ಶೂನ್ಯ ಭಂಡವಾಳ ಸಹಜ ಕೃಷಿ – ಮುಂದೇನು?

ಶೂನ್ಯ ಭಂಡವಾಳ ಸಹಜ ಕೃಷಿ – ಮುಂದೇನು?

ಜುಲಾಯಿ ೨೦೧೭ರಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣದಲ್ಲಿ, “ಶೂನ್ಯ ಭಂಡವಾಳದ ಸಹಜ ಕೃಷಿ” ವಿಧಾನವನ್ನು ಎಲ್ಲ ರಾಜ್ಯಗಳಿಗೂ ವಿಸ್ತರಿಸಬೇಕಾದ ಅಗತ್ಯವನ್ನು ಪ್ರಸ್ತಾಪಿಸಿದರು. “ಇಂತಹ ಕ್ರಮಗಳಿಂದ ಭಾರತದ ೭೫ನೆಯ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರೈತರ ಆದಾಯ ಇಮ್ಮಡಿಗೊಳಿಸಲು ಸಹಾಯವಾದಿತು” ಎಂದು ಘೋಷಿಸಿದರು.
ಶೂನ್ಯ ಭಂಡವಾಳದ ಸಹಜ ಕೃಷಿ – ಇದು ನಮ್ಮ ಪಾರಂಪರಿಕ ಕೃಷಿ ವಿಧಾನಗಳನ್ನು ಆಧರಿಸಿದ ರಾಸಾಯನಿಕ ಮುಕ್ತ ಕೃಷಿ ಪದ್ಧತಿ. ೧೯೯೦ರ ದಶಕದಲ್ಲಿ ಇದನ್ನು ಪ್ರತಿಪಾದಿಸಿದವರು ಮಹಾರಾಷ್ಟ್ರದ ಕೃಷಿಕ ಸುಭಾಷ್ ಪಾಳೇಕರ್. ರಾಸಾಯನಿಕ ಗೊಬ್ಬರಗಳು ಮತ್ತು ಪೀಡೆನಾಶಕಗಳು ಹಾಗೂ ಅಧಿಕ ನೀರಾವರಿ ಆಧರಿಸಿದ ಹಸುರುಕ್ರಾಂತಿಯ ಕೃಷಿ ವಿಧಾನಗಳಿಗೆ ಇದು ಬದಲಿ ಎಂಬುದವರ ಪ್ರತಿಪಾದನೆ. ಈ ಒಳಸುರಿಗಳಿಗಾಗಿ ಹಣ ವೆಚ್ಚ ಮಾಡಬೇಕಾಗಿಲ್ಲದ (ಅಥವಾ ಸಾಲ ಪಡೆಯಬೇಕಾಗಿಲ್ಲದ) ಕಾರಣ ಇದು “ಶೂನ್ಯ ಭಂಡವಾಳ”ದ ಕೃಷಿ ಪದ್ಧತಿ.
ರಾಷ್ಟ್ರೀಯ ಸ್ಯಾಂಪಲ್ ಸರ್ವೆ ಕಚೇರಿ ಪ್ರಕಟಿಸಿರುವ ಅಂಕೆಸಂಖ್ಯೆಗಳ ಪ್ರಕಾರ ಭಾರತದ ಶೇ.೭೦ರಷ್ಟು ಕೃಷಿಕುಟುಂಬಗಳು ತಮ್ಮ ಆದಾಯಕ್ಕಿಂತ ಜಾಸ್ತಿ ವೆಚ್ಚ ಮಾಡುತ್ತಿವೆ. ಅದಲ್ಲದೆ, ಶೇ.೫೦ಕ್ಕಿಂತ ಅಧಿಕ ಕೃಷಿಕುಟುಂಬಗಳು ಸಾಲ ಪಡೆದಿವೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಶೇ.೯೦ರಷ್ಟು ಕೃಷಿಕುಟುಂಬಗಳು ಸಾಲದಲ್ಲಿ ಮುಳುಗಿದ್ದು, ಅವುಗಳ ಸರಾಸರಿ ಸಾಲ ಒಂದು ಲಕ್ಷ ರೂಪಾಯಿ! ಇಂತಹ ಸನ್ನಿವೇಶದಲ್ಲಿ, ಶೂನ್ಯ ಭಂಡವಾಳದ ಸಹಜ ಕೃಷಿ ಪದ್ಧತಿ ಸೂಕ್ತ.
ಆದರೆ, ಈ ಕೃಷಿ ಪದ್ಧತಿ ದೀರ್ಘಾವಧಿಯಲ್ಲಿ ಸೂಕ್ತವೇ? ಆಂಧ್ರಪ್ರದೇಶದಲ್ಲಿ ೨೦೧೭ರಲ್ಲಿ ನಡೆಸಲಾದ ಒಂದು ಅಧ್ಯಯನದ ಅನುಸಾರ, ಈ ಕೃಷಿ ಪದ್ಧತಿಯಿಂದಾಗಿ ಒಳಸುರಿಗಳ ವೆಚ್ಚ ತೀವ್ರವಾಗಿ ಕಡಿಮೆಯಾಯಿತು ಮತ್ತು ಇಳುವರಿ ಹೆಚ್ಚಾಯಿತು. ಅದೇನಿದ್ದರೂ, ಈ ಪದ್ಧತಿ ಅನುಸರಿಸಿದ ರೈತರು ಕೆಲವು ವರುಷಗಳ ನಂತರ ರಾಸಾಯನಿಕಗಳ ಬಳಕೆಯ ಕೃಷಿ ಪದ್ಧತಿಗೆ ಹಿಂತಿರುಗುತ್ತಿದ್ದಾರೆ ಎಂಬ ವರದಿಗಳೂ ಪ್ರಕಟವಾಗಿವೆ.
ಇದರಿಂದಾಗಿ, ಈ ಕೃಷಿಪದ್ಧತಿಯ ಪರಿಣಾಮಗಳ ಬಗ್ಗೆ ಅನುಮಾನಗಳೂ ಹುಟ್ಟಿಕೊಂಡಿವೆ. ಕೇಂದ್ರ ಸರಕಾರದ ಧೋರಣೆ ರೂಪಣೆ ಸಂಸ್ಥೆ “ನೀತಿ ಆಯೋಗ”ದ ಕೆಲವು ತಜ್ನರೂ ಇದಕ್ಕೆ ದನಿಗೂಡಿಸುತ್ತಾರೆ. ಭಾರತವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ಹಸುರು ಕ್ರಾಂತಿ ಅಗತ್ಯವಾಗಿತ್ತು ಎಂಬುದನ್ನು ಬೆರಳೆತ್ತಿ ತೋರಿಸುತ್ತಾರೆ. ಸಂಪೂರ್ಣ ಸಾವಯವ ರಾಜ್ಯವಾಗಿರುವ ಸಿಕ್ಕಿಂನಲ್ಲಿ ಕಳೆದ ವರುಷ ಇಳುವರಿ ಸ್ವಲ್ಪ ಕಡಿಮೆಯಾಗಿರುವುದನ್ನು ಉದಾಹರಿಸುತ್ತಾ, ಈ ಪದ್ಧತಿಯ ಟೀಕಾಕಾರರು ಹೀಗೆ ಎಚ್ಚರಿಸುತ್ತಾರೆ: ಇಳುವರಿ ಕಡಿಮೆ ಆಗುವುದಿಲ್ಲ ಎಂಬ ಬಗ್ಗೆ ಸಾಕಷ್ಟು ಪುರಾವೆಯಿಲ್ಲದೆ, ಈ ಪದ್ಧತಿಗೆ ಕೃಷಿಯನ್ನು ಸಾರಾಸಗಟಾಗಿ ಪರಿವರ್ತಿಸುವುದು ಅಪಾಯಕಾರಿ.
ಆರ್ಥಿಕ ಸಮೀಕ್ಷೆಯ ಪ್ರಕಾರ, ೧,೦೦೦ ಗ್ರಾಮಗಳಲ್ಲಿ ಸರಕಾರದ ಬೆಂಬಲದಿಂದ ಸುಮಾರು ೧.೬ ಲಕ್ಷ ರೈತರು ಶೂನ್ಯ ಭಂಡವಾಳ ಸಹಜ ಕೃಷಿ ಅನುಸರಿಸುತ್ತಿದ್ದಾರೆ. ಈ ಕೃಷಿ ಪದ್ಧತಿಯನ್ನು ಮೊದಲಾಗಿ ಆಂದೋಲನವಾಗಿ ಪ್ರಚಾರ ಮಾಡಿದ್ದು ಕರ್ನಾಟಕ ರಾಜ್ಯ ರೈತ ಸಂಘ. ಇದರ ಬಗ್ಗೆ ಕರ್ನಾಟಕದಲ್ಲಿ ನೂರಾರು ತರಬೇತಿ ಶಿಬಿರಗಳನ್ನು ಜರಗಿಸಿ ಸಾವಿರಾರು ರೈತರಿಗೆ ತರಬೇತಿ ನೀಡಲಾಗಿತ್ತು.
ಜೂನ್ ೨೦೧೮ರಲ್ಲಿ, ಆಂಧ್ರಪ್ರದೇಶವು ಮಹಾತ್ವಾಕಾಂಕ್ಷಿ ಯೋಜನೆಯೊಂದನ್ನು ಶುರು ಮಾಡಿದೆ. ಅದರ ಉದ್ದೇಶ, ೨೦೨೪ರಲ್ಲಿ ಇಡೀ ರಾಜ್ಯದ ಎಲ್ಲ ೬೦ ಲಕ್ಷ ರೈತರೂ ಶೂನ್ಯ ಭಂಡವಾಳ ಸಹಜ ಕೃಷಿ ಅನುಸರಿಸುವಂತೆ ಮಾಡುವುದು. ಅಂದರೆ, ಸುಮಾರು ೮೦ ಲಕ್ಷ ಹೆಕ್ಟೇರಿನಲ್ಲಿ ಈ ಕೃಷಿ ಪದ್ಧತಿ ಅಳವಡಿಸುವುದು.
ಈ ವರುಷದ ಕೇಂದ್ರ ಬಜೆಟಿನಲ್ಲಿ ಈ ಕೃಷಿ ಪದ್ಧತಿಯ ಜ್ಯಾರಿಗಾಗಿ ಹೆಚ್ಚುವರಿ ಅನುದಾನ ಒದಗಿಸಿಲ್ಲ. ಆದರೆ, ಕಳೆದ ವರುಷದ ಕೇಂದ್ರ ಬಜೆಟಿನಲ್ಲಿ ಈ ಎರಡು ಯೋಜನೆಗಳ ನಿಯಮಗಳನ್ನು ಬದಲಾಯಿಸಲಾಗಿದೆ: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ – ಕೃಷಿ ಮತ್ತು ಕೃಷಿ ಸಂಬಂಧಿ ರಂಗಗಳ ಪುನರುತ್ಥಾನಕ್ಕಾಗಿ ಲಾಭದಾಯಕ ವಿಧಾನಗಳು (ಈ ವರುಷದ ಅನುದಾನ ರೂ.೩,೭೪೫ ಕೋಟಿ) ಹಾಗೂ ಪರಂಪರಾಗತ ಕೃಷಿ ವಿಕಾಸ ಯೋಜನೆ (ಅನುದಾನ ರೂ.೩೨೫ ಕೋಟಿ). ಹೊಸ ನಿಯಮಗಳ ಅನುಸಾರ, ಈ ಎರಡೂ ಯೋಜನೆಗಳ ಅನುದಾನಗಳನ್ನು ಶೂನ್ಯ ಭಂಡವಾಳ ಸಹಜ ಕೃಷಿ, ವೇದಗಳ ಅನುಸಾರ ಕೃಷಿ, ಸಹಜ ಕೃಷಿ, ದನ-ಆಧಾರಿತ ಕೃಷಿ ಇತ್ಯಾದಿ ಪಾರಂಪರಿಕ ಕೃಷಿ ಪದ್ಧತಿಗಳ ಅನುಷ್ಠಾನಕ್ಕೆ ಬಳಸಬಹುದಾಗಿದೆ. ಆಂಧ್ರಪ್ರದೇಶ ಸರಕಾರವು ಈ ಎರಡು ಕೇಂದ್ರ ಯೋಜನೆಗಳ ರೂ.೨೪೯ ಕೋಟಿಗಳನ್ನು ಶೂನ್ಯ ಭಂಡವಾಳ ಸಹಜ ಕೃಷಿಗೆ ಕಳೆದ ಎರಡೂವರೆ ವರುಷಗಳಲ್ಲಿ ವಿನಿಯೋಗ ಮಾಡಿರುವುದಾಗಿ ತಿಳಿಸಿದೆ.
ನೀತಿ ಆಯೋಗವು ಈ ಕೃಷಿ ಪದ್ಧತಿಯನ್ನು ಬೆಂಬಲಿಸುತ್ತಿದೆಯಾದರೂ, ವಿವಿಧ ಪ್ರದೇಶಗಳಲ್ಲಿ ಇದರ ಬಗ್ಗೆ ಅಧ್ಯಯನಗಳನ್ನು ನಡೆಸಿ, ಇದು ವೈಜ್ನಾನಿಕವಾಗಿಯೂ ಸೂಕ್ತ ಎಂಬುದನ್ನು ದೃಢ ಪಡಿಸಬೇಕೆಂದು ಎಚ್ಚರಿಸಿದೆ. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು ಈ ಸ್ಥಳಗಳಲ್ಲಿ ಇದರ ಬಗ್ಗೆ ಅಧ್ಯಯನಗಳನ್ನು ನಡೆಸುತ್ತಿದೆ: ಉತ್ತರಪ್ರದೇಶದ ಮೋದಿಪುರಮ್‍ನಲ್ಲಿ ಬಸುಮತಿ ಮತ್ತು ಗೋಧಿ ಕೃಷಿಕರ ಹೊಲಗಳು, ಪಂಜಾಬಿನ ಲುಧಿಯಾನ, ಉತ್ತರಖಂಡದ ಪಂತ್‍ನಗರ ಮತ್ತು ಹರಿಯಾಣದ ಕುರುಕ್ಷೇತ್ರ.
ಈ ಅಧ್ಯಯನಗಳಿಂದ, ಶೂನ್ಯ ಭಂಡವಾಳ ಸಹಜ ಕೃಷಿ ಯಶಸ್ವಿ ವಿಧಾನವೆಂದು ಸಾಬೀತಾದರೆ, ಈ ವಿಧಾನವನ್ನು ದೇಶವ್ಯಾಪಿಯಾಗಿ ಜ್ಯಾರಿಗೊಳಿಸಲು ಪೂರಕವಾದ ಸಾಂಸ್ಥಿಕ ವ್ಯವಸ್ಥೆಯನ್ನು ರೂಪಿಸಬಹುದು ಎನ್ನುತ್ತಾರೆ ನೀತಿ ಆಯೋಗದ ವೈಸ್-ಚೇರ್ಮನ್ ರಾಜೀವ್ ಕುಮಾರ್. ಕಾದು ನೋಡೋಣ.
ಫೋಟೋ ಕೃಪೆ: ದ ಹಿಂದೂ ದಿನಪತ್ರಿಕೆ