ಶೋಷಿತರ ದನಿ ಡಾ.ಚನ್ನಬಸವ ಪಟ್ಟದೇವರು
ವೈಚಾರಿಕ ಚಿಂತಕರು, ನೂತನ ಅನುಭವ ಮಂಟಪದ ರೂವಾರಿ, ಕಾಯಕ ನಿಷ್ಠೆ-ದಾಸೋಹ ಮನೋಧರ್ಮದ ಕರುಣಾ ಮೂರ್ತಿ, ಅನಾಥರ - ನೊಂದವರ ದನಿ, ಅವರ ಬಾಳಿನ ಬೆಳಕು,ಗಡಿ ಭಾಗದಲ್ಲಿ ಕನ್ನಡ ಉಳಿಸಿ - ಬೆಳೆಸಿದ ಕನ್ನಡ ಭಾಷಾ ಪ್ರೇಮಿ,ವಚನ ಸಾಹಿತ್ಯ ತತ್ವಗಳನ್ನು ಸಾಗರದಾಚೆಗೂ ಕೊಂಡೊಯ್ದ ಮೇಧಾವಿ ಸಂತರ ಸಂತ, ಸರಳತೆಯನ್ನು ಮೈಗೂಡಿಸಿಕೊಂಡ ಸ್ನೇಹ ಜೀವಿ, ಸರ್ವರನ್ನೂ ಸಮಾನತೆಯಿಂದ ಕಂಡ ಸಮತಾವಾದಿ, ನುಡಿದಂತೆ ನಡೆದು, ಜಗತ್ತಿಗೆ ಮಾದರಿಯಾಗಿ ಬದುಕಿ, ಇತರರಿಗೆ ಆದರ್ಶ ಚೇತನರಾಗಿ ಬಾಳಿದ ನಮ್ಮ ಹೆಮ್ಮೆಯ ಕಲ್ಯಾಣದ ಪ್ರಜ್ವಲ್ ಜ್ಯೋತಿ ಭಾಲ್ಕಿ ಹಿರೇಮಠ ಸಂಸ್ಥಾನದ ಪರಮ ಪೂಜ್ಯ ಡಾ. ಚನ್ನಬಸವ ಪಟ್ಟದೇವರ ನಿಸ್ವಾರ್ಥ ಸೇವೆ ಅನನ್ಯವಾದುದು.
ಪರಮ ಪೂಜ್ಯ ಡಾ.ಚನ್ನಬಸವ ಪಟ್ಟದೇವರನ್ನು 21ನೇಯ ಶತಮಾನದ ಮಾಹಾಶಿವಶರಣರು, ಸಾಮಾಜಿಕ ಸಮಾನತೆ, ದೀನ ದಲಿತರ, ಶೋಷಿತರ, ಬಡವರ - ನೊಂದವರ ದನಿಯಾಗಿ ಹಗಲಿರುಳು ದುಡಿದು, ಬಸವಾದಿ ಶರಣರ ಹಾದಿಯಲ್ಲಿ ಸಾಗುವ ಕಾಯಕವನ್ನು ನಿತ್ಯ ನಿರಂತರವಾಗಿ ಮಾಡಿಕೊಂಡು ಬಂದಿರುತ್ತಾರೆ. ಅಂತೆಯೇ ಗಡಿಭಾಗದಲ್ಲಿ ಕನ್ನಡ ಭಾಷೆ ಅವನತಿಯ ಹಂತದಲ್ಲಿ ಇದ್ದಾಗ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಇವರ ಶ್ರಮ ದೊಡ್ಡದು. ಕನ್ನಡತನವನ್ನು ಸಂರಕ್ಷಣೆ ಮಾಡಿ,ಕನ್ನಡ ಭಾಷೆಗೆ ಹೊಸ ಆಯಾಮ ನೀಡಿದವರು. ಕನ್ನಡ ಭಾಷಾ ಸಾಹಿತ್ಯ ಲೋಕಕ್ಕೆ ಮರೆಯಲಾಗದ ಹೃದಯಸ್ಪರ್ಶಿ ಸೇವೆಯನ್ನು ಸಲ್ಲಿಸಿದ್ದಾರೆ.ಕನ್ನಡವನ್ನು ವಿಶ್ವ ಭಾಷೆಗಳಿಗೆ ಸಮಾನವಾಗಿ ಬೆಳೆಸುವ ನಿಟ್ಟಿನಲ್ಲಿ ಇವರ ಅನುಪಮ ಸೇವೆ ಎಂದೆಂದಿಗೂ ಮರೆಯಲಾಗದು.
ಕಲ್ಯಾಣ ಕರ್ನಾಟಕ : ಈ ಭಾಗದ ವಿಮೋಚನೆಗಾಗಿ ಸಹ ಹೋರಾಟ ಮಾಡಿದಾರೆ. ಕರ್ನಾಟಕ ಏಕೀಕರಣಕಾಗಿ ಹಗಲಿರುಳು ದುಡಿದಿದ್ದಾರೆ. ಕರ್ನಾಟಕ ರಾಜ್ಯ ಸಮಗ್ರಹ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಭಿವೃದ್ಧಿ ಕೈಂಕರ್ಯಗಳು ಮಾಡಿರುತ್ತಾರೆ. ಅದೇ ರೀತಿ ನೆಲ,ಜಲ, ಕನ್ನಡ ಭಾಷಾಭಿಮಾನವನ್ನು ಜನಸಾಮಾನ್ಯರ ಮನದಾಳದಲ್ಲಿ ಬಿತ್ತುವ ಕಾಯಕವನ್ನು ನಿರಂತರವಾಗಿ ಮಾಡಿರುತ್ತಾರೆ. ಜೊತೆಗೆ ವಚನ ಸಾಹಿತ್ಯ ತತ್ತ್ವದ ಸಾರವನ್ನು ಜನಸಮುದಾಯಕ್ಕೆ ಧಾರೆಯೆರೆದು, ಕೃಷಿ ಕಾಯಕ ಮಾಡಿಕೊಂಡು ಕಲ್ಯಾಣ ಕರ್ನಾಟಕ ಭಾಗಕ್ಕೆ ತಮ್ಮದೇ ಆದಂತಹ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ.
ಸಮಾನತೆ ದನಿ ಪರಮ ಪೂಜ್ಯ ಶ್ರೀ: ಅಂದಿನ ಸಮಾಜದಲ್ಲಿ ದಲಿತರಿಗೆ ಸಮಾನತೆಯ ಭಾಗ್ಯ ಇರಲಿಲ್ಲ, ಹಾಗೆ ಮೇಲ್ವರ್ಗದ ಜನರ ಗಲ್ಲಿಗಳಲ್ಲಿ ಕುಡಿಯುವ ನೀರನ್ನು ಉಪಯೋಗಿಸಲು ಸಹ ಬೀಡುತ್ತಿರಲಿಲ್ಲಾ - ಕೊಡುತ್ತಿರಲಿಲ್ಲ ಹಾಗಾಗಿ ಇದನ್ನು ಕಂಡ ಪಟ್ಟದ್ದೇವರು ಇಂತಹ ಹೀನ ಪದ್ಧತಿಗೆ ತೀಲಾಂಜಲಿ ನೀಡಬೇಕೆಂಬ ಉದ್ದೇಶದಿಂದ
ದಲಿತರನ್ನು ತಮ್ಮ ಮಠಕ್ಕೆ ಕರೆಯಿಸಿ ಮೊಟ್ಟ ಮೊದಲ ಬಾರಿಗೆ (ಶ್ರೀಮಠದ) ಬಾವಿಯ ನೀರನ್ನು (ದಲಿತರ)ಮನೆಗೆ ಒಯ್ಯಲು ಮತ್ತು ಕುಡಿಯಲು ಕೊಟ್ಟರು,ಕೊಡುವ ಮೂಲಕ ಭಾಲ್ಕಿಯಲ್ಲಿ ಸತತವಾಗಿ ಬರಗಾಲ ಬಂದಾಗ ದಲಿತ ಬಂಧುಗಳಿಗೆ ಮಠದ ಬಾವಿಯ ನೀರು ಒಯ್ಯಲು ತಿಳಿಸಿದರು, ತಿಳಿಸುವ ಮೂಲಕ ಶರಣರ ವಾಣಿಯಂತೆ ನಡೆದರು ಜೊತೆಗೆ ದಲಿತರಿಗೆ ಲಿಂಗಾಯತ ಧರ್ಮದ ಲಿಂಗದೀಕ್ಷೆ ನೀಡಿದರು ತರುವಾಯ ಅವರೊಂದಿಗೆ ಲಿಂಗಾಯತರ ಸಂಬಂಧ ಬೆಳೆಸಲು ಶ್ರಮಿಸಿದರು ಹಾಗೂ ಶ್ರೀಗಳ ಇಷ್ಟಲಿಂಗ ಪೂಜಾ ಸಮಯದಲ್ಲಿ (ಶ್ರೀಗಳ ಕೋಣಿಯಲ್ಲಿ )ದಲಿತರಿಗೆ ಪ್ರವೇಶ ನೀಡುವ ಮೂಲಕ ಸಮಾನತೆಯನ್ನು ಮೆರೆದರು ಜೊತೆಗೆ ಸಹ ಪಂಕ್ತಿ (ಸಹಭೋಜನ) ಭೋಜನ ಮಾಡುವ ಔರ್ದಾಯ ಮಾಡಿ ಸಮಾನತೆಗೆ ಸಾಕ್ಷಿಕರಿಸಿದ್ದರು.
ಸರ್ವರೂ ಸಮಾನರು ಎನ್ನುವ ಬಸವಣ್ಣನವರ ಆಶಯಗಳನ್ನು ಜಾರಿಗೆ ತಂದ ಕೀರ್ತಿ ಇವರದಾಗಿತ್ತು ಮತ್ತು ಅವರ ಗಲ್ಲಿಗಳಿಗೆ ತೆರಳಿ ಶರಣರ ಸಂದೇಶಗಳನ್ನು ತಿಳಿಸುವ ಕಾರ್ಯ, ಅವರ ಮನೆಗಳಲ್ಲಿ ಪ್ರಸಾದ ಮಾಡುವ ಪದ್ಧತಿ,ಅವರ ಮಕ್ಕಳಿಗೆ ಉಚಿತವಾಗಿ ವಿಧ್ಯಾಭ್ಯಾಸ, ಉದ್ಯೋಗವಕಾಶ,ಮಹಿಳೆಯರಿಗೆ ಸಮಾನ ಹಕ್ಕಿನ ಆದ್ಯತೆ,ಶ್ರೀಮಠದಲ್ಲಿ ಅವರಿಗೆ ಮುಕ್ತವಾದ ಸ್ವಾತಂತ್ರ್ಯ,ಆತ್ಮಸ್ಥೈರ್ಯ ತುಂಬಿರುವುದು ಸೇರಿ ಇತ್ಯಾದಿ ಹಲವಾರು ಕೆಲಸಗಳನ್ನು ಚಾಚೂ ತಪ್ಪದ
ಮಾಡುವ ಮೂಲಕ ಶ್ರೀಮಠದ ಘನತೆಯನ್ನು ಹೆಚ್ಚಿಸಿದ್ದರು. ತರುವಾಯ ಬಸವಾದಿ ಶರಣರ ಸನ್ಮಾರ್ಗದಲ್ಲಿ ಸಾಗುವ ಕೆಲಸದ ಜೊತೆ ಸಮಾನತೆ, ಸಹೋದರತೆ,ಸಹಬಾಳ್ವೆಗಳನ್ನು ಪ್ರಮಾಣಿಕವಾಗಿ ಜಾರಿಗೆ ತರಲು ಶ್ರಮಿಸಿದ್ದಾರೆ.ಹೀಗೆ ಅನೇಕ ಸಮಾಜಿಕ ಸಮಾನತೆಯ ಸಾರುವ ಸೇವೆಗಳ ಮೌಲ್ಯಗಳನ್ನು ಕೆಳವರ್ಗದ ಜನರಲ್ಲಿ ಯಶಸ್ವಿಯಾಗಿ ಬಿತ್ತುವ ಕಾಯಕವನ್ನು ಅವರ ಬದುಕಿನ ಉದ್ದಕ್ಕೂ ಮಾಡಿಕೊಂಡು ಬಂದು ಸರ್ವ ಜನಾಂಗಕ್ಕೂ ವಚನ ಸಾಹಿತ್ಯದ ಜ್ಯೋತಿಯನ್ನು ಪ್ರಜ್ವಲಿಸಿದ್ದಾರೆ. ಜನಸಾಮಾನ್ಯರ ಧ್ವನಿಯಾಗಿ, ಸಮಾನತೆಯನ್ನು ಸಾರಿದ್ದಾರೆ.
ಪೂಜ್ಯರ ಶರಣ ಸಂಸ್ಕೃತಿ: ಡಾ. ಚನ್ನಬಸವ ಪಟ್ಟದ್ದೇವರ ಬದುಕು ಸರಳ,ಸಜ್ಜನೀಕೆಯಿಂದ ಕೂಡಿತು , ನಿಷ್ಠಂಳಕ ಮನಸ್ಸು, ಶರಣ ಸಂಸ್ಕೃತಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಶ್ರೀಗಳು ನಿರಂತರ ಕೃಷಿ ಕಾಯಕ ಮಾಡುತ್ತಿದ್ದರು. ಕಾಯಕದಲ್ಲಿ ಮೇಲು ಕೀಳು ಎಣಿಸುತ್ತಿರಲ್ಲಿಲ್ಲ.ಕಾಯಕವೇ ಮನುಷ್ಯರ ಬಾಳಿನ ಬೆಳಕು ಎಂದು ತಿಳಿದುಕೊಂಡಿದ್ದರು. ಹಾಗಾಗಿ ಅವರವರ ಬುದ್ದಿ, ಶಕ್ತಿ ಅನುಸಾರವಾಗಿ ಕಾಯಕವನ್ನು ಮಾಡಿಕೊಂಡು ಬಾಳಬೇಕೆಂದು ಶ್ರೀಗಳು ಕರೆ ನೀಡುತ್ತಿದ್ದರು.
ಮಿತ ಆಹಾರದ ಶ್ರೀಗಳಾಗಿ, ಖಾದಿ ಕಾವಿಬಟ್ಟೆ ಯಾವಾಗಲೂ ಬಳಸುತಿದ್ದರು. ಎಂದು ಸಹ ಅವರು ಆಧುನಿಕತೆಗೆ ಮಾರು ಹೋಗಲಿಲ್ಲಾ, ಬದುಕಿನ ಕೊನೆಯ ದಿನಗಳ ವರೆಗೂ ಹಲ್ಲುಜ್ಜಲು ಬೇವಿನ ಕಡ್ಡಿಯನ್ನೇ ಬಳಸುತಿದ್ದರು. ಹೀಗೆ ಮಿತ ಆಹಾರ, ಸಾಮಾನ್ಯ ಹಾಸಿಗೆ, ಸರಳ ನಡೆ ನುಡಿ ಹೊಂದಿದ್ದ ಶ್ರೀಗಳು ತಮ್ಮೆಲ್ಲ ಜ್ಞಾನ - ಶಕ್ತಿಯನ್ನು ತಮ್ಮ ಸುತ್ತಲಿನ ಅಭಿವೃದ್ಧಿ ಕೆಲಸಕ್ಕೆ ಹಾಗು ಶರಣ ತತ್ತ್ವ ಪ್ರಸಾರಕ್ಕೆ ಬಳಸಿ ಕೊಂಡಿದ್ದು ನಮ್ಮಗೆ ಎದ್ದು ಕಾಣುತ್ತದೆ. ಅವರ ಕಾಯಕ ನಿಷ್ಠೆಯಂತು ಯಾರಿಂದಲೂ ಉಹಿಸಲು ಸಾಧ್ಯವಿಲ್ಲ. ಏಕೆಂದರೆ ತಾವೇ ಮುಂದೆ ನಿಂತು ತಲೆಯ ಮೇಲೆ ಕಲ್ಲುಗಳನ್ನು ಹೊತ್ತು ಅನುಭವ ಮಂಟಪ ಕಟ್ಟಿದ್ದಾರೆ. ಎನ್ನುವುದು ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಲೇಬೇಕು. ಇಂತಹ ಸರಳ ಕಾಯಕ ಯೋಗಿಯ, ಕಾಯಕ ಸಿದ್ದಾಂತಕ್ಕೆ ನಾವೆಲ್ಲರೂ ಆತ್ಮಸಾಕ್ಷಿಯಾಗಿ ತಲೆ ಬಾಗಲೇಬೇಕು. ಪೂಜ್ಯರು ಕಾಯಕ ಬದುಕಿನ ಮೇಲೆ ಇಟ್ಟ ಗೌರವದ ನಿಷ್ಠೆ - ಕಾಳಜಿಯಿಂದ ಇಂದಿನ ಕಾಯಕವರ್ಗದವರಿಗೆ ಅವರು ಮಾರ್ಗದರ್ಶಕರು ಎಂಬುದನ್ನು ಮರೆಯುವಂತಿಲ್ಲ. ಜನಪರ ಸೇವಾ ಕಾರ್ಯಗಳು ಕೈಗೊಂಡು ಸರಳ ಬದುಕನ್ನು ಸಾಗಿಸಿದ ಮೇಧಾವಿ ಸಂತರಾಗಿದ್ದಾರೆ.
ಮಾನವೀಯ ಧ್ವನಿಯಾಗಿ ಶ್ರೀಗಳು: 12ನೆಯ ಶತಮಾನದ ಬಸವಾದಿ ಶರಣರ ಸಮತವಾದದ ಮೌಲ್ಯಾಧಾರಿತ ಸಮಾಜೋಧಾರ್ಮಿಕ ಕ್ರಾಂತಿ ಅದು ನಡೆದದ್ದು ಅನುಭವ ಮಂಟಪದ ಮೂಲಕವೇ, ಮನುಷ್ಯರ ಬದುಕಿನ ಎಲ್ಲಾ ಆಯಾಮಗಳ ಚಿಂತನೆಗಾಗಿ, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೋಳ್ಳುವುದಕ್ಕಾಗಿ ಹುಟ್ಟಿಕೊಂಡ ಅನುಭವ ಮಂಟಪವು ಮೊದಲ ವಿಶ್ವದ ಪ್ರಜಾಸತ್ತೆಯ ಧ್ವನಿ ಮತ್ತು ಧ್ವನಿಯಾಗಿತ್ತು, ಜಾಗತಿಕ ಮನುಕುಲ ಚರಿತ್ರೆಯ ಇತಿಹಾಸದ ಮೊದಲ ಪ್ರಜಾಪ್ರಭುತ್ವದ ಅಧ್ಯಾತ್ಮಿಕ,ಸಾಮಾಜಿಕ, ಶೈಕ್ಷಣಿಕ ಸಂಸತ್ತು ಇದಾಗಿತ್ತು, ಪ್ರತಿಯೊಬ್ಬ ಅನುಭವ ಮಂಟಪದ ಶಿವಶರಣರು,ಇಂದಿನ ಮಾನವ ಹಕ್ಕುಗಳ ಸಂಸ್ಥೆಯ ಸದಸ್ಯರಂತೆ ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದರು ಎನ್ನುವುದು ಸುಳ್ಳಲ್ಲ,ಹಾಗಾಗಿ ಅಂದು ಉತ್ತಮ ಮನುಷ್ಯರ ಅತ್ಯುತ್ತಮ ಮಾದರಿ ಸಮಾಜ ಕಟ್ಟುವ ಮಾಹಾಶಿವಶರಣ ಕೇಂದ್ರ ಅನುಭವ ಮಂಟಪದಾಗಿತ್ತು. ಬಸವಾದಿ ಶರಣರು ಸ್ಥಾವರಕ್ಕಿಂತ ಶಿವಶರಣರಿಗೆ ಹೆಚ್ಚು ಮಹತ್ವ ನೀಡಿದರ ಫಲವಾಗಿ ವಿಶ್ವಮಾನ್ಯ ಅನುಭವ ಮಂಟಪದಂತಹ ಸಂಸ್ಥೆಯ ಕಟ್ಟಿದ ಕಟ್ಟಡದ ಸ್ಥಳಗಳ ಕುರುಹುಗಳೆ ಇಲ್ಲದಿದ್ದಾಗ ಅದಕ್ಕೆ ಮರುಚಾಲನೆ ದೊರೆತದ್ದು ಶ್ರೀ ಚನ್ನಬಸವ ಪಟ್ಟದ್ದೇವರ ಸಾರಥ್ಯದಲ್ಲಿ ಜರುಗಿದ ಪ್ರಯತ್ನದ ಫಲದಿಂದ ಬಸವ ಕಲ್ಯಾಣದಲ್ಲಿ ಮತ್ತೂಮ್ಮೆ ನೂತನ ಅನುಭವ ಮಂಟಪದ ಕನಸು ಸಾಕಾರಗೊಳಿಸಿದರು. ಹಾಗಾಗಿ 770 ಅಮರ ಗಣಂಗಳು,ಒಂದು ಲಕ್ಷದ ಮೊಂಬತ್ತಾರು ಸಾವಿರ ಶರಣರು ಸೇರಿ ಜಾತಿ,ವರ್ಗ,ವರ್ಣ ರಹಿತ ಕಲ್ಯಾಣ ರಾಜ್ಯ ನಿರ್ಮಾಣವಾಗಬೇಕೆಂಬ ಅಭಿಲಾಷೆಯಿಂದ ಕಟ್ಟಲಾದ ನೂತನ ಅನುಭವ ಮಂಟಪಕ್ಕೆ ಸ್ವತ: ತಾವೇ ಮುಂದೆ ನಿಂತು ಕಲ್ಲು, ಮಣ್ಣು ಹೋತ್ತು ಅನುಭವ ಮಂಟಪ ಕಟ್ಟಿಸಿರುವುದು ಕಾಣುತ್ತೇವೆ. ಅದಕ್ಕಾಗಿಯೇ ಇವರನ್ನು ಮಾನವೀಯತೆಯ ಧ್ವನಿಯ ಶ್ರೀಗಳು ಎಂದೇ ಕರೆಯುವದುಂಟು.
"ಮುಗಿದು ಕೈಬಾಗಿದ ತಲೆ” ಸಂತರು : ಪ್ರಪಂಚದ ಎಲ್ಲಾ ಜೀವಾತ್ಮರ ಘನತೆ, ಗೌರವ ಕಾಪಾಡುವುದರೊಂದಿಗೆ ಗೌರವಿಸುವುದೇ ನಿಜವಾದ ಮಾನವೀಯ - ಮನುಷ್ಯನ ಧರ್ಮ (ಗುಣ) ಹಾಗೆ ಸ್ವಾತಂತ್ರ್ಯ, ಸಮಾನತೆ, ನ್ಯಾಯ, ನೀತಿ, ಮೌಲ್ಯಗಳನ್ನು ಬಲವಾಗಿ ನಂಬಿ ಮಾನವೀಯ ಮೌಲ್ಯಗಳ ಸಾರಿದ ಮತ್ತು ಪ್ರೀತಿಯನ್ನು ಹಂಚಿದ ಜಗತ್ತಿನ ಮೇಧಾವಿ ಶ್ರೇಷ್ಠ ಮನುಕುಲದ ಸಂತರ ಸಂತ ಪಟ್ಟದೇವರು.
ಪಟ್ಟದ್ದೇವರ ಜೀವನದ ಆದರ್ಶಗಳು ನಮ್ಮ ಬದುಕಿನ ಭಾಗವಾಗಬೇಕು. ಎಕೆಂದರೆ ಅವರು ಶರಣ ತತ್ವಗಳನ್ನು ಭೋಧಿಸಲಿಲ್ಲ. ಬದುಕಿ ತೋರಿಸಿದರು. ಪ್ರಯೋಗ ಮಾಡಿನೋಡಲಿಲ್ಲ (ಶರಣ ತತ್ವ ಮತ್ತು ಸಮಾಜ ಮುಖಿ ವಿಚಾರಗಳನ್ನು ಮೊದಲು ಅವರ ಜೀವನದಲ್ಲಿ ಜಾರಿಗೆ ತಂರುವ ಮೂಲಕ ಇತರರಿಗೆ ಹೇಳುತ್ತಿದ್ದರು)ನುಡಿದಂತೆ ನಡೆದರು, ದೇಹದಲ್ಲಿ ಜೀವ ಇರುವವರೆಗೂ ಒಳ್ಳೆಯ ಕೆಲಸ ಮಾಡಬೇಕೆಂದು ಜನರಿಗೆ ತಿಳಿಹೇಳಿದರು.
ಹೀಗೆ ಅವರು 109 ವಸಂತ ಕಾಲ ಕಳೆದು ಸಾವಿನ ಕೊನೆಯವರೆಗೂ ಶರಣರ ಸಂದೇಶಗಳನ್ನು ನಾಡಿನ ತುಂಬೆಲ್ಲಾ ಪ್ರಚಾರ ಗೈಯುತ್ತಾ, ಕ್ರೀಯಾಶೀಲರಾಗಿ ಬಾಳಿದರು. ಹೆಚ್ಚು ಪ್ರಚಾರದ ಅಬ್ಬರವಿಲ್ಲದೇ ಹಲವಾರು ಜನಪರ ರಚನಾತ್ಮಕ ಕಾರ್ಯಗಳನ್ನು ಕೈಗೊಂಡು ಕಾರ್ಯರೂಪಕ್ಕೆ ತಂದರೂ “ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲವೆಂಬತೆ” ಬದುಕಿದ ಶ್ರೀಗಳು ಜೀವನದುದ್ದಕ್ಕೂ “ಮುಗಿದು ಕೈಬಾಗಿದ ತಲೆ” ಅವರದ್ದು. ಇಡೀ ಬದುಕಿನ ಒಂದೊಂದು ಹೆಜ್ಜೆಕೂಡ ಇಂದಿನ ಸಮಾಜಕ್ಕೆ ಆದರ್ಶ ಹಾಗೂ ಅನುಕರಣೀಯವಾಗಿದೆ ಶರಣ ಬಂಧುಗಳೆ. ಅವರ ಬದುಕನ್ನೇ ಅವರು ಪ್ರಯೋಗಕ್ಕೆ ಒಳಪಡಿಸಿಕೊಂಡರು ಎಂಬುದು ನಿಜ, ಅಂತೆಯೇ ಎಲ್ಲಾ ವರ್ಗದ ಜನರ ಪ್ರೀತಿಗೆ ಹಾಗೂ ಗೌರವಕ್ಕೆ ಭಾಜನರಾಗಿದ್ದಾರೆ.
ಜನ್ಮ ದಿನಾಚರಣೆ : 22 ಡಿಸೆಂಬರ್ 2024 ರಂದು. ಪರಮ ಪೂಜ್ಯ ಡಾ. ಚೆನ್ನಬಸವ ಪಟ್ಟದೇವರು 135 ನೇ ಜನ್ಮದಿನಾಚರಣೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸೋಣ. ಅವರ ದಿವ್ಯ ಸಂದೇಶವನ್ನು ಸರ್ವರಿಗೂ ಉಣಬಡಿಸೋಣ.
ಲೇಖಕರು : ಸಂಗಮೇಶ ಎನ್ ಜವಾದಿ. ಬೀದರ ಜಿಲ್ಲೆ.