ಶುಭೋದಯ ಮತ್ತು ಬೆಳಗಿನ ಶುಭೋದಯ - ಯಾವುದು ಸರಿ?
![](https://saaranga-aws.s3.ap-south-1.amazonaws.com/s3fs-public/styles/article-landing/public/%E0%B2%B6%E0%B3%81%E0%B2%AD.jpg?itok=BN0V6YIM)
ಶುದ್ಧ ಕನ್ನಡ ಭಾಷಾ ಪ್ರಯೋಗದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿರುವ ಮಂಡ್ಯದ ಕೊಕ್ಕಡ ವೆಂಕಟ್ರಮಣ ಭಟ್ ಅವರು ‘ಸರಿಗನ್ನಡ-ಸರಿಕನ್ನಡ’ ಎನ್ನುವ ಒಂದು ಕೃತಿಯನ್ನು ಬರೆದಿದ್ದಾರೆ. ಇದರಲ್ಲಿ ಶುದ್ಧ ಕನ್ನಡ ಭಾಷೆಯ ಬಗ್ಗೆ ಬಹಳಷ್ಟು ಮಾಹಿತಿ ಇದೆ. ನಿಮಗೆ ಗೊತ್ತೇ ಇದೆ, ಸ್ಮಾರ್ಟ್ ಫೋನ್ ಗಳು ಬಂದ ಬಳಿಕ ಬೆಳಗ್ಗೆಯಿಂದ ರಾತ್ರಿಯವರೆಗೆ ಅಗತ್ಯದ ವಿಷಯಗಳ ಮೆಸೇಜ್ ಗಳ ಬದಲು ಅನಗತ್ಯ ಶುಭಾಷಯಗಳ ಮೆಸೇಜ್ ಗಳೇ ಅಧಿಕ ಬರುತ್ತವೆ. ಬೆಳಗ್ಗೆ ವಾಟ್ಸಾಪ್ ತೆರೆದ ಕೂಡಲೇ ನೂರಾರು ಗುಡ್ ಮಾರ್ನಿಂಗ್ ಮೆಸೇಜ್ ಗಳು ನಿಮ್ಮ ಮೊಬೈಲಿಗೆ ಬಂದು ಬೀಳುತ್ತವೆ. ಕನ್ನಡದಲ್ಲಿ ಮೋಹ ಇರುವವರು ಶುಭೋದಯ ಅಥವಾ ಬೆಳಗಿನ ಶುಭೋದಯ ಎಂದು ಹಾರೈಸುತ್ತಾರೆ. ಈ ಎರಡು ಪದ ಪ್ರಯೋಗಗಳಲ್ಲಿ ಯಾವುದು ಸರಿ? ಯಾವುದು ತಪ್ಪು? ಕಾರಣ ಏನು? ಇದರ ಬಗ್ಗೆ ವೆಂಕಟ್ರಮಣ ಭಟ್ ಅವರ ಕೃತಿಯಲ್ಲಿ ಹೀಗೆ ಹೇಳಲಾಗಿದೆ…
“ಮುಂಜಾನೆ ಮೊದಲ ಸಲ ಕಂಡಾಗ, ಭೇಟಿಯಾಗುವಾಗ ಆಂಗ್ಲ ಸಂಸ್ಕೃತಿಯ ಅನುಕರಣೆಯಂತೆ ಸುಪ್ರಭಾತಂ/ಸುಪ್ರಭಾತ, ‘ಗುಡ್ ಮಾರ್ನಿಂಗ್’, ‘ಶುಭೋದಯಂ/ಶುಭೋದಯ’ ಎಂಬ ಶಬ್ಧವನ್ನು ಬಳಸಿ ವಂದಿಸುವ, ದಿನವು ಶುಭದಾಯಕವಾಗಿರಲಿ ಎಂದು ಶುಭ ಹಾರೈಸುವ ಸಂಸ್ಕೃತಿ ನಮಗೆಲ್ಲರಿಗೆ ರೂಢಿಯಾಗಿದೆ. ‘ಗುಡ್ ಮಾರ್ನಿಂಗ್’ ಎಂಬ ಇಂಗ್ಲಿಷ್ ಶಬ್ಧಕ್ಕೆ ಸಂವಾದಿಯಾಗಿ ‘ಸುಪ್ರಭಾತಂ’ ಎಂಬ ಸಂಸ್ಕೃತ ಶಬ್ಧವನ್ನು ಬಳಕೆ ಮಾಡಲು ಉಪಕ್ರಮಿಸಿದೆವು. ಸಂಸ್ಕೃತ ಶಬ್ದವನ್ನು ಕನ್ನಡಕ್ಕೆ ಒಗ್ಗುವಂತೆ ಅನುಸ್ವಾರವನ್ನು ಬಿಟ್ಟು ‘ಸುಪ್ರಭಾತ’ ಎಂದು ಬಳಕೆ ಮಾಡಿಕೊಂಡೆವು. ಸಂಸ್ಕೃತ ಶಬ್ದಕ್ಕೆ ಪರ್ಯಾಯ ಪದವಾಗಿ ‘ಶುಭೋದಯ’ ಶಬ್ದವನ್ನು ಕೆಲವರು ಬಳಕೆ ಮಾಡಲು ಪ್ರಾರಂಭಿಸಿದರು. ‘ಶುಭೋದಯ’ ಎಂದರೆ ಗುಡ್ ಮಾರ್ನಿಂಗ್ ಶಬ್ದಕ್ಕೆ ಸಂವಾದಿಯಾಗಬಲ್ಲ ಶಬ್ದ ಎಂಬುದನ್ನು ಅರ್ಥಮಾಡಿಕೊಳ್ಳದ ಯಾರೋ ‘ಬೆಳಗಿನ ಶುಭೋದಯ’ ಎಂಬ ವಿಚಿತ್ರ ಪ್ರಯೋಗವನ್ನು ಬಳಕೆಗೆ ಬಿಟ್ಟರು. ಬಹುಶಃ ಸಮಾರಂಭಗಳಲ್ಲಿ ಕಾರ್ಯಕ್ರಮ ನಿರೂಪಕರೋ ಅಥವಾ ಮಾಧ್ಯಮಗಳಲ್ಲಿ ಕಾರ್ಯಕ್ರಮ ನಿರೂಪಕರೋ ಈ ಪದವನ್ನು ಹುಟ್ಟು ಹಾಕಿರಬಹುದು. ‘ಶುಭೋದಯ’ಎಂದರೆ ಮುಂಜಾವಿನ ಸಮಯದಲ್ಲಿ ಶುಭವನ್ನು ಬಯಸುತ್ತೇನೆ ಎಂದು ಅರ್ಥ. ಬೆಳಗ್ಗಿನ ಶುಭೋದಯ ಎಂದರೆ ‘ಗುಡ್ ಮಾರ್ನಿಂಗ್ ಇನ್ ಮಾರ್ನಿಂಗ್’ ಎಂದಂತಾಗುತ್ತದೆ. ಬೆಳಗ್ಗೆ ಬೆಳಗ್ಗಿನ ಶುಭಕಾಮನೆಗಳು ಎಂದಂತಾಗುತ್ತದೆ. ಆದ್ದರಿಂದ ಬೆಳಗಿನ ಶುಭೋದಯ ಎಂಬುದು ಸಾಧು ಪ್ರಯೋಗವಲ್ಲ. ‘ಶುಭೋದಯ’ ಎಂಬ ಶಬ್ದವನ್ನು ‘ಬೆಳಗಿನ ಶುಭೋದಯ’ ಎಂದು ಕೆಟ್ಟ ಅನುವಾದ ಮಾಡಿದಾಗ ಅರ್ಧ ಕನ್ನಡ, ಇನ್ನರ್ಧ ಸಂಸ್ಕೃತ ಸೇರಿಸಿ ರಚಿಸಿದ ವಿಕಾರವಾದ ನುಡಿಗಟ್ಟಾಗುತ್ತದೆ. ‘Good Morning Belagge’ ಎಂದು ಹೇಳಿದರೆ ಹೇಗಿರುತ್ತದೆ? ಯೋಚಿಸಿ. ಎರಡೂ ಭಾಷೆಗಳಿಗೂ ಅಪಚಾರವಾಗುತ್ತದೆ. ಇನ್ನೊಂದು ವಿಚಾರವೆಂದರೆ, ಸಮಸ್ತ ಪದವನ್ನು ಇನ್ನೊಂದು ಭಾಷೆಗೆ ಭಾಷಾಂತರ ಮಾಡಲು ಬಯಸಿದರೆ, ಸಮಸ್ತ ಪದವಾಗಿಯೇ ಅನುವಾದ ಮಾಡಿದರೆ ಮಾತ್ರ ಅನುವಾದವು ಸೊಗಸಾಗಿರುತ್ತದೆ. ನುಡಿಕಟ್ಟಿನಂತೆ ಒಡೆದು ಕಟ್ಟುವ ಕ್ರಮವು ಸಕ್ರಮವಲ್ಲ. ವಿಭಿನ್ನ ಭಾಷೆಗಳ ಶಬ್ದಗಳನ್ನು ಸೇರಿಸಿ ನುಡಿಗಡಣವನ್ನು ರಚಿಸುವುದು ಅಕ್ಷಮ್ಯ. ಆದ್ದರಿಂದ ಬೆಳಗಿನ ಶುಭೋದಯ ಎಂಬ ಬಳಕೆಯು ದೋಷವಷ್ಟೇ ಅಲ್ಲ, ಅಕ್ಷಮ್ಯವಾದ ಅಪರಾಧವಾಗುತ್ತದೆ. ‘ಬೆಳಗಿನ ಶುಭೋದಯ’ ಎನ್ನುವವರು ‘ಇರುಳಿನ ಶುಭರಾತ್ರಿ’ ಎನ್ನದಿರಲಿ !” ಆದುದರಿಂದ ಇನ್ನಾದರೂ ಬೆಳಗಿನ ಶುಭಾಶಯವನ್ನು ಕೋರುವಾಗ ಬರೇ ಶುಭೋದಯ ಎಂದು ಹೇಳಿದರೆ ಸಾಕು.
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ