ಶೌಚಾಲಯದಲ್ಲಿ ಕದ್ದು ಚಿತ್ರೀಕರಣ ಮತ್ತು ‌ರೂಮಿ ಸಾಹಿತ್ಯ…!

ಶೌಚಾಲಯದಲ್ಲಿ ಕದ್ದು ಚಿತ್ರೀಕರಣ ಮತ್ತು ‌ರೂಮಿ ಸಾಹಿತ್ಯ…!

ನಮ್ಮ ಮನಸ್ಸುಗಳ ಆಯ್ಕೆಯ ಸ್ವಾತಂತ್ರ್ಯ. ಒಂದು ಪೋಲೀಸ್ ಸ್ಟೇಷನ್ ನಿರ್ವಹಿಸಬೇಕಾಗಿರುವ ಘಟನೆಯನ್ನು ಅದಕ್ಕಿಂತ ಕೆಟ್ಟದಾಗಿ ಮಾಧ್ಯಮಗಳು ನಿರ್ವಹಿಸುತ್ತಿವೆ. ಅದಕ್ಕಿಂತಲೂ ಮತ್ತೂ ಕೆಟ್ಟದಾಗಿ ರಾಜಕೀಯ ಪಕ್ಷಗಳು ನಿರ್ವಹಿಸುತ್ತಿವೆ. ಅದಕ್ಕಿಂತಲೂ ಕೆಟ್ಟದಾಗಿ ಆಡಳಿತ ವ್ಯವಸ್ಥೆ ನಿರ್ವಹಿಸುತ್ತಿದೆ.

ಉಡುಪಿಯ ಒಂದು ಕಾಲೇಜಿನ ಶೌಚಾಲಯದಲ್ಲಿ ಕೆಲವು ವಿದ್ಯಾರ್ಥಿನಿಯರು ಗೌಪ್ಯವಾಗಿ ಚಿತ್ರೀಕರಣ ಮಾಡಿದ್ದಾರೆ ಎಂಬ ವಿಷಯದ ಬಗ್ಗೆ ಕಾಲೇಜಿನ ಪ್ರಾಂಶುಪಾಲರು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು, ಸ್ಥಳೀಯ ಶಾಸಕರು, ವಿರೋಧ ಪಕ್ಷದ ನಾಯಕರು, ಗೃಹ ಮಂತ್ರಿಗಳು, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಮಾತನಾಡುತ್ತಲೇ ಇದ್ದಾರೆ. ಇನ್ನು ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಮತ್ತು ವಿಶ್ವಸಂಸ್ಥೆಯ ಮುಖ್ಯಸ್ಥರು ಮಾತನಾಡುವುದು ಬಾಕಿ ಇದೆ.

ಇಷ್ಟು ದುರ್ಬಲ ವ್ಯವಸ್ಥೆಗಾಗಿಯೇ ನಾವು ಮತ ಹಾಕುವುದು. ಇಂತಹ ಅನೇಕ ಘಟನೆಗಳು ಪ್ರತಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೇರೆ ಬೇರೆ ರೂಪದಲ್ಲಿ ನಡೆಯುತ್ತಲೇ ಇರುತ್ತದೆ. ಕೇವಲ ಎರಡು ತಿಂಗಳ ಹಿಂದೆ ಇದೇ ರೀತಿಯ ಘಟನೆಗಳಲ್ಲಿ ಪೋಲಿಸರನ್ನು ವಿರೋಧಿಸುತ್ತಿದ್ದ ಪಕ್ಷಗಳು ಈಗ ಸಮರ್ಥಿಸಿಕೊಳ್ಳುತ್ತಿವೆ. ಆಗ ಸಮರ್ಥಿಸಿಕೊಳ್ಳುತ್ತಿದ್ದವರು ಈಗ ವಿರೋಧಿಸುತ್ತಿವೆ. ಇದೇನು ಮಕ್ಕಳಾಟವೇ?

ಪ್ರತಿಯೊಂದು ಟಿವಿ ನ್ಯೂಸ್ ಚಾನೆಲ್ ಗಳು ಮಹಾನ್ ತನಿಖಾ ಸಂಸ್ಥೆಗಳಂತೆ ಬಾಯಿಗೆ ಬಂದಂತೆ ಮಾತನಾಡುವುದು, ರಾಜಕೀಯ ಪಕ್ಷಗಳು ಪರ ವಿರೋಧ ವಾದ ಮಾಡುವುದು ಆ ಶೌಚಾಲಯದ ಚಿತ್ರೀಕರಣಕ್ಕಿಂತ ದೊಡ್ಡ ಪ್ರಜಾಸತ್ತಾತ್ಮಕ ಅಪರಾಧ ಆಗುವುದಿಲ್ಲವೇ? ಪೋಲೀಸ್ ವ್ಯವಸ್ಥೆಯನ್ನು ದಕ್ಷ, ನಿಷ್ಪಕ್ಷಪಾತ ಮತ್ತು ಪ್ರಾಮಾಣಿಕಗೊಳಿಸದೆ, ನ್ಯಾಯಾಂಗ ವ್ಯವಸ್ಥೆಯನ್ನು ಶೀಘ್ರ ಮತ್ತು ನ್ಯಾಯ ನಿಷ್ಠುರ ಮಾಡದೆ ಕಾನೂನು ಸುವ್ಯವಸ್ಥೆ ಕಾಪಾಡುವುದು ಸಾಧ್ಯವೇ ಇಲ್ಲ. ಇಡೀ ವ್ಯವಸ್ಥೆಯೇ ಕಳ್ಳರ ಸಂತೆಯಾಗಿರುವಾಗ, ಯಾರ ಮೇಲೆ ಯಾರಿಗೂ ನಂಬಿಕೆಯೇ ಇಲ್ಲದಿರುವಾಗ, ಎಲ್ಲರೂ ತುಂಬಾ ತುಂಬಾ ಸ್ವಾರ್ಥಿಗಳಾಗಿರುವಾಗ ಇಂತಹ ಘಟನೆಗಳನ್ನು ಹೇಗೆ ನಿರ್ವಹಿಸುವುದು?

ಮಾಧ್ಯಮಗಳಿಗೆ, ರಾಜಕೀಯ ಪಕ್ಷಗಳಿಗೆ, ಆಡಳಿತಗಾರರಿಗೆ ಮಾಡಲು ಇದಕ್ಕಿಂತ ಅತ್ಯಂತ ಮಹತ್ವದ ಕೆಲಸಗಳು ಇರುವಾಗ ಕೇವಲ ಟಿಆರ್ಪಿ ಮತ್ತು ಓಟಿನ ಲಾಭಕ್ಕಾಗಿ ಇಡೀ ರಾಜ್ಯದ ಜನತೆಯ ಮನಸ್ಸಿನಲ್ಲಿ ಈ ಘಟನೆಯನ್ನೇ ಬಿಂಬಿಸುವ ಉದ್ದೇಶವೇ ವ್ಯವಸ್ಥೆಯ ಹಾಳುಗೆಡಿಸುವಿಕೆ. ದಯವಿಟ್ಟು ಸಾಮಾನ್ಯ ಜನ ಇವರ ಮಂಕುಬೂದಿಯ ಮಾಟ ಮಂತ್ರಗಳಿಗೆ ಬಲಿಯಾಗದೆ ಬದುಕಿನ ಆಳ ಅಗಲಗಳ ಅನುಭವಿಸುವಿಕೆಗೆ ಮಹತ್ವ ನೀಡಿ. ಆ ರೀತಿಯ ಚಿಂತನೆಯ ಕೆಲವು ಸಾಲುಗಳು.

" ಹೃದಯಾಂತರಾಳದಿಂದ ಬರುವ ಮಾತುಗಳು ಹೃದಯವನ್ನು ‌ತಾಕುತ್ತವೆ " ರೂಮಿ. ಕೃತಕತೆ ಮತ್ತು ಸಹಜತೆಯ ನಡುವಿನ ವ್ಯತ್ಯಾಸವನ್ನು ರೂಮಿ ಹೇಳುತ್ತಾರೆ. ಜಲಾಲುದ್ದೀನ್ ರೂಮಿ 13 ನೆಯ ಶತಮಾನದ ಸೂಫಿ ಸಂತ. ಈಗಿನ ಆಫ್ಘಾನಿಸ್ತಾನದಲ್ಲಿ ಜನಿಸಿದ ಪರ್ಷಿಯನ್ ಕವಿಯೂ ಸಹ. 

" ನೀನು ಏಕಾಂಗಿ ಎಂದು ಭಾವಿಸಬೇಡ. ಇಡೀ ಜಗತ್ತು ನಿನ್ನೊಳಗಡಗಿದೆ " ಎಂದು ಹೇಳುತ್ತಾರೆ. ( "Do not feel lonely, the entire universe is inside" )

" ಈ ಪ್ರಪಂಚವು ಅಡಿಯಿಂದ ಮುಡಿಯವರೆಗೂ ಆಳವಾದ ಸಮಸ್ಯೆಗಳಲ್ಲಿ ಸಿಲುಕಿದೆ. ಆದರೆ ಅವನ್ನು ಪ್ರೀತಿಯೆಂಬ ಮುಲಾಮಿನಿಂದ ತಕ್ಷಣವೇ ಗುಣಪಡಿಸಲು ಸಾಧ್ಯ " ಅಷ್ಟೊಂದು ತೀವ್ರವಾಗಿ ಬದುಕನ್ನು ಅನುಭವಿಸಿದ ವ್ಯಕ್ತಿ ರೂಮಿ. ಸಹಜತೆ ಮರೆತು ಮುಖವಾಡಗಳ ಮರೆಯಲ್ಲಿ ಅಸಹನೆಯಿಂದ ಬದುಕುತ್ತಿರುವ ನಮಗೆಲ್ಲ ಜೀವನದ ನೈಜ ಸಾರವನ್ನು ಅನುಭವಿಸಲು ಈ ಸಾಲುಗಳು ಸ್ಪೂರ್ತಿದಾಯಕವಾಗಿವೆ.

ಜಗತ್ತಿನ ಎಲ್ಲಾ ನಾಗರಿಕತೆಗಳ ಬೆಳವಣಿಗೆಯ ಹಂತದಲ್ಲಿ ಈ ರೀತಿಯ ಅನುಭಾವ ಸಾಹಿತ್ಯದ ನುಡಿಗಳು ಅಲ್ಲಿನ ಕೆಲವು ವ್ಯಕ್ತಿಗಳಲ್ಲಿ ಕಾಣಬಹುದು. ಬಹುಶಃ ಸರಿಯಾಗಿ ಅಧ್ಯಯನ ಮಾಡಿದರೆ ಭಾರತದ ಎಲ್ಲಾ ರಾಜ್ಯಗಳ ಎಲ್ಲಾ ಭಾಷೆಯಲ್ಲಿಯೇ ಈ ರೀತಿಯ ಅರ್ಥದ ಮಾತುಗಳನ್ನು ಹೇಳಿದ ಮತ್ತು ಬರೆದ ಸಾಹಿತ್ಯ ಸಿಗಬಹುದು.

ನಾವು ಜೀವನದ ನಿಜವಾದ ಸಾರವನ್ನು ಅರ್ಥಮಾಡಿಕೊಂಡು ಅನುಭವಿಸಲು ಸಾಧ್ಯವಾಗುವುದು ಈ ರೀತಿಯ ವಿಷಯಗಳನ್ನು ಹೆಚ್ಚು ಹೆಚ್ಚು ತಿಳಿದುಕೊಂಡಾಗ. ನಮ್ಮ ನಡುವೆ ಕ್ರಿಮಿನಲ್ ಮತ್ತು ಭೌದ್ಧಿಕ ವಿಷಯಗಳ ಆಯ್ಕೆ ಸದಾ ಇರುತ್ತದೆ. ನಾವು ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಅದಕ್ಕೆ ಎಷ್ಟು ಮಹತ್ವ ಕೊಡಬೇಕು ಎಂಬುದು ನಮ್ಮ ವಿವೇಚನೆಗೆ ಬಿಟ್ಟದ್ದು. ಅದು ನಮ್ಮನ್ನು ರೂಪಿಸುತ್ತದೆ ಎಂದು ಎಚ್ಚರಿಸುತ್ತಾ....

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಅಂತರ್ಜಾಲ ತಾಣ