ಶುಭ ಹಾರೈಕೆಗಳು

ಶುಭ ಹಾರೈಕೆಗಳು

ಕವನ

ಓ ದೇವಕನ್ಯೆ! ನಿನಗಿದೊ ಸ್ವಾಗತ
ಎಂದು ನಿಮ್ಮ ಆಗಮನ? ಸದ್ದಿಲ್ಲದೆ ಬಂದು ಬಿಟ್ಟಿರಿ
ಪಯಣ ಸುಖಕರವಾಗಿತ್ತೆ? ಅಂತರೀಕ್ಷದಲಿ 
ಉಪಗ್ರಹಗಳ ದಟ್ಟಣೆ ತೊಂದರೆ ಕೊಡಲಿಲ್ಲವೆ?
ದಾರಿಯಲೆಲ್ಲಾರೂ ಉಪಗ್ರಹಗಳು ಕಣ್ಣಿಗೆ ಬಿದ್ದವೆ?
ಕ್ಷೇಮ ಸಮಾಚಾರ ವಿಚಾರಿಸಿದಿರಾ? ಒಂದು 
ಸಣ್ಣ ಲಿಫ್ಟ್ ಕೇಳಿದ್ದರೂ ನಡೆಯುತ್ತಿತ್ತು 

ದೇವಲೋಕದಲೆಲ್ಲರೂ ಸೌಖ್ಯವೆ? ತ್ರಿಮೂರ್ತಿಗಳು 
ಅವರ ಹೆಂಡಿರು ಮಕ್ಕಳು ಬಂಧು ಬಳಗ ಕುಶಲವೆ?
ಗಣೇಶನೊಬ್ಬನನು ಬಿಟ್ಟು ಉಳಿದೆಲ್ಲರೂ 
ಈ ಲೋಕದ ಸಂಪರ್ಕ ಕಳೆದುಕೊಂಡು ಬಿಟ್ಟಿದ್ದಾರೆ
ಕಲಹಪ್ರಿಯ ನಾರದರು ಏನು ಮಾಡುತ್ತಿದ್ದಾರೆ?
ದೂರ್ವಾಸರ ಕೋಪ ತಣ್ಣಗಾಗಿದೆಯೆ?
ವಸಿಷ್ಟ ವಿಶ್ವಾಮಿತ್ರ ಕಶ್ಯಪ ಕಣ್ವ ಭಾರದ್ವಾಜ ಎಲ್ಲ 
ಋಷಿ ಮುನಿಗಳು ನಮ್ಮನ್ನು ಮರೆತು ಬಿಟ್ಟಿದ್ದಾರೆಯೆ?

ಪರನಾರಿಪ್ರಿಯ ಇಂದ್ರ ಲಂಪಟತನ ಬಿಟ್ಟು 
ಈಗಲಾದರೂ ಇಂದ್ರಾಣಿ ಶಚಿದೇವಿಗೆ ನಿಷ್ಟನಾಗಿರುವನೆ?
ನಮ್ಮ ನಹುಷ ಸರಿಯಾದ ಪಾಠವನ್ನೆ ಕಲಿಸಿದ್ದಾನೆ
ದೇವ ಲೋಕದವರು ಈ ಭೂಲೋಕದವರ 
ಸಂಪರ್ಕ ಬಿಟ್ಟು ಯುಗಗಳೆ ಸಂದವೇನೋ? 
ಕೃತ ತ್ರೇತ ದ್ವಾಪರ ಯುಗಗಳು ಎಷ್ಟು ಚೆನ್ನಾಗಿದ್ದವು?
ನಮ್ಮ ಅವರ ಬಾಂಧವ್ಯ ಆಗಮನ 
ನಿರ್ಗಮನಗಳು ಎಷ್ಟು ಚೆನ್ನಾಗಿದ್ದವು? ಗಂಧರ್ವ 
ಕಿನ್ನರ ಕಿಂಪುರುಷರೆಲ್ಲರೂ ಭೂಲೋಕದ ಸಂಪರ್ಕ
ಕಳೆದುಕೊಂಡು ಬಿಟ್ಟಿದ್ದಾರೆ ವನಾರಣ್ಯ 
ಪರಿಸರಗಳು ಹಾಳಾಗಿ ನಾಶವಾಗುತ್ತಿರುವ ಭೂಲೋಕದ 
ವರ್ತಮಾನ ಅವರನು ಕಂಗೆಡಿಸಿರಬಹುದೆ? 

ನೀವು ಬರುವ ವೇಳೆ ರಂಭೆ ಊರ್ವಸಿ ಮೇನಕೆ 
ತಿಲೋತ್ತಮೆಯರು ಭೇಟಿಯಾಗಿದ್ದರೆ?
ಹೆಂಡತಿಯರ ಕಪಿ ಮುಷ್ಟಿಯಲಿ ಸಿಲುಕಿ ಬೆಂದು 
ಬಸವಳಿದಿರುವ ಪರುಷ ವರ್ಗಕ್ಕೆ ಚೈತನ್ಯ ತುಂಬಲು 
ಇಲ್ಲಿಗೆ ಬಂದು ಹೋಗಿರೆಂದು 
ಒಂದು ಆಮಂತ್ರಣ ನೀಡಿ ಬರಬಹುದಿತ್ತು 
ಬರುವ ಗಡಿಬಿಡಿಯಲಿ ಮರೆತು ಬಿಟ್ಟಿರೇನೋ? ಇಲ್ಲ 
ಸ್ತ್ರೀ ಪಕ್ಷಪಾತನವೆ? ಈಗೀಗ ಇಲ್ಲಿ ನಮ್ಮಲ್ಲಿ 
ಸ್ತ್ರೀ ಸಂವೇದನೆ ಸ್ವಾತಂತ್ರಗಳ ಭರಾಟೆ ಜೋರಾಗಿದೆ
ಸುಮ್ಮನೆ ಹೇಳಿದೆ ಅಷ್ಟೆ ಮುನಿಸು ಬೇಡ

ನಿಮ್ಮ ಜೊತೆ ಚರ್ಚಿಸಲು ಬಹಳಷ್ಟು ವಿಷಯಗಳಿವೆ
ಈಗೀಗ ಬಂದಿದ್ದೀರಿ ಸ್ವಲ್ಪ ವಿಶ್ರಾಂತಿ ಪಡೆಯಿರಿ
ಆದರೆ ನಿಮ್ಮ ವರ್ತನೆ ಕುರಿತು ನಮ್ಮಲ್ಲಿ ಕೆಲವು 
ಆಕ್ಷೇಪಣೆಗಳಿವೆ ನೀವು ಹಗಲು ರಾತ್ರಿ ಎನ್ನದೆ
ದಿನವಿಡಿ ಅಳುತ್ತ ಎಚ್ಚರವಾಗಿರುತ್ತ ಎಲ್ಲರ 

ನಿದ್ದೆಗೆಡಿಸುತ್ತಿರುವಿರಿ ದೇವಲೋಕ ಸ್ವರ್ಗಲೋಕಗಳ 
ಹಳವಂಡ ಬಿಟ್ಟು ಇಲ್ಲಿನ ರೀತಿ ರಿವಾಜುಗಳಿಗೆ
ಹೊಂದಿಕೊಳ್ಳಿ ಹಗಲು ಜಾಗರ ರಾತ್ರಿ ನಿದ್ರೆಗಳು
ಭೂಲೋಕದ ಅಲಿಖಿತ ನಿಯಮಗಳು 
ದೇವತೆಗಳು ಭೂಲೋಕವನು ಮರೆತರೇನಾಯಿತು 
ನಿಮ್ಮಾಗಮನ ನಮಗೆ ಸಂತಸ ತಂದಿದೆ
ನಾವೆಲ್ಲ ಸೇರಿ ಕುಲಗೆಟ್ಟು ಹೋಗುತ್ತಿರುವ 
ಈ ಅವನಿಯನ್ನು ಸ್ವರ್ಗವಾಗಿಸೋಣ “ನಾಮಕರಣದ”
ಶುಭ ಸಂಧರ್ಭದಲ್ಲಿ ನಿಮಗೆ ಶುಭ ಹಾರೈಕೆಗಳು 

               *
ಚಿತ್ರ ಕೃಪೆ ; ಅಂತರ್ಜಾಲ 

ಚಿತ್ರ್