ಶೈಕ್ಷಣಿಕ ಭಯೋತ್ಪಾದನೆ…!
ಕ್ಷಮಿಸಿ " ಭಯೋತ್ಪಾದನೆ " ಎಂಬ ಪದ ಜೀವ ಹಾನಿಗೆ ಮಾತ್ರ ಸೀಮಿತವಲ್ಲ. ಹಣ ಸಂಪಾದಿಸಲು ಜನರಲ್ಲಿ ಶಿಕ್ಷಣದ ಶಿಸ್ತಿನ ಭಯ ಮೂಡಿಸಿ ಮಾಫಿಯಾ ರೀತಿಯಲ್ಲಿ ಶೋಷಿಸುವ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಕುರಿತಾಗಿ ಈ ಪದ ಪ್ರಯೋಗ.. ಸಾಮಾನ್ಯವಾಗಿ ವರ್ಷದ ಪ್ರಾರಂಭದ ಜನವರಿ - ಫೆಬ್ರುವರಿ ತಿಂಗಳಲ್ಲೇ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರವೇಶದ ಪ್ರಕ್ರಿಯೆ ಪ್ರಾರಂಭಿಸುತ್ತಾರೆ. ಆ ಬಗ್ಗೆ ಜಾಗೃತಗೊಳ್ಳಲು ಇದು ಸುಸಮಯ.
ಒಂದನೇ ತರಗತಿಯ ಪ್ರವೇಶಕ್ಕೆ ಅತ್ಯಂತ ಹೆಚ್ಚು ಬೇಡಿಕೆ ಇರುತ್ತದೆ. ಸಿಬಿಎಸ್ಇ, ಐಸಿಎಸ್ಇ, ಐಜಿಸಿಎಸ್ಇ ಹೀಗೆ ವಿವಿಧ ಪ್ರಕಾರಗಳ ಇಂಟರ್ನ್ಯಾಷನಲ್ ಶಾಲೆಗಳಿಗೆ ಅತಿಹೆಚ್ಚು ಬೇಡಿಕೆ ಮತ್ತು ದುಬಾರಿ ಹಣ ಪಾವತಿಸಬೇಕಾಗುತ್ತದೆ. ವಾರ್ಷಿಕ ಸುಮಾರು ಒಂದು ಲಕ್ಷಣದಿಂದ ಕೆಲವು ವಸತಿ ಶಾಲೆಗಳಲ್ಲಿ ಎಂಟು ಲಕ್ಷದವರೆಗೂ ಇರುತ್ತದೆ. ಶಾಲೆಯ ವಿಶಾಲತೆ, ಭವ್ಯವಾದ ಕಟ್ಟಡ, ಆಟದ ಮೈದಾನ ಈಜು ಕೊಳ, ಶಿಕ್ಷಕ ಶಿಕ್ಷಕಿಯರ ಸೌಂದರ್ಯ, ಹವಾನಿಯಂತ್ರಿತ ವಾಹನಗಳು ಜೊತೆಗೆ ಮತ್ತೊಂದು ವಿಚಿತ್ರವೆಂದರೆ ಪೋಷಕರನ್ನು ಶಾಲೆಯಿಂದ ಎಷ್ಟು ದೂರ ನಿಲ್ಲಿಸಲಾಗುತ್ತದೆಯೋ ಅಷ್ಟು ಹೆಚ್ಚು ಹಣ ವಸೂಲಿ ಮಾಡಲಾಗುತ್ತದೆ. ಅಂದರೆ ಬಹುತೇಕ ಶಾಲೆಯ ಆವರಣದ ಒಳಗೆ ಪ್ರವೇಶ ನಿಷೇಧ. ಆ ಗೇಟಿನಿಂದ ಸಾಕಷ್ಟು ದೂರವೇ ನಿಲ್ಲಿಸಲಾಗುತ್ತದೆ. ಹೆಚ್ಚು ಹೆಚ್ಚು ನಿಯಮ ಶಿಸ್ತು ಹೆಚ್ಚು ಹೆಚ್ಚು ಹಣ ಪಡೆಯಲು ಅನಧಿಕೃತ ರಹದಾರಿ ಎಂಬ ಅಲಿಖಿತ ನಿಯಮವಿದೆ.
ಶಾಲೆಯ ಶಿಕ್ಷಕರನ್ನು ಎಷ್ಟೇ ತುರ್ತು ಇದ್ದರು ಭೇಟಿಯಾಗುವುದು ಕಷ್ಟ. ಕೆಲವು ದಿನಗಳ ಮೊದಲೇ ಪೂರ್ವ ನಿರ್ಧಾರಿತ ಅನುಮತಿ ಪಡೆದು ನಿರ್ದಿಷ್ಟ ಸಮಯದಲ್ಲಿ ಮಾತ್ರ ಭೇಟಿಗೆ ಅನುಮತಿ ಪಡೆಯಬೇಕು. ಇಲ್ಲದಿದ್ದರೆ ಪೋಷಕರು ಮತ್ತು ಶಿಕ್ಷಕರ ಮೀಟಿಂಗ್ ಸಂದರ್ಭದಲ್ಲಿ ಮಾತ್ರ ಅವಕಾಶ. ಶಾಲಾ ಮುಖ್ಯಸ್ಥರು ಅಥವಾ ಪ್ರಿನ್ಸಿಪಲ್ ಅವರನ್ನು ಭೇಟಿಯಾಗುವುದು ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಕಷ್ಟವಿದೆ. ಮಗು ತೀರಾ ಬುದ್ದಿವಂತ ಅಥವಾ ತೀರಾ ಗಲಾಟೆ ಸ್ವಭಾವದವನಾಗಿದ್ದರೆ ಮಾತ್ರ ಪ್ರಶಂಸೆ ನೀಡಲು ಅಥವಾ ಎಚ್ಚರಿಕೆ ನೀಡಲು ಪೋಷಕರನ್ನು ಪ್ರಿನ್ಸಿಪಲ್ ಭೇಟಿಯಾಗುತ್ತಾರೆ.
ಯಾವುದೇ ಖಾಸಗಿ ಶಾಲೆ ಇರುವ ಪ್ರದೇಶದಲ್ಲಿ ಜನ ಪ್ರತಿನಿಧಿಗಳು ಇರುತ್ತಾರೆ. ಕೆಲವು ವರ್ಷಗಳ ಹಿಂದೆ ಶಾಸಕರಗಳಿಗೆ ಅನಧಿಕೃತವಾಗಿ ಒಂದಷ್ಟು ಸೀಟುಗಳ ಕೋಟಾ ನಿಗದಿಯಾಗಿರುತ್ತಿತ್ತು. ಅದರಲ್ಲಿ ಕೆಲವರು ತಮ್ಮ ಹತ್ತಿರವಿರುವವರಿಗೆ ಕೊಡಿಸುತ್ತಿದ್ದರು ಕೆಲವೊಮ್ಮೆ ಮಾರಾಟ ಮಾಡಿಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರ ಮಾತು ಅಥವಾ ಪತ್ರಕ್ಕೆ ಕವಡೆ ಕಾಸಿನ ಬೆಲೆಯೂ ಇಲ್ಲ. ಯಾವುದೇ ಶಾಸಕ ಅಥವಾ ಮಂತ್ರಿಗಳ ಶಿಫಾರಸು ಪತ್ರಗಳಿಗೆ ಯಾವುದೇ ಮಾನ್ಯತೆ ಕೊಡುವುದಿಲ್ಲ.
ರಾಜಕಾರಣಿಗಳು ಅಥವಾ ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರೇ ಇತ್ತೀಚಿನ ದಿನಗಳಲ್ಲಿ ಶಾಲೆಗಳನ್ನು ನಡೆಸುತ್ತಿರುವುದರಿಂದ ಬಹುಶಃ ಈ ಸರ್ವಾಧಿಕಾರಿ ಧೋರಣೆ ಬೆಳೆಯುತ್ತಿರಬೇಕು. ಜೊತೆಗೆ ಭ್ರಷ್ಟಾಚಾರ - ಅಹಂಕಾರ - ಹಣದ ವ್ಯವಹಾರ - ಶ್ರೀಮಂತ ಪೋಷಕರ ಪ್ರತಿಷ್ಠೆಯ ಕಾರಣ ಸೃಷ್ಟಿಯಾಗಿರುವ ಬೇಡಿಕೆ ಹೀಗೆ ಅನೇಕ ಕಾರಣಗಳು ಇರಬಹುದು.
ಆದರೆ ಕನಿಷ್ಠ ಸೌಜನ್ಯ ಮರೆತು ದುರಹಂಕಾರದ ಪ್ರದರ್ಶನ ಮಾತ್ರ ಶಿಕ್ಷಣ ಕ್ಷೇತ್ರಕ್ಕೆ ಒಳ್ಳೆಯದಲ್ಲ. ಈ ನಾಡಿನ ಭೂಮಿ, ನೀರು, ಗಾಳಿ, ಮಾನವ ಸಂಪನ್ಮೂಲ, ಆಡಳಿತದ ಅನುಕೂಲ ಎಲ್ಲಾ ಉಪಯೋಗಿಸಿಕೊಂಡು ಜನಸಾಮಾನ್ಯರಿಗೆ ಗೌರವ ಕೊಡದೆ ಮಕ್ಕಳ ಮೇಲಿನ ಮೋಹದ ದುರುಪಯೋಗ ಮಾಡಿಕೊಂಡು ಶೋಷಿಸುವುದು ಅನ್ಯಾಯವಾಗುತ್ತದೆ. ಸರ್ಕಾರ ಇದರ ಮೇಲೆ ನಿಯಂತ್ರಣ ಸಾಧಿಸಲೇ ಬೇಕಾಗುತ್ತದೆ. ಖಾಸಗಿ ಎಂದ ತಕ್ಷಣ ಅವರು ಈ ನೆಲದ ಕಾನೂನು ಮೀರಿದವರಲ್ಲ. ಶಿಸ್ತಿನ ಹೆಸರಿನಲ್ಲಿ ಸರ್ವಾಧಿಕಾರ ಪ್ರಜಾಪ್ರಭುತ್ವದ ಮತ್ತು ಮಾನವೀಯ ಮೌಲ್ಯಗಳಿಗೆ ವಿರುದ್ಧ ನಡವಳಿಕೆಯನ್ನು ಪ್ರೋತ್ಸಾಹಿಸಬಾರದು.
ಶಿಕ್ಷಣ ಸಂಸ್ಥೆಗಳು ಪಡೆಯುವ ಫೀಜುಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರಬೇಕು. ಯೂನಿಫಾರ್ಮ, ಪುಸ್ತಕಗಳು, ಸಾರಿಗೆ ಮುಂತಾದ ವಿಷಯಗಳಲ್ಲಿ ಸಹ ಅವರು ಹಣ ಮಾಡುವ ವ್ಯವಸ್ಥೆ ರೂಪಿಸಿಕೊಂಡಿರುತ್ತಾರೆ. ಅದಕ್ಕೂ ಕಡಿವಾಣ ಹಾಕಬೇಕು. ಕೆಲವರು ಹೇಳಬಹುದು, ಅಂತಹ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಸೇರಿಸುವ ಬದಲು ಸರ್ಕಾರಿ ಶಾಲೆಗಳಿಗೆ ಸೇರಿಸಬಹುದಲ್ಲವೇ, ಅವರೇನು ನಿಮ್ಮನ್ನು ಬೇಡಿಕೊಳ್ಳುವುದಿಲ್ಲ. ಆಯ್ಕೆಯ ಸ್ವಾತಂತ್ರ್ಯ ನಿಮಗಿದೆಯಲ್ಲವೇ ಎಂದು.
ಆದರೆ ನಮ್ಮ ಸಾಮಾಜಿಕ ಮತ್ತು ಕೌಟುಂಬಿಕ ವ್ಯವಸ್ಥೆ ಆಧುನಿಕತೆಯ ಪರಿಣಾಮ ಪ್ರದರ್ಶಕ ಮನೋಭಾವ, ಅನುಕರಣೆಯ ಸ್ವಭಾವ, ಹೋಲಿಕೆಯ ಮನಸ್ಥಿತಿ ಇದಕ್ಕೆ ಅವಕಾಶ ಕೊಡುವುದಿಲ್ಲ. ಮಕ್ಕಳ ಮೇಲಿನ ಅತಿಯಾದ ಪ್ರೀತಿ, ಕೊಳ್ಳುಬಾಕ ಸಂಸ್ಕೃತಿ, ಹಣದ ಹರಿವು ಹೆಚ್ಚಿರುವುದು ಮುಂತಾದ ಕಾರಣಗಳಿಗಾಗಿ ಮಧ್ಯಮ ವರ್ಗದವರು ಸಹ ಪ್ರತಿಷ್ಠಿತ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಬಯಸುತ್ತಾರೆ. ಅದರಲ್ಲೂ ತಾಯಂದಿರು ತಮ್ಮ ಮಕ್ಕಳನ್ನು ದೊಡ್ಡ ದೊಡ್ಡ ಶಾಲೆಗಳಿಗೆ ಸೇರಿಸಲು ಒತ್ತಡ ಹೇರುತ್ತಾರೆ. ಎಷ್ಟೋ ಮನೆಗಳಲ್ಲಿ ಈ ವಿಷಯದಲ್ಲಿ ಗಲಾಟೆ ನಡೆದು ಹೊಂದಾಣಿಕೆ ಸಾಧ್ಯವಾಗದೆ ವಿಚ್ಚೇದನದ ಹಂತಕ್ಕೆ ಹೋಗಿದೆ. ಆ ವಾತಾವರಣವನ್ನು ಶಿಕ್ಷಣ ಸಂಸ್ಥೆಗಳು ದುರುಪಯೋಗ ಪಡಿಸಿಕೊಳ್ಳಲು ಆಡಳಿತ ವ್ಯವಸ್ಥೆ ಅವಕಾಶ ಕಲ್ಪಿಸಬಾರದು.
ಶಾಲೆಗಳು ಅತ್ಯಂತ ಪರಿಸರ ಸ್ನೇಹಿ ವಾತಾವರಣದಲ್ಲಿ, ಬಹಳ ಸರಳವಾದ ಕಟ್ಟಡದಲ್ಲಿ, ಸಾರ್ವಜನಿಕರಿಗೆ ಸುಲಭವಾಗಿ, ಕಡಿಮೆ ಹಣದಲ್ಲಿ ಪ್ರವೇಶ ಮತ್ತು ಮಾತುಕತೆಯ ಪರಿಸ್ಥಿತಿಯಲ್ಲಿ ( ರಕ್ಷಣಾತ್ಮಕ ಮುನ್ನೆಚ್ಚರಿಕೆ ಹೊರತುಪಡಿಸಿ ) ಉತ್ತಮ ಗುಣಮಟ್ಟದ ಶಿಕ್ಷಕರ ಸೇವಾ ಮನೋಭಾವದಲ್ಲಿ, ಮಾನವೀಯ ಮೌಲ್ಯಗಳ ಬೆಳವಣಿಗೆಯ ಪರಿಸರದಲ್ಲಿ ಕಾರ್ಯನಿರ್ವಹಿಸುವಂತಿರಬೇಕು.
ಸರ್ಕಾರಗಳು ಸಹ ಶಾಲೆಗಳ ಮೇಲೆ ಅಧಿಕ ವಾಣಿಜ್ಯದ ಒತ್ತಡಗಳನ್ನು ಹೇರದೆ, ಅವರಿಗೆ ನೀಡುವ ಅನುಮತಿಯ ಸಂದರ್ಭದಲ್ಲಿ ಲಂಚ ಪಡೆಯದೆ, ಅನಾವಶ್ಯಕ ಕಿರುಕುಳ ನೀಡದೆ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದರೆ ಶಿಕ್ಷಣ ಕ್ಷೇತ್ರ ಭವಿಷ್ಯದ ಭಾರತದ ನಿರ್ಮಾಣದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಇಲ್ಲದಿದ್ದರೆ ಇವರ ಈ ನಡವಳಿಕೆಗಳಿಗೆ ಕಡಿವಾಣ ಹಾಕದಿದ್ದರೆ ಭ್ರಷ್ಟಾಚಾರ ಮತ್ತಷ್ಟು ಹೆಚ್ಚಾಗುತ್ತದೆ. ಶಿಕ್ಷಣ ಮತ್ತು ಆರೋಗ್ಯದ ಈ ಅನಿಯಂತ್ರಿತ ಬೆಳವಣಿಗೆ ಮತ್ತು ಸರ್ವಾಧಿಕಾರಿ ಧೋರಣೆ ಇಡೀ ವ್ಯವಸ್ಥೆ ದಾರಿ ತಪ್ಪಲು ಮತ್ತು ಭ್ರಷ್ಟಾಚಾರ ಹೆಚ್ಚಾಗಲು ನೇರ ಕಾರಣವಾಗಿದೆ. ಒಟ್ಟಾರೆಯಾಗಿ ಶಿಕ್ಷಣದಿಂದ ಸಮಾಜ ಸುಧಾರಣೆ - ಸಮಾಜ ಸುಧಾರಣೆಯಿಂದ ಶಿಕ್ಷಣದ ಗುಣಮಟ್ಟ ಸುಧಾರಣೆ ಎರಡು ಒಂದೇ ಕಾಲಘಟ್ಟದಲ್ಲಿ ಜೊತೆ ಜೊತೆಗೆ ನಡೆಯಬೇಕು. ಎರಡನ್ನೂ ಪ್ರತ್ಯೇಕವಾಗಿ ನೋಡಲಾಗದು. ಈ ವರ್ಷದಿಂದಾದರೂ ಖಾಸಗಿ ಶಿಕ್ಷಣ ಸಂಸ್ಥೆಗಳು ರಿಯಲ್ ಎಸ್ಟೇಟ್ ರೀತಿಯ ಶಿಕ್ಷಣ ಕ್ರಮಗಳನ್ನು ಅನುಸರಿಸದೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ನೆನಪುಗಳನ್ನು, ಸ್ವಾತಂತ್ರ್ಯ ಹೋರಾಟದ ತ್ಯಾಗ ಬಲಿದಾನಗಳನ್ನು ನೆನಪು ಮಾಡಿಕೊಂಡು ಸೇವಾ ಮನೋಭಾವದ - ಜನ ಸ್ನೇಹಿ ಪ್ರವೇಶ ಪ್ರಕ್ರಿಯೆ ಪ್ರಾರಂಭಿಸಲಿ. ಶಾಲೆಗಳು ಆಸ್ಪತ್ರೆ ಅಥವಾ ಜೈಲುಗಳಾಗದೆ ನಮ್ಮ ಮಕ್ಕಳ ಮಾನವೀಯ ಮೌಲ್ಯಗಳು ಬೆಳವಣಿಗೆ ಹೊಂದುವ ಮಾರ್ಗದರ್ಶಕ ಕೇಂದ್ರಗಳಾಗಲಿ ಎಂದು ಆಶಿಸುತ್ತಾ....
-ವಿವೇಕಾನಂದ ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ