ಶೈಕ್ಷಣಿಕ ಹೊಸಘಟ್ಟದತ್ತ ಫಾತಿಮಾಗಳ ಕಲಿಕೊಡುಗೆಗಳು! (ಭಾಗ 1)

ಶೈಕ್ಷಣಿಕ ಹೊಸಘಟ್ಟದತ್ತ ಫಾತಿಮಾಗಳ ಕಲಿಕೊಡುಗೆಗಳು! (ಭಾಗ 1)

'ಫಾತಿಮಾ' ಎಂಬ ಹೆಸರು ನಮಗೆ ಕೇಳಸಿಗುತ್ತಿದ್ದಂತೆ ನಾವು ಪ್ರವಾದಿ(ಸ) ಅವರ ಪವಿತ್ರ ಸುಪುತ್ರಿಯವರನ್ನು ನೆನೆಯುದರಲ್ಲಿ ಸಂದೇಹವಿಲ್ಲ. ಆದರೆ, ಇದೊಂದು ಕೆಲವು ಇತರ ಫಾತಿಮಾಗಳ ರಚನಾತ್ಮಕತೆಗೆ, ಗುಣಾತ್ಮಕ ಮುಂದಾಲೋಚನೆಗೆ, ಶೈಕ್ಷಣಿಕ ಅಭ್ಯುದಯಕ್ಕೆ, ವೈಜ್ಞಾನಿಕ ಸೂಚ್ಯಂಕತೆಗೆ ಮತ್ತು ಶ್ಲಾಘ್ಯ ಸಾಧನೆಗಳಿಗೆ ಹೆಸರುವಾಸಿಯಾದವರ ಕುರಿತು ಒಂದು ಸಂಕ್ಷೀಪ್ತ ಅವಲೋಕನವಾಗಿದೆ.

ಚೊಚ್ಚಲ ವಿದ್ಯಾದೇಗುಲಕ್ಕೆ ಬುನಾದಿ ಹಾಕಿದ ಫಾತಿಮಾ : "ಉಮ್ಮ್ ಅಲ್-ಬನೈನ್" ಖ್ಯಾತಿಯ ಫಾತಿಮಾ ಬಿಂತ್ ಮುಹಮ್ಮದ್ ಅಲ್-ಫಿಹೃ ಅರಬ್ - ಖುರೇಷ್  ಮೂಲ - ವಂಶಸ್ಥೆಯಾಗಿದ್ದ, ಅವರು 859 A.Dಯಲ್ಲಿ ಮೊರಾಕೊದ ಫೆಝ್'ನಲ್ಲಿ ಅಲ್-ಖರಾವಿಯಿನ್ ಮಸೀದಿಯನ್ನು ಸ್ಥಾಪಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ತರುವಾಯ, ಅಲ್-ಖರಾವಿಯಿನ್ ಮಸೀದಿಯು ಜಗತ್ತಿನ ಪ್ರಪ್ರಥಮ ವಿಶ್ವವಿದ್ಯಾಲಯವಾಗಿ ಪರಿಷ್ಕರಣಗೊಂಡಿತು!

ಫಾತಿಮಾ ಫಿಹೃ ಕ್ರಿ.ಶ. 800ರ ಸುಮಾರಿಗೆ ಇಂದಿನ ಟುನೀಶಿಯಾದ ಕೈರೋವಾನ್ ಪಟ್ಟಣದಲ್ಲಿ ಜನಿಸಿದರು. ಅವರ ಕುಟುಂಬವು ಕೈರೋವಾನ್‌ನಿಂದ ಫೆಝ್'ಗೆ ವಲಸೆಗರಾಗಿ ವಾಸ್ತವ್ಯ ಮಾಡಿದರು. ಫಿಹೃ ಅವರ ಕುಟುಂಬವು ಜನ್ಮತಃ ಸಂಪದ್ಭರಿತವಾಗದಿದ್ದರೂ, ಅವರ ತಂದೆ - ಮೊಹಮ್ಮದ್ ಅಲ್-ಫಿಹೃಯವರು ವಾಣಿಜ್ಯ ಕ್ಷೇತ್ರದಲ್ಲಿ ಯಶಸ್ವಿಭವರಾಗಿ ಸಿರಿವಂತರಾದರು. ಅಲ್ ಫಿಹೃ ಇಹಲೋಕ ತ್ಯಜಿಸಿದರಿಂದ, ಶ್ರೀಯುತರು ಗಳಿಸಿದ ಧನಿಕತೆ ಫಾತಿಮಾ ಮತ್ತು ಅವರ ಸಹೋದರಿ ಮೇರಿಯಮ್ ಆನುವಂಶಿಕವಾಗಿ ಪಡೆದರು. ಫಾತಿಮಾ ಫಿಹೃ ಅವರ ವಿಫಲ ವಿವಾಹವೂ, ಅವರ ಪತಿಯ ನಿಧನದೊಂದಿಗೆ ಲಗ್ನ ಬದುಕು ಪತನಗೊಂಡಿತು.

ಫಾತಿಮಾ ಮತ್ತು ಅವರ ಸಹೋದರಿ ಮರ್ಯಮ್ ಸುಶಿಕ್ಷಿತರಾಗಿದ್ದರು: ಇಸ್ಲಾಮಿ ನ್ಯಾಯಶಾಸ್ತ್ರ, ಫಿಕ್ಹ್, ಸೀರತ್ ಎ ನಬ್ವಿ [ಜೀವನಚರಿತ್ರೆ] ಮತ್ತು ಹದೀಸ್ ಸಾಹಿತ್ಯದಲ್ಲಿ ಗಾಢ ಅಧ್ಯಯನ ನಡೆಸಿ ಪಾಂಡಿತ್ಯ ಹೊಂದಿದ್ದರು. ಇಬ್ಬರು ಸಹೋದರಿಯರು ಫೇಝ್'ನಲ್ಲಿ ಬೃಹತ್ ಮಸೀದಿ: ಫಾತಿಮಾ ಅಲ್-ಖರಾವಿಯಿನ್ ಮಸೀದಿಯನ್ನು ಮತ್ತು ಮರಿಯಮ್ ಅಲ್-ಅಂದಲುಸಿ ಮಸೀದಿಯನ್ನು ಸ್ಥಾಪಿಸಿದರು. ನಿರ್ಮಾಣದ ಯೋಜನೆಯನ್ನು ಸ್ವತಃ ಫಾತಿಮಾ ಅವರೇ ನೋಡಿಕೊಳ್ಳುತ್ತಿದ್ದರು.

ಮುಸ್ಲಿಮರು ಕುಟುಂಬ ಸಮೇತ ವಲಸೆ ಬಂದಿರುವುದರಿಂದ, ಅವರಿಗೆ ತಮ್ಮ ಮತಶ್ರದ್ಧೆಯನ್ನು ಆಚರಿಸಲು ಮತ್ತು ಧರ್ಮಶಾಸ್ತ್ರವನ್ನು ಅಧ್ಯಯನ ಮಾಡಲು ಉತ್ಸುಕರಾಗಿರುವ ಭಕ್ತಾದಿಗಳಾದ ವಲಸಿಗರನ್ನು ಒಟ್ಟುಗೂಡಿಸುವ ಅಂಶದಿಂದ ಈ ಕಲ್ಪನೆಯನ್ನು ಸಹೋದರಿಯರಲ್ಲಿ ಉದಿತಗೊಂಡಿತು. ವಲಸಿಗರು ಅಪಾರ ಸಂಖ್ಯೆಯಲ್ಲಿದ್ದರು ಮತ್ತು ಅವರಿಗೆ ಸೇವೆಸಲ್ಲಿಸಲು ಸಾಕಷ್ಟು ಸ್ಥಳಾವಕಾಶ, ಸಂಪನ್ಮೂಲಗಳು ಅಥವಾ ಶಿಕ್ಷಕರಿರಲಿಲ್ಲ. ಹಾಗಾಗಿ, ಅಲ್-ಖರಾವಿಯಿನ್ ಮಸೀದಿಯನ್ನು ತರುವಾಯ ಅಲ್-ಫಿಹೃ ಅವರ ನೇತೃತ್ವದಡಿಯಲ್ಲಿ ಬೋಧನಾ ಸಂಸ್ಥೆಯಾಗಿ ಅಭಿವೃದ್ಧಿಗೆ ಒಳಪಡಿಸಲಾಗಿ, ಜಗತ್ತಿನ ಪ್ರಥಮ ವಿಶ್ವವಿದ್ಯಾಲಯವಾಯಿತು. ಅಲ್-ಫಿಹೃ ಅವರ ಅಲ್-ಖರಾವಿಯಿನ್ ಮಸೀದಿಯ ಕಟ್ಟಡದಲ್ಲಿ ಮದ್ರಸ, ಗ್ರಂಥಾಲಯ ಒಳಗೊಂಡಂತೆ ವಸತಿಗ್ರಹವೂ ಸೇರಿತ್ತು. 

ಇಬ್ನ್ ಅಬಿಝ್ರ ಅವರ ಪ್ರಕಾರ, ಫಾತಿಮಾ ತಮ್ಮ ತೀರ್ಥರೂಪವರಿಂದ ಪಡೆದ ಸಂಪತ್ತನ್ನು ಅಲ್-ಖರಾವಿಯಿನ್ ಮಸೀದಿಯನ್ನು ನಿರ್ಮಿಸಲು ಬಳಸಿದರು ಮತ್ತು ಉಳಿದ ಸಂಪತ್ತನ್ನು ವಲಸೆ ಬಂದವರ ಸೇವೆಯಲ್ಲಿ ಖರ್ಚಿಸಲಾಯಿತು. ಫಾತಿಮಾ ಅಲ್ ಫಿಹೃ ಅವರು 845 A.Dಯಲ್ಲಿ ರಾಜ ಯಾಹ್ಯಾ ಇಬ್ನ್ ಮುಹಮ್ಮದ್ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಿಸಲಾದ ಮಸೀದಿಯನ್ನು ಖರೀದಿಸಿದರು ಮತ್ತು ಅದರ ವಿಸ್ತಾರವನ್ನು ದ್ವಿಗುಣಗೊಳಿಸಿದರು.

ಮೊರೊಕನ್ ಇತಿಹಾಸಕಾರ ಅಬ್ದುಲ್ ಹಾದಿ ಅಲ್ ತಾಜಿ ಅವರು, ಅಲ್-ಫಿಹ್ರಿಯವರು ಯೋಜನೆಯು ಪೂರ್ಣಗೊಳ್ಳುವವರೆಗೆ ಉಪವಾಸ ವೃತ ಆಚರಿಸುತ್ತಿದ್ದರು ಮತ್ತು ಮುಗಿದ ನಂತರ, ಅವರು ಒಳಗೆ ಹೋಗಿ ಅಲ್ಲಾಹನ ಧನ್ಯರಾಗಿ ಆರಾಧನೆ ನಡೆಸಿದರು ಎಂದು ಇತಿಹಾಸದ ಪುಟಗಳಲ್ಲಿ ಸೆರೆಯಾಗಿದೆ ಎಂದು ಬರೆಯುತ್ತಾರೆ. ಇತಿಹಾಸದ ಅನುಗುಣವಾಗಿ, ಫಾತಿಮಾ ಅವರ ಸಹೋದರಿ ಮರಿಯಮ್ ಫಿಹೃ ಅವರು ಅದೇ ವರ್ಷ (859 A.D)ಯಲ್ಲಿ  ನದಿಯಾಚೆ ಜಿಲ್ಲೆಯಲ್ಲಿ ಇದೇ ರೀತಿಯ ಮಗದೊಂದು ಮಸೀದಿಯನ್ನು ಸ್ಥಾಪಿಸಿದರು; ಸ್ಥಳೀಯ ಆಂದಲೂಸಿಯನ್ ಗಿರಿಜನಗಳ ನೆರವಿನಿಂದ ಇದು "ಅಲ್-ಅಂದಲುಸಿಯಿನ್" ಮಸೀದಿ ಎಂದು ಕರೆಯಲ್ಪಟ್ಟಿತು.

***

ಹದೀಸ್ ಕಲಿಕೊಡುಗೆ ಕರುಣಿಸುತ್ತಿದ್ದ ಫಾತಿಮಾ : ಫಾತಿಮಾ ಬಿಂತ್ ಇಬ್ರಾಹಿಂ ಅಲ್-ಬತೈಹಿಯಾ 8ನೇ ಶತಮಾನದಲ್ಲಿ ಹದೀಸ್ ಸಾಹಿತ್ಯದಲ್ಲಿ ಪಾಂಡಿತ್ಯ ಹೊಂದಿದ್ದ ಮುಸ್ಲಿಂ ವಿದ್ವಾಂಸರಾಗಿದ್ದರು. ಅಲ್-ಬತೈಹಿಯಾ ಅವರು ಬದುಕಿನುದ್ದಕ್ಕೂ ಡಮಾಸ್ಕಸ್‌ನಲ್ಲಿ ಸಹಿಹ್ ಬುಖಾರಿಯ ಹದೀಸ್'ಗಳನ್ನು ಜನಸಾಮಾನ್ಯರಿಗೆ ಕಲಿಸಿಕೊಡುತ್ತಿದ್ದರು.

ಅವರು ತಮ್ಮ ಅವಧಿಯ ಶ್ರೇಷ್ಠ ವಿದ್ವಾಂಸರಲ್ಲಿ ಒಬ್ಬರೆಂದು ಹೆಸರುವಾಸಿಯಾಗಿದ್ದರು; ವಿಶೇಷತಃ ಹಜ್ ಸಮಯದಲ್ಲಿ ಅಂದಿನ ಪ್ರಮುಖ ಪುರುಷ ವಿದ್ವಾಂಸರು ಬಹುದೂರದಿಂದ ಆಕೆಯ ಉಪನ್ಯಾಸಗಳನ್ನು ಆಲಿಸಲು ಬರುತ್ತಿದ್ದರು. ಅವರು ವಯಸ್ಸಾದಾಗ, ಮದೀನಾಕ್ಕೆ ತೆರಳಿ, ಪ್ರವಾದಿಯ ಮಸೀದಿ[ಮಸ್ಜಿದ್ ಎ ನಬ್ವಿ]ಯಲ್ಲಿಯೇ ತಮ್ಮ ವಿದ್ಯಾರ್ಥಿಗಳಿಗೆ ದಿನಗಟ್ಟಲೆ ಪ್ರವಚನ ನಡೆಸುತ್ತಿದ್ದರು.

(ಇನ್ನೂ ಇದೆ)

ಚಿತ್ರ: ಫಾತಿಮಾ ಫಿಹ್ರಿ ನಿರ್ಮಿಸಿದ ಖವರ್ರಿನ್ ವಿಶ್ವವಿದ್ಯಾಲಯ

-ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು.