ಶೃಂಗೇರಿಯ ಇತಿಹಾಸ.
ಶೃಂಗೇರಿಯ ಇತಿಹಾಸ : ಆದಿಶಂಕರರು, ತಮ್ಮ ಪ್ರಥಮ, ಹಾಗೂ ಪ್ರಶಷ್ತ್ಯ ವಾದ ಮಠವನ್ನು ಸ್ಥಾಪಿಸುವ ಉದ್ದೇಶ್ಯದಿಂದ ಪವಿತ್ರಸ್ಥಾನದ ಅನ್ವೇಷಣೆಯಲ್ಲಿದ್ದಾಗ, ಶೃಂಗೇರಿಗೂ ಭೇಟಿಯಿತ್ತರು. ಅಲ್ಲಿನ ತುಂಗಾನದಿಯ ದಂಡೆಯ ಬಳಿ ಕಂಡ ದೃಶ್ಯದಿಂದ ಅವರು ಬಹಳ ಪ್ರಭಾವಿತರಾದರು. ಬಿಸಿಲಿನ ತಾಪದಿಂದ ಬಸವಳಿದ ಒಂದು ಗರ್ಭಿಣಿ ಕಪ್ಪೆಯೊಂದಕ್ಕೆ, ಕಾಳಿಂಗಸರ್ಪವೊಂದು, ತನ್ನ ಹೆಡೆಯೆತ್ತಿ ನೆರಳು ನೀಡುತ್ತಿತ್ತು ! ಹೀಗೆ, ಸಹಜ ಶತೃಗಳಾದಾಗ್ಯೂ, ಪರಸ್ಪರ ಪ್ರೀತಿ ಸೌಹಾರ್ದದಿಂದ ಬಾಳ್ವೆಮಾಡುತ್ತಿದ್ದ, ಪಶು, ಪಕ್ಷಿ, ಪ್ರಾಣಿಗಳ ನಡುವಳಿಕೆಯ ಸ್ಥಾನದ ಪವಿತ್ರತೆ, ಅವರನ್ನು ಮೂಕರನ್ನಾಗಿಸಿತು.
ತಮ್ಮ ಜೀವಿತದ ಅತ್ಯಮೂಲ್ಯ ೩೨ ವರ್ಷಗಳಲ್ಲಿ, ೧೨ ವರ್ಷಗಳನ್ನು ಶೃಂಗೇರಿಯಲ್ಲೇ ಕಳೆದದ್ದು ಇತಿಹಾಸವೇ ಸರಿ ! ಈ ಊರಿಗೆ, "ಶೃಂಗೇರಿ", 'ಶೃಂಗಗಿರಿ', ಅಥವಾ 'ಋಷ್ಯಶೃಂಗಪುರ,' ಎಂದುಹೆಸರು ಬಂದಿರುವುದು, ಋಷ್ಯಶೃಂಗ ಮಹರ್ಷಿಗಳ ಪ್ರಾಚೀನ ಕಥೆಯಿಂದ. ಈತನ ತಂದೆ, ವಿಭಾಂಡಕಮುನಿ. ಸನ್ನಿವೇಶಗಳ ವಿಚಿತ್ರ ಸಂಯೋಗದಿಂದ, ಹಣೆಯಮೇಲೆ ಒಂದು ಕೋಡುಯಿದ್ದ ಮಗನನ್ನು ಆತ ಜಿಂಕೆಯಿಂದ ಪಡೆದರು. ಪಾಲನೆ ಪೋಷಣೆಯ ಜವಾಬ್ದಾರಿಯನ್ನು ಹೊತ್ತ ಋಷಿಯು, ತನ್ನ ಮಗನಿಗೆ " ಋಷ್ಯಶೃಂಗ ' ಎಂದು ನಾಮಕರಣ ಮಾಡಿದರು. ಆ ಮುಗ್ಧಮಗನನ್ನು ಪ್ರಾಪಂಚಿಕ ರೀತಿ-ನೀತಿಗಳಿಂದ ದೂರವಿಡಲು ಅವರು ಮಾಡಿದ ಸುಲಭ ಉಪಾಯವೆಂದರೆ, ಆತನನ್ನು ಕಾಡಿನಲ್ಲಿಯೆ ಇಟ್ಟು ಸಾಕಿದರು. ತಮ್ಮ ಬಾಲ್ಯಜೀವನದಲ್ಲಿ ಒಂದು ನರಪಿಳ್ಳೆಯನ್ನೂ ಕಾಣದ ಋಷ್ಯಶೃಂಗರು, ಗಂಡು-ಹೆಣ್ಣುಗಳೆಂಬ ಭೇದವೂ ತಿಳಿಯದ ಮುಗ್ಧರು. ಒಮ್ಮೆ, ಪಕ್ಕದ ರಾಜ್ಯದಲ್ಲಿ ಕ್ಷಾಮವು ತಲೆದೋರಿತು. ಆ ದೇಶದ ರಾಜ ಲೋಮಪಾದ. ರಾಜ್ಯದ ಮಂತ್ರಿಗಳು ಮತ್ತು ಆಪ್ತಹಿರಿಯರ ಸಲಹೆಯಂತೆ, ಋಷ್ಯಶೃಂಗರನ್ನು ಕರೆತಂದರೆ, ಅವನ ಪವಿತ್ರ ಪಾದ ಸ್ಪರ್ಷದಿಂದ, ಮಳೆಬಿದ್ದು ಕ್ಷಾಮವು ನಾಶವಾಗುವುದೆಂದು ತಿಳಿಸಲು, ರಾಜನು ಋಷ್ಯಶೃಂಗರನ್ನು ಕರೆತರಲು ಅನೇಕ ಸುಂದರ ತರುಣಿಯರನ್ನು ವನಕ್ಕೆ ಕಳಿಸಿಕೊಟ್ಟನು. ಆ ಸುಂದರಾಂಗಿಯರು, ವಿಭಾಂಡಕಮುನಿಯಿಲ್ಲದಿದ್ದ ಸಮಯದಲ್ಲಿ ಕಾಣಿಸಿಕೊಂಡು, ಋಷ್ಯಶೃಂಗರನ್ನು ವಿಶೇಷ ಆತಿಥ್ಯದಿಂದ ಸಂತುಷ್ಟಗೊಳಿಸಿ ಆಕರ್ಶಿಸಿದರು. ಋಷ್ಯಶೃಂಗರು, ಆ ಹೆಣ್ಣುಗಳ ಸಹಜ ಆಕರ್ಷಣೆಗೆ ಒಳಗಾದರು. ಅವರನ್ನು ರಾಜ್ಯಕ್ಕೆ ಬರಬೇಕೆಂದು ಆಹ್ವಾನವಿತ್ತ ತರಳೆಯರು, ವಿಭಾಂಡಕ ಮಹರ್ಷಿಯು ಬರುವುದರೊಳಗಾಗಿ ಹೊರಟುಹೋದರು. ಋಷ್ಯಶೃಂಗರ ಮನಸ್ಸು, ಆ ಸುಂದರ ತರುಣಿಯರ ಅಗಲುವಿಕೆಯಿಂದ ಅಶಾಂತವಾಯಿತು. ಅವರು ಅವರನ್ನು ಅರಸಿಕೊಂಡು ರಾಜ್ಯದಒಳಗಡೆ ಬಂದರು. ಕೂಡಲೆ, ಧಾರಾಕಾರವಾಗಿ ಮಳೆಸುರಿದು ದೇಶವು ಸುಭಿಕ್ಷವಾಯಿತು. ರಾಜನು ತನ್ನ ಕೃತಜ್ಞತೆಯನ್ನು ತೋರಿಸುವ ಸಲುವಾಗಿ, ಅವರಿಗೆ ತನ್ನ ಮಗಳಾದ ಶಾಂತೆಯನ್ನು ಮದುವೆಮಾಡಿಕೊಟ್ಟನು.
ಸ್ವಲ್ಪದಿನಗಳಾದಮೇಲೆ, ಋಷ್ಯಶೃಂಗದಂಪತಿಗಳು ದಶರಥನ ಪುತ್ರಕಾಮೇಷ್ಠಿ ಯಾಗದಲ್ಲಿ, ಪಾಲ್ಗೊಳ್ಳಲು ಅಯೋಧ್ಯೆಗೆ ಹೊರಟರು. ಯಾಗವು ಸಫಲಗೊಂಡು ದಶರಥಮಹಾರಾಜನಿಗೆ ಶ್ರೀರಾಮನೇ ಮೊದಲಾದ ನಾಲ್ವರು ಪುತ್ರರ ಅನುಗ್ರಹವಾಯಿತು. ಈಗ ಋಷ್ಯಶೃಂಗರಿಗೆ, ತಮ್ಮ ಕಾಡಿನ ವಾತಾವರಣ ನೆನಪಿಗೆ ಬಂತು. ಅಂತೆಯೇ ಅವರು ತಮ್ಮ ಜೀವನದ ಶೇಷಭಾಗವನ್ನು, ಅಲ್ಲಿ ಕಳೆಯಲು ಮತ್ತೆ ವನಕ್ಕೆ ಹಿಂದಿರುಗಿದರು.
ಅವರು ತಮ್ಮ ಕೊನೆಯುಸಿರು ಎಳೆದಾಗ, ಅವರ ದೇಹದಿಂದ ಒಂದು ಮಿಂಚಿನ ಪ್ರಭೆ, ಹೊರಟು, ದಿನ ನಿತ್ಯವೂ ಪೂಜಿಸುತ್ತದ್ದ ಶಿವಲಿಂಗದಲ್ಲಿ ಲೀನವಾಗಿ ಕಣ್ಮರೆಯಾಯಿತು. ಅದೇ ಕಿಗ್ಗವೆಂಬ ಸ್ಥಳ. ಇದು, ಶೃಂಗೇರಿಯಿಂದ, ಸುಮಾರು ೧೦ ಕಿ. ಮೀ. ದೂರದಲ್ಲಿದೆ. ಅಲ್ಲಿಯೇ ಹತ್ತಿರದ ಗುಡ್ಡವೊಂದರಲ್ಲಿ, ಋಷ್ಯಶೃಂಗರ ತಂದೆಯವರು, ಒಂದು ಶಿವಲಿಂಗದಲ್ಲಿ ಐಕ್ಯವಾಗಿದ್ದು, ಇದಕ್ಕೆ "ಮಲಹಾನಿಕರೇಶ್ವರ, " ಎಂದು ಹೆಸರಿದ್ದು ಇಂದಿಗೂ ಪ್ರಸಿದ್ಧಿಯಾಗಿದೆ.
ಶೃಂಗೇರಿಯು, ಸಮೀಪದ ಬೀರೂರು ಮತ್ತು ಶಿವಮೊಗ್ಗ ರೈಲ್ವೆ ಸ್ಥಾನಕದಿಂದ, ಕೇವಲ ೯೬ ಕಿ. ಮೀ. ದೂರದಲ್ಲಿದೆ. ಇಲ್ಲಿಂದ ಮಂಗಳೂರಿಗೆ ೧೦೭ ಕಿ. ಮೀ. ಗಳು. ಬೆಂಗಳೂರಿಗೆ ಬಸ್ಸಿನ ವ್ಯವಸ್ಥೆ ಚೆನ್ನಾಗಿದ್ದು, ಹಗಲು-ರಾತ್ರಿ, ಶ್ರೀ ಕ್ಷೇತ್ರಕ್ಕೆ, ಬಸ್ಸುಗಳು ಬಂದು ಹೋಗಲು ದೊರೆಯುತ್ತವೆ. [೩೨೦ ಕಿ, ಮೀ.ಗಳು] ಶೃಂಗೇರಿಯಲ್ಲಿ ಎಲ್ಲಾ ವರ್ಗದ ಜನರಿಗೂ ಸಹಾಯವಾಗುವಂತಹ, ವಸತಿ-ಗೃಹಗಳು ಸಾಕಷ್ಟಿವೆ.