ಶೆರ್ಲಾಕ್ ಹೋಮ್ಸ್ : ಸೃಷ್ಟಿಕರ್ತನನ್ನೇ ಮೀರಿ ಬೆಳೆದ ಪಾತ್ರ

ಶೆರ್ಲಾಕ್ ಹೋಮ್ಸ್ : ಸೃಷ್ಟಿಕರ್ತನನ್ನೇ ಮೀರಿ ಬೆಳೆದ ಪಾತ್ರ

ನೀವು ಪತ್ತೇದಾರಿ ಕಾದಂಬರಿಗಳ ಬಗ್ಗೆ ಆಸಕ್ತರಾಗಿದ್ದರೆ ನಿಮಗೆ ಶೆರ್ಲಾಕ್ ಹೋಮ್ಸ್ ಎಂಬ ಪತ್ತೇದಾರನ ಬಗ್ಗೆ ತಿಳಿದೇ ಇರುತ್ತದೆ. ಪತ್ತೇದಾರ ಶೆರ್ಲಾಕ್ ಹೋಮ್ಸ್ ಮತ್ತು ಅವನ ಗೆಳೆಯ ಡಾ.ವಾಟ್ಸನ್ ಬಗ್ಗೆ ತಿಳಿದಿರುವಷ್ಟು ನಮಗೆ ಅವರ ಸೃಷ್ಟಿಕರ್ತ ಲೇಖಕರ ಬಗ್ಗೆ ತಿಳಿಯದೇ ಇರೋದು ಸಾಹಿತ್ಯ ಲೋಕದ ಕುಚೋದ್ಯವೆಂದೇ ಹೇಳ ಬಹುದು. ಇಲ್ಲಿ ಪತ್ತೇದಾರನ ಪಾತ್ರವು ಅವನನ್ನು ಸೃಷ್ಟಿಸಿದ ಲೇಖಕನನ್ನೇ ಮೀರಿ ಬೆಳೆದಿದೆ. ಶೆರ್ಲಾಕ್ ಹೋಮ್ಸ್ ಎಂಬ ವ್ಯಕ್ತಿ ನಿಜವಾಗಿಯೇ ಇದ್ದಾನೆ ಎಂದು ಜನರು ನಂಬುವಷ್ಟು ಜೀವಂತವಾಗಿ ಚಿತ್ರಿಸಿದ್ದಾರೆ ಅದರ ಲೇಖಕರು. ಹಾಗಾದರೆ ಆ ಪಾತ್ರದ ಲೇಖಕರು ಯಾರು, ಏನಿದರ ಹಿನ್ನಲೆ? ಬನ್ನಿ ತಿಳಿದುಕೊಳ್ಳುವ. 

ಆಂಗ್ಲ ಸಾಹಿತ್ಯಲೋಕಕ್ಕೆ ಹೊಸದೊಂದು ಆಯಾಮ ಕಲ್ಪಿಸಿದ ಲೇಖಕ ಸರ್ ಆರ್ಥರ್ ಕೆನಾನ್ ಡಯಲ್. ವೃತ್ತಿಯಲ್ಲಿ ವೈದ್ಯರಾಗಿದ್ದರೂ ಅವರು ಕೊಡುಗೆ ನೀಡಿದ್ದು ಮಾತ್ರ ಸಾಹಿತ್ಯ ಲೋಕಕ್ಕೆ. ಶೆರ್ಲಾಕ್ ಹೋಮ್ಸ್ ಎಂಬ ಕಲ್ಪನಾತೀತ ವ್ಯಕ್ತಿಯನ್ನು ಸೃಷ್ಟಿಸಿ ಓದುಗರಲ್ಲಿ ಸಂಚಲನ ಮೂಡಿಸಿದ್ದು ಇವರ ವಿಶಿಷ್ಟ ಸಾಧನೆಯೇ ಸರಿ. ಕೆನಾನ್ ಡಯಲ್ ಕಾದಂಬರಿ ಬರೆಯಲು ಪ್ರಾರಂಭಿಸಿದ್ದು ೧೮೮೬ರಲ್ಲಿ. ಇವರು ತಮ್ಮ ವೈದ್ಯಕೀಯ ಶಿಕ್ಷಣವನ್ನು ಮುಗಿಸಿ ಎಲ್ಲಾ ವೈದ್ಯರಂತೆ ಕ್ಲಿನಿಕ್ ತೆಗೆದು ರೋಗಿಗಳ ಸೇವೆಗೆ ಸಿದ್ಧರಾದರು. ಆದರೆ ಅವರು ನಿರೀಕ್ಷಿಸಿದ್ದ ರೀತಿಯಲ್ಲಿ ರೋಗಿಗಳು ಅವರ ಕ್ಲಿನಿಕ್ ಕಡೆಗೆ ಬರಲಿಲ್ಲ. ಸುಮ್ಮನೇ ಕುಳಿತು ಏನು ಮಾಡುವುದೆಂದು ಯೋಚಿಸಿದಾಗ ಕೆನಾನ್ ಡಯಲ್ ಅವರಿಗೆ ಹೊಳೆದದ್ದೇ ಶೆರ್ಲಾಕ್ ಹೋಮ್ಸ್ ಎಂಬ ಪತ್ತೇದಾರನ ಪಾತ್ರ. 

ಕೆನಾನ್ ಡಯಲ್ ಸ್ಕಾಟ್ಲೆಂಡಿನ ಎಡಿನ್ ಬರೋ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಾಂಗ ಮಾಡುತ್ತಿರುವಾಗ ಅಲ್ಲಿ ಅವರಿಗೆ ಡಾ. ಜೋಸೆಫ್ ಬೆಲ್ ಎಂಬ ವೈದ್ಯ ಪ್ರಾಧ್ಯಾಪಕರು ಇದ್ದರು. ಇವರು ಕೆನಾನ್ ಡಯಲ್ ಮೇಲೆ ತೀವ್ರ ಪ್ರಭಾವ ಬೀರಿದ್ದರು. ಅವರ ಅವಲೋಕನ, ತರ್ಕ, ಪರೀಕ್ಷಣೆಯ ಗುಣಗಳು ವಿದ್ಯಾರ್ಥಿಯಾಗಿದ್ದ ಕೆನಾನ್ ಡಯಲ್ ಗೆ ತುಂಬಾನೇ ಹಿಡಿಸಿದವು. ಎಲ್ಲೋ ಒಂದೆಡೆ ಗಮನಿಸಿದಾಗ ಇವರ ಶೆರ್ಲಾಕ್ ಹೋಮ್ಸ್ ಸೃಷ್ಟಿಯು ಇವರ ಗುರುಗಳಾದ ಡಾ. ಜೋಸೆಫ್ ಬೆಲ್ ಅವರನ್ನು ಹೋಲುವಂತೆ ಅನಿಸುತ್ತದೆ. ಕೆನಾನ್ ಡಯಲ್ ಅವರ ಕಲ್ಪನಾ ಶಕ್ತಿ ಅಪಾರ. ಶೆರ್ಲಾಕ್ ಹೋಮ್ಸ್ ಎಂಬ ಪತ್ತೇದಾರ ಓದುಗರ ಮನಸ್ಸಿನಲ್ಲಿ ಎಷ್ಟು ಪ್ರಭಾವ ಬೀರಿದ್ದ ಎಂದರೆ ಒಂದು ಕಾದಂಬರಿಯಲ್ಲಿ ಅವರು ಶೆರ್ಲಾಕ್ ಹೋಮ್ಸ್ ನದ್ದು ಎಂದು ಒಂದು ಸುಳ್ಳು ವಿಳಾಸವನ್ನು (೨೨೧ ಬಿ, ಬೇಕರ್ ಸ್ಟ್ರೀಟ್) ನೀಡಿದ್ದರು. ಓದುಗರಿಂದ ಆ ವಿಳಾಸಕ್ಕೆ ಸಹಸ್ರಾರು ಕಾಗದಗಳು ಬಂದವಂತೆ. ಕಡೆಗೊಮ್ಮೆ ಕೆನಾನ್ ಡಯಲ್ ಅದೇ ವಿಳಾಸ ತನ್ನದೆಂದು ಅಂಚೆ ಇಲಾಖೆಗೆ ಪತ್ರ ಬರೆದು ಆ ಕಾಗದಗಳನ್ನು ಪಡೆದುಕೊಳ್ಳಬೇಕಾಯಿತಂತೆ. 

ಶೆರ್ಲಾಕ್ ಹೋಮ್ಸ್ ಬಗ್ಗೆ ಕೆನಾನ್ ಡಯಲ್ ಬರೆದ ವಿವರಗಳು ಅವನನ್ನು ನಿಜವಾಗಿಯೂ ನಮ್ಮ ನಡುವೆ ಓಡಾಡುವ ಜೀವಂತ ವ್ಯಕ್ತಿಯಂತೆ ಬಿಂಬಿಸುತ್ತಿದ್ದವು. ತೆಳ್ಳಗಿನ, ಉದ್ದನೆಯ, ಕೋಲು ಮುಖದ ದೇಹ, ತೀಕ್ಷ್ಣಬುದ್ಧಿಶಕ್ತಿಯನ್ನು ಸಾರುವ ಕಣ್ಣುಗಳು, ತಲೆಗೆ ಟೋಪಿ, ಕೈಯಲ್ಲಿ ಭೂತ ಕನ್ನಡಿ, ತಂಬಾಕು ಸೇದುವ ಪೈಪ್, ಕೈಯಲ್ಲಿ ಊರುಗೋಲು, ಉದ್ದನೆಯ ಮೇಲಂಗಿ ಇವೆಲ್ಲ ವಿವರಗಳು ನಿಜವಾಗಿಯೇ ಇರುವ ಓರ್ವ ವ್ಯಕ್ತಿಯದ್ದೇ ಎಂದು ಭಾಸವಾಗುತ್ತಿದ್ದವು. ಡಾ.ವಾಟ್ಸನ್ ಜೊತೆ ಸೇರಿ ಶಾರ್ಲಾಕ್ ಹೋಮ್ಸ್ ಮಾಡಿದ ಸಾಹಸಗಳು ಓದುಗರಿಗೆ ಅಚ್ಚರಿ ತರುತ್ತಿದ್ದವು. ಪತ್ತೇದಾರನ ಬುದ್ದಿ ಮತ್ತೆಯ ಬಗ್ಗೆ ಪ್ರಶಂಸೆಯ ಮಾತುಗಳನ್ನು ಜನರಾಡುತ್ತಿದ್ದರು. ಆದರೆ ಅವುಗಳನ್ನು ಬರೆದ ಕೆನಾನ್ ಡಯಲ್ ಬಹಳಷ್ಟು ಸಮಯ ಅಪರಿಚಿತನಾಗಿಯೇ ಉಳಿಯಬೇಕಾಯಿತು. 

ಕೆನಾನ್ ಡಯಲ್ ನೀಡಿದ ಸುಳ್ಳು ವಿಳಾಸವನ್ನೇ ಈಗ ಶೆರ್ಲಾಕ್ ಹೋಮ್ಸ್ ಮ್ಯೂಜಿಯಂ ಆಗಿ ಪರಿವರ್ತಿಸಿದ್ದಾರೆ. ಶರ್ಲಾಕ್ ಹೋಮ್ಸ್ ಅವರದೆನ್ನಲಾಗುವ ಎಲ್ಲಾ ವಸ್ತುಗಳನ್ನು ಆ ವಸ್ತು ಸಂಗ್ರಹಾಲಯದಲ್ಲಿ ಸಜ್ಜುಗೊಳಿಸಿಟ್ಟಿದ್ದಾರೆ. ವಸ್ತು ಪ್ರದರ್ಶನಾಲಯಕ್ಕೆ ಹೋದವರಿಗೆ ಅಲ್ಲಿ ಬಹಳ ಸಮಯದ ಹಿಂದೆ ಶೆರ್ಲಾಕ್ ಹೋಮ್ಸ್ ಎಂಬ ಪತ್ತೇದಾರ ನಿಜವಾಗಿಯೂ ವಾಸವಾಗಿದ್ದ ಎಂದು ಭಾಸವಾಗುತ್ತದೆ. ಲಂಡನ್ ನಲ್ಲಿರುವ ಬೇಕರ್ ಸ್ಟ್ರೀಟ್ ನಲ್ಲಿರುವ ಈ ಮನೆಯನ್ನು ಪ್ರವೇಶಿಸಲು ಈಗ ನೀವು ಟಿಕೆಟ್ ಪಡೆದುಕೊಳ್ಳಬೇಕು. ಮನೆ ಹೊಕ್ಕ ಕೂಡಲೇ ಶಾರ್ಲಾಕ್ ಹೋಮ್ಸ್ ಪ್ರತೀ ಕಾದಂಬರಿಯಲ್ಲಿ ಕಂಡು ಬರುವ ೧೭ ಮೆಟ್ಟಲುಗಳಿವೆ. ಅದನ್ನು ಹತ್ತಿ ಹೋದಾಗ ಹೋಮ್ಸ್ ಬಳಸುತಿದ್ದ ಆಸನಗಳು, ಉಪಕರಣಗಳು ಎಲ್ಲವನ್ನೂ ಕಾಣ ಬಹುದು. ಈ ರೀತಿಯಾಗಿ ಕಾಲ್ಪನಿಕ ವ್ಯಕ್ತಿಯಾದ ಶೆರ್ಲಾಕ್ ಹೋಮ್ಸ್ ಇಲ್ಲಿ ಜೀವಂತವಾಗಿದ್ದಾನೆ ಎನ್ನಬಹುದಾಗಿದೆ.

೧೮೮೬ರಲ್ಲಿ ಕೆನಾನ್ ಡಯಲ್ ಬರೆದ ಮೊದಲ ಕೃತಿ ‘A study in scarlet’. ನಂತರದ ದಿನಗಳಲ್ಲಿ ಕೆನಾನ್ ಡಯಲ್ ಹಲವಾರು ಕಾದಂಬರಿಗಳನ್ನು ಬರೆದರು. ಪ್ರತಿಯೊಂದು ಕಾದಂಬರಿಯು ಜನ ಮೆಚ್ಚುಗೆಗೆ ಪಾತ್ರವಾಗಿತ್ತು. ೧೮೯೩ರಲ್ಲಿ ಅವರು ಬರೆದ ‘The final problem’ ಎಂಬ ಕಾದಂಬರಿಯಲ್ಲಿ ಪತ್ತೇದಾರ ಶೆರ್ಲಾಕ್ ಹೋಮ್ಸ್ ಖಳನಾಯಕನ ಜೊತೆ ಹೋರಾಡುತ್ತಾ ಜಲಪಾತಕ್ಕೆ ಬಿದ್ದು ಸಾವನ್ನಪ್ಪುತ್ತಾನೆ ಎಂದು ಚಿತ್ರಿತವಾಗಿತ್ತು. ಇದನ್ನು ಓದಿದ ಶೆರ್ಲಾಕ್ ಹೋಮ್ಸ್ ನ ಅಭಿಮಾನಿಗಳು ಆಘಾತಕ್ಕೆ ಒಳಗಾಗುತ್ತಾರೆ. ಆ ಕಾದಂಬರಿಯನ್ನು ಧಾರವಾಹಿಯಾಗಿ ಪ್ರಕಟಿಸುತ್ತಿದ್ದ ಪತ್ರಿಕೆಯ ಚಂದಾದಾರಿಕೆಯಲ್ಲಿ ಗಣನೀಯ ಕುಸಿತವಾಯಿತು. ಅಲ್ಲಲ್ಲಿ ಪ್ರತಿಭಟನೆಗಳೂ ಆದವು. ಕಡೆಗೆ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಿದ ಲೇಖಕ ಶೆರ್ಲಾಕ್ ಹೋಮ್ಸ್ ನನ್ನು ಜೀವಂತನನ್ನಾಗಿ ಮಾಡಿದ. ೧೯೦೧ರಲ್ಲಿ ‘The hound of the Baskervilles’ ಎಂಬ ಕಾದಂಬರಿಯಲ್ಲಿ ಶೆರ್ಲಾಕ್ ಹೋಮ್ಸ್ ಮರು ಜೀವ ಪಡೆದುಕೊಂಡ.

ಶೆರ್ಲಾಕ್ ಹೋಮ್ಸ್ ಅವರ ಅಪ್ಪಟ ಅಭಿಮಾನಿಯಾಗಿದ್ದ ಏಳನೇ ಎಡ್ವರ್ಡ್ ದೊರೆ ೧೯೦೨ರಲ್ಲಿ ಕೆನಾನ್ ಡಯಲ್ ಅವರಿಗೆ 'ಸರ್' ಎಂಬ ಬಿರುದು ನೀಡಿ ಗೌರವಿಸಿದರು. ‘The return of Sherlock Holmes’ ಎಂಬ ಸರಣಿಯು ಲಕ್ಷಾಂತರ ಓದುಗರನ್ನು ಸೆಳೆಯಲು ಸಮರ್ಥವಾಯಿತು.

ಆದರೆ ಸರ್ ಆರ್ಥರ್ ಕೆನಾನ್ ಡಯಲ್ ಅವರ ಕೊನೆಯ ದಿನಗಳು ಅಷ್ಟೊಂದು ಆನಂದದಾಯಕವಾಗಿರಲಿಲ್ಲ. ತಮ್ಮ ಪ್ರೀತಿಯ ಮಡದಿಯ ಮರಣ, ಯುದ್ಧದಲ್ಲಿ ಮರಣವನ್ನಪ್ಪಿದ ಮಗ, ಅನೇಕ ಬಂಧುಮಿತ್ರರ ಅಕಾಲ ಮರಣವು ಇವರನ್ನು ಆಧ್ಯಾತ್ಮದತ್ತ ಸೆಳೆಯಿತು. ಆಧ್ಯಾತ್ಮದ ಬಗ್ಗೆಯೂ ಇವರು ‘The land of Mist’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಇವರ ಶೆರ್ಲಾಕ್ ಹೋಮ್ಸ್ ಸರಣಿಗಳು ವಿಶ್ವದ ಹಲವಾರು ಭಾಷೆಗಳಿಗೆ ಅನುವಾದಗೊಂಡವು. ಹಾಲಿವುಡ್ ನಲ್ಲಿ ಸಿನೆಮಾಗಳೂ ಬಂದವು. ೧೯೩೦ರ ಜುಲೈ ತಿಂಗಳಲ್ಲಿ ಕೆನಾನ್ ಡಯಲ್ ಅವರು ಸಾವನ್ನಪ್ಪಿದರು. ಆದರೆ ಅವರ ಕಾಲ್ಪನಿಕ ಸೃಷ್ಟಿ ಶೆರ್ಲಾಕ್ ಹೋಮ್ಸ್ ಮಾತ್ರ ಈಗಲೂ ಜನಮಾನಸದಲ್ಲಿ ಅಮರನಾಗಿಯೇ ಉಳಿದಿದ್ದಾನೆ. 

 

ಚಿತ್ರ ವಿವರಗಳು: ೧. ಶೆರ್ಲಾಕ್ ಹೋಮ್ಸ್ ಎಂಬ ಪತ್ತೇದಾರ 

೨. ಲೇಖಕ ಸರ್ ಆರ್ಥರ್ ಕೆನಾನ್ ಡಯಲ್

೩. ಲಂಡನ್ ನ ಬೇಕರ್ ಸ್ಟ್ರೀಟ್ ನಲ್ಲಿರುವ ಶೆರ್ಲಾಕ್ ಹೋಮ್ಸ್ ಮ್ಯೂಜಿಯಂ

 

ಚಿತ್ರಗಳ ಕೃಪೆ: ವಿವಿಧ ಅಂತರ್ಜಾಲ ತಾಣಗಳಿಂದ ಸಂಗ್ರಹಿತ