ಶೂನ್ಯದಿಂದ ಹದಿನೈದು ಸಾವಿರ ಕೋಟಿ ರುಪಾಯಿ ಸೃಷ್ಟಿ!

ಶೂನ್ಯದಿಂದ ಹದಿನೈದು ಸಾವಿರ ಕೋಟಿ ರುಪಾಯಿ ಸೃಷ್ಟಿ!

ಬರಹ

(ಇ-ಲೋಕ-71)(21/4/2008) ಇದೇನೂ ಇಂದ್ರಜಾಲವಲ್ಲ.ಕೇಂದ್ರ ಸರಕಾರ ಬೆಲೆಯೇರಿಕೆಯಿಂದ ಕಂಗಾಲಾಗಿರುವುದಷ್ಟೇ ಅಲ್ಲ-ಚುನಾವಣೆ ಸಮೀಪ ಬರುತ್ತಿರುವುದರಿಂದ ಸಾಲಮನ್ನಾದಂತಹ ಜನಪ್ರಿಯ ಯೋಜನೆಗಳನ್ನು ಕೈಗೆತ್ತಿಕೊಂಡಿದೆ.ಇದಕ್ಕೆಲ್ಲಾ ಹಣ ಒಟ್ಟುಮಾಡುವ ತರಾತುರಿಯಲ್ಲಿ ಸರಕಾರ ಸಿಲುಕಿದೆ.ಆದರೆ ದೂರಸಂಪರ್ಕ ಕ್ಷೇತ್ರವು ಸರಕಾರಕ್ಕೆ ಸುಲಭ ಆದಾಯವನ್ನು ಒದಗಿಸುವುದರಲ್ಲಿದೆ.ಮೂರನೇ ತಲೆಮಾರಿನ ಮೊಬೈಲ್ ಸೇವೆಯ ಮೂಲಕ ಸೆಲ್‍ಫೋನ್‍ನಲ್ಲಿ ಶರವೇಗದ ದತ್ತಾಂಶ ಸೇವೆಯೂ ಸೇರಿ,ಟಿವಿ ಪ್ರಸಾರ ಇತ್ಯಾದಿ ಸೇವೆ ಒದಗಿಸುವ ಮೊಬೈಲ್ ಕಂಪೆನಿಗಳ ಯೋಜನೆಗೆ ಬ್ಯಾಂಡ್‍ವಿಡ್ತ್ ವಿತರಿಸುವುದನ್ನು ಸರಕಾರ ಮಾಡಬೇಕಿದೆ.ಸದ್ಯ ರಕ್ಷಣಾ ಪಡೆಗಳ ಕೈವಶವಿರುವ ಅಪ್ಪತ್ತೈದು ಮೆಗಾಹರ್ಟ್ಸ್ ಬ್ಯಾಂಡ್‍ವಿಡ್ತನ್ನು ತಾನು ಪಡೆದು,ಹರಾಜು ಹಾಕಲು ಸರಕಾರ ನಿರ್ಧರಿಸಿದೆ. ಈ ಹರಾಜಿನ ಮೂಲಕ ಹದಿನೈದರಿಂದ ಇಪ್ಪತ್ತು ಸಾವಿರ ಕೋಟಿ ರುಪಾಯಿಗಳ ಆದಾಯವನ್ನು ಸರಕಾರ ಪಡೆಯಲಿದೆ.ನಿರ್ದಿಷ್ಟ ತರಂಗಾಂತರಗಳ ಬಳಕೆ  ಹಕ್ಕನ್ನು  ನಿಗದಿಸಿ ಪಡಿಸುವ ಮೂಲಕ ಇಷ್ಟು ದೊಡ್ಡ ಮೊತ್ತವನ್ನು ಸುಲಭವಾಗಿ ಒಟ್ಟುಗೂಡಿಸುವ ಮಾರ್ಗ ಸರಕಾರದ ಮುಂದಿರುವುದು ಅದರ ಅದೃಷ್ಟ.
ಉದಯವಾಣಿಯನ್ನು ಫೈರ್‌ಫಾಕ್ಸ್ ಬ್ರೌಸರ್‍ನಲ್ಲೂ ಜಾಲಾಡಿ
 www.udayavani.com ಎಂದು ಇಂಟರ್ನೆಟ್ ಎಕ್ಸ್‍ಪ್ಲೊರರ್ ಬ್ರೌಸರಿನ ವಿಳಾಸ ಪಟ್ಟಿಯಲ್ಲಿ ಕೀಲಿಸಿ,ಅಂತರ್ಜಾಲಕ್ಕೆ ಸಂಪರ್ಕಿಸಿದರೆ ಉದಯವಾಣಿಯ ಅಂತರ್ಜಾಲ ಅವೃತ್ತಿ ನಿಮ್ಮ ಕಂಪ್ಯೂಟರ್ ತೆರೆಯ ಮೇಲೆ ಇರುತ್ತದಷ್ಟೇ?ಆದರೆ ಫೈರ್‍‍ಫಾಕ್ಸ್ ಅಂತಹ ಜನಪ್ರಿಯವಾಗುತ್ತಿರುವ ಬ್ರೌಸರ್ ತಂತ್ರಾಂಶದಲ್ಲಿ ಉದಯವಾಣಿಯನ್ನು ಓದಲು ಯತ್ನಿಸಿನೋಡಿದರೆ,ಬ್ರಹ್ಮಲಿಪಿಯ ಪುಟ ನಿಮ್ಮ ಮುಂದೆ ಪ್ರತ್ಯಕ್ಷವಾಗುವುದು ಸಂಭವನೀಯ.ಉದಯವಾಣಿಯು ತನ್ನದೇ ಲಿಪಿ ಬಳಸಿ ಅಂತರ್ಜಾಲ ತಾಣವನ್ನು ಪ್ರಕಟಿಸುತ್ತದೆ.ಈ ಡೈನಾಮಿಕ್ ಫಾಂಟುಗಳು ಇಂಟರ್ನೆಟ್ ಎಕ್ಸ್‍ಪ್ಲೋರರ್ ಮತ್ತು ಇತ್ತೀಚೆಗೆ ಭೂತಕಾಲ ಸೇರಿದ ನೆಟ್‍ಸ್ಕೇಪ್ ನ್ಯಾವಿಗೇಟರ್ ಬ್ರೌಸರ್‌ನಲ್ಲಿ ಮೂಡುವ ಖಾತರಿಯನ್ನು ಅಂತರ್ಜಾಲ ತಾಣ ಖಾತರಿ ನೀಡುತ್ತದೆ.ಈಗ ಫೈರ್‌ಫಾಕ್ಸ್ ಬ್ರೌಸರ್‌ನೊಂದಿಗೆ ಬರುವ ಪದ್ಮ ಎನ್ನುವ ಸ್ಕ್ರಿಪ್ಟ್‌ನ ಪಿ ಎಚ್ ಪಿ ರೂಪಾಂತರ,ಪ್ರಾಕ್ಸಿ ಸರ್ವರ್ ಅಂತೆ ಕೆಲಸ ಮಾಡಿ,ಪತ್ರಿಕೆಯ ಹಳೆಕಾಲದ ಲಿಪಿಯನ್ನು ಹೊಸ ತಲೆಮಾರಿನ ಯುನಿಕೋಡ್ ರೂಪಕ್ಕೆ ಬದಲಾಯಿಸಿಕೊಡುತ್ತದೆ.ಯುನಿಕೋಡಿನಲ್ಲಿರುವ ಕನ್ನಡ ಲಿಪಿಯನ್ನು ಫೈರ್‌ಫಾಕ್ಸ್ ತಕರಾರಿಲ್ಲದೆ ಪ್ರದರ್ಶಿಸ ಬಲ್ಲುದು. ಹೀಗಾಗಲು ಪತ್ರಿಕೆಯ ಅಂತರ್ಜಾಲ ವಿಳಾಸವನ್ನು http://uni.medhas.org/unicode.php5?file=http://68.178.224.54/udayavani ಎಂದು ಬಳಸಬೇಕಾಗುತ್ತದೆ.(ಮಾಹಿತಿ ಋಣ- ಹರಿಪ್ರಸಾದ್ ನಾಡಿಗ್).ಕನ್ನಡ ಪತ್ರಿಕೆಗಳು ಇನ್ನೂ ಯುನಿಕೋಡ್ ಲಿಪಿಯಲ್ಲಿ ತಮ್ಮ ತಾಣಗಳನ್ನು ಪ್ರಕಟಿಸಲು ಮನಸ್ಸು ಮಾಡಿಲ್ಲ.ಹಾಗೆಂದು ಸಂಪದ, ದೇಟ್ಸ್‌ಕನ್ನಡ ಅಂತಹ ಜಾಲತಾಣಗಳು ಯುನಿಕೋಡಿನಲ್ಲಿ ತಮ್ಮ ಪುಟ ಪ್ರಕಟಿಸುತ್ತವೆ.ಯುನಿಕೋಡಿನಲ್ಲಿ ಪುಟಗಳಿದ್ದರೆ,ಕನ್ನಡದಲ್ಲಿಯೂ ಮಾಹಿತಿ ಶೋಧಿಸಲು ಸುಲಭವಾಗುತ್ತದೆ.ಪ್ರತೀ ಪತ್ರಿಕೆಯೂ ತನ್ನದೇ ಲಿಪಿ ಬಳಸಿ ತಾಣ ಪ್ರಕಟಿಸಿದರೆ,ಕನ್ನಡದಲ್ಲಿ ಶೋಧ ಕಾರ್ಯ ಅಸಾಧ್ಯ.
ಡೆಸ್ಕ್‍ಟಾಪ್ ಓಎಸ್:ರೆಡ್‍ಹ್ಯಾಟ್ ಸೋಲೊಪ್ಪಿಗೆ?
 ರೆಡ್‍ಹ್ಯಾಟ್ ಲಿನಕ್ಸ್ ತಕ್ಕಮಟ್ಟಿಗೆ ಜನಪ್ರಿಯವಾಗಿರುವ ಲಿನಕ್ಸ್ ಅವತರಣಿಕೆ.ಲಿನಕ್ಸ್ ಮುಕ್ತ ಕಾರ್ಯನಿರ್ವಹಣ ತಂತ್ರಾಂಶ.ಆದರೆ ಹಲವಾರು ಕಂಪೆನಿಗಳು ಲಿನಕ್ಸ್ ಜತೆ ತಮ್ಮದೇ ಆದ ,ಬಳಕೆದಾರರಿಗೆ ಅಗತ್ಯ ತಂತ್ರಾಂಶಗಳ ಪ್ಯಾಕೇಜುಗಳನ್ನು ಸೇರಿಸಿ,ತಮ್ಮ ಬ್ರಾಂಡ್ ಲಿನಕ್ಸ್ ಎಂದು ವಿತರಿಸುತ್ತವೆ.ಮೈಕ್ರೋಸಾಫ್ಟ್ ಕಂಪೆನಿಯ ಚಾಣಾಕ್ಷ ತಂತ್ರಗಳ ಮುಂದೆ ಮುಕ್ತ ಮತ್ತು ಉಚಿತವಾಗಿ ಲಭ್ಯವಿರುವ ರೆಡ್‍ಹ್ಯಾಟ್ ಲಿನಕ್ಸ್ ಗ್ರಾಹಕರನ್ನು ಅಕರ್ಷಿಸಲು ವಿಫಲವಾಗಿದೆ.ರೆಡ್‍ಹ್ಯಾಟ್ ಲಿನಕ್ಸ್ ಅಮೆರಿಕಾದ ಡೆಸ್ಕ್‌ಟಾಪ್ ಕಂಪ್ಯೂಟರುಗಳ ಪೈಕಿ ಶೇಕಡಾ ಒಂದೂ ಚಿಲ್ಲರೆ ಡೆಸ್ಕ್‍ಟಾಪ್ ವ್ಯವಸ್ಥೆಗಳಲ್ಲಿ ಮಾತ್ರ ಬಳಕೆಯಾಗುತ್ತಿದೆ.ಇಂತಹ ಜುಜುಬಿ ಜನಪ್ರಿಯತೆ ರೆಡ್‍ಹ್ಯಾಟನ್ನು ಸುಸ್ತಾಗಿಸಿರಬೇಕು.ಹಾಗಾಗಿ ಇನ್ನು ಈ ವರ್ಗದಲ್ಲಿ ತನ್ನ ಸ್ಪರ್ಧೆಯಿಂದ ಹಿಂದೆ ಸರಿಯುವ ನಿರ್ಧಾರವನ್ನದು ಮಾಡಿದೆ.ಹಾಗೆಂದು ಸಾಂಸ್ಥಿಕ ಬಳಕೆದಾರರಿಗೋಸ್ಕರ ಇರುವ ಎಂಟರ್‌ಪ್ರೈಸ್ ಆವ್ರುತ್ತಿಯನ್ನು ಮತ್ತು ಭಾರತದಂತಹ ಬಡದೇಶಗಳ ಮಿತಬೆಲೆಯ ಕಂಪ್ಯೂಟರುಗಳಿಗಾಗಿ ಇರುವ ಲಿನಕ್ಸ್ ಆವೃತ್ತಿಯು ಮುಂದುವರಿಯಲಿವೆಯೆಂದು ಕಂಪೆನಿಯ ವಕ್ತಾರರು ಸ್ಪಷ್ಟ ಪಡಿಸಿದ್ದಾರೆ.
ಹಿಂದೆ ಬಿದ್ದಿರುವ ಎ.ಎಂ.ಡಿ. ಕಂಪೆನಿ
 ಕಂಪ್ಯೂಟರ್ ಸಂಸ್ಕಾರಕಗಳನ್ನು ತಯಾರಿಸಿ,ಇಂಟೆಲ್ ಕಂಪೆನಿಗೆ ಸ್ಪರ್ಧೆ ನೀಡುತ್ತಿರುವ ಅಗ್ರಗಣ್ಯ ಕಂಪೆನಿ ಅಡ್ವಾನ್ಸ್‍ಡ್ ಮೈಕ್ರೋ ಡಿವೈಸಸ್ ಕಂಪೆನಿ ಅನುಕ್ರಮ ಆರನೇ ಕಾಲು ವಾರ್ಷಿಕ ಅವಧಿಯಲ್ಲೂ ನಷ್ಟ ಅನುಭವಿಸಿದೆ.ಸದ್ಯದ ಅವಧಿಯಲ್ಲಿ ಒಂದೂವರೆ ಬಿಲಿಯನ್ ಡಾಲರು ವ್ಯವಹಾರ ಮಾಡಿಯೂ ಮುನ್ನೂರೈವತ್ತು ಮಿಲಿಯನ್ ಡಾಲರುಗಳ ನಷ್ಟವನ್ನದು ಅನುಭವಿಸಿದೆ.ಸಂಸ್ಕಾರಕಗಳು ನಿರೀಕ್ಷಿಸಿದಷ್ಟು ಜನಪ್ರಿಯವಾಗಿಲ್ಲದಿರುವುದು,ಇಂಟೆಲ್ ಕಂಪೆನಿಯು ತೀವ್ರ್‍ಅ ಸ್ಪರ್ಧೆ ನೀಡುತ್ತಿರುವುದು ಇದಕ್ಕೆ ಕಾರಣವಂತೆ.ಈಗದು ತನ್ನ ಹದಿನೇಳು ಸಾವಿರ ಸಂಖ್ಯೆಯ ನೌಕರರ ಪೈಕಿ ಹತ್ತು ಶೇಕಡಾ ಜನರನ್ನು ಕೈಬಿಡುವ ನಿರ್ಧಾರ ಮಾಡಿದೆ.ಅಮೆರಿಕಾದಲ್ಲಿ ಆರ್ಥಿಕ ಹಿನ್ನಡೆ ಇದೆಯೇ ಎನ್ನುವ ಅನುಮಾನಕ್ಕೆ ಈಗ ಇದೆ ಎಂದು ಯಾವ ಹಿಂಜರಿತವಿಲ್ಲದೆ ಹೇಳಬಹುದಷ್ಟೇ?

ASHOKWORLD
*ಅಶೋಕ್‍ಕುಮಾರ್ ಎ