ಶೇಕಡಾ ಏಳರ ಹಣದುಬ್ಬರವೂ, ಬಣ್ಣದ ಟಿ.ವಿ.ಯೂ...
ಶೇಕಡಾ ಏಳರ ಹಣದುಬ್ಬರವೂ, ಬಣ್ಣದ ಟಿ.ವಿ.ಯೂ...
ಇತ್ತೀಚಿನ ವರ್ಷಗಳಲ್ಲಿ ಚುನಾವಣೆಗಳು ಹತ್ತಿರ ಬಂದಂತೆಲ್ಲ ಎರಡು ಪರಸ್ಪರ ವಿರುದ್ಧ ಬೆಳವಣಿಗೆಗಳು ಕಂಡು ಬರುವುದನ್ನು ನಾವೆಲ್ಲ ಗಮನಿಸುತ್ತಿದ್ದೇವೆ. ಒಂದು: ನಮ್ಮ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಲ್ಲೊಂದಾದ ಪಕ್ಷ ರಾಜಕಾರಣ ಅಸಂಗತವಾಗಿ ಕಾಣತೊಡಗುವುದು. ಎರಡು: ಇದರಿಂದ ಕಂಗೆಟ್ಟವರಂತೆ ತೋರುವ ಪ್ರಜಾಸತ್ತೆ ವ್ಯವಸ್ಥೆಯ ಕೆಲವು ಹಿತೈಷಿಗಳು ಜನತೆಯ ಮುಂದೆ ಆ ಚುನಾವಣೆಗೆ ಸಂಬಂಧಿಸಿದಂತೆ ಕಾರ್ಯಕ್ರಮವೊಂದನ್ನು ಇಡಲು ಮುಂದಾಗುವುದು. ಪಕ್ಷ ರಾಜಕಾರಣ ಅಸಂಗತವಾಗಿ ಕಾಣತೊಡಗುವುದು ತತ್ಕಾಲಕ್ಕೆ ಬೀಸುತ್ತಿರುವ ರಾಜಕೀಯ ಗಾಳಿಯ ದಿಕ್ಕನ್ನು ಮತ್ತು ಆ ದಿಕ್ಕಿನಲ್ಲಿರುವ ಪಕ್ಷದ 'ಟಿಕೆಟ್' ಲಭ್ಯತೆಯನ್ನವಲಂಬಿಸಿ ಯಾವುದೇ ಎಗ್ಗಿಲ್ಲದೆ ಪಕ್ಷಾಂತರ ಮಾಡತೊಡಗಿದಾಗ. ರಾಜ್ಯದಲ್ಲಿ ಇದಾಗಲೇ ಆರಂಭವಾಗಿದೆ. ನಂಜನಗೂಡಿನ ಬೆಂಕಿ ಮಹದೇವ್ರಂತಹ ಹಿರಿಯ ಕಾಂಗ್ರೆಸ್ಸಿಗರು ಸೇಡಿನ ಮೇಲೆಂಬಂತೆ ಬಿಜೆಪಿ ಸೇರುತ್ತಾರೆಂದರೆ, ಅದು ಅವರ ದೀರ್ಘಕಾಲಿಕ ರಾಜಕೀಯ ಜೀವನವನ್ನೇ ಅನುಮಾನಾಸ್ಪದಗೊಳಿಸುತ್ತದೆ. ಹಾಗೇ ಜಾತ್ಯತೀತ ಮತ್ತು ಪ್ರಗತಿಶೀಲ 'ಬುದ್ಧಿಜೀವಿ' ಎಂದೇ ಖ್ಯಾತರಾಗಿದ್ದ ಮೂಲತಃ ಕಾಂಗ್ರೆಸ್ಸಿಗರಾದ ಕೆ.ಎಚ್.ಶ್ರೀನಿವಾಸ್ ಎಂಬ ನಾಯಕರು ಈಗ ಈವರೆಗೆ ಅವರಿದ್ದ ಯಾವ ಪಕ್ಷದಲ್ಲೂ ಸಲ್ಲದವರಂಥಾಗಿ ಸಾಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಲು ಹೊರಟಿದ್ದಾರೆಂದು ಸುದ್ದಿ. (ಈ ಸುದ್ದಿಯನ್ನೇನೂ ಅವರು ಈವರೆಗೆ ನಿರಾಕರಿಸಿಲ್ಲ) ಹಾಗೆ ನೋಡಿದರೆ ಈಗವರು ಯಾವ ಪಕ್ಷದಲ್ಲಿದ್ದಾರೆ ಎಂಬುದು ಮರೆತುಹೋಗುವಷ್ಟು ಬಾರಿ ಪಕ್ಷಾಂತರ ಮಾಡಿ ರಾಜಕೀಯವಾಗಿ ಅಪ್ರಸ್ತುತವಾಗಿ ಹೋಗಿದ್ದಾರೆ! ಹಿಂದೊಮ್ಮೆ ಇವರು ತಮ್ಮ ಮೂಲ ಪಕ್ಷದಿಂದ ಪಕ್ಷಾಂತರ ಮಾಡಿದಾಗ ಶಿವಮೊಗ್ಗದ ಜನರ ಕೋಪಕ್ಕೆ ತುತ್ತಾಗಿ, ತಾವಿನ್ನು ಮತ್ತೆ ಪಕ್ಷಾಂತರ ಮಾಡಿದರೆ ಊರ ಬಾಗಿಲಿನಲ್ಲೇ ಚಪ್ಪ್ಪಲಿಯಲ್ಲಿ ಹೊಡೆಯಬಹುದೆಂದು ಹೇಳಿ ಹೋಗಿದ್ದರು. ಆನಂತರವೂ ಅವರು ಹಲವು ಬಾರಿ ಪಕ್ಷಾಂತರ ಮಾಡಿದ್ದಾರೆ. ಆದರೆ ಜನರೇನೂ ಚಪ್ಪಲಿಯಲ್ಲಿ ಹೊಡೆಯಲು ಹೋಗಿಲ್ಲ. ಜನರ ಇಂತಹ ಔದಾರ್ಯ ಅಥವಾ ರಾಜಕೀಯ ಔದಾಸೀನ್ಯವೇ ಇಂತಹವರಿಗೆಲ್ಲ ಧೈರ್ಯ ತಂದು ಕೊಟ್ಟಿದೆಯೆಂದು ಕಾಣುತ್ತದೆ!
ಮಹದೇವರಂತಹ ಹಿರಿಯ ಕಾಂಗ್ರೆಸ್ಸಿಗರು ಮತ್ತು ಶ್ರೀನಿವಾಸರಂತಹ 'ಬುದ್ಧಿಜೀವಿ'ಗಳೇ ಎಲ್ಲ ರಾಜಕೀಯ ಮಾನ ಮರ್ಯದೆಗಳನ್ನು ಧಿಕ್ಕರಿಸಿ, (ಇವರಿಬ್ಬರೂ ಹಿರಿಯರು ಮತ್ತು ತಮ್ಮ ದೀರ್ಘ ರಾಜಕೀಯ ಜೀವನದ ಮೂಲ ಮೌಲ್ಯಗಳಿಗೇ ತಿಲಾಂಜಲಿ ನೀಡಲುಧ್ಯುಕ್ತರಾಗಿದ್ದಾರೆಂಬ ಕಾರಣಕ್ಕಷ್ಟೇ ಇವರನ್ನು ಉದಾಹರಣೆಯನ್ನಾಗಿ ತೆಗೆದುಕೊಳ್ಳಲಾಗಿದೆ) ರಾಜಕಾರಣವೆಂದರೆ ಶಾಸನ ಸಭಾ ರಾಜಕಾರಣವೆಂದೇ ಬಗೆಯುವಂತಾಗಿದ್ದರೆ, ಅದಕ್ಕೆ ಮುಖ್ಯ ಕಾರಣ ಶಾಸನ ಸಭಾ ರಾಜಕಾರಣ ಇತರೆಲ್ಲ ಸ್ತರಗಳ ರಾಜಕಾರಣವನ್ನು ನುಂಗಿ ಹಾಕಿರುವುದೇ ಆಗಿದೆ. ಇದು ಪ್ರಜಾಸತ್ತೆಯನ್ನು ಕೇವಲ ಶಾಸಕಸತ್ತೆಯನ್ನಾಗಿ ಮಾಡುವ ಮೂಲಕ ಪ್ರಜಾಸತ್ತೆಯನ್ನೇ ಒಂದು ದೊಡ್ಡ ವ್ಯಾಪಾರ - ವ್ಯವಹಾರವನ್ನಾಗಿ ಮಾಡಿರುವ ದುರಂತ. ಜನ ಶಾಸಕರಾಗಲು ಇಂದು ಬಯಸುತ್ತಿರುವುದಾದರೂ ಯಾತಕ್ಕಾಗಿ? ಜನಹಿತಕ್ಕಾಗಿ ಶಾಸನಗಳನ್ನು ರೂಪಿಸುವ ಆಸಕ್ತಿಯಿಂದಂತೂ ಅಲ್ಲ. ಇಂದು ಆಯ್ಕೆಯಾಗುತ್ತಿರುವ ಬಹಳಷ್ಟು ಜನರನ್ನು ನೋಡಿದರೆ. ಆ ಅರ್ಹತೆ ಅವರಿಗೆ ಇದ್ದಂತೆಯೂ ಇಲ್ಲ. ಅವರು ಶಾಸಕರಾಗ ಬಯಸುವುದು ತಮ್ಮ ಅಧಿಕಾರ ಬಳಸಿ ಸಮಾಜದ ಪಟ್ಟಭದ್ರರ ಹಿತ ಕಾಪಾಡುವ ಮೂಲಕ ಹಣ ಮಾಡಲಷ್ಟೆ. ಇತ್ತೀಚಿನ ವರ್ಷಗಳಲ್ಲಂತೂ ಈ ಪ್ರವೃತ್ತಿ ಯಾವ ಮಟ್ಟ ಮುಟ್ಟಿದೆಯೆಂದರೆ, ಪಟ್ಟಭದ್ರರೇ ನೇರವಾಗಿ ಹಣ ಚೆಲ್ಲಿ ಶಾಸಕರಾಗುವ ಪ್ರಯತ್ನಗಳಿಲ್ಲಿದ್ದಾರೆ. ಇಂದು ಗಣಿ ಮತ್ತು ಭೂ ಮಾಫಿಯಗಳೇ ನಮ್ಮ ರಾಜಕೀಯ ಪಕ್ಷಗಳ ಹಣಕಾಸಿನ ಸುಪರ್ದ್ ನೋಡಿಕೊಳ್ಳಲು ಮುಂದೆ ಬಂದಿದ್ದು, ಹಿರಿಯ ನಾಯಕರು ಇದನ್ನು ಸಂತೋಷದಿಂದ ಸ್ವಾಗತಿಸತೊಡಗಿದ್ದಾರೆಂದರೆ ನಮ್ಮ ರಾಜಕೀಯ ಸಂಸ್ಕೃತಿ ತನ್ನೆಲ್ಲ ತಾತ್ವಿಕತೆಯನ್ನೂ ಕಳೆದುಕೊಂಡಿದೆ ಎಂದೇ ಅರ್ಥ. ಏಕೆಂದರೆ ಇಂದು ಎಲ್ಲ ಪಕ್ಷಗಳ ಪ್ರಕಾರ ನಾಯಕನಾರೆಂದರೆ, ಜನರ ಮಧ್ಯೆ ಕೆಲಸ ಮಾಡಿ ಅವರ ವಿಶ್ವಾಸ ಗಳಿಸಿಕೊಂಡವನಲ್ಲ; ಹಣದ ದೊಡ್ಡ ಗಂಟು ತೋರಿಸುವವನು. ಆ ಗಂಟು ಎಷ್ಟು ದೊಡ್ಡದಾಗಿರುತ್ತದೋ ಅಷ್ಟು ದೊಡ್ಡ ನಾಯಕ ಅವನು.
ಹಾಗಾಗಿಯೇ ಇಂದು ಯಾರು ಯಾವ ಪಕ್ಷದಲ್ಲಾದರೂ ಇರಲು ಸಾಧ್ಯ ಮತ್ತು ತಮ್ಮ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಯಾವಾಗ ಬೇಕಾದರೂ ಯಾವ ಪಕ್ಷಕ್ಕಾದರೂ ಹೋಗಲು ಸಾಧ್ಯ. (ದೇವೇಗೌಡರು ತಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿಯ ಪ್ರಕಟಣೆಯನ್ನು ತಡ ಮಾಡುತ್ತಿರುವುದಾದರೂ ಯಾತಕ್ಕಾಗಿ?) ಅಂದರೆ ನಮ್ಮ ರಾಜಕಾರಣ ಎಲ್ಲ ಮಾನ - ಮರ್ಯದೆಗಳನ್ನೂ ಕಳೆದುಕೊಂಡಿದೆ ಎಂದೇ ಅರ್ಥ. ಇದರಿಂದಾಗಿ ಪ್ರಜಾಸತ್ತೆಯ ಬಗ್ಗೆಯೇ ಆಸೆ ಕಳೆದುಕೊಂಡ ಕೆಲವರು ಶಸ್ತ್ರಸಜ್ಜಿತರಾಗಿ ಕಾಡು ಹೊಕ್ಕು, ಪ್ರತಿ - ರಾಜಕಾರಣದ ಮಾದರಿಯೊಂದನ್ನು ರೂಪಿಸತೊಡಗಿದ್ದಾರೆ. ಆದರೆ ಈ ಮಾದರಿ ಈಗಿರುವ ಮಾದರಿಗಿಂತ ಹೆಚ್ಚು ಅನಾಹುತಕಾರಿಯಾಗಿರುವುದಿಲ್ಲ ಎಂಬ ನಂಬಿಕೆ ಸದ್ಯಕ್ಕೆ ಜನರಿಗಿಲ್ಲವಾದ್ದರಿಂದ, ಈಗಿರುವ ಮಾದರಿಯನ್ನೇ ಸರಿಪಡಿಸಲು ಸಾಧ್ಯವೇ ಎಂದು ಯೋಚಿಸುತ್ತಿರುವ ಕೆಲವರು ಚುನಾವಣೆ ಬಂದ ಹೊತ್ತಲ್ಲಿ ಕ್ರಿಯಾಶೀಲರಾಗುತ್ತಾರೆ! ಇಂತಹ ಕ್ರಿಯಾಶೀಲತೆ ಹೊಸ ರಾಜಕೀಯ ರಂಗ, ಹೊಸ ರಾಜಕೀಯ ಕಾರ್ಯಕ್ರಮ ಹಾಗೂ ಮತದಾರರ ಶಿಕ್ಷಣ ವೇದಿಕೆ ಮುಂತಾದ ಸಾಮೂಹಿಕ ಮತ್ತು ವೈಯುಕ್ತಿಕ ಉಪಕ್ರಮಗಳ ಮೂಲಕ ವ್ಯಕ್ತವಾಗುತ್ತದೆ.
ಸರ್ವೋದಯ ಕರ್ನಾಟಕ ಪಕ್ಷ ಇತ್ತೀಚೆಗೆ ಪ್ರಕಟಿಸಿರುವ ಜನಪರ ರಾಜಕೀಯ ರಂಗ ಇದಕ್ಕೊಂದು ಉದಾಹರಣೆ. ಎರಡು ವರ್ಷಗಳಿಗೂ ಹಿಂದೆ ತನ್ನ ಸ್ಥಾಪನೆಯನ್ನು ಸಂಭ್ರಮದಿಂದ ಘೋಷಿಸಿಕೊಂಡ ಈ ಪಕ್ಷ ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಈಗಲೇ - ಚುನಾವಣೆಗಳು ಘೋಷಣೆಯಾದ ಮೇಲೇ! ಇಂತಹ 'ಪಕ್ಷ' ರಾಜ್ಯದಲ್ಲಿ ಯಾವ ರಾಜಕೀಯ ಮಹತ್ವವನ್ನೂ ಹೊಂದಿರದ ಒಂದೆರಡು ಪಕ್ಷಗಳೊಂದಿಗೆ ಸೇರಿ ತಾನೊಂದು ರಂಗ ಸ್ಥಾಪಿಸಿಕೊಂಡಿದ್ದೇನೆಂದು ಹೇಳುವುದರ ಉದ್ದೇಶವಾದರೂ ಏನು - ಪ್ರಮುಖ ಪಕ್ಷವೊಂದರೊಡನೆ ನಾಲ್ಕೈದು ಸ್ಥಾನಗಳ ಹೊಂದಾಣಿಕೆಗಾಗಿ ಅದರ ಮೇಲೆ ಒತ್ತಡ ಹೇರುವುದರ ಹೊರತಾಗಿ? ಇನ್ನು ಅಮೆರಿಕಾದಿಂದ ಗೆಳೆಯ ರವಿಕೃಷ್ಣಾ ರೆಡ್ಡಿ ಚುನಾವಣೆಗೆ ಸ್ಪರ್ಧಿಸಲೆಂದೇ ಬರುತ್ತಿದ್ದಾರೆ. ತತ್ವಹೀನ ರಾಜಕಾರಣದೆದುರು ಜನಪರವಾದ ಕೆಲವಾದರೂ ತತ್ವಗಳನ್ನು ಎತ್ತಿಹಿಡಿಯಲು ತಾವು ಬರುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಐ.ಟಿ. ತಂತ್ರಜ್ಞರೇ ಬಹುಸಂಖ್ಯೆಯಲ್ಲಿರುವ ಕ್ಷೇತ್ರದಲ್ಲಿ ಮತದಾರರಿಂದಲೇ ಆದಷ್ಟೂ ಹಣ ಸಂಗ್ರಹಿಸಿ ಚುನಾವಣೆ ಎದುರಿಸುವ ಉದ್ದೇಶ ಇವರದು. ಇವರು ಇನ್ನೊಬ್ಬ ಮಹಿಮಾ ಪಟೇಲರಾಗುತ್ತಾರೇನೋ ಕಾದು ನೋಡಬೇಕು! ಬೆಂಗಳೂರಲ್ಲೇ ಐ.ಟಿ. ಯುಜನರೇ ಸೇರಿ 'ಲೋಕ ಪರಿತ್ರಾಣ' ಎಂಬ ಪಕ್ಷ ಸ್ಥಾಪಿಸಿಕೊಂಡು ಈಗಾಗಲೇ ಚುನಾವಣಾ ಪ್ರಚಾರ ಆರಂಭಿಸಿದ್ದಾರೆಂಬುದು ರವಿಯವರಿಗೆ ಇನ್ನೂ ಗೊತ್ತಾಗಿಲ್ಲವೆಂದು ಕಾಣುತ್ತದೆ.
ಹಾಗೇ ಹಾಸನದಲ್ಲಿ ಕೆಲವು ಗೆಳೆಯರು 'ಜನಶಕ್ತಿ' ಸಮ್ಮೇಳನವೊಂದನ್ನು ಆಯೋಜಿಸುತ್ತಿದ್ದಾರೆ. ಇಂದಿನ ಗೊಂದಲಮಯ ರಾಜಕೀಯ ಸಂದರ್ಭದಲ್ಲಿ ಜನತೆಗೆ ಸರಿಯಾದ ರಾಜಕೀಯ ಸಂದೇಶ ನೀಡುವುದು ಇದರ ಉದ್ದೇಶವೆಂದು ಹೇಳಲಾಗಿದೆ. ಈ ಮಧ್ಯೆ ಯು.ಆರ್.ಅನಂತಮೂರ್ತಿಯವರೂ ಇಂದಿನ ರಾಜಕೀಯ ವಾತಾವರಣವನ್ನು ಸ್ವಚ್ಛಗೊಳಿಸುವ ಮತ್ತು ಆ ಮೂಲಕ ಹೊಸ ಸಮಾಜವೊಂದನ್ನು ಕಟ್ಟಲು ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಕ್ರಮಗಳ ಪಟ್ಟಿಯೊಂದನ್ನು ಪ್ರಕಟಿಸಿದ್ದಾರೆ. ಇದನ್ನು ಅವರು 'ಕಾರ್ಯಕ್ರಮ' ಎಂದಿರುವುದರಿಂದ ಇದು ಯಾರ ಗಮನಕ್ಕಾಗಿ - ಜನತೆಯ ಗಮನಕ್ಕಾಗಿಯೋ, ರಾಜಕೀಯ ಪಕ್ಷಗಳ ಗಮನಕ್ಕಾಗಿಯೋ - ಎಂಬುದು ತಿಳಿಯದಾಗಿದೆ. ಕೇಳಿದರೆ, ಇದು ವಿಚಾರ ಪ್ರಚೋದನೆಗೆ, ಚರ್ಚೆಗೆ - ಇದರಿಂದ ಮುಂದೆ ಪ್ರಯೋಜನವಾಗುತ್ತದೆ ಎನ್ನುತ್ತಾರೆ ಅವರು. ಇರಬಹುದು.
ಈ ದೃಷ್ಟಿಯಿಂದ ಇಂತಹ ಎಲ್ಲ ಹವ್ಯಾಸಿ ಪ್ರಯತ್ನಗಳು ಸ್ವಾಗತಾರ್ಹವೇ ಆದರೂ, ಇವುಗಳಿಂದ ಸದ್ಯದ ರಾಜಕಾರಣದ ಮೇಲೆ ಯಾವುದೇ ಗುಣಾತ್ಮಕ ಪರಿಣಾಮ ಆಗುತ್ತದೆ ಎಂದು ನಂಬುವುದು ಕಷ್ಟ. ಆದರೂ, ಚುನಾವಣೆಗಳ ಹೊತ್ತಿಗಷ್ಟೇ ಇಂತಹ ಪ್ರಯತ್ನಗಳು ನಡೆಯಲು ಕಾರಣವೇನು? ಇಂತಹ ಪ್ರಯತ್ನಗಳನ್ನು ಮಾಡುವವರು ಯಾರು ಎಂದು ಗಮನಿಸಿದರೆ ಇದಕ್ಕೆ ಉತ್ತರ ದೊರಕುತ್ತದೆ. ಇವರೆಲ್ಲ ತಮ್ಮನ್ನು ಎಡಪಂಥೀಯರೆಂದೂ, ಜಾತ್ಯತೀತವಾದಿಗಳೆಂದೂ, ಪ್ರಗತಿಪರರೆಂದೂ ಕರೆದುಕೊಳ್ಳುವವರು. ಅಷ್ಟೇ ಅಲ್ಲ, ಹತ್ತಾರು ವರ್ಷಗಳಿಂದ ರಾಜ್ಯದಲ್ಲಿ ಹದಗೆಡುತ್ತಿರುವ ರಾಜಕೀಯ ಪರಿಸ್ಥಿತಿಗೆ ಎದುರಾಗಿ ಪರ್ಯಾಯ ರಾಜಕಾರಣವೆಂಬುದೊಂದನ್ನು ರೂಪಿಸಲು ಯತ್ನಿಸುತ್ತಿರುವವರು. ಆದರೆ ಈ ಸದುದ್ದೇಶದ ಹೊರತಾಗಿ, ಅದನ್ನು ಸಾಕಾರಗೊಳಿಸಲು ಅಗತ್ಯವಾದ ತೀವ್ರ ಹಂಬಲವಾಗಲೀ, ಬದ್ಧತೆಯಾಗಲೀ, ಕ್ರಿಯಾಶೀಲತೆಯಾಗಲೀ, ಹಠವಾಗಲೀ ಇಲ್ಲದೆ, ಅದನ್ನೊಂದು ಚಟ ಮಾಡಿಕೊಂಡವರು. ಇಂತಹ ಪ್ರಯತ್ನಗಳ ಸತತ ಬೆಂಬಲಿಗನಾಗಿಯೇ ನಾನು ಈ ಮಾತನ್ನು ಇಂದು ದುಃಖದಿಂದ ಹೇಳುತ್ತಿರುವೆ. ರಾಜಕಾರಣ ನಿಧಾನವಾಗಿ ಸಮಾಜಘಾತುಕ ಶಕ್ತಿಗಳ ಕೈವಶವಾಗುತ್ತಿರುವ ಇಂದಿನ ಸನ್ನಿವೇಶದಲ್ಲಿ ಇಂತಹ ಪ್ರಯತ್ನಗಳಿಗೆ ಎಂತಹ ಆಳದ ತುರ್ತು, ತೀವ್ರತೆ ಬೇಡ?
ಇವರೆಡೂ ಸದ್ಯಕ್ಕೆ ನಮ್ಮಲ್ಲಿ ಇದ್ದಂತೆ ತೋರುತ್ತಿಲ್ಲ. ಹಾಗೇನಾದರೂ ಇವೆರಡೂ ನಮ್ಮಲ್ಲಿ ಇದ್ದಿದ್ದರೆ, ಈಗ್ಗೆ ಬಹು ಹಿಂದೆಯೇ ಸರ್ವೋದಯ ಕರ್ನಾಟಕದ ಕನಸು, ರವಿಕೃಷ್ಣಾ ರೆಡ್ಡಿಯವರ ಆಶಯ, ಜನಶಕ್ತಿಯವರ ಆತಂಕ ಮತ್ತು ಅನಂತಮೂರ್ತಿಯವರ ಕಾರ್ಯಕ್ರಮಗಳನ್ನಾಧರಿಸಿ ಸಮಾಜಘಾತುಕ ರಾಜಕಾರಣವನ್ನೆದುರಿಸಲು ಪರ್ಯಾಯ ರಾಜಕೀಯ ಸಂಘಟನೆಯೊಂದು ಸಿದ್ಧವಾಗಬೇಕಿತ್ತು. ಆದರೆ ಆಗಿಲ್ಲವೆಂದರೆ, ಅದಕ್ಕೆ ದೊಡ್ಡ ವಿಚಾರಗಳ ಈ ಜಾತ್ಯತೀತ ಪ್ರಗತಿಪರರಿಗೆ ಸಂಘಟನೆಯೊಂದನ್ನು ಕಟ್ಟಲು ಅಗತ್ಯವಾದ ದೊಡ್ಡ ಗುಣಗಳು ಇಲ್ಲವೆಂದೇ ಅರ್ಥ. ಬಹುಮುಖ 'ಆಸಕ್ತಿ'ಗಳ ಇವರ ದೃಷ್ಟಿಯೂ ಅಲ್ಪಕಾಲಿಕವೇ. ಹಾಗಾಗಿಯೇ ಇಂತಹ ಪ್ರಯತ್ನಗಳು ಯಾವುದೇ ಐಕ್ಯತೆ ಇಲ್ಲದೆ ಚುನಾವಣೆಗಳ ಹೊತ್ತಿಗೆ ಕಾಣಿಸಿಕೊಳ್ಳುತ್ತವೆ ಅಥವಾ ಚುರುಕಾಗುತ್ತವೆ. ನಂತರ ಸಾಯುತ್ತವೆ. ಆ ಮೂಲಕ ಪ್ರಗತಿಪರತೆ ಎಂಬ ಪರಿಕಲ್ಪನೆಯ ವಿಶ್ವಾಸಾರ್ಹತೆಯನ್ನೇ ಹಾಳು ಮಾಡುತ್ತವೆ.
ಈ ಬಗ್ಗೆ ನಾನು ಇಷ್ಟು ಕಟುವಾಗಿ ಬರೆಯುತ್ತಿರುವುದು, ಇಂತಹ ಸಂಘಟಿತ ಪ್ರಯತ್ನವೊಂದು ಸಫಲವಾಗುವ ಲಕ್ಷಣಗಳು ಕಾಣುತ್ತಿಲ್ಲದಿರುವುದರ ಬಗ್ಗೆ ನನಗಿರುವ ನೋವಿನಿಂದಷ್ಟೇ. ಹಾಗಾಗಿಯೇ ಈ ಜಾತ್ಯತೀತ ಪ್ರಗತಿಪರರ ವಿಶ್ವಾಸ ಕಳೆದುಕೊಂಡಿರುವ ರಾಜಕೀಯ ಮುಖ್ಯ ಪ್ರವಾಹದ ರಾಜಕಾರಣಿ ಬಂಗಾರಪ್ಪ ಕಾಂಗ್ರೆಸ್ ಸೇರುತ್ತಾರೆಂಬ ವದಂತಿ ಬಂದೊಡನೆ, ಇಂದಿನ ಅಸಂಗತ ಪಕ್ಷಾಂತರಗಳ ಹಾವಳಿಯ ನಡುವೆಯೂ ಕಿವಿ ಚುರುಕಾಗುತ್ತದೆ! ಅವರು ಕಾಂಗ್ರೆಸ್ ಸೇರಬಹುದು ಅಥವಾ ಅದರೊಡನೆ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳಬಹುದು. (ಈ ಸೂಚನೆಯನ್ನು ನಾನು ಹಿಂದಿನ ಅಂಕಣವೊಂದರಲ್ಲಿ - 'ಸಮಾಜವಾದಿಗಳ ಕಾಂಗ್ರೆಸ್ಸೀಕರಣ: ಮುಂದೇನು?' - ನೀಡಿದ್ದೆ) ಆದರೆ ಇದು ಈ ಎಲ್ಲ ಪ್ರಗತಿಪರರು ಸೃಷ್ಟಿ ಮಾಡಲು ಹೆಣಗುತ್ತಿರುವ ರಾಜಕೀಯ ವಾತಾವರಣದ ಬದಲಾವಣೆಗಿಂತ ಹೆಚ್ಚಿನ ಬದಲಾವಣೆಯನ್ನು ಮಾಡಬಹುದು ಎಂಬುದು ಇಲ್ಲಿ ಮುಖ್ಯ. ಹಾಗಾಗಿ ನಮ್ಮ ಪರ್ಯಾಯ ರಾಜಕಾರಣದ ನಾಯಕರು ತುರ್ತಾಗಿ ತಿಳಿಯಬೇಕಾದುದು, ನಮ್ಮ ಗಮನ 'ಪರ್ಯಾಯ'ದ ಕಡೆಗಷ್ಟೇ ಇರದೇ 'ರಾಜಕಾರಣ'ದ ಕಡೆಗೂ ಹರಿಯಬೇಕಾಗಿದೆ ಎಂಬುದು. ಇಂತಹ ಸಕಾಲಿಕ 'ಸಕ್ರಿಯತೆ' ಮಾತ್ರ ಪರ್ಯಾಯ ರಾಜಕಾರಣದ ಪರಿಕಲ್ಪನೆಯನ್ನು ಜನತೆಯ ಮಧ್ಯೆ ಪ್ರಸ್ತುತಗೊಳಿಸಬಹುದು. ಅವರ ಹಿತ ಕಾಯುವ ಬದ್ಧತೆಗೆ ಪ್ರಾಮಾಣಿಕತೆ ಹಾಗೂ ನಂಬುಗೆಗಳ ಪ್ರಭೆಯನ್ನು ಒದಗಿಸಬಲ್ಲುದು.
ಈಗ ನೋಡಿ, ಹಣದುಬ್ಬರ ಶೇ.ಏಳನ್ನು ದಾಟಿ ದಾಟಿ ಹೋಗಿದೆ. ಬೆಲೆಗಳು - ವಿಶೇಷವಾಗಿ ಆಹಾರ ಪದಾರ್ಥಗಳ ಬೆಲೆಗಳು - ಜನಸಾಮಾನ್ಯರನ್ನು ಕಂಗೆಡಿಸುವಷ್ಟು ಮೇಲೇರಿ ಹೋಗಿವೆ. ಕಡು ಬಡವರಂತೂ ನೆರೆಹೊರೆಯಲ್ಲಿ ಭಿಕ್ಷೆ ಎತ್ತಿ ಹಸಿವು ನೀಗಿಸಿಕೊಳ್ಳುವಂತಹ ದುಃಸ್ಥಿತಿ ಉಂಟಾಗಿದೆ. ಆದರೆ ಇದಾವುದೂ ನಮ್ಮ ರಾಜಕೀಯ ಪಕ್ಷಗಳನ್ನು ಮತ್ತು ಮಾಧ್ಯಮಗಳನ್ನು - ಭಾರತ ಅಮೆರಿಕಾ ಪರಮಾಣು ಒಪ್ಪಂದದಷ್ಟೂ - ಕಂಗೆಡಿಸಿಲ್ಲ. ವಿರೋಧ ಪಕ್ಷಗಳು ತಮ್ಮ ಪಾತ್ರ ನಿರ್ವಹಿಸಬೇಕಾದ 'ರಾಜಕೀಯ ನಾಟಕ'ದಲ್ಲೆಂಬಂತೆ ಪ್ರತಿಭಟನೆಯ ಕೂಗು ಹಾಕಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕಾಣದಿದ್ದಷ್ಟು ಗತಿಯಲ್ಲಿ ದರಗಳು ಏರಲು ಏನು ಕಾರಣವೆಂದು ಯಾವ ರಾಜಕೀಯ ಪಕ್ಷವೂ ಗಂಭೀರವಾಗಿ ಚಿಂತಿಸುತ್ತಿಲ್ಲ. ಇಂತಹ ಚಿಂತನೆ ಇಂದಿನ ರಾಜಕಾರಣದ ಭಾಗವಾಗದಷ್ಟು ಅದು ಠೊಳ್ಳಾಗಿದೆ. ಅದನ್ನೆಲ್ಲ ನಾವು ಜಾಗತಿಕ ರಾಜಕಾರಣದ ಸುಪರ್ದಿಗೆ ಒಪ್ಪಿಸಿ, ನಾವು ನಮ್ಮದೇ ಹೂಡಿಕೆ, ಲಾಭ, ಕಮೀಷನ್ ಹಾಗೂ ಅವುಗಳ ಪ್ರಾಯಶ್ಚಿತ್ತ ರೂಪದ ದಾನ-ಧರ್ಮಗಳ ರಾಜಕಾರಣದಲ್ಲಿ ಮುಳುಗಿ ಹೋಗಿದ್ದೇವೆ. ಹಾಗಾಗಿಯೇ ನಮ್ಮ ಹಣಕಾಸು ಮಂತ್ರಿ ಪಿ.ಚಿದಂಬರಂ, ಶೇ.ಏಳೂವರೆ ದರದ ಹಣದುಬ್ಬರದ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳದಂತೆ, ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಭೆಯ ಮುಂದೆ ಈ ವರ್ಷವೂ ನಾವು ಏಳೂವರೆ ಬೆಳವಣಿಗೆ ದರವನ್ನು ಸಾಧಿಸಿಯೇ ತೀರುತ್ತೇವೆ ಎಂಬ ವಿಕ್ಷಿಪ್ತ ವೀರಾವೇಶದ ಮಾತಾಡಬಲ್ಲವರಾಗಿದ್ದಾರೆ. ನಿಜ, ಇದು ಚುನಾವಣಾ ಸಮಯವಾದ್ದರಿಂದ ಆತಂಕಗೊಂಡ ಕೇಂದ್ರ ಸರ್ಕಾರ ಕೆಲವು ರಫ್ತುಗಳ ಮೇಲೆ ನಿಷೇಧ, ಆಮದು ಸುಂಕಗಳ ಕಡಿತ ಮುಂತಾದ ಆಡಳಿತಾತ್ಮಕ ಕ್ರಮಗಳನ್ನು ಕೈಗೊಂಡಿದೆ. ಆದರೆ ಇದರಿಂದ ಬೆಲೆಗಳ ಮೇಲೆ ಅಂತಹ ಗಮನಾರ್ಹ ಪರಿಣಾಮವೇನೂ ಉಂಟಾಗಿಲ್ಲ. ಹೀಗಾಗಿ ಅವರು ಇದು ಜಾಗತಿಕ ಬೆಲೆ ಪರಿಸ್ಥಿತಿಯ ಪರಿಣಾಮ ಎಂದು ಹೇಳಿ ಕೈತೊಳೆದುಕೊಳ್ಳುವ ಸಿದ್ಧತೆಯಲ್ಲಿದ್ದಾರೆ.
ಈ ಮಾತು ಸುಳ್ಳೇನೂ ಅಲ್ಲ್ಲವೆಂದು ಈಗ ಎಡ - ಬಲಗಳೆರಡರ ಅರ್ಥಶಾಸ್ತ್ರಜ್ಞರೂ ಹೇಳತೊಡಗಿದ್ದಾರೆ. ಮಾನವ ಪರಿಸ್ಥಿತಿಯನ್ನು ಗಣನೆಗೇ ತೆಗೆದುಕೊಳ್ಳದೇ, ಜಾಗತಿಕ ರಾಜಕಾರಣದ ಒತ್ತಡಗಳಿಗೆ ಸಿಕ್ಕಿ ಸಹಿ ಹಾಕಲಾದ ಅಂತಾರಾಷ್ಟ್ರೀಯ ವ್ಯಾಪಾರ ಒಪ್ಪಂದಗಳ ಪರಿಣಾಮವಿದು ಎಂಬುದು ಅವರಲ್ಲಿನ ಬಹುಜನರ ಅಭಿಮತವಾಗಿದೆ. ಇಂದು ಜಾಗತಿಕ ರಾಜಕಾರಣದ ಕೇಂದ್ರದಲ್ಲಿರುವ ತೈಲ ರಾಜಕಾರಣ (ಇದರ ಅಂಗವಾಗಿ ಅಪಾರ ಪ್ರಮಾಣದ ಆಹಾರ ಧಾನ್ಯಗಳನ್ನು ಇಂಧನ ತಯಾರಿಕೆಗೆ ಬಳಸಲಾಗುತ್ತಿದೆ!), ಅಭಿವೃದ್ಧಿಶೀಲ ದೇಶಗಳಲ್ಲಿನ ಕೃಷಿ ವಲಯದ ಸಂಪೂರ್ಣ ನಿರ್ಲಕ್ಷ - ಹೂಡಿಕೆ ಮತ್ತು ತಾಂತ್ರಿಕ ಸುಧಾರಣೆಗಳ ಬಹತೇಕ ಕೆಲಸವನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಒಪ್ಪಿಸಿರುವುದು, ಆಹಾರ ಬೆಳೆಗಳ ಜಾಗದಲ್ಲಿ ಲಾಭ ನಿರ್ದೇಶಿತವಾದ ವಾಣಿಜ್ಯ ಬೆಳೆಗಳ ಹೆಚ್ಚಳ, ರೈತರ ಬೆಳೆಗಳಿಗೆ ಲಾಭದಾಯಕ ಬೆಲೆ ಕೊಡದೆ ಖಾಸಗಿ ಕಂಪನಿಗಳು ಅವರ ಮೇಲೆ ಹಿಡಿತ ಸಾಧಿಸಿ ಸಟ್ಟಾ ವ್ಯಾಪಾರ ಮಾಡಲು (ಇದಕ್ಕೀಗ ಮುಕ್ತ ಮಾರುಕಟ್ಟೆವಾದಿಗಳು 'future trading' ಎಂಬ ಮಾನವಂತ ಹೆಸರು ನೀಡಿ ವ್ಯಾಪಾರ -ವ್ಯವಹಾರಗಳಲ್ಲಿ ಅದಕ್ಕೊಂದು ಗೌರವಾನ್ವಿತ ಸ್ಥಾನ ಒದಗಿಸಿದ್ದಾರೆ!) ಒದಗಿಸಿರುವ ಅವಕಾಶ ಮತ್ತು ಇದರಿಂದಾಗಿ ಆಹಾರ ಧಾನ್ಯಗಳನ್ನು ಸ್ಥಳೀಯ ಮಾರುಕಟ್ಟೆ ಬೆಲೆಗಳಿಗಿಂತ ಹೆಚ್ಚಿನ ಬೆಲೆಯಲ್ಲಿ ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇತ್ಯಾದಿಗಳನ್ನು ಅವರು ಆಹಾರ ಧಾನ್ಯಗಳ ಬೆಲೆ ಏರಿಕೆಯ ಕಾರಣಗಳೆಂದು ಪಟ್ಟಿ ಮಾಡಿದ್ದಾರೆ. ಇನ್ನಿತರ ವಸ್ತುಗಳ ಬೆಲೆ ಹೆಚ್ಚಳಕ್ಕೂ ಇಂತಹುದೇ - ಈಗ ಬದಲಿಸಲಾಗದ - ಜಾಗತಿಕ ವ್ಯಾಪಾರ ಒಪ್ಪಂದಗಳೇ ಕಾರಣವಾಗಿದ್ದು; ಜಾಗತಿಕ - ಅಂದರೆ ಅಮೆರಿಕಾ ಕೇಂದ್ರಿತ - ಆರ್ಥಿಕತೆ ಈಗ ಹಿನ್ನಡೆಯಲ್ಲಿರುವುದರಿಂದ, ನಮ್ಮ ಮೇಲೂ ಹಿನ್ನಡೆಯ ಪರಿಣಾಮಗಳುಂಟಾಗಿವೆ ಎಂದು ಹೇಳುತ್ತಿದ್ದಾರೆ. ಅಷ್ಟೇ ಅಲ್ಲ, ಇವು ಸದ್ಯಕ್ಕೆ ನಿವಾರಣೆಯಾಗುವ ಸಂಭವವಿಲ್ಲವೆಂದೂ ಹೇಳುತ್ತಿದ್ದಾರೆ.
ಹಾಗಾದರೆ ನಮ್ಮ ಶ್ರೀಮಂತ ಮತ್ತು ಮಧ್ಯಮ ವರ್ಗಗಳಿಗೆ 'ಹೊಸ ಸಿರಿ' ತಂದು ಕೊಟ್ಟಿರುವ 'ಆರ್ಥಿಕ ಉದಾರೀಕರಣ'ದ ದೀರ್ಘಕಾಲಿಕ ಪರಿಣಾಮಗಳೇನು, ಇವುಗಳ ಆತ್ಯಂತಿಕ ಬಲಿಗಳು ಯಾರು? ಈ ಬಗ್ಗೆ ಈಗಲಾದರೂ, 'ವಾಸ್ತವ ಅನುಭವ'ದ ಆಧಾರದ ಮೇಲೆ ಗಂಭೀರವಾಗಿ ವಿಶ್ಲೇಷಣೆ ಮಾಡಬೇಕಿದೆಯಲ್ಲವೆ? ಆದರೆ, ಸಕ್ರಿಯ ರಾಜಕಾರಣದಲ್ಲಿರುವ ಯಾರಿಗೂ ಇಂತಹ ಗಂಭೀರ ವಿಶ್ಲೇಷಣೆಯ ಅಗತ್ಯ ಕಂಡು ಬಂದಿಲ್ಲ! ಇವರ ಚುನಾವಣಾ ಆಶ್ವಾಸನೆಗಳನ್ನೂ ನೋಡಿದರೆ ಇದಕ್ಕೇನು ಕಾರಣವೆಂದು ಗೊತ್ತಾಗುತ್ತದೆ: ಕಾಂಗ್ರೆಸ್ಸಿನವರು ಕಡು ಬಡವರಿಗೆ ಬಣ್ಣದ ಟಿ.ವಿ. ಕೊಡುತ್ತಾರಂತೆ! ಜೊತೆಗೆ ಕೆಜಿಗೆ ಎರಡು ರೂಪಾಯಿಗಳ ದರದಲ್ಲಿ ತಿಂಗಳಿಗೆ 25 ಕೆಜಿ ಅಕ್ಕಿ ಕೊಡುತ್ತಾರಂತೆ. ಯಾವುದೇ ರಾಜಕೀಯ ತಾತ್ವಿಕತೆ ಇಲ್ಲದೇ ಭಾವನಾತ್ಮಕ ರಾಜಕಾರಣವನ್ನೇ ನಂಬಿ ನಡೆಯುತ್ತಿರುವ ಡಿ.ಎಂ.ಕೆ. ಪಕ್ಷದಿಂದ ಕದ್ದಿರುವ ಈ ಆಶ್ವಾಸನೆಗಳನ್ನು, ಇತರರೆಲ್ಲಿ ಕದ್ದು ಬಿಡುವರೋ ಎಂಬ ಆತಂಕದಿಂದ ಈ ಪಕ್ಷ ತನ್ನ ಪ್ರಣಾಳಿಕೆ ಬಿಡುಗಡೆಯ ಮುನ್ನವೇ ಇವನ್ನು ಪ್ರಕಟಿಸಿದೆ! ಇದರಿಂದ ಪೀಕಲಾಟಕ್ಕೆ ಸಿಕ್ಕಿರುವ ಇತರ ಪಕ್ಷಗಳು ಉದಾರತೆ ಹಾಗೂ ರಿಯಾಯ್ತಿಗಳಲ್ಲಿ ಇವನ್ನು ಮೀರಿಸಿದ ಆಶ್ವಾಸನೆಗಳನ್ನು ನೀಡುವ ಲೆಕ್ಕಾಚಾರದಲ್ಲಿ ತೊಡಗಿವೆ. ಒಂದು ಆಳವಾದ ತಾತ್ವಿಕ ಹಿನ್ನೆಲೆಯುಳ್ಳ ರಾಷ್ಟ್ರೀಯ ಪಕ್ಷವೆನಿಸಿರುವ ಕಾಂಗ್ರೆಸ್ ಪಕ್ಷವೇ ಈ ಸ್ಥಿತಿ ತಲುಪಿದೆ ಎಂದರೆ ಒಟ್ಟಾರೆ ನಮ್ಮ ರಾಜಕಾರಣ ಎಷ್ಟು ಖೊಟ್ಟಿಯಾಗಿರಬೇಕು!
ಇದು ರಾಜ ಮಹಾರಾಜರ ಕಾಲದ ದಾನ - ಧರ್ಮಗಳ ರಾಜಕಾರಣ. ಇದು ತನ್ನ ಅಭಿವೃದ್ಧಿ ಮೀಮಾಂಸೆಯಲ್ಲಿ ತಾನೇ ನಂಬಿಕೆ ಕಳೆದುಕೊಂಡು ದಿಕ್ಕೆಟ್ಟಿರುವ ರಾಜಕಾರಣದ ಲಕ್ಷಣ. ದುಡಿಯುವ ಜನಕ್ಕೆ ದುಡಿದು ಗಳಿಸಿ ತಮ್ಮ ಬದುಕಿನ ಘನತೆ ಬೆಳೆಸಿಕೊಳ್ಳುವ ಅವಕಾಶಗಳನ್ನೇ ಸೃಷ್ಟಿಸಲಾಗದಂತಹ ಆಧುನಿಕ ಊಳಿಗಮಾನ್ಯಶಾಹಿ ರಾಜಕಾರಣವಿದು. ಮಕ್ಕಳಿಗೆ ಆಹಾರ, ಪುಸ್ತಕ, ಬಟ್ಟೆ, ಸೈಕಲ್; ಹೆಂಡತಿಗೆ ತಾಳಿ, ಸೀರೆ ಇತ್ಯಾದಿಗಳಿಂದ ಆರಂಭವಾದ ಈ ದಾನ ರಾಜಕಾರಣ, ಇಂದು ಬಣ್ಣದ ಟಿ.ವಿ. ದಾನಕ್ಕೆ ಬಂದು ಮುಟ್ಟಿದೆ... ಇದು ಸಾಂಕೇತಿಕವಾಗಿ ಕೂಡಾ ನಮ್ಮ ರಾಜಕಾರಣ ಮುಟ್ಟಿರುವ ದಿವಾಳಿಕೋರತನವನ್ನು ಸೂಚಿಸುತ್ತದೆ ಎಂದು ನನಗನ್ನಿಸುತ್ತದೆ: ಕಡುಬಡವರನ್ನೂ ಈ ಮೂಲಕ ಜಾಗತಿಕ ರಾಜಕಾರಣದ ಬಣ್ಣ ಬೆಡಗುಗಳಲ್ಲಿ ಮುಳುಗಿಸಿಬಿಟ್ಟರೆ, ತಮ್ಮ ದುಷ್ಟ ಕಾರ್ಯಗಳಿಗೆ ವಿರೋಧವೇ ಇರುವುದಿಲ್ಲವೆಂದು ಅವರು ತೀರ್ಮಾನಿಸಿದಂತೆ ತೋರುತ್ತದೆ.
ಅಂದ ಹಾಗೆ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲೂ ಇತರ ಹಿಂದುಳಿದ ಜಾತಿಗಳಿಗೆ ಶೇಕಡಾ 27ರ ಮೀಸಲಾತಿಯನ್ನು ಎತ್ತಿ ಹಿಡಿದಿರುವ ಸರ್ವೋನ್ನತ ನ್ಯಾಯಾಲಯದ ತೀರ್ಪಿನ ಬಗ್ಗೆ ನಮ್ಮ ಹಿಂದುಳಿದ ವರ್ಗಗಳ ಚಳುವಳಿಯ ನಾಯಕತ್ವವೇಕೋ ಉತ್ಸಾಹವನ್ನೇ ತೋರುತ್ತಿಲ್ಲವಲ್ಲ?
ಏಕೆಂದರೆ, ಈ ತೀರ್ಪು 'ಕೆನೆ ಪದರ'ದ ಷರತ್ತಿನ ಮೂಲಕ ಈ ನಾಯಕತ್ವದ ವರ್ಗವನ್ನೇ ಮೀಸಲಾತಿಯಿಂದ ಹೊರಗಿಟ್ಟಿದೆ!