ಶೆರ್ಲಾಕ್ ಹೋಮ್ಸ್ ಸಾಹಸಗಳು

ಶೆರ್ಲಾಕ್ ಹೋಮ್ಸ್ ಸಾಹಸಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಆಂಗ್ಲ ಮೂಲ: ಸರ್ ಆರ್ಥರ್ ಕನಾನ್ ಡಾಯ್ಲ್, ಕನ್ನಡಕ್ಕೆ: ಜಿ ಎಂ ಕೃಷ್ಣಮೂರ್ತಿ
ಪ್ರಕಾಶಕರು
ಸುಧಾ ಎಂಟರ್ ಪ್ರೈಸಸ್, ಕೋರಮಂಗಲ, ಬೆಂಗಳೂರು-೫೬೦೦೩೪
ಪುಸ್ತಕದ ಬೆಲೆ
ರೂ. ೭೫.೦೦, ಮುದ್ರಣ: ೨೦೦೯

ಪತ್ತೇದಾರಿ ಸಾಹಿತ್ಯದಲ್ಲಿ ಖ್ಯಾತ ಹೆಸರು ಸರ್ ಆರ್ಥರ್ ಕನಾನ್ ಡಾಯ್ಲ್. ಇವರು ಮೂಲತಃ ಓರ್ವ ವೈದ್ಯ, ಆಂಗ್ಲ ಭಾಷೆಯಲ್ಲಿ ಇವರು ರಚಿಸಿದ ಪತ್ತೇದಾರಿ ಕಾದಂಬರಿಗಳ ಕಥಾ ನಾಯಕ ಶೆರ್ಲಾಕ್ ಹೋಮ್ಸ್. ಈ ಪಾತ್ರವು ಎಷ್ಟು ಖ್ಯಾತಿ ಪಡೆಯಿತೆಂದರೆ ಆ ಕಾಲ್ಪನಿಕ ಪಾತ್ರವನ್ನು ಎಲ್ಲರೂ ನಿಜವಾದ ವ್ಯಕ್ತಿ ಎಂದೇ ನಂಬಿದ್ದರು. ಈ ಬಗ್ಗೆ ಈ ಪುಸ್ತಕದ ಬೆನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ “ ಆರ್ಥರ್ ಕಾನನ್ ಡಾಯ್ಲ್ ಸೃಷ್ಟಿಸಿದ ಪಾತ್ರ ‘ಶೆರ್ಲಾಕ್ ಹೋಮ್ಸ್' ಒಬ್ಬ ನಿಜವಾದ ವ್ಯಕ್ತಿ ಎಂದೇ ನಂಬಿದ ಓದುಗರಿದ್ದರು! ಹೋಮ್ಸ್  ನ ಸಾಹಸಗಳ ಬಗ್ಗೆ ಬರೆದು ಬರೆದು ಬೇಸತ್ತ ಡಾಯ್ಲ್, ಕಡೆಗೊಂದು ಕಾದಂಬರಿಯಲ್ಲಿ ಅವನನ್ನು ಪ್ರಪಾತದಿಂದ ನೂಕಿ ಸಾಯಿಸಿಬಿಟ್ಟಿದ್ದ. ಆದರೆ ಧೃತಿಗೆಟ್ಟ ಓದುಗರ ಸಂಕಟ ನೋಡಲಾರದೆ ‘ಹೋಮ್ಸ್ ಸತ್ತಿಲ್ಲ. ಸತ್ತಂತೆ ನಟಿಸಿದ್ದ ಅಷ್ಟೆ' ಎಂದು ಸಮಜಾಯಿಸಿ ನೀಡಿ ಮತ್ತೆ ಅವನನ್ನು ಬದುಕಿಸಬೇಕಾಯಿತು. ಇಂದಿಗೂ ಬದುಕುಳಿದಿರುವ ಅಮರ ಪಾತ್ರ ಶೆರ್ಲಾಕ್ ಹೋಮ್ಸ್ ನ ಕಾಲ್ಪನಿಕ ವಿಳಾಸದ ಕೊಠಡಿಯನ್ನು ಲಂಡನ್ ನಲ್ಲಿ ಮರು ಸೃಷ್ಟಿಸಲಾಗಿದೆ! ಅಂಥ ಅಸಾಮಾನ್ಯ ಪತ್ತೇದಾರನ ಸಾಹಸಗಳ ಐದು ರೋಚಕ ಕತೆಗಳು ಇಲ್ಲಿವೆ.”

ಶೆರ್ಲಾಕ್ ಹೋಮ್ಸ್ ನ ಸಾಹಸಗಳ ಬಹುತೇಕ ಕಥೆಗಳು ಒಂದಲ್ಲಾ ಒಂದು ರೀತಿಯಲ್ಲಿ ಕನ್ನಡಕ್ಕೆ ಅನುವಾದಗೊಳ್ಳುತ್ತಲೇ ಇವೆ. ವಿವಿಧ ಲೇಖಕರು ಈ ಸಾಹಸ ಕಥೆಗಳನ್ನು ಅನುವಾದ ಮಾಡಿದ್ದಾರೆ. ಸ್ವಲ್ಪ ಸಮಯ ಕನ್ನಡ ವಾಹಿನಿಯಲ್ಲಿ ಶೆರ್ಲಾಕ್ ಹೋಮ್ಸ್ ಸಾಹಸಗಳ ಧಾರಾವಾಹಿಯೂ ಮೂಡಿ ಬಂದಿತ್ತು. ಹಲವಾರು ಸಮಯಗಳಿಂದ ಶೆರ್ಲಾಕ್ ಹೋಮ್ಸ್ ಅವರ ಕಥೆ, ಚಲನ ಚಿತ್ರಗಳು ಬರುತ್ತಲೇ ಇದ್ದರೂ ಈ ಪಾತ್ರದ ಜನಪ್ರಿಯತೆಗೆ ಇಂದೂ ಕುಂದು ಉಂಟಾಗಿಲ್ಲ.

ಅನುವಾದಕರು ತಮ್ಮ ಪೀಠಿಕೆಯಲ್ಲಿ ಹೇಳುವ ಪ್ರಕಾರ “ಪತ್ತೇದಾರಿ ಜಗತ್ತಿನ ಮಹಾಪುರುಷ ಎನಿಸಿಕೊಂಡಿರುವ ಶೆರ್ಲಾಕ್ ಹೋಮ್ಸ್ ನನ್ನು ಕಾನನ್ ಡಾಯ್ಲ್, ಸಾಕಷ್ಟು ರೋಗಿಗಳಿಲ್ಲದೇ ವೈದ್ಯ ವೃತ್ತಿಯಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗದೇ ಸಾಕಷ್ಟು ಬಿಡುವಿದ್ದಾಗ ಪ್ರಾಯಶಃ ಸೃಷ್ಟಿಸಿದ್ದ. ಅವನ ಮೊದಲ ಕೃತಿ ‘ಎ ಸ್ಟಡಿ ಇನ್ ಸ್ಕಾರ್ ಲೈಟ್' ಅವನಿಗೆ ಕೇವಲ ೫ ಪೌಂಡ್ ಹಣವನ್ನು ಮಾತ್ರ ಗಳಿಸಿಕೊಟ್ಟಿತ್ತು. ೧೮೮೭ರ ಕ್ರಿಸ್ ಮಸ್ ಗೆ ಮುಂಚೆ ಈ ಕೃತಿ ಪ್ರಕಟವಾಗಿತ್ತು. ತರುವಾಯ ಅಂದರೆ ೧೮೯೦ರಲ್ಲಿ ‘ದಿ ಸೈನ್ ಆಫ್ ವೋರ್' ಎಂಬ ಕಥೆಯನ್ನು ಅಮೇರಿಕಾದ ನಿಯತಕಾಲಿಕೆಯೊಂದಕ್ಕೆ ಬರೆದು ಕಳಿಸಿದ್ದ. ಆ ಕಾಲದಲ್ಲಿ ಅಂತರಾಷ್ಟ್ರೀಯ ಕೃತಿ ಸ್ವಾಮ್ಯ (ಕಾಪಿರೈಟ್) ಕಾಯಿದೆಗಳು ಜಾರಿಗೆ ಬಂದಿಲ್ಲವಾದ್ದರಿಂದ ಇವೆರಡೂ ಕೃತಿಗಳು ಅಮೇರಿಕಾದಲ್ಲಿ ಕೃತಿಕಾರನ ಅನುಮತಿಯಿಲ್ಲದೇ ಮನಬಂದಂತೆ ಪ್ರಕಟವಾದವು. ಡಾಯ್ಲ್ ಸ್ಟ್ರಾಂಡ್ ನಿಯತಕಾಲಿಕೆಯಲ್ಲಿ ಜುಲೈ ೧೮೯೧ರಲ್ಲಿ ‘ಎ ಸ್ಕ್ಯಾಂಡಲ್ ಇನ್ ಬೋಹೀಮಿಯ' ಅನ್ನು ಪ್ರಕಟಿಸಿದಾಗ ಓದುಗರು ಅದನ್ನು ತುಂಬಾ ಮೆಚ್ಚಿಕೊಂಡರು. ಅವನ ಜನಪ್ರಿಯತೆ ಕೂಡ ಮುಂದೆ ಹೆಚ್ಚುತ್ತ ಹೋಯಿತು.” ಎಂದು ವಿವರಣೆ ನೀಡುತ್ತಾರೆ.

ಪುಸ್ತಕದ ಪರಿವಿಡಿಯಲ್ಲಿ ಐದು ಕಥೆಗಳನ್ನು ನೀಡಲಾಗಿದೆ. ಬೋಹೀವಿಯದ ಹಗರಣ, ಅನನ್ಯತೆಯ ಪ್ರಸಂಗ, ಕೆಂಪು ತಲೆಯಿರುವವರ ಕೂಟ, ವಂಚಕನ ಸಾಹಸ ಮತ್ತು ಬಾಸ್ಕೂಮ್ ವ್ಯಾಲಿ ರಹಸ್ಯ. ಪತ್ತೇದಾರಿ ಕಥೆಗಳು ಒಂದಕ್ಕಿಂತ ಒಂದು ಸೊಗಸಾಗಿವೆ. ಅನುವಾದವೂ ಉತ್ತಮವಾಗಿದೆ. ಶೆರ್ಲಾಕ್ ಹೋಮ್ಸ್ ಸಾಹಸಗಳನ್ನು ಹಲವಾರು ಲೇಖಕರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಕೆಲವು ಅನುವಾದಗಳು ಕೇವಲ ಶಬ್ದಾನುವಾದ ಮಾತ್ರ ಆಗಿವೆ. ಆದರೆ ಈ ಪುಸ್ತಕದ ಅನುವಾದವು ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ. ೧೪೦ ಪುಟಗಳ ಈ ಪುಸ್ತಕವು ಪತ್ತೇದಾರಿ ಕಾದಂಬರಿಗಳನ್ನು ಓದುವ ಆಸಕ್ತರಿಗೆ ಉತ್ತಮ ಓದು ನೀಡುವುದರಲ್ಲಿ ಸಂಶಯವಿಲ್ಲ.