ಶೃಂಗೇರಿಯ ಶಾರದಾದೇವಿ ದೇವಸ್ಥಾನ, ಮತ್ತು ವಿದ್ಯಾಶಂಕರ ದೇವಾಲಯ.

ಶೃಂಗೇರಿಯ ಶಾರದಾದೇವಿ ದೇವಸ್ಥಾನ, ಮತ್ತು ವಿದ್ಯಾಶಂಕರ ದೇವಾಲಯ.

ಬರಹ

ಶಾರದಾದೇವಿ ದೇವಸ್ಥಾನ ಮತ್ತು ವಿದ್ಯಾಶಂಕರ ದೇವಾಲಯ.

ಶೃಂಗೇರಿ ದೇವಸ್ಥಾನದ ಪ್ರಾಂಗಣಕ್ಕೆ ಕಾಲಿಟ್ಟರೆ ಸಾಕು ಕಣ್ಣಿಗೆ ಗೋಚರಿಸುವುದು, ಶಾರದಾದೇವಿ ದೇವಸ್ಥಾನ. ಅದರ ಬದಿಯಲ್ಲೇ " ವಿದ್ಯಾಶಂಕರ ದೇವಾಲಯ," ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ. ಅದರ ಪ್ರಾಚೀನ ವಾಸ್ತುಶಿಲ್ಪಶೈಲಿ ವಿಭಿನ್ನವಾಗಿದ್ದು ಕೆಲವು ವಿಶೇಷತೆಗಳನ್ನು ಹೊಂದಿದೆ !

ಈ ದೇವಾಲಯದಲ್ಲಿ ಗಮನಿಸಬೇಕಾದ ಮುಖ್ಯವಿಷಯವೆಂದರೆ, ಅದರ ಗರ್ಭಗೃಹದ ಮುಂದಿರುವ ಸಭಾಭವನ. ಅದು ಸಮವಿಸ್ತೀರ್ಣಹೊಂದಿದೆ. ಅದರ ಮೇಲಣ ಗೋಪುರವು ಗೋಳಾಕಾರವಾಗಿ ನಿಲ್ಲಿಸಲಾಗಿರುವ ೧೨ ಶಿಲಾಸ್ಥಂಭಗಳ ಆಧಾರದಮೇಲೆ ನಿಂತಿದೆ. ಈ ಕಂಬಗಳಲ್ಲಿ ಕ್ರಮವಾಗಿ ೧೨ ರಾಶಿಚಿನ್ಹೆಗಳನ್ನು ಕೆತ್ತಲಾಗಿದೆ. ಈ ಸಭಾಭವನಕ್ಕೆ ಪೂರ್ವ, ಉತ್ತರ ಮತ್ತು ಪಶ್ಚಿಮ, ದಿಕ್ಕುಗಳಲ್ಲಿ ೩ ಚಿಕ್ಕ ಬಾಗಿಲುಗಳಿವೆ. ಉದಯರವಿಯ ಕಿರಣಗಳು ಆಯಾರಾಶಿಸ್ಥಂಬಗಳ ಮೂಲಕವೇ ಹಾದು ಹೋಗುವಂತೆ ರಚಿತವಾಗಿದ್ದು ಇದು ಸೌರಮಾನಕ್ಕೆ ಅನುಗುಣವಾಗಿ ಸೂರ್ಯನ ಸಂಕ್ರಮಣವನ್ನು ಹೊಂದುವಂತಿದ್ದು, ಬೇರಾವ ಕಂಬದಮೇಲೂ ಹಾದು ಹೋಗುವುದಿಲ್ಲ. ಗುರುವಂಶಕಾವ್ಯದ ಅನುಸಾರ ಇದರ ಶಿಲ್ಪಿಯ ಹೆಸರು ಜಕ್ಕಣ. ಕೌಶಲ ಮತ್ತು ಇಂಥಾ ಕಲಾಶಿಲ್ಪದ ಕಲ್ಪನೆಯನ್ನು ಮನಗಂಡು ಮಾರ್ಗದರ್ಶನಮಾಡಿದ ಶ್ರೀ ಭಾರತಿತೀರ್ಥರು ಹಾಗೂ, ಶ್ರೀ ವಿದ್ಯಾರಣ್ಯರೀರ್ವರ ಪ್ರತಿಭೆಯೂ ನಮ್ಮನ್ನು ನಿಷ್ಪ್ರಭರನ್ನಾಗಿಸಿಬಿಡುತ್ತವೆ.

೧೦ ನೆಯ ಆಚಾರ್ಯರು ಮಹಾಯೋಗಿಗಳಾಗಿದ್ದ ಶ್ರೀ ವಿದ್ಯಾತೀರ್ಥರು. ಅವರು ತಮ್ಮ ಶಿಷ್ಯೋತ್ತಮರಾದ ಭಾರತೀತೀರ್ಥರು- ವಿದ್ಯಾರಣ್ಯರಿಂದಲೂ ಮತ್ತು ವಿಜಯನಗರದ ಅರಸರಿಂದಲೂ ಗಳಿಸಿದ ಅಪೂರ್ವ ಗೌರವಾದರಗಳು, ಈ ಮಹಾಮಹಿರ ಹಿರಿಮೆಯನ್ನು ತಿಳಿಸುತ್ತವೆ. ಅವರು ತಮ್ಮ ಭೌತಿಕದೇಹವನ್ನು ತಮ್ಮ ಮನಬಂದಂತೆ ತೊರೆಯಲು ಯಾವ ಶಿಲಾವೇದಿಕೆಯ ಒಳಗಡೆ ಲಂಬಿಕಾಯೋಗದಲ್ಲಿ ನಿರತರಾಗಿದ್ದರೋ ಅದರ ಮೇಲೆ ಸುಂದರವಾದ ಶ್ರೀ ವಿದ್ಯಾಶಂಕರದೇವಾಲಯವನ್ನು ಇವರ ಹೆಸರಿನಲ್ಲಿ ಅವರು ನಿರ್ಮಿಸಿದರು.

ಲಂಬಿಕಾ ಯೋಗ :

ಶ್ರೀ ವಿದ್ಯಾತೀರ್ಥರು ತಮ್ಮ ೧೨ ವರ್ಷಗಳ ನಿರ್ವಿಜ್ಞ ಲಂಬಿಕಾಯೋಗದನಂತರ ತಮ್ಮ ಶರೀರವು ಈ ನಮೂನೆಯ ರೂಪವನ್ನು ಪಡೆಯಲಿದೆ ಎಂದು ತಿಳಿಸಿ ಈ ವಿಗ್ರಹವಿಶೇಷವನ್ನು ತೋರಿಸಿ ಹೇಳಿದರಂತೆ. ತಾವು ಲಂಬಿಕಾಯೋಗದ ಅನುಷ್ಠಾನಕ್ಕೆಂದು ಶಿಲಾವೇದಿಕಯ ಕೊಠಡಿಯ ಒಳಗಡೆ ಪ್ರವೇಶಿಸಿದಮೇಲೆ, ಅದನ್ನು ಕಲ್ಲಿನಿಂದ ಮುಚ್ಚಬೇಕೆಂದೂ ಮತ್ತು ೧೨ ವರ್ಷಗಳು ತುಂಬುವಮುನ್ನ ತೆಗೆಯಬಾರದೆಂದೂ, ಆಗ್ರಹಪಡಿಸಿದ್ದರು. ದುರದೃಷ್ಟವಶಾತ್ ಪೆದ್ದು ಕುತೂಹಲದ ಕಾರಣ, ಇನ್ನೂ ೩ ವರ್ಷವಾಗಿದ್ದಾಗಲೇ ಯಾರೋ ಶಿಲಾಕೊಠಡಿಯ ಕಲ್ಲು ಮುಚ್ಚಳವನ್ನು ತೆಗೆದುಬಿಟ್ಟರು. ಅಲ್ಲಿ ಮಹಾತ್ಮರ ದೇಹ ಅದೃಷ್ಯವಾಗಿದ್ದು, ಅದರ ಜಾಗದಲ್ಲಿ ಒಂದು ಬದಲಾವಣೆಯಹಂತದಲ್ಲಿದ್ದ ಮೇಲ್ಭಾಗದ ಶಿವಲಿಂಗ ಗೋಚರಿಸಿತು. ಇದರಿಂದ ಆ ಯತಿಗಳೀರ್ವರೂ ಉದ್ವಿಜ್ಞರಾದರು.( ಶ್ರೀ ಭಾರತೀತೀರ್ಥರೂ ಮತ್ತು ಶ್ರೀ ವಿದ್ಯಾರಣ್ಯರೂ) ಇವರಿಗೆ ಶ್ರೀ ವಿದ್ಯಾತೀರ್ಥರು ಕನಸಿನಲ್ಲಿ ಕಾಣಿಸಿಕೊಂಡು ತಮ್ಮ ನಿಯಮವನ್ನು ಉಲ್ಲಂಘಿಸಿರುವುದರಿಂದ ತಾವು ಮಾತುಕೊಟ್ಟಿದ್ದ ಘಟನೆಯು ಇನ್ನೆಂದೂ ಘಟಿಸುವುದಿಲ್ಲ, ಎಂದು ತಿಳಿಯಪಡಿಸಿ ಬೇರೊಂದು ಶಿವಲಿಂಗವನ್ನು ಅಲ್ಲಿ ಪ್ರತಿಷ್ಠಾಪಿಸಬೇಕೆಂದು ಆದೇಶಿಸಿದರು. ಅದರಂತೆ ಶ್ರೀ ವಿದ್ಯಾತೀರ್ಥರು ಅದೃಶ್ಯರಾಗಿದ್ದ ಶಿಲಾಪ್ರಕೋಷ್ಠದ ಮೇಲೆ ವಿದ್ಯಾಶಂಕರನೆಂಬ ಹೆಸರಿನ ನೂತನ ಶಿವಲಿಂಗವನ್ನು ಪ್ರತಿಷ್ಠೆಮಾಡಲಾಯಿತು. ಸಿಂಹಗಿರಿಯಲ್ಲಿದ್ದ ನಮೂನೆಯನ್ನೇ ಚತುರ್ಮೂರ್ತಿ ವಿದ್ಯೇಶ್ವರ ಎಂಬಹೆಸರಿನಿಂದ ಪ್ರತಿಷ್ಠೆಮಾಡಿ ಪೂಜೆಗೆ ವ್ಯವಸ್ಥೆಮಾಡಲಾಯಿತು.

ವಿದ್ಯಾತೀರ್ಥರು ಇಲ್ಲಿ ಲಂಬಿಕಾಯೋಗದಲ್ಲಿ ನಿರಿತರಾಗಿದ್ದಾರೆಂಬ ಬಲವಾದ ನಂಬಿಕೆಯಿದೆ. ದೇವಗಣಗಳು ರಾತ್ರಿವೇಳೆಯಲ್ಲಿ ಬಂದು, ಪ್ರತಿದಿನ ಇವರ ಪೂಜೆಗೈಯುತ್ತಿರುವರೆಂದು ನಂಬಿಕೆಯಿದ್ದು ಇಂದಿಗೂ ಆಗಾಗ್ಗೆ ನಡುರಾತ್ರಿಯಲ್ಲಿ ಅವು ಮಾಡುವ ಘಂಟೆಗಳ ಸದ್ದು ಕೇಳಿಬರುತ್ತದೆಯೆಂದು ಭಕ್ತಾದಿಗಳ ಅಂಬೋಣ. ಈ ಕಾರಣದಿಂದಲೇ ಇಂದಿಗೂ ಶೃಂಗೇರಿ ಮಠದಿಂದ ಹೊರಡಿಸಲಾಗುವ ಶ್ರೀ ಮುಖಗಳೆಲ್ಲ " ಶ್ರೀ ವಿದ್ಯಾಶಂಕರ" ಎಂಬ ಮುದ್ರೆಯನ್ನೇ ಒಳಗೊಂಡಿರುತ್ತವೆ.

ಕೃತಿಗೌರವ :

" ಶೃಂಗೇರಿಯ ಹಿರಿಮೆ "- ಶೃಂಗೇರಿ ಶ್ರೀ ಹಾರದ ಪೀಠದ ಪ್ರಕಟಣೆ. ಕನ್ನಡ ಅನುವಾದ : ಡಾ. ಬಿ. ಎಸ್. ರಾಮಕೃಷ್ಣರಾವ್, ಸಂಪಾದಕರು, ಶಂಕರಕೃಪಾ. ದಕ್ಷಿನಾಮ್ನಾಯ ಶ್ರೀ ಶಾರದಾಪೀಠದ ಪ್ರಕಾಶನ, ಶೃಂಗೇರಿ, ಕರ್ನಾಟಕ.