ್ಯ ಬರೆಯಲಿವೆ. ಈ ಸೂಕ್ಷ್ಮ ಪಾಚಿಗಳನ್ನು ಅತ್ಯಂತ ಪೌಷ್ಟಿಕ 'ಸೂಪರ್ ಫುಡ್' ಎಂದೇ ಗಗನವಿಜ್ಞಾನಿಗಳು ಪರಿಗಣಿಸಿದ್ದು, ಭವಿಷ್ಯದಲ್ಲಿ ಗಗನಯಾನಿಗಳು ಸೇವಿಸುವ ಆಹಾರ ವಿಧಾನವನ್ನೇ ಇವು ಬದಲಿಸುವ ನಿರೀಕ್ಷೆಯಿದೆ.
ಎಲ್ಲಕ್ಕಿಂತ ಹೆಚ್ಚಾಗಿ ದೇಶದ ಜನಸಾಮಾನ್ಯರಿಗೆ ಈ ಎಲ್ಲ ಸಾಹಸಗಳಿಂದ ಬಾಹ್ಯಾಕಾಶ ವಿಜ್ಞಾನದ ಸಾಕ್ಷರತೆ ದಕ್ಕುತ್ತಿದೆ. ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ಸರಕಾರಕ್ಕೆ ಬಿಟ್ಟಿದ್ದು, ಪ್ರಸ್ತುತ, ಇಡೀ ದೇಶದಲ್ಲಿ ಕೇವಲ ೨೬ ವಿಜ್ಞಾನ ವಸ್ತುಸಂಗ್ರಹಾಲಯಗಳಿದ್ದು, ಇಷ್ಟು ದೊಡ್ಡ ದೇಶಕ್ಕೆ ಇದು ಅತ್ಯಲ್ಪ, ಸರಕಾರ ಸದಾಶಯದಲ್ಲಿ ವಿಜ್ಞಾನ ಕೇಂದ್ರಗಳನ್ನು ತೆರೆದರೂ, ಅವುಗಳ ಪ್ರಯೋಜನ ಪ್ರತಿಯೊಂದು ಶಾಲಾ ಮಕ್ಕಳಿಗೂ ತಲುಪಬೇಕಿದೆ. ಶುಭಾಂಶು ಯಾತ್ರೆ ಬಿತ್ತಿದ ಕನಸು ಮುಂದಿನ ಪೀಳಿಗೆಯ ಕಂಗಳಲ್ಲೂ ಪ್ರತಿಫಲಿಸುವಂತಾಗಲಿ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೬-೦೬-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ