ಶೂನ್ಯ್ ಇ ಬೊಕೆ ಸಿನಿಮಾವೂ..ಒಂದಷ್ಟು ರಿಯಲ್ ಸ್ಟೋರಿಗಳೂ...
ತಿಂಗಳ ಹಿಂದೆಯಷ್ಟೇ ಮದುವೆ ಫಿಕ್ಸ್ ಆಗಿರೋ ಗೆಳತಿಯೊಬ್ಬಳು ಶಾಪಿಂಗ್ ಗೆ ಹೋಗೋಣ ಎಂದು ಮಲ್ಲೇಶ್ವರಂಗೆ ಕರೆದೊಯ್ದಿದ್ದಳು. ಒಂದಷ್ಟು ಡ್ರೆಸ್ ಗಳನ್ನು ಖರೀದಿಸಿದ ನಂತರ ನನಗೆ Lingre ಖರೀದಿಸಬೇಕೆಂದು ಪಿಸುಗುಟ್ಟಿದಳು. ಸರಿ, ಅಂತ ಅಲ್ಲೇ ಒಂದು ಅಂಗಡಿಗೆ ನುಗ್ಗಿದೆವು. ಸೇಲ್ಸ್ ಗಲ್೯ ಸೈಜೆಸ್ಟು? ಅಂತ ಕೇಳಿದೊಡನೆ, ಪ್ಯಾಡೆಡ್ ಬ್ರಾ ತೋರಿಸಿ ಎಂದು ಸಂಕೋಚದಿಂದಲೇ ಹೇಳಿದಳು ಗೆಳತಿ. ಹಾಗೆ ಬೇಕಾದುದನ್ನೆಲ್ಲಾ ಖರೀದಿಸಿ ಪಿಜಿಗೆ ಬಂದೆವು. ಇನ್ನು ಎರಡು ತಿಂಗಳಲ್ಲಿ ಮದುವೆಯಾಗಲಿರುವ ಆ ಹುಡುಗಿಯನ್ನು ಗೆಳತಿಯರೆಲ್ಲಾ ಸೇರಿ ರೇಗಿಸಿದ್ದಾಯ್ತ. ಹಾಸ್ಟೆಲ್ ಖಾಲಿ ಮಾಡುವ ಮುನ್ನ ಸಿಕ್ಕಾಪಟ್ಟೆ ಫೋಟೋಸ್ ತೆಗೆದದ್ದೂ ಆಯ್ತು. ಆದರೆ ಅವಳ ಮನಸ್ಸಲ್ಲವಿತಿರುವ ಮಾತು ಹೇಳಬೇಕೋ ಬೇಡ್ವೋ ಎಂಬ ಗೊಂದಲದಿಂದ ಚಡಪಡಿಸುತ್ತಿರುವುದು ನಮಗೆ ಗೊತ್ತಾಗಿತ್ತು. ಏನಾಯ್ತು ಹೇಳು? ಎಂದು ಒತ್ತಾಯಿಸಿದಾಗ ಅವಳು ಹೇಳಿದ ಮಾತಿಗೆ ನಾನು ಮೌನಿಯಾಗಿ ಬಿಟ್ಟಿದ್ದೆ.
ನಾಳೆ ಮದುವೆಯಾಗಿ ಹೋಗುವ ಹುಡುಗಿಯ ಮನಸ್ಸಿನಲ್ಲಿರುವ ಸಹಜ ಗೊಂದಲ, ಆತಂಕಗಳು ಅವಳ ಮನಸ್ಸಲ್ಲಿ ಇದ್ದವು ನಿಜ. ಆದರೆ ಅವಳನ್ನು ಇನ್ನಷ್ಟು ಆತಂಕಕ್ಕೀಡು ಮಾಡಿದ್ದು ಆಕೆಯ ದೇಹ. ಮದುವೆ ನಿಶ್ಚಯ ಆದ ನಂತರ ಅವಳ ಹುಡುಗನ ಮನೆಯವರು ಸ್ವಲ್ಪ ದಪ್ಪ ಆಗು ಎಂದು ಹೇಳುತ್ತಲೇ ಇದ್ದರು. ದಪ್ಪ ಆಗುವುದಕ್ಕೆ ಅಂತ ಮದ್ದು ತೆಗೆದುಕೊಂಡ ನಂತರ ಸ್ವಲ್ಪ ದಪ್ಪವೇನೋ ಆಗಿದ್ದಳು ಆದರೆ ಮೈ ಕೈ ತುಂಬಿ ಕೊಂಡಿರಲಿಲ್ಲ. ಹುಡುಗನ ಅಕ್ಕ, ನಿಶ್ಚಿತಾಥ೯ದ ದಿನ ಪ್ಯಾಡೆಡ್ ಬ್ರಾ ನೋಡಿ ನೀನು ಇದನ್ನು ಹಾಕಿ ಕೊಳ್ತಿದ್ದೀಯಾ? ಎಂದು ಅಚ್ಚರಿಯಿಂದಲೇ ನೋಡಿದ್ದರು. ನಾನೇನು ಮಾಡಲಿ ಹೇಳು? ಮೈ ನೆರೆದ ನಂತರವೂ ನನ್ನ ದೇಹದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹೈಸ್ಕೂಲ್ನಲ್ಲಿ ಟೀ ಶಟ್೯ ಹಾಕಿಕೊಂಡಾಗ ಹುಡುಗರು carrom board ಅಂತ ರೇಗಿಸುತ್ತಿದ್ದ ವಿಷಯ ನನಗೆ ಗೊತ್ತಿದೆ. ಕಾಲೇಜಿಗೆ ಸೇರುವ ಹೊತ್ತಿಗೆ ಪ್ಯಾಡೆಡ್ ಬ್ರಾ ಬಳಸೋಕೆ ಶುರು ಮಾಡಿದೆ. ಮದುವೆ ಫಿಕ್ಸ್ ಆಗಿದೆ ನಿಜ. ಆದರೆ ನಿಶ್ಚಿತಾಥ೯ದ ನಂತರ ಅವನ ಮನೆಯವರು ನನ್ನ ಅಮ್ಮನಲ್ಲಿ ಮಾತನಾಡುವಾಗ ಹಲವಾರು ಬಾರಿ ಈ ವಿಷ್ಯವನ್ನೇ ಪ್ರಸ್ತಾಪಿಸಿದ್ದಿದೆ. ನಾಳೆ ಮದುವೆ ಆದ ನಂತರ ಹೇಗೆ ಏನೋ? ಅವಳ ಕಣ್ಣಲ್ಲಿ ನೀರಿತ್ತು.
ಏನೂ ಆಗಲ್ಲ, ಈಗಿನ ಹುಡುಗರು ಎಲ್ಲ ಅಥ೯ ಮಾಡ್ತೋತಾರೆ ಎಂದು ಆಕೆಯನ್ನು ಸಮಾಧಾನಿಸಿದೆ.
ಒಂದು ವೇಳೆ ಅವ ಅಥ೯ ಮಾಡಿಕೊಳ್ಳದೇ ಇದ್ದರೆ? ಅವಳದ್ದು ಸಹಜ ಆತಂಕ.
ಹಾಗೇನೂ ಆಗಲ್ಲ, ಮದ್ವೆ ಆದ ಮೇಲೆ ಎಲ್ಲ ಸರಿಹೋಗುತ್ತೆ. ಅವಳು ಕಣ್ಣೀರೊರೆಸಿ ಮಲಗೋಕೆ ರೆಡಿಯಾದಳು.
ಹುಡ್ಗೀರ ಲೈಫ್ ಹೇಗೆಲ್ಲಾ ಇರುತ್ತೆ ಅಲ್ವಾ? ಅವಳ ಮಾತು ಕೇಳಿದಾಗ ಕೌಶಿಕ್ ಮುಖಜಿ೯ಯವರ ಶೂನ್ಯ್ ಇ ಬೊಕೆ ಬಂಗಾಳಿ ಸಿನಿಮಾ ನೆನಪಾಯ್ತು.
ಈ ಸಿನಿಮಾದಲ್ಲಿ ಕಥಾನಾಯಕಿ ಚುನಿ೯ ಮತ್ತು ಸೌಮಿತ್ರ್ ಭೇಟಿಯಾಗಿದ್ದು ಖುಜರಾಹೋ ನಲ್ಲಿ. ಶ್ರೀಮಂತರ ಮನೆಯ, ಸೌಮ್ಯ ಸ್ವಭಾವದ ಹುಡುಗಿ ಚುನಿ೯. ಸೌಮಿತ್ರ್ ಉತ್ತಮ ಚಿತ್ರಕಾರ, ಶಿಲ್ಪಿ. ಖುಜರಾಹೋನಲ್ಲಿನ ಶಿಲ್ಪಗಳನ್ನು ಆಸ್ವಾದಿಸುತ್ತಿರುವಾಗ ಚುನಿ೯ಯನ್ನು ನೋಡಿ ಪ್ರೇಮಾಂಕುರವಾಗುತ್ತದೆ. ಮನೆಯವರ ವಿರೋಧವಿದ್ದರೂ ಚುನಿ೯ ತನ್ನ ಆಸ್ತಿ ಸಂಪತ್ತು ಕುಟುಂಬವನ್ನು ಬಿಟ್ಟು ಸೌಮಿತ್ರ್ ನ ಮದ್ವೆಯಾಗುತ್ತಾಳೆ. ಇನ್ನೇನು ಹೊಸ ಜೀವನ ಶುರು ಮಾಡಲು ನವ ದಂಪತಿಗಳು ಕನಸು ಹೆಣೆಯ ತೊಡಗುತ್ತಾರೆ. ಮೊದಲ ರಾತ್ರಿ, ಚುನಿ೯ಯ ಜತೆ ಮಾತನಾಡುತ್ತಾ ಸೌಮಿತ್ರ್ ತನ್ನ ಪ್ರೀತಿಯನ್ನು ವ್ಯಕ್ತ ಪಡಿಸುತ್ತಾನೆ. ನನ್ನ ಕನಸಿನ ಹುಡ್ಗಿಯನ್ನು ಮದ್ವೆಯಾಗಿದ್ದೇನೆ ಎಂಬ ಸಂತೖಪ್ತಿ ಅವನಿಗಾದರೆ, ನೀನು ನನ್ನನ್ನು ಇದೇ ರೀತಿ ಪ್ರೀತಿಸುತ್ತೀಯಾ? ಎಂಬುದು ಅವಳ ಪ್ರಶ್ನೆ. ನಾನು ಹೇಗೆ ಇದ್ದೇನೋ ಹಾಗೇ ನನ್ನನ್ನು ಸ್ವೀಕರಿಸು ಎಂಬ ಅವಳ ಮಾತಿಗೆ ಅವನು ಹೂಂಗುಡುತ್ತಾ ಅವಳ ದೇಹವನ್ನಾಸ್ವದಿಸಲು ಮುಂದಾಗುತ್ತಾನೆ.
ಅರೇ ಇದೇನು? ಅಚ್ಚರಿ ಅವನ ಮುಖದಲ್ಲಿ .
ಸಿಟ್ಟಲ್ಲಿ ಅಲ್ಲಿಂದ ಎದ್ದು ಹೋದವನು ಅವಳತ್ತ ಮುಖ ಮಾಡುವುದೇ ಇಲ್ಲ.
ನಾನೇನು ತಪ್ಪು ಮಾಡಿದೆ? ಅಂಥದ್ದೇನಾಗಿದೆ? ಅವಳು ಅಳುತ್ತಾ ಕೇಳುತ್ತಾಳೆ. ನಿನ್ನ ಆ ಭಾಗ ತುಂಬಾ ಕುರೂಪವಾಗಿದೆ ಎಂದು ಅವ ಸಿಡುಕುತ್ತಾನೆ.
ನೀನು ನನ್ನನ್ನು ಮೋಸ ಮಾಡಿದೆ. ಈ ವಿಷ್ಯವನ್ನು ನೀನು ನನಗೆ ಮೊದಲೇ ಹೇಳಬಹುದಿತ್ತಲ್ಲಾ...ಛೇ..ನಾನು ಮೋಸ ಹೋದೆ.
ಅವ ಸಿಡುಕುತ್ತಲೇ ಇದ್ದ, ಅವಳಿಗೆ ಕಣ್ಣೀರು ಹಾಕುವುದು ಬಿಟ್ಟರೆ ಯಾವುದೇ ಮಾಗ೯ವಿರಲಿಲ್ಲ.
ತನ್ನ ಪ್ರೀತಿಗಾಗಿ ಮನೆಯವರನ್ನೆಲ್ಲಾ ಬಿಟ್ಟು ಬಂದಾಗಿದೆ. ಇನ್ನೇನು ಮಾಡುವುದೆಂಬ ದಾರಿ ತೋಚದೆ ಅವಳು ಗೆಳತಿಯ ಬಳಿ ಹೋಗಿ ಆಶ್ರಯ ಪಡೆಯುತ್ತಾಳೆ. ಈತ ತನಗೆ ಮೋಸವಾಗಿದೆ ಎಂದು ಹಳಿಯುತ್ತಾ ಆತನ ಗೆಳೆಯನಿಗೆ ತನ್ನ ಪತ್ನಿಯ ಎದೆ ಹೀಗಿತ್ತು ಎಂದು ಚಿತ್ರ ಬಿಡಿಸಿ ತೋರಿಸುತ್ತಾನೆ. ಈ ಸುದ್ದಿ ಗೆಳೆಯರೆಲ್ಲರಿಗೂ ತಲುಪುತ್ತದೆ, ಕೊನೆಗೆ ಚುನಿ೯ಯ ಕಿವಿಗೂ. ತನ್ನ ಪತ್ನಿಯ ದೇಹದ ಬಗ್ಗೆ ಸ್ನೇಹಿತರ ಮುಂದೆ ಹೇಳಿಕೊಂಡ ಸೌಮಿತ್ರ್ ನನ್ನು ಬೈದು ವಿವಾಹ ವಿಚ್ಛೇದನ ನೀಡಿ ಆಕೆ ಆ ಸಂಬಂಧದಿಂದ ಹೊರ ಬರುತ್ತಾಳೆ.
ಮನುಷ್ಯ ದೇಹವೇ ಸುಂದರ ಕಲಾಕೖತಿ ಅಂದುಕೊಂಡಿದ್ದ ವ್ಯಕ್ತಿ ತನ್ನ ಹೆಂಡತಿಯ ಸಪಾಟಾದ ಎದೆ ನೋಡಿ ಬೆಚ್ಚಿ ಬಿದ್ದಿದ್ದ. ಹೆಣ್ಣೊಬ್ಬಳ ನಿಷ್ಕಲ್ಮಶ ಮನಸ್ಸಿಗಿಂತ ಅವನಿಗೆ ಅವಳ ಬಾಹ್ಯ ಸೌಂದರ್ಯವೇ
ಮುಖ್ಯವಾಗಿತ್ತು. ಕತೆಯ ಕೊನೆಯಲ್ಲಿ ಚುನಿ೯ ಇನ್ನೊಬ್ಬನನ್ನು ವಿವಾಹವಾಗಿ ಅವಳಿಗೊಬ್ಬಳು ಮಗಳು ಹುಟ್ಟುತ್ತಾಳೆ. ಹಾಗೇ ಒಂದು ದಿನ ಕಡಲ ಕಿನಾರೆಯಲ್ಲಿ ಸೌಮಿತ್ರ್ ಇನ್ ಸ್ಟಾಲೇಷನ್ ಕೆಲಸ ಮಾಡುತ್ತಿರುವಾಗ ಚುನಿ೯ ಕುಟುಂಬ ಅಲ್ಲಿ ಅಚಾನಕ್ ಆಗಿ ಭೇಟಿಯಾಗುತ್ತಾರೆ. ತನ್ನ ದೇಹವನ್ನು ಮೂದಲಿಸಿದ ಮೊದಲ ಪತಿಗೆ ತನ್ನ ಸಂಸಾರದ ಬಗ್ಗೆ ಹೇಳುತ್ತಾ, ತನ್ನ ಮಗಳು ನನ್ನದೇ ಎದೆ ಹಾಲು
ಕುಡಿದು ಬೆಳೆದಿದ್ದಾಳೆ ಎಂದು ಹೇಳುವ ಮಾತುಕತೆಯಲ್ಲಿ ಕಥೆ ಮುಕ್ತಾಯವಾಗುತ್ತದೆ.
ಹುಡುಗಿಯ ಬಾಹ್ಯ ಸೌಂದರ್ಯವನ್ನು ನೋಡಿಯೇ ಸ್ನೇಹ ಬೆಳೆಸುವ ಅದೆಷ್ಟೋ ಹುಡುಗರೂ,ಹಾಗೆ ಮಾಡದೇ ಇರುವ ಹುಡುಗರೂ ನಮ್ಮ ನಡುವೆ ಇದ್ದಾರೆ. ಏತನ್ಮಧ್ಯೆ, ತಾನು ಮದುವೆಯಾಗುವ ಹುಡುಗಿ ಹಾಗಿರಬೇಕು, ಹೀಗಿರಬೇಕು ಎಂಬ ಉದ್ದನೆಯ ಪಟ್ಟಿ ಅವರಲ್ಲಿ ಇದ್ದೇ ಇರುತ್ತದೆ. ಹುಡುಗಿಯರಲ್ಲೂ ಇಂಥಾ ನಿಬಂಧನೆಗಳು ಇಲ್ಲದೇ ಇಲ್ಲ. ಆದರೆ ಮದುವೆಯಾದ ನಂತರ ಹುಡುಗಿಯ ದೇಹದಲ್ಲಿ ಕುಂದುಕೊರತೆಯನ್ನು ಬೊಟ್ಟು ಮಾಡಿ ಹುಡುಗ ಎದ್ದು ಹೋಗುತ್ತಾನೆ. ಆದರೆ ಹುಡುಗಿ? ಆಕೆ ಅವನಲ್ಲಿ ಏನೇ ಸಮಸ್ಯೆ ಇದ್ದರೂ ಅದನ್ನು ಸಹಿಸಿಕೊಂಡು ಜೀವನ ಮಾಡುತ್ತಾಳೆ. ಒಂದು ವೇಳೆ ಆಕೆ ಅದನ್ನು ಕುಟುಂಬದವರಿಗೆ ಹೇಳಿಕೊಂಡರೂ ಅಲ್ಲಿಯೂ ಸಹಿಸಿಕೊಂಡೇ ಹೋಗು ಎನ್ನುವ ಉಪದೇಶ ಸಿಗುತ್ತದೆಯೇ ವಿನಾ ಅದಕ್ಕೆ ಸೂಕ್ತ ಪರಿಹಾರ ನೀಡುವ ಜನ ವಿರಳ.
ಪಿಜಿಯ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಹುಡುಗಿಯೊಬ್ಬಳು ತನ್ನ ಆತಂಕಗಳನ್ನು ಬಿಚ್ಚಿಡುವಾಗ, ಇನ್ನೊಬ್ಬ ಹುಡುಗಿಯ ಕಣ್ಣೀರ ಕತೆ ಮೌನವಾಗಿ ಬಿಕ್ಕಳಿಸುತ್ತಿರುತ್ತದೆ. ಇಂಥಾ ಕತೆಗಳು ಸಿನಿಮಾದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ಇರುತ್ತವೆ ಎಂಬುದಕ್ಕೆ ಈ ಗೆಳತಿಯರ ಅನುಭವದ ಮಾತುಗಳೇ ಸಾಕ್ಷಿ.
ಚಿತ್ರ ಕೖಪೆ ಗೂಗಲ್ -ವಿಕಿಪೀಡಿಯಾ
Comments
ಉ: ಶೂನ್ಯ್ ಇ ಬೊಕೆ ಸಿನಿಮಾವೂ..ಒಂದಷ್ಟು ರಿಯಲ್ ಸ್ಟೋರಿಗಳೂ...
ಗಂಭೀರ ವಿಷಯದ ನವಿರಾದ ವಿಶ್ಲೇಷಣೆ ಗಮನ ಸೆಳೆಯುತ್ತದೆ. ಅಂತರಂಗಕ್ಕಿಂತ ಬಾಹ್ಯ ಸೌಂದರ್ಯಕ್ಕೆ ಬೆಲೆ ಕೊಡುವ ಪ್ರವೃತ್ತಿಯನ್ನು ನಮ್ಮ ದೃಷ್ಯ ಮಾಧ್ಯಮಗಳು ಪೋಷಿಸುತ್ತಿರುವುದು ವಿಷಾದದ ಸಂಗತಿ.
In reply to ಉ: ಶೂನ್ಯ್ ಇ ಬೊಕೆ ಸಿನಿಮಾವೂ..ಒಂದಷ್ಟು ರಿಯಲ್ ಸ್ಟೋರಿಗಳೂ... by kavinagaraj
ಉ: ಶೂನ್ಯ್ ಇ ಬೊಕೆ ಸಿನಿಮಾವೂ..ಒಂದಷ್ಟು ರಿಯಲ್ ಸ್ಟೋರಿಗಳೂ...
kavinagaraj ಅವರೇ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು