ಶುಭಾಶಯಗಳು!
ಬರಹ
ಹುಟ್ಟು ಹಬ್ಬದ ಶುಭಾಶಯಗಳು ಕಣೋ ಲೋ. ನಾನು ನಿನ್ನ ನೋಡಿದ್ದು ೨೦೦೫ರಲ್ಲಿರಬೇಕು. ಅದಕ್ಕೂ ಮುಂಚೆ (೧೯೯೯ ರಿಂದ) ನಿನ್ನ ತಮ್ಮಂದಿರ ಪರಿಚಯ ಇತ್ತು. ನಿನ್ನ ಒಬ್ಬ ತಮ್ಮ* ನೋಡಕ್ಕೆ ವಿಚಿತ್ರವಾಗಿದ್ದ! ಕಪ್ಪು ಕಪ್ಪು. ಕೆಂಪು ಟೋಪಿ ಬೇರೆ. ಆದರೂ ಕೆಲಸದಲ್ಲಿ ಬಹಳ ಪಂಟ. ಆದರೆ ನಾನು ೨೦೦೦ ದಲ್ಲಿ ಪರಿಚಯ ಮಾಡಿಕೊಂಡಿದ್ದು ನಿನ್ನ ಚಿಕ್ಕ ತಮ್ಮನನ್ನು. ಒಳ್ಳೆ ಜಾದೂಗಾರನ ಹೆಸರು ಕಣಯ್ಯಾ ಅವನಿಗೆ! ನನ್ನ ಉಪಯೋಗಕ್ಕೆ ತಕ್ಕಂತೆ ಇದ್ದ. ಅವನ ಪರಿಚಯ ಆದಮೇಲೆ ನಿಮ್ಮ ಮನೆಯವರ ಬಗ್ಗೆ, ನಿಮ್ಮಗಳ ಹುಟ್ಟಿನ ಬಗ್ಗೆ ಬಹಳಷ್ಟು ಅರ್ಥ ಮಾಡಿಕೊಂಡೆ. ಒಂದು ರೀತಿಯಲ್ಲಿ ಅವನೇ ನನ್ನ ಮೊದಲ ಗುರು. ಆದರೂ ಎಷ್ಟೋ ಬಾರಿ ಕೈ ಕೊಡುತ್ತಿದ್ದ. ಈಗ ಮದುವೆಯಾಗಿ ಬದಲಾಗಿದ್ದಾನೆ, ಹೆಸರೂ** ಬದಲಾಯಿಸಿಕೊಂಡಿದ್ದಾನೆ! ನೋಡಕ್ಕೆ ಇನ್ನೂ ಚಿಕ್ಕ ಮಕ್ಕಳ ತರಹ ಆಗಿಬಿಟ್ಟಿದ್ದಾನೆ! ಹೋಗ್ಲಿ ಬಿಡು
ಮೊದಲೇ ಹೇಳಿದ್ನಲ್ಲ ನಾನು ನಿನ್ನ ನೋಡಿದ್ದು ೨೦೦೫ರಲ್ಲಿ ಇರಬೇಕು. ಆಗಲೇ ನನ್ನ ಕಂಪ್ಯೂಟರ್ನಲ್ಲಿ ನಿನಗೊಂದು ಸ್ಥಾನ ಕೊಟ್ಟು ನೋಡಿದೆ. ಬದುಕುಳಿದ ಅಣ್ಣ ತಮ್ಮಂದಿರಲ್ಲೆಲ್ಲಾ*** ನೀನೇ ಎರಡನೆಯವನಾಗಿದ್ದಕ್ಕೋ ಏನೋ ನೀನು ತುಂಬಾ ಸೀರಿಯಸ್ ಮನುಷ್ಯ. ಒಮ್ಮೊಮ್ಮೆ ಡಲ್ ಅಂತಾನೂ ಅನ್ನಿಸ್ತಿತ್ತು. ಆದ್ರೆ ಯಾವತ್ತೂ ಕೈ ಕೊಡ್ತಿರ್ಲಿಲ್ಲ ನೀನು. ಇಗಲೂ ಅಷ್ಟೇ ಗಟ್ಟಿಗ. ಸಂಪದದ ಎಲ್ಲಾ ಕೆಲಸಗಳ ಜವಾಬ್ದಾರಿ ನಿನ್ನ ಮೇಲೆ ಅಂದರೆ ಕಮ್ಮೀನಾ? ಅಂದ ಹಾಗೆ ನಿನ್ನ ದತ್ತು ಮಗ**** ಈಗ ನನ್ನ ಖಾಯಂ ಗೆಳೆಯ! ಅವನು ಈಗ ಬಹಳ ಹೆಸರು ಮಾಡಿದ್ದಾನೆ ಅಂದ್ರೆ (ಈಗಲೂ) ನಿನ್ನ ಸಹಾಯವೇ ಕಾರಣ. ನೆನ್ನೆ ೧೬ ಆಗಸ್ಟ ನಿನಗೆ ಹುಟ್ಟುಹಬ್ಬದ ಸಂಭ್ರಮ. ನೀನು ಇನ್ನೂ ನೂರು ಸಾವಿರ ವರ್ಷ ಬಾಳು ಅಂತ ಹರಸುತ್ತೇನೆ! ಸದ್ಯಕ್ಕೆ ನಿನ್ನ ೧೭ನೇ ಹುಟ್ಟು ಹಬ್ಬಕ್ಕೆ ನನ್ನ ಶುಭಾಶಯಗಳು ದೆಬಿಯನ್!
*ತಮ್ಮ
**ಚಿಕ್ಕ ತಮ್ಮನ ಹೊಸ ಹೆಸರು
***ಅಣ್ಣ
****ದತ್ತು ಮಗ