ಶೋಭಾ ಕರಂದ್ಲಾಜೆ ಎಂಬ ಮಹಿಳಾ ಬಲಿಪಶು

ಶೋಭಾ ಕರಂದ್ಲಾಜೆ ಎಂಬ ಮಹಿಳಾ ಬಲಿಪಶು

ಬರಹ

ಎಚ್ಚರಗೊಳಲಿಲ್ಲ ಮನವೆ ಹುಚ್ಚನಾದೆನಲ್ಲ
ಅಚ್ಚಿನೊಳಗೆ ಮೆಚ್ಚು, ಮೆಚ್ಚಿನೊಳಗೆ ಅಚ್ಚು
ಕಿಚ್ಚೆದ್ದು ಹೋಯಿತಲ್ಲ...


ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಾಜಿ ಸಚಿವೆ ಶೋಭಾ ಕರಂದ್ಲಾಜೆಯವರು ರಾಜಿನಾಮೆಯನ್ನು ಕೊಟ್ಟ ದ್ದಾಯಿತು, ಕೇಂದ್ರ ವಸ್ತುವಾಗಿರುವ ಯಡಿಯೂರಪ್ಪನವರ ಸಾಧನೆಗೆ ಮತ್ತೊಂದು ಗರಿ ಬಂತು, ಅಂತು ಇಂತು ಬಿಜೆಪಿಯ ಹದಿನಾಲ್ಕು ದಿನಗಳ ಬೀದಿ ನಾಟಕದಲ್ಲಿ ಒಂದು ಮಹಿಳಾ ಬಲಿಪಶುವಿನ ಮೂಲಕ ನಾಟಕ ಅಂತ್ಯಗೊಂಡಿತು. ಆದರೆ ಇಲ್ಲಿ ಎಲ್ಲರ ಮನದಲ್ಲೂ ಮೂಡುವ ಪ್ರಶ್ನೆ ಒಂದೇ "ಶೋಭಾ ಕರಂದ್ಲಾಜೆ ಮಾಡಿದ ತಪ್ಪೇನು? "


ಶೋಭಾ ಸಿಕ್ಕ ಸಿಕ್ಕ ಮಾಧ್ಯಮಗಳಲೆಲ್ಲಾ ಪ್ರಶ್ನಿಸುತ್ತಿದ್ದಾರೆ ’ನಾನು ಮಾಡಿದ ತಪ್ಪೇನು?’


ನಾವು ಕೂಡಾ ನಮ್ಮಲ್ಲೇ ಪ್ರಶ್ನಿಸಿಕೊಳ್ಳುತ್ತಿದ್ದೇವೆ ’ಶೋಭಾ ಮಾಡಿದ ತಪ್ಪಾದರೂ ಏನು?’
ನಮ್ಮ ರಾಜ್ಯ ಸಚಿವ ಸಂಪುಟದಲ್ಲಿ ಮುವತ್ತಮೂರು ಜನ ಸಚಿವರಿದ್ದಾರೆ. ಅದರಲ್ಲಿರುವ ಏಕೈಕ ಮಹಿಳಾ ಸಚಿವೆ ಶೋಭಾ ಕರಂದ್ಲಾಜೆ. ರಾಜ್ಯದ ಮೂರು ಕೋಟಿ ಮಹಿಳೆಯರ ಪ್ರತಿನಿಧಿ. ಆದರೂ ಆಕೆಯ ರಾಜಿನಾಮೆಯ ಬಗ್ಗೆ ಒಂದೇ ಒಂದು ಮಹಿಳಾ ಧ್ವನಿಯಿಲ್ಲ ಯಾಕೆ? ಆಕೆಯ ರಾಜಿನಾಮೆ ಪಡೆಯಬಾರದು ಎಂದು ಆಕೆ ಪ್ರತಿನಿಧಿಸುತ್ತಿರುವ ಯಶವಂತಪುರದ ಒಂದಷ್ಟು ಜನ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದರು. ಅಲ್ಲಿಯೂ ಮಹಿಳೆಯರ್ಯಾರೂ ಕಾಣಿಸಲಿಲ್ಲ. ಹೋಗಲಿ ಅವರ ಊರಿನ ಜನರಾದರೂ ಪ್ರತಿಕ್ರಿಯಿಸಿದರಾ ಅದೂ ಇಲ್ಲ.


ಯಾಕೆಂದರೆ ಆಕೆ ಹಿಂದಿನಂತಿಲ್ಲ; ಆಕೆಗೆ ಅಹಂಕಾರ ಬಂದಿದೆ ಎಂಬುದು ಅವರೆಲ್ಲರ ಆಪಾದನೆ.
’ಶೋಭಾ ಸೂಪರ್ ಸಿಎಂ ತರಹ ವರ್ತಿಸುತ್ತಾರೆ ಎಂದೆಲ್ಲಾ ಬಿರುದುಗಳು, ಪುಕ್ಕಟ್ಟೆಯಾಗೆ ಸಿಕ್ಕಿದವು,
ಅಹಂಕಾರ ಮತ್ತು ಸ್ವಾಭಿಮಾನದ ಮಧ್ಯೆ ಬಹಳ ತೆಳುವಾದ ಗೆರೆಯಿರುತ್ತದೆ. ಮಹಿಳೆಯ ಸ್ವಾಬಿಮಾನ ಪುರುಷನ ಕಣ್ಣಿಗೆ ಅಹಂಕಾರವಾಗಿ ಏಕೆ ಕಾಣಿಸುತ್ತದೆ ಅದು ಅರಿವಿನಾಚೆಗಿನ ಪ್ರಶ್ನೆ? ಇನ್ನೂ ಶೋಭಾರವರು ಸ್ವಾಬಿಮಾನಿ. ಇದು ಅವರ ಹುಟ್ಟುಗುಣ ಇರಬಹುದು.


ಶೋಭಾ ರೈತಾಪಿ ಮನೆತನದಲ್ಲಿ ಹುಟ್ಟಿದ ಒಬ್ಬ ಸಾಮಾನ್ಯ ಹೆಣ್ಣುಮಗಳು. ಅವಿಭಜಿತ ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನ ಚಾರ್ವಾಕ ಗ್ರಾಮ ಒಂದು ಸಾಧಾರಣ ಹಳ್ಳಿ. ಸಮಸ್ಯೆಗಳನ್ನೆ ಎದುರಿಸುತ್ತಾ ಬೆಳೆದವರಿಗೆ, ಸಮಾಜ ಸೇವೆ ಮಾಡುವ ಹಂಬಲ ಅದೇ ನಿಟ್ಟಿನಲ್ಲಿ ಅವರ ಕಾರ್ಯ ಅವರನ್ನು ರಾಜಕೀಯಕ್ಕೆ ಎಳೆದು ತಂದಿತು.


ಆಕೆಯ ಮೇಲೆ ಭ್ರಷ್ಟಾಚಾರದ ಆರೋಪಗಳಿಲ್ಲ, ಹಗರಣಗಳಿಲ್ಲ. ಇಲಾಖೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ದೂರುಗಳಿಲ್ಲ. ಹೈಕಮಾಂಡ್ ಆಕೆಯ ರಾಜಿನಾಮೆ ಕೇಳುವಾಗ ಅದಕ್ಕೆ ಕಾರಣಗಳನ್ನೇ ನೀಡಿಲ್ಲ.ಆದರೂ ಆಕೆಯ ರಾಜಿನಾಮೆಗಾಗಿ ಏಕಕಾಲದಲ್ಲಿ ಬೆಂಗಳೂರು, ಹೈದರಾಬಾದ್ ಮತ್ತು ದೆಹಲಿ ರಂಗಮಂದಿರಗಳಲ್ಲಿ ನಡೆದ ನಾಟಕದ ಫಲಶ್ರುತಿಯೆಂದರೆ ಶೋಭಾ ದುರಂತನಾಯಕಿಯಾಗಿ ಹೊರ ಹೊಮ್ಮಿದಳು.ಈ ನಾಟಕದಲ್ಲಿ ’ಮೇಲ್ ಇಗೋ’ ತನ್ನ ಕೆಲಸ ಮಾಡಿರುವುದಂತು ನಿಜ,ಅದಕ್ಕೆ ಕಾರಣವಾದದ್ದು ಆಕೆಯ ಕೆಲಸದ ವೈಖರಿ; ತನ್ನ ಖಾತೆಯ ಸಮರ್ಥ ನಿರ್ವಹಣೆ.


ಅಂತಹ ದೌರ್ಬಲ್ಯವೊಂದು ಶೋಭನಲ್ಲಿತ್ತೆ?


ಎಲ್ಲಾ ಸಚಿವರ ಖಾತೆಗಳಲ್ಲಿ ಮೂಗು ತೂರಿಸುತ್ತಾರೆ ಎಂದು ಶಾಸಕರೊಬ್ಬರು ಆರೋಪಿಸುತ್ತಾರೆ; ಸಚಿವರಲ್ಲ. ಮುಖ್ಯಮಂತ್ರಿಗಳ ಬಳಿಗೆ ಬರುವ ಫೈಲುಗಳನ್ನೆಲ್ಲಾ ಅವರು, ’ಶೋಭಾ ಒಮ್ಮೆ ನೋಡಿ ಬಿಡಲಿ’ ಅನ್ನುತ್ತಿದ್ದರಂತೆ.ಅದಕ್ಕೆ ಕಾರಣವಾದದ್ದು ಆಕೆಯ ಕೆಲಸದ ವೈಖರಿ ಅವರನ್ನು ಆ ರೀತಿ ಅವಲಂಬಿಸುವಂತೆ ಮಾಡಿರ ಬಹುದು.


ಸ್ವಸಾಮರ್ಥ್ಯದಿಂದ ತನ್ನ ಕೇತ್ರದಲ್ಲಿ ಹಂತ ಹಂತವಾಗಿ ಮೇಲೆರುತ್ತಿರುವ ಮಹಿಳೆಯನ್ನು ಪ್ರಪಾತಕ್ಕೆ ದೂಡಿಬಿಡಲು ಏನು ಮಾಡಬೇಕು? ಅವಳ ಚಾರಿತ್ಯವಧೆ ಮಾಡಿದರಾಯ್ತು.ಇಲ್ಲಿ ಎರಡೂ ಆಗಿದೆ. ಶೋಭಾಳ ಚಾರಿತ್ರ್ಯ ವಧೆಯನ್ನು ಕೇವಲ ರೆಡ್ಡಿ ಬಣದವರು ಮಾತ್ರ ಮಾಡಲಿಲ್ಲ. ಮುಖ್ಯಮಂತ್ರಿಗಳು ಅದಕ್ಕೆ ತುಪ್ಪ ಎರೆದಿದ್ದಾರೆ. ಆಕೆಯ ರಾಜಿನಾಮೆಯನ್ನು ಪಡೆದುಕೊಳ್ಳುವ ಸಂದರ್ಭ ಬಂದಾಗ ಸಾರ್ವಜನಿಕವಾಗಿ ಕಣ್ಣೀರು ಹಾಕಿ ಮುಖ್ಯಮಂತ್ರಿ ಘನತೆಗೆ ಕುಂದು ತಂದಿದ್ದಾರೆ. ತನ್ನ ದೌರ್ಬಲ್ಯವನ್ನು ಜಗಜ್ಜಾಹಿರುಗೊಳ್ಸಿದ್ದಾರೆ. ಅಷ್ಟಿದ್ದರೆ ಅವರು ಆಕೆಯನ್ನು ಸಂಪುಟದಿಂದ ಕೈ ಬಿಡಲೇಬಾರದಿತ್ತು. ಅಧಿಕಾರದಾಸೆ ಎಲ್ಲಾ ಸಂಬಂಧಗಳನ್ನು ಗೌಣವಾಗಿಸುತ್ತದೆ. ರಾಜಿನಾಮೆ ಸಂದರ್ಭದಲ್ಲಿ ಶೋಭಾ ತೋರಿದ ಸಂಯಮದಲ್ಲಿ ಒಂಚೂರಾದರೂ ಮುಖ್ಯ ಮಂತ್ರಿಗಳು ತೋರಿದ್ದರೆ ನಗುವವರ ಮುಂದೆ ಎಡವಿ ಬಿದ್ದಂತಾಗುತ್ತಿರಲಿಲ್ಲ.


ಅವರಿಬ್ಬರ ನಡುವೆ ಯಾವ ರೀತಿಯ ಸಂಬಂಧವಿದೆಯೋ ಅದು ನಮಗೆ ಗೊತ್ತಿಲ್ಲ. ಅದನ್ನು ತಿಳಿದುಕೊಳ್ಳುವ ಅಗತ್ಯವೂ ನಮಗಿಲ್ಲ. ಆದರೆ ಸಾರ್ವಜನಿಕ ಬದುಕಿನಲ್ಲಿರುವವರು ತಮ್ಮ ನಡವಳಿಕೆಯನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಯಾಕೆಂದರೆ ಅವರು ಹಲವು ಜನರಿಗೆ ಮಾದರಿಗಳಾಗಿರುತ್ತಾರೆ.


ಶೋಭಾ ಮಾಧ್ಯಮವನ್ನು ಎದುರಿಸಿದ ರೀತಿಯಲ್ಲೇ ಗೊತ್ತಾಗುತ್ತದೆ; ಆಕೆ ಸ್ವಾಬಿಮಾನದ ದಿಟ್ಟ ಹೆಣ್ಣು ಮಗಳು. ಆಕೆಯಲ್ಲಿ ಆತ್ಮ ವಿಶ್ವಾಸ ತುಂಬಿ ತುಳುಕುತ್ತಿತ್ತು. ಪತ್ರಕರ್ತರ ಪ್ರಶ್ನೆಗಳಿಗೆ ಅಳುಕಿಲ್ಲದೆ ಉತ್ತರಿಸುತ್ತಿದ್ದರು. ಕಾಂಟ್ರವರ್ಸಿ ಆಗಬಹುದಾಗಿದ್ದ ಪ್ರಶ್ನೆಗಳಿಗೆ ’ನನಗೆ ಗೊತ್ತಿಲ್ಲ, ನನ್ನಲ್ಲೂ ಆ ಪ್ರಶ್ನೆ ಇದೆ, ಯಾಕೆ ಅಂತಹ ಗೊತ್ತಾಗ್ಲಿಲ್ಲ, ’ಅದು ಹಿರಿಯರ ತೀರ್ಮಾನ...’ ಎಂಬ ಜಾಣತನದ ಉತ್ತರಗಳನ್ನು ನೀಡಿ ಜಾರಿಕೊಳ್ಳುತ್ತಿದ್ದರು. ಆದರೆ ಅತ್ತ ರೆಡ್ಡಿಬಣ್ಣದವರು ಸಂಸರೆ ಸದಸ್ಯೆ ಶಾಂತಳನ್ನು ಹೋಲಿಸಿ ನೋಡಿದಾಗ ’ನಾಲಗೆ ಕುಲವನರುಹಿತು’ ಎಂದು ಇಂತಹ ಸಂದರ್ಭವನ್ನು ನೋಡಿಯೇ ಬರೆದಿರಬೇಕೆನಿಸುತ್ತದೆ.


ಹೆಣ್ಣೆನ ತಪ್ಪುಗಳನ್ನು ಜಗತ್ತಿಗೆ ಅರಿವಾಗುವಂತೆ ಮಾಡುತ್ತಾ, ಗಂಡಸಿನ ತಪ್ಪನ್ನು ಮಂದಲಿಗೆಯ ಕೆಳಗೆ ಮಡಿಚಿಡುವ ಪದ್ದಿತಿ ಇನ್ನೂ ನಿಂತಿಲ್ಲ, ಅದು ಸಂಸಾರವಾದರೇನು ಅಥವಾ ರಾಜಕೀಯ ವಾದರೇನು, ಎಲ್ಲ ಕಡೆಯಲ್ಲೂ ತ್ಯಾಗ ಮಾತ್ರ ಹೆಣ್ಣೆಗೆ ಮೀಸಲು, ಬಿಜೆಪಿಯ ರಾಜ್ಯ ಸಂಸಾರ ಉಳಿಸಲು ಶೋಭಾ ಕರಂದ್ಲಾಜೆ ಎಂಬ ಮಹಿಳೆಯಂತು ಬಲಿಪಶು ಆಗಿದ್ದಾಯಿತು,


ಇತ್ತೀಚೆಗೆ ನಡೆದ ಪ್ರಿಯಾಂಕ & ಆನಂದ ಪ್ರಕರಣದಲ್ಲಿ ನಮ್ಮ ಮಹಿಳಾ ಸಮಾಜದವರು ವಹಿಸಿದ ಕಾಳಜಿಯಲ್ಲಿ ಒಂದು ಭಾಗವನ್ನಾದರು ಇಲ್ಲಿ ತೋರಿಸ ಬಹುದಿತ್ತು. ಬಹುಶಃ ಇವರಿಗೂ ರೆಡ್ಡಿ ಬಣದವರ ಬಗ್ಗೆ ಭಯವಿರ ಬಹುದು.


ರೆಡ್ಡಿ ಬಳಗ ಚಕ್ರವ್ಯೂಹವನ್ನೇನೋ ಎಣೆದಿದೆ ಅದನ್ನೆಲ್ಲಾ ಕೊಡವಿಕೊಂಡು ಎದ್ದು ನಿಲ್ಲುವ ಶಕ್ತಿ ಆಕೆಗೆ ನಮ್ಮ ಸಮಾಜ ನೀಡಬೇಕಿದೆ.


ಯೋಗವು ಬಂತಲ್ಲ, ಬದುಕು ವಿಭಾಗವಾಯಿತಲ್ಲ
ಭೋಗಿಶಯನ ಶ್ರೀ ಪುರಂದರ ವಿಠಲನ‌
ಆಗ ನೆನೆಯಲಿಲ್ಲ .....


“HOPE FOR THE BEST “


ಇನ್ನಾದರೂ ನಮ್ಮ ಸಮಾಜದಲ್ಲಿ ಮಹಿಳೆಯರು ಬಲಿಪಶುವಾಗುವುದನ್ನು ನಿಲ್ಲಿಸಲಿ ಎಂದೂ,
ವಿಶ್ವ ಗಂಡಸರ ದಿನವನ್ನೂ ಆಚರಿಸಿ ಕೊಂಡವರಿಗೆ ಈ ಲೇಖನವನ್ನೂ ಅರ್ಪಿಸಲಿಚ್ಚಿಸುತ್ತೇನೆ.
.
.
.
.
.
.
.
.
ಈ ನಿಟ್ಟಿನಲ್ಲಿ ಇದು ನನ್ನ ಮೊದಲ ಬರವಣೆಗೆ ಹಲವು ಸಂಗ್ರಹ ಗಳನ್ನೂ ಓದಿ ನನ್ನದೇ ಆದ ಶೈಲಿಯಲ್ಲಿ ಬರಿದಿದ್ದೇನೆ , ತೀರ ಮೊನಚಾಗಿ ಬರೆಯುವ ಆಸೆ ಇತ್ತು. ಆದರೆ ಪ್ರಥಮ ಪ್ರಯತ್ನಂ ದಂತ ಭಗ್ನಂ ಎಂದಾಗ ಬಾರದೆಂದು ತಿಳಿಯಾಗಿಸಿದ್ದೇನೆ ,ಉಳಿದದ್ದು ಓದುಗರಿಗೆ ಬಿಟ್ಟದ್ದು.