ಶೂ ಮತ್ತು ಆತ್ಮಗೌರವ

ಇಲ್ಲಿರುವ ಪುಟ್ಟ ಘಟನೆ ಅಮೇರಿಕಾದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಅವರ ಜೀವನದಲ್ಲಿ ನಡೆದದ್ದು. ಒಬ್ಬ ಬಡ ಚಮ್ಮಾರನ ಮಗನಾದ ಲಿಂಕನ್ ಕಷ್ಟಪಟ್ಟು ಜೀವನ ಸಾಗಿಸಿ ಅಮೇರಿಕಾದ ಅಧ್ಯಕ್ಷ ಪದವಿಯವರೆಗೆ ಸಾಗಿದ ದಾರಿ ಎಲ್ಲರಿಗೂ ಪ್ರೇರಣದಾಯಕ. ನಿಜಕ್ಕೂ ಇಂತಹ ಮಹಾನ್ ವ್ಯಕ್ತಿಗಳಿಂದ ನಾವು ಕಲಿಯಬೇಕಾದದ್ದು ಬಹಳ ಇದೆ. ಅವರು ಅಮೇರಿಕಾದ ಅಧ್ಯಕ್ಷ ಪದವಿಯನ್ನು ಸ್ವೀಕರಿಸಿದ ಸಂದರ್ಭದಲ್ಲಿ ನಡೆಯಿತು ಎನ್ನಲಾದ ಘಟನೆಯೊಂದು ಇಲ್ಲಿದೆ.
***
" ನಿಮ್ಮಪ್ಪ ನಮ್ಮ ಕುಟುಂಬಕ್ಕೆ ಶೂ ಹೊಲಿದು ಕೊಡ್ತಿದ್ದ ಗೊತ್ತಾ ?"
ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೇರಿಕಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಅಬ್ರಹಾಂ ಲಿಂಕನ್ ಅವರಿಗೆ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಹೀಗೊಬ್ಬ ಕೇಳಿಬಿಟ್ಟ.
ಅದು ವಿಶ್ವದ ಗಣ್ಯಾತಿಗಣ್ಯರಿಂದಲೇ ತುಂಬಿದ್ದ ದೊಡ್ಡ ಸೆನೆಟ್ ಸಭಾಗೃಹ. ಆಗಷ್ಟೇ ಅಧಿಕಾರ ವಹಿಸಿಕೊಂಡಿದ್ದ ಅಬ್ರಹಾಂ ಲಿಂಕನ್ ರಿಗೆ ಅಭಿನಂದನೆ ಸಲ್ಲಿಸಲು ಜಗತ್ತಿನ ಮೂಲೆ ಮೂಲೆಗಳಿಂದಲೂ ಬಂದಿದ್ದ ರಾಜಕಾರಣಿಗಳು, ವಿದ್ವಾಂಸರು, ಸಾಹಿತಿಗಳು, ಸೇನಾಧಿಕಾರಿಗಳು ಅಲ್ಲಿದ್ದರು.
ಇನ್ನೇನು ಅಭಿನಂದನಾ ಕಾರ್ಯಕ್ರಮ ಆರಂಭವಾಗುವುದರಲ್ಲಿತ್ತು. ಅಷ್ಟರಲ್ಲಿ ಬಿಳಿಯನೊಬ್ಬ ಎದ್ದು ನಿಂತು " ಮಿಸ್ಟರ್ ಲಿಂಕನ್, ನಿಮ್ಮ ತಂದೆ ನಮ್ಮ ಕುಟುಂಬಕ್ಕೆ ಶೂ ಹೊಲಿದು ಕೊಡುತ್ತಿದ್ದರು.ಆದನ್ನು ನೀವು ಮರೆಯಬಾರದು" ಎಂದು ಬಿಟ್ಟ. ಈ ಮಾತಿನಲ್ಲಿ ಕುಚೋದ್ಯವಿತ್ತು.
ಶತಮಾನಗಳಿಂದಲೂ ತಮ್ಮ ಅಧೀನದಲ್ಲೇ ಇಟ್ಟುಕೊಂಡಿದ್ದ ಅಮೇರಿಕಾದ ಅಧ್ಯಕ್ಷೀಯ ಗಾದಿ ಒಬ್ಬ ಕರಿಯನ ಪಾಲಾಗಿದ್ದರಿಂದ ಬಿಳಿಯರಲ್ಲಿ ಸಹಜವಾಗಿಯೆ ಅಸೂಯೆ ಹುಟ್ಟಿಕೊಂಡಿತ್ತು. ಅಂಥವರ ಪ್ರತಿನಿಧಿಯಂತಿದ್ದ ಬಿಳಿಯನೊಬ್ಬ ಲಿಂಕನ್ ಅವರನ್ನು ಹಂಗಿಸಲು ಹೀಗೆ ಕೇಳಿಬಿಟ್ಟಿದ್ದ. ಅವನ ಮುಖದ ಮೇಲೆ ಕುಹಕ ನಗೆ ಲಾಸ್ಯವಾಡುತ್ತಿತ್ತು.
ಅವನ ಪ್ರಶ್ನೆಯಿಂದ ಸಭೆಯಲ್ಲಿ ಸೂಜಿ ಬಿದ್ದರೂ ಕೇಳುವಷ್ಟು ನಿಶ್ಯಬ್ದ. ಗಣ್ಯರು ಏನೋ ತಪ್ಪು ಘಟಿಸಿದಂತೆ ಮುಖ ಮುಖ ನೋಡಿಕೊಂಡರು. ಆದರೆ, ಲಿಂಕನ್ ವಿಚಲಿತರಾಗಲಿಲ್ಲ. ಕೇಳಿದವನ ಕಣ್ಣುಗಳನ್ನೇ ದಿಟ್ಟಿಸುತ್ತಾ ಮಾತನಾಡತೊಡಗಿದರು. ' ಹೌದು ಸರ್, ಶೂ ಹೊಲಿಯುವ ಕುಶಲಕರ್ಮಿಯಾಗಿದ್ದ ನಮ್ಮಪ್ಪ ನಿಮ್ಮ ಕುಟುಂಬಕ್ಕೆ ಮತ್ತು ಇಲ್ಲಿನ ಅನೇಕ ಗಣ್ಯರ ಮನೆ ಮಂದಿಗೆ ಶೂ ತಯಾರಿಸಿ ಸರಬರಾಜು ಮಾಡುತ್ತಿದ್ದುದು ನನಗೂ ಗೊತ್ತಿದೆ.
ಆ ಕಾಲದಲ್ಲಿ ನಮ್ಮಪ್ಪನಷ್ಟು ಸುಂದರವಾಗಿ ಶೂ ಹೊಲಿಯುವವರು ನಮ್ಮ ಪ್ರಾಂತ್ಯದಲ್ಲಿ ಯಾರೂ ಇರಲಿಲ್ಲ. ಅವನು ತಯಾರಿಸುತ್ತಿದ್ದ ಶೂಗಳು ಕೇವಲ ಶೂಗಳಾಗಿರಲಿಲ್ಲ. ಅವು ಅಪ್ಪನ ಸೃಜನಶೀಲ ಪ್ರತಿಭೆಯನ್ನೆಲ್ಲ ಹೊತ್ತ ಕಲಾಕೃತಿಗಳಾಗಿರುತ್ತಿದ್ದವು. ನನಗೂ ಕೂಡ ನಮ್ಮಪ್ಪ ಸುಂದರವಾಗಿ ಶೂ ಹೊಲಿಯುವುದನ್ನು ಕಲಿಸಿಕೊಟ್ಟಿದ್ದಾರೆ. ನಮ್ಮಪ್ಪ ಮಾಡಿಕೊಟ್ಟ ಶೂಗಳಲ್ಲಿ ಏನಾದರೂ ದೋಷವಿದ್ದರೆ ದಯವಿಟ್ಟು ತಿಳಿಸಿ. ನಾನು ಮತ್ತೊಂದು ಜೊತೆ ಶೂ ತಯಾರಿಸಿ ಕೊಡುತ್ತೇನೆ. ಆದರೆ, ನನಗೆ ಗೊತ್ತಿರುವಂತೆ ಇದುವರೆಗೂ ಯಾವೊಬ್ಬ ಗ್ರಾಹಕನೂ ನಮ್ಮಪ್ಪನ ಚಮ್ಮಾರಿಕೆಯ ಕೌಶಲ್ಯದ ಬಗ್ಗೆ ಅನುಮಾನ ಪಟ್ಟಿಲ್ಲ. ಈ ಕುರಿತು ನನ್ನ ಅಪ್ಪನ ಬಗ್ಗೆ ನನಗೆ ಬೆಟ್ಟದಷ್ಟು ಹೆಮ್ಮೆ ಇದೆ.'
ಲಿಂಕನ್ ರ ಮಾತುಗಳನ್ನು ಕೇಳುತ್ತಿದ್ದ ಇಡೀ ಸಭಿಕರೆಲ್ಲ ಮೂಕವಿಸ್ಮಿತರಾದರು. ಲಿಂಕನ್ ರ ಮನಸ್ಸನ್ನು ಗಾಯಗೊಳಿಸುವ ಉದ್ದೇಶದಿಂದ ಪ್ರಶ್ನೆ ಕೇಳಿದ್ದ ಬಿಳಿಯನ ಕಣ್ಣುಗಳು ಸಹ ಪಶ್ಚಾತ್ತಾಪದಿಂದ ತೇವಗೊಂಡಿದ್ದವು.
ಲಿಂಕನ್ ರ ಈ ನಡೆಯಿಂದ ನಾವು ಕಲಿಯಬೇಕಾದುದಿಷ್ಟೇ; ನಮ್ಮನ್ನು ಘಾಸಿಗೊಳಿಸಲೆಂದೇ ಜನ ಕಾಯುತ್ತಿರುತ್ತಾರೆ. ಆದರೆ, ನಾವು ಮಾಡುವ ವೃತ್ತಿಯ ಬಗ್ಗೆ ನಮಗೆ ಆತ್ಮಾಭಿಮಾನವಿದ್ದರೆ ಅವರ ದುರುದ್ದೇಶ ಅವರಿಗೆ ತಿರುಗುಬಾಣವಾಗುತ್ತದೆ. ಯಾವುದೇ ಕೆಲಸ ಸಣ್ಣದಲ್ಲ. ನಾವು ಮಾಡಿದ ಕೆಲಸಕ್ಕೆ ಸಿಗುವ ಕೂಲಿ ಅಥವಾ ಸಂಬಳ ಸಣ್ಣದಿರಬಹುದು ಆದರೆ ಪ್ರತಿಯೊಂದು ಕೆಲಸಕ್ಕೂ ಅದರದ್ದೇ ಆದ ಮಹತ್ವ ಇದೆ. ಸಣ್ಣ ಪುಟ್ಟ ಕೆಲಸ ಮಾಡುವವರು ಆ ಕೆಲಸ ಮಾಡದೇ ಹೋದರೆ ನಮಗೆ ಎಷ್ಟು ಕಷ್ಟವಾಗುತ್ತದೆ. ಚಮ್ಮಾರನು ಚಪ್ಪಲಿ ರಿಪೇರಿ ಮಾಡಿ ಕೊಡದಿದ್ದರೆ ಪ್ರತೀ ಸಲ ನಾವು ಹೊಸ ಚಪ್ಪಲಿ ಅಥವಾ ಶೂ ಕೊಳ್ಳಬೇಕಾಗಿರಲಿಲ್ಲವೇ? ನಾವು ತೆಗೆದುಕೊಂಡ ವಾಹನ ದುರಸ್ತಿ ಮಾಡುವ ಮೆಕ್ಯಾನಿಕ್ ಆ ಕೆಲಸ ಮಾಡದಿದ್ದರೆ ಪ್ರತೀ ಸಲ ಹೊಸ ವಾಹನ ಖರೀದಿ ಮಾಡಲು ಸಾಧ್ಯವೇ? ಹೀಗೆ ನೂರಾರು ಕೆಲಸಗಳಿಗೆ ಈ ರೀತಿಯ ಕುಶಲಕರ್ಮಿಗಳ ಅಗತ್ಯ ನಮಗೆ ಇರುತ್ತದೆ.
ಅಬ್ರಹಾಂ ಲಿಂಕನ್ ಅವರ ಜೀವನದ್ದೇ ಒಂದು ಘಟನೆ ನನಗೆ ನೆನಪಿಗೆ ಬರುತ್ತಿದೆ. ಅಮೇರಿಕಾದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲೂ ಲಿಂಕನ್ ತಮ್ಮ ಶೂಗಳನ್ನು ತಾವೇ ಪಾಲಿಶ್ ಮಾಡಿಕೊಳ್ಳುತ್ತಿದ್ದರು. ಹೀಗೊಮ್ಮೆ ಅವರು ಪಾಲಿಶ್ ಮಾಡುತ್ತಿರುವಾಗ ಅವರನ್ನು ಓರ್ವ ಗಣ್ಯ ವ್ಯಕ್ತಿ ಭೇಟಿಯಾಗಲು ಬಂದರಂತೆ. ಲಿಂಕನ್ ಅವರ ಕೆಲಸ ನೋಡಿ ಅಚ್ಚರಿಯಾಗಿ ಕೇಳಿದರಂತೆ. ‘ನೀವು ಅಮೇರಿಕಾದ ಅಧ್ಯಕ್ಷರಾಗಿ ನಿಮ್ಮ ಶೂ ಅನ್ನು ನೀವೇ ಪಾಲಿಶ್ ಮಾಡಿಕೊಳ್ಳುತ್ತಿರುವಿರಾ?” ಅದಕ್ಕೆ ಲಿಂಕನ್ “ ಹೌದು. ಆದರೆ ನೀವು ಯಾರ ಶೂ ಪಾಲಿಶ್ ಮಾಡುವಿರಿ?” ಎಂದರಂತೆ ನಗುತ್ತಾ. ಗಣ್ಯ ವ್ಯಕ್ತಿಯ ಬಾಯಿಂದ ನಂತರ ಮಾತುಗಳು ಬರಲಿಲ್ಲವಂತೆ. ಸರಳ ಜೀವನ, ಸರಳ ವ್ಯಕ್ತಿತ್ವದ ಹಲವಾರು ವ್ಯಕ್ತಿಗಳು ನಮ್ಮ ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿದ್ದಾರೆ. ಅವರ ಸಾಧನೆಗಳು ನಮಗೆ ದಾರಿದೀಪವಾಗಲಿ ಎಂಬುದೇ ಈ ಲೇಖನದ ಆಶಯ.
(ವಾಟ್ಸಾಪ್ ಮೂಲಕ ಬಂದ ಕಥೆಯ ವಿಸ್ತಾರ)