ಶೆರ್ಲಾಕ್ ಹೋಮ್ಸ್

ಶೆರ್ಲಾಕ್ ಹೋಮ್ಸ್

ಪುಸ್ತಕದ ಲೇಖಕ/ಕವಿಯ ಹೆಸರು
ಕನ್ನಡಕ್ಕೆ : ನಳಿನಿ ರಾಮು
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೪೫.೦೦, ಮುದ್ರಣ: ಆಗಸ್ಟ್ ೨೦೨೧

ಮಕ್ಕಳಿಗಾಗಿ ‘ಬಾಲ ಸಾಹಿತ್ಯ ಮಾಲೆ' ಯ ಮುಖಾಂತರ ಹಲವಾರು ಅಪರೂಪದ ಸಾಹಿತ್ಯವನ್ನು ಉಣಬಡಿಸಿದ್ದಾರೆ ಸಪ್ನ ಬುಕ್ ಹೌಸ್ ಇವರು. ಆಂಗ್ಲ ಭಾಷೆಯಲ್ಲಿ ಪ್ರಕಟವಾದ ‘ಶೆರ್ಲಾಕ್ ಹೋಮ್ಸ್' ಎಂಬ ಕಾಲ್ಪನಿಕ ಪತ್ತೇದಾರಿಯ ರೋಚಕ ಕಥೆಗಳನ್ನು ಮಕ್ಕಳಿಗಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ನಳಿನಿ ರಾಮು ಅವರು. ಸರ್ ಆರ್ಥರ್ ಕಾನನ್ ಡಾಯಲ್ ಇವರ ಕಾಲ್ಪನಿಕ ಪತ್ತೇದಾರ ಶೆರ್ಲಾಕ್ ಹೋಮ್ಸ್. ಹಲವಾರು ಕಥೆಗಳನ್ನು ಬರೆದು ಪತ್ತೇದಾರಿ ಸಾಹಿತ್ಯವನ್ನು ಶ್ರೀಮಂತವಾಗಿಸಿದವರು ಕೆನಾನ್ ಡಾಯಲ್ ಇವರು. ಕನ್ನಡದಲ್ಲಿ ಈ ಕೆಲಸ ಮಾಡಿದವರು ಪತ್ತೇದಾರ ಪಿತಾಮಹ ಎಂದೇ ಖ್ಯಾತರಾದ ಎನ್ .ನರಸಿಂಹಯ್ಯ. 

ಬಾಲ ಸಾಹಿತ್ಯ ಮಾಲೆಯಾದುದರಿಂದ ಬಹುಷಃ ಯಾವುದೇ ಮುನ್ನುಡಿಯನ್ನು ಪುಸ್ತಕದಲ್ಲಿ ಬರೆಯಲಾಗಿಲ್ಲ. ಪರಿವಿಡಿಯಲ್ಲಿ ೮ ಅಧ್ಯಾಯಗಳಿವೆ. ಬೊಹೀಮಿಯಾ ಎಂಬ ರಾಜ್ಯದಲ್ಲಿ ನಡೆದ ಹಗರಣ, ಕೆಂಪು ತಲೆಕೂದಲಿರುವವರ ಸಂಘ, ಚುಕ್ಕೆಗಳಿರುವ ಪಟ್ಟಿ, ‘ಮಸ್ ಗ್ರೇವ್' ಎಂಬ ವಂಶದವರ ಪದ್ಧತಿ, ರೀಗೇಟ್ ಎಂಬ ಸ್ಥಳದ ಮಾಲೀಕರು, ಕೊನೆಯ ಸಮಸ್ಯೆ, ರಕ್ತದ ಎರಡನೆಯ ಕಲೆಯನ್ನು ಕಂಡು ಹಿಡಿದ ಸಾಹಸಿ, ವೆಸ್ಟ್ ಮಿನ್ಸ್ ಟನ್ ನಲ್ಲಿ ಆದ ಕೊಲೆ ಹೀಗೆ ಹೆಸರಿನ ಅಧ್ಯಾಯಗಳಿವೆ. 

ಪ್ರತಿಯೊಂದು ಕಥೆಗೆ ರೇಖಾಚಿತ್ರಗಳನ್ನು ಯಥೇಚ್ಛವಾಗಿ ನೀಡಲಾಗಿದೆ. ಇದರಿಂದ ಮಕ್ಕಳು ಕಥೆಯನ್ನು ಇನ್ನಷ್ಟು ಸುಲಭವಾಗಿ ಅರ್ಥೈಸಿಕೊಳ್ಳಬಹುದಾಗಿದೆ. ಆಂಗ್ಲ ಭಾಷೆಯಿಂದ ಅನುವಾದ ಮಾಡಿದ ಕಾರಣ ಅಲ್ಲಲ್ಲಿ ಓದುವ ನಿರಂತರತೆಗೆ ಧಕ್ಕೆ ಬರುವಂತೆ ಕಾಣಿಸುತ್ತದೆ. ಮಕ್ಕಳಿಗಾಗಿ ಸಾಹಿತ್ಯ ರಚನೆ, ಅದರಲ್ಲೂ ಅವರದ್ದೇ ಆದ ಸಾಮಾನ್ಯ ಸರಳ ಭಾಷೆಯಲ್ಲಿ ಪತ್ತೇದಾರಿ ಸಾಹಿತ್ಯವನ್ನು ಬರೆಯುವುದು ಬಹಳ ಕಷ್ಟ.

೧೪೦ ಪುಟಗಳ ಈ ಪುಸ್ತಕವನ್ನು ಮಕ್ಕಳಿಗಾಗಿ ಖರೀದಿಸಿ ನೀಡಬಹುದಾಗಿದೆ. ಇದರಿಂದ ಪತ್ತೇದಾರಿ ಸಾಹಿತ್ಯದ ಕುರಿತಾದ ಅವರ ಆಸಕ್ತಿ ಕೆರಳುವ ಸಾಧ್ಯತೆಯೂ ಇದೆ. ಶೆರ್ಲಾಕ್ ಹೋಮ್ಸ್ ಸಾಹಸಗಳು ಈಗಾಗಲೇ ಚಲನ ಚಿತ್ರವೂ ಆಗಿರುವುದರಿಂದ ಓದುವ ಪ್ರಯತ್ನ ಮಕ್ಕಳು ಮಾಡುವರೇ ಎಂಬ ಸಂಶಯವೂ ಇದ್ದೇ ಇದೆ.