ಶೇರುಪೇಟೆ ಆಖಾಡಕ್ಕಿಳಿಯುವ ಮೊದಲು ತಾಲೀಮು ನಡೆಸಿ

ಶೇರುಪೇಟೆ ಆಖಾಡಕ್ಕಿಳಿಯುವ ಮೊದಲು ತಾಲೀಮು ನಡೆಸಿ

ಬರಹ

(ಇ-ಲೋಕ-60)(4/2/2008)
ವೈಭವ ಮೊರಾರ್ಕ ಎನ್ನುವ ಬೋಸ್ಟನ್ ವಿಶ್ವವಿದ್ಯಾಲಯದ ಪದವೀಧರ.ಶೇರು ಪೇಟೆ ವ್ಯವಹಾರಕ್ಕಿಳಿಯುವ ಮೊದಲು ತಾಲೀಮು ನಡೆಸಿ ಅನುಭವ ಪಡೆಯುವ ಅವಕಾಶವನ್ನು ನೀಡುವ ಅಂತರ್ಜಾಲ ತಾಣವನ್ನು ಇವರು ರೂಪಿಸಿದ್ದಾರೆ.ಇಲ್ಲಿ ತಾಲೀಮು ನಡೆಸಲು ಹಣ ಬೇಕಿಲ್ಲ. ಭಾರತೀಯ ಶೇರು ಪೇಟೆಯ ವ್ಯವಹಾರದ ಅನುಭವವನ್ನಿಲ್ಲಿ ಪಡೆಯಬಹುದು.ಶೇರು ವ್ಯವಹಾರದ ಇತರ ಮಗ್ಗುಲುಗಳಾದ ಸರಕು ವಿನಿಮಯ ಪೇಟೆ,ಫ್ಯೂಚರ್ ಮತ್ತು ಆಪ್ಷನ್ಸ್ ಮುಂತಾದ ವಿಭಾಗಗಳಲ್ಲೂ ಹಣ ಹೂಡಿ,ನಿಮ್ಮ ಹೂಡಿಕೆ ಲಾಭದಾಯಕವೇ ಎಂದು ತಿಳಿದುಕೊಳ್ಳಬಹುದು.ನೈಜ ಶೇರು ಬೆಲೆಪಟ್ಟಿಯ ಆಧಾರದ ಮೇಲೆ ಇಲ್ಲಿನ "ತಾಲೀಮು" ವ್ಯವಹಾರ ನಡೆಯುತ್ತದೆ. Tradecracker.com ಎಂಬುದು ಅಂತರ್ಜಾಲ ತಾಣದ ವಿಳಾಸ.ವಾಣಿಜ್ಯ ಅಥವ ಮ್ಯಾನೇಜ್ಮೆಂಟ್ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗಾಗಿ ತಾಣವನ್ನು ರೂಪಿಸಲಾಗಿದ್ದರೂ,ಸಾಮಾನ್ಯರೂ ಇಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಬಹುದು.
ಇಲಿ ಮಿದುಳಿನಲ್ಲಿ ಕ್ಯಾಮರಾ ಸ್ಥಾಪನೆ:ಜಪಾನೀ ಸಂಶೋಧಕರ ಸಾಧನೆ
 ಜಪಾನೀ ಸಂಶೋಧಕರು ಮಾನವನ ಮಿದುಳಿನ ಯೋಚನೆಯ ಪರಿಯನ್ನು ಅರಿಯಲು ಹೊರಟಿದ್ದಾರೆ.ಪಾರ್ಕಿನ್ಸನ್ಸ್ ರೋಗದಂತಹ ಮಿದುಳಿಗೆ ಸಂಬಂ಼ಧಿಸಿದ ರೋಗಗಳಿಗೆ ಚಿಕಿತ್ಸೆಯನ್ನು ನೀಡಲು ಈ ಅಧ್ಯಯನ ಅಗತ್ಯವಂತೆ.ಆದರೆ ಅಧ್ಯಯನವನ್ನು ಮನುಷ್ಯನ ಮಿದುಳಿನ ಮೇಲೆ ನಡೆಸುವುದು ಸಾಧ್ಯವಿಲ್ಲವಲ್ಲ. ಅದಕ್ಕಾಗಿ ಅವರುಗಳು ಸಾಮಾನ್ಯವಾಗಿ ಮಾಡುವಂತೆ ಇಲಿಗಳ ಮೇಲೆ ಪ್ರಯೋಗ ನಡೆಸುತ್ತಿದ್ದಾರೆ.ಪ್ರಯೋಗಗಳು ಚೀನಾದ ಶಾಂಘೈ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದೆ.ಇಲಿಯ ದೇಹಕ್ಕೆ ರಾಸಾಯಿನಿಕವೊಂದನ್ನು ನೀಡಲಾಗಿದೆ.ಮಿದುಳಿನಲ್ಲಿ ಚಟುವಟಿಕೆ ನಡೆದಾಗಲೆಲ್ಲಾ,ಈ ರಾಸಾಯಿನಿಕದ ಕಾರಣ ಮಿದುಳಿನ ಸುತ್ತಪ್ರಭೆ ಗೋಚರಿಸುತ್ತದೆ. ಈ ಬೆಳಕನ್ನು ಸೆರೆ ಹಿಡಿಯಲು ಸಣ್ಣ ಕ್ಯಾಮರಾವೊಂದನ್ನು ಮಿದುಳಿನ ಮೇಲೆ ಕಸಿ ಮಾಡಲು ಸಂಶೋಧಕರಿಗೆ ಸಾಧ್ಯವಾಗಿದೆ.ಈ ಕ್ಯಾಮರಾದ ಉದ್ದ ಮೂರು ಮಿಲ್ಲಿಮೀಟರ್,ಅಗಲ ಮತ್ತು ಆಳಗಳೂ ಮೂರು ಮಿಲ್ಲಿಮೀಟರಿಗೆ ಕಡಿಮೆ.ಇಲಿಯ ಮಿದುಳಿನ ಚಟುವಟಿಕೆಗಳು ಕಾಣಿಸಿಕೊಂಡ ತಕ್ಷಣ ಮಿದುಳು ಬೆಳಗುತ್ತದೆ.ಕ್ಯಾಮರಾ ಅದನ್ನು ಗ್ರಹಿಸಿ,ತೆರೆಯೊಂದರಲ್ಲಿ ಬೆಳಕನ್ನು ಪ್ರದರ್ಶಿಸುತ್ತದೆ.ಹೀಗಾಗಿ ಯಾವಾಗೆಲ್ಲಾ ಇಲಿಯ ಮಿದುಳು ಚಟುವಟಿಕೆಯಿಂದ ಕೂಡಿರುತ್ತದೆ ಎನ್ನುವುದು ಸಂಶೋಧಕರಿಗೆ ಅರಿವಾಗುತ್ತದೆ.
ಮೈಕ್ರೋಸಾಫ್ಟ್ ಕಣ್ಣು ಯಾಹೂ ಮೇಲೆ
 ಕಳೆದವಾರ ನೀವು ಈ ಅಂಕಣದಲ್ಲಿ ಓದಿರುವಂತೆ ಯಾಹೂ ಈಗ ವ್ಯವಹಾರದಲ್ಲಿ ಹಿನ್ನಡೆ ಕಾಣುತ್ತಿದೆ. ಕಂಪೆನಿಯ ಶೇರಿನ ಬೆಲೆ ಕುಸಿಯುತ್ತಿದೆ.ತನ್ನ ನೂರಾರು ಉದ್ಯೋಗಿಗಳನ್ನು ಮನೆಗೆ ತೆಗೆದುಕೊಳ್ಳುವ ಕಠಿನ ನಿರ್ಧಾರವನ್ನೂ ಅದು ತೆಗೆದುಕೊಂಡಿದೆ.ಜಗತ್ತಿನ ತಂತ್ರಜ್ಞಾನ ಕಂಪೆನಿಗಳ ಪೈಕಿ ದೈತ್ಯನೆನೆಸಿರುವ ಮೈಕ್ರೋಸಾಫ್ಟ್ ಈಗ ಯಾಹೂವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಸ್ತಾವವನ್ನು ಯಾಹೂವಿನ ನಿರ್ದೇಶಕ ಮಂಡಳಿಯ ಮುಂದಿಟ್ಟಿದೆ.ನಲ್ವತ್ತನಾಲ್ಕು ಬಿಲಿಯನ್ ಡಾಲರುಗಳ ಬೃಹತ್ ಮೊತ್ತವನ್ನು ನೀಡಲೂ ಕಂಪೆನಿ ಮುಂದೆ ಬಂದಿದೆ.ಸದ್ಯ ಯಾಹೂವಿನ ಪ್ರತಿ ಶೇರಿಗೆ ಮಾರುಕಟ್ಟೆ ಬೆಲೆಗಿಂತ ಶೇಕಡಾ ಅರುವತ್ತು ಅಧಿಕ ಬೆಲೆ ತೆರಲು ಮೈಕ್ರೋಸಾಫ್ಟ್ ಮುಂಬಂದಿದೆ.ಈ ವರ್ಷದೊಳಗೆ ಯಾಹೂವನ್ನು ತನ್ನದಾಗಿಸಿಕೊಳ್ಳುವುದು ಮೈಕ್ರೋಸಾಫ್ಟ್ ಯೋಜನೆ.ಯಾಹೂ ಇದುವರೆಗೂ ಈ ಪ್ರಸ್ತಾವಕ್ಕೆ ಪ್ರತಿಕ್ರಿಯಿಸಿಲ್ಲ.ಹಾಗೆ ನೋಡಿದರೆ,ಮೈಕ್ರೋಸಾಫ್ಟಿನ ಈ ಪ್ರಸ್ತಾವನೆ ಹೊಸದೇನಲ್ಲ. ಕಳೆದ ಒಂದೂವರೆ ವರ್ಷಗಳಲ್ಲಿ ಈ ಬಗ್ಗೆ ಗುಸುಗುಸು ಕೇಳಿ ಬರುತ್ತಲೇ ಇದೆ.
 ಇಂತಹ ವಿಲೀನ ಬಹು ಕಠಿನವಾದದ್ದು.ಯಾಹೂ ಹಾಗೂ ಮೈಕ್ರೋಸಾಫ್ಟ್ ಎರಡೂ ಒಂದೇ ರೀತಿಯ ವ್ಯವಹಾರ ನಡೆಸುತ್ತಿವೆ.ಎರಡೂ ಕಂಪೆನಿಗಳು ಮಿಂಚಂಚೆಯನ್ನು ಅಂತರ್ಜಾಲದಲ್ಲಿ ಒದಗಿಸುತ್ತಿವೆ.ಎರಡು ಕಂಪೆನಿಗಳೂ ಶೋಧ ಸೇವೆಯನ್ನೂ ನೀಡುತ್ತಿವೆ.ಎರಡೂ ಗುರಿಯಾಗಿಸಿಕೊಂಡ ಗ್ರಾಹಕರ ಬಳಗವೂ ಒಂದೇ.ಎರಡೂ ಕಂಪೆನಿಗಳೂ ಮೊಬೈಲಿನಲ್ಲೂ ಒಂದೇ ತರದ ಸೇವೆಗಳನ್ನು ಒದಗಿಸಲು ಯತ್ನಿಸುತ್ತಿವೆ.ಯಾಹೂವಿನ ಕೆಲವು ಉತ್ಪನಗಳು ಮತ್ತು ಸೇವೆಗಳು ಮೈಕ್ರೋಸಾಫ್ಟ್‍ಗಿಂತ ಚೆನ್ನಾಗಿವೆ.ಶೋಧ ಸೇವೆಯಲ್ಲಂತೂ ಗೂಗಲ್ ಬಿಟ್ಟರೆ,ಯಾಹೂವಿಗೆ ಎರಡನೆಯ ಸ್ಥಾನ.ಅಲ್ಲದೆ ವಿಲೀನದ ನಂತರ ಯಾಹೂವಿನ ಉದ್ಯೋಗಿಗಳನ್ನು ಮೈಕ್ರೋಸಾಫ್ಟ್ ಹೇಗೆ ಬಳಸಲಿದೆ ಎನ್ನುವುದೂ ಅನಿಶ್ಚಿತ.ಆದರೆ ಒಂದು ವಿಷಯದಲ್ಲಿ ಮಾತ್ರಾ ಚರ್ಚೆಯಿಲ್ಲ.ಗೂಗಲ್ ಕಂಪೆನಿಗೆ ಸ್ಪರ್ಧೆ ನೀಡಲು ಈ ಹೊಸ ಕಂಪೆನಿಗೆ ಸುಲಭವಾಗಲಿದೆ.ಅಲ್ಲದೆ ಯುರೋಪ್ ಮತ್ತು ಅಮೆರಿಕಾಗಳಲ್ಲಿ ಮೈಕ್ರೋಸಾಫ್ಟ್ ಪ್ರಾಬಲ್ಯ ಹೊಂದಿದ್ದರೆ,ಯಾಹೂವಿಗೆ ಚೀನಾದ ಮಾರುಕಟ್ಟೆಯ ಮೇಲೆ ಒಳ್ಳೆಯ ಹಿಡಿತವಿದೆ.ಯಾಹೂ ಅನ್ಸರ್ಸ್ ಎನ್ನುವ ಜನರು ತಮ್ಮ ತಮ್ಮಲ್ಲಿ ಮಾಹಿತಿಗಳನ್ನು ಹಂಚಿಕೊಳ್ಳುವ ವೇದಿಕೆಯು ಎದ್ದು ಕಾಣಿಸಿಕೊಳ್ಳಲಿರುವ ಅಂಶವಾಗಲಿದೆ.
 ಅತ್ತ ಗೂಗಲ್ ಕೂಡಾ ಸುಖದ ಸುಪ್ಪತ್ತಿಗೆಯಲ್ಲಿಲ್ಲ.ಕಂಪೆನಿಯ ಈ ಸಲದ ಕಾಲು ವರ್ಷದ ಹಣಕಾಸಿನ ಫಲಿತಾಂಶ ಗೂಗಲ್ ಬಗ್ಗೆ ನಿರಾಸೆ ಮೂಡಿಸಿತು.ಕಂಪೆನಿ ನಷ್ಟ ಮಾಡಿಕೊಂಡೇನೂ ಇಲ್ಲ.ಆದರೆ ಅದರ ಲಾಭಾಂಶ ಇಳಿದಿದೆ.
ಲ್ಯಾಪ್‍ಟಾಪ್ ಸೆಲ್‍ಫೋನ್ ಕಮ್ಯುನಿಕೇಟರ್
 ಸೆಲ್‍ಫೋನ್‍ನಲ್ಲೇ ಲ್ಯಾಪ್‍ಟಾಪ್ ಸೌಲಭ್ಯ ಒದಗಿಸುವ ಸಾಧನವನ್ನು ನೋಕಿಯ ಸಿದ್ಧಪಡಿಸಿದೆ.ಇದರಲ್ಲಿ ಕರೆಗಳನ್ನು ಸ್ಪಷ್ಟವಾಗಿ ಮಾಡಬಹುದು.ಕೀಲಿ ಮಣೆ ಇರುವುದರಿಂದ ಟೈಪಿಂಗ್ ಸುಲಭ.ಆದರೆ ತೆರೆ ಕಿರುಗಾತ್ರದಾದ್ದರಿಂದ ಲ್ಯಾಪ್‍ಟಾಪ್‍ನಂತೆ ಬಳಸುವುದು ತುಸು ತ್ರಾಸದಾಯಕ.ಜಿಪಿಎಸ್ ಸೌಲಭ್ಯ ಇದರಲ್ಲಿ ಸಿಗುತ್ತದೆ.ಧ್ವನಿ ರೆಕಾರ್ಡಿಂಗ್ ವ್ಯವಸ್ಥೆಯಿದೆ.ಕ್ಯಾಮರಾ ಲಭ್ಯ.

UDAYAVANI

ASHOKWORLD
*ಅಶೋಕ್‍ಕುಮಾರ್ ಎ