ಶೌಚ - ಸಂತೋಷ (ಭಾಗ 1)
ಈ ದಿನ ಪಾತಂಜಲ ಯೋಗ ಸೂತ್ರದ ಎರಡನೇ ಪಾದ ಎರಡನೇ ಉಪಾಂಗ ಸಂತೋಷದ ಬಗ್ಗೆ ತಿಳಿದುಕೊಳ್ಳೋಣ. ನಿನ್ನಲ್ಲಿ ಏನಿದೆ? ಅದನ್ನೇ ಅನುಭವಿಸುವುದು. ಎಷ್ಟಿದೇ? ಅಷ್ಟನ್ನೆ ಅನುಭವಿಸುವುದು, ಸಂತೋಷ ಪಡುವುದು. ಇರುವುದರಲ್ಲೇ ಆನಂದ ಪಡುವ ಭಾವಕ್ಕೆ ಸಂತೋಷ ಎನ್ನುವರು. ಇದು ಸಾಧನೆಗೆ ಅತಿ ಮಹತ್ವ. ಮನುಷ್ಯ ವಸ್ತುಗಳಿಗಾಗಿ ಅಸಂತೃಷ್ಠನಾದರೆ, ಮಾನಸಿಕ ವಿಕಾಸ ಆಗುವುದು ಕಷ್ಟ. ಮನಸ್ಸು ಪ್ರಸನ್ನವಾಗಿತ್ತು ಅಂದರೆ, ಮತಿ ಸಮರ್ಥವಾಗಿರುತ್ತದೆ. ಮತಿಯಲ್ಲಿ ಶಕ್ತಿ ವ್ಯಕ್ತವಾಗುತ್ತಿದೆ. ಮನಸ್ಸು ಅಸಂತೃಷ್ಟವಾಯಿತು ಅಂದ್ರೆ, ಬುದ್ಧಿಯ ಬಲ ಕಡಿಮೆಯಾಗುತ್ತದೆ. ದೃಷ್ಟಿಕೋನ ಬದಲಾಗುತ್ತದೆ. ಸುತ್ತ ಮುತ್ತ ಇರುವ ವಸ್ತುಗಳನ್ನು ನೋಡಲು ದೃಷ್ಟಿ ಇರುತ್ತದೆ. ಅದನ್ನು ಎರಡು ದೃಷ್ಟಿಯಿಂದ ನೋಡಲಿಕ್ಕೆ ಆಗುತ್ತದೆ. ಒಂದು ದೃಷ್ಠಿಯಿಂದ ನೋಡಿದರೆ ಸಂತೋಷವಾಗುತ್ತದೆ. ಮತ್ತೊಂದು ದೃಷ್ಟಿಯಿಂದ ನೋಡಿದರೆ ದುಃಖವಾಗುತ್ತದೆ. ಸಂತೋಷವಾಗುವಂತೆ ಈ ಜಗತ್ತನ್ನು, ಈ ಜಗತ್ತಿನ ವಸ್ತುಗಳನ್ನು ನೋಡಬೇಕಾಗುತ್ತದೆ. ಅದೊಂದು ಕಲೆ. ಹೇಗೆ ಬೇಕೋ ಹಾಗೆ ನೋಡೋದಕ್ಕೆ ಬರುತ್ತದೆ. ಅದು ಮನುಷ್ಯನಿಗೆ ಇರುವ ವಿಶೇಷ ಸಾಮರ್ಥ್ಯ. ಒಂದು ಗಿಡವನ್ನು ನೋಡಿ ಸಂತೋಷ ಪಡಲಿಕ್ಕೆ ಬರುತ್ತದೆ. ಅದೇ ರೀತಿ ಅಸಂತೋಷ ಪಡಲಿಕ್ಕೂ ಬರುತ್ತದೆ. ಒಂದು ಕಾರ್ಯ ಮಾಡಿ ಸಂತೋಷಪಡಲಿಕ್ಕೂ ಬರುತ್ತದೆ. ಅದೇ ಕಾರ್ಯ ಮಾಡಿ ದುಃಖ ಪಡಲಿಕ್ಕೂ ಬರುತ್ತದೆ. ನೋಡುವ ದೃಷ್ಟಿ ಅದು. ಅದು ಸ್ವಲ್ಪ ಬದಲಾದರೆ ಮನಸ್ಸು ಸುಖಿಯಾಗುತ್ತದೆ. ಉದಾಹರಣೆಗೆ, ಒಂದು ಬುಟ್ಟಿಯಲ್ಲಿ 10 ಹಣ್ಣುಗಳಿವೆ. ಇನ್ನೂ 10 ಹಣ್ಣು ಹಿಡಿಯಷ್ಟು ಜಾಗ ಆ ಬುಟ್ಟಿಯಲ್ಲಿದೆ. ನಾವು ಇದನ್ನು ಎರಡು ದೃಷ್ಟಿಯಿಂದ ನೋಡಲು ಸಾಧ್ಯ. ಬುಟ್ಟಿಯೊಳಗೆ 10 ಹಣ್ಣು ಇದ್ದಾವೆ ಅಂತ ನೋಡಲಿಕ್ಕೆ ಬರ್ತದೆ. ಬುಟ್ಟಿಯೊಳಗೆ 10 ಹಣ್ಣು ಕಡಿಮೆ ಇದೆ ಅಂತ ನೋಡಲು ಬರ್ತದೆ. ಇಬ್ಬರದು ಸರಿನೆ. 10 ಹಣ್ಣು ಇದೆ ಅಂದರೆ ಮನಸ್ಸು ತುಂಬಿದೆ. ಇನ್ನೂ 10 ಹಣ್ಣು ಬೇಕು ಅಂದರೆ ಮನಸ್ಸು ಖಾಲಿಯಾಗಿದೆ ಅಂತ ಅರ್ಥ. ನೋಡೋ ದೃಷ್ಟಿ ಅದು. ಬುಟ್ಟಿ ಬದಲು ಮಾಡಬೇಕಾಗಿಲ್ಲ. ದೃಷ್ಟಿ ಬದಲು ಮಾಡಬೇಕು. ಬುಟ್ಟಿಯೊಳಗೆ ಎಷ್ಟಿದೆಯೋ ಅಷ್ಟಿದೆ. ಇರೋದಕ್ಕೆ ಮಹತ್ವ ಕೊಟ್ಟರೆ ಸಂತೋಷ ಉಂಟಾಗುತ್ತದೆ. ಇಲ್ಲದಕ್ಕೆ ಮಹತ್ವ ಕೊಟ್ಟರೆ ಅಸಂತೋಷ ಆಗುತ್ತದೆ. ಏನಿದೆ ಅದೇ.... ಈಗ ನಮ್ಮ ತಲೆ ಕೂದಲು ಬಿಳಿಯಾಗಿದೆ ಅಂತ ಇಟ್ಟುಕೊಳ್ಳಿ. ಎಷ್ಟು ಬೆಳ್ಳಗಿವೆ ಅಂದ್ರೆ ಸಂತೋಷ. ಏನು ಬೆಳ್ಳಿ ಹೊಳೆದಂತೆ ಹೊಳೆಯುತ್ತವೆ ಅಂದ್ರೆ ಸಂತೋಷ. ಏನಪ್ಪಾ ಬೆಳ್ಳಗಾಗೋದು ಅಂದ್ರೆ, ಅಸಂತೋಷ. ನೋಡೋ ದೃಷ್ಟಿಕೋನ ಸಂತೋಷ, ದುಃಖ ಕೊಡುತ್ತದೆ. ಜೀವನವನ್ನು ನೋಡಿ ನೋಡಿ ಸಂತೋಷ ಪಡುವುದನ್ನು ಕಲಿಯಬೇಕು.
ಒಂದು ಗುಬ್ಬಿ ಇತ್ತು. ಅಲ್ಲೇ ಚೆರ್ರಿ ಗಿಡದ ತೋಟ ಇತ್ತು. ಆ ಚೆರ್ರಿ ಗಿಡದಲ್ಲಿ ಸಣ್ಣ ಸಣ್ಣ ಸುಂದರ ಚೆರ್ರಿಹಣ್ಣುಗಳು ಬಿಟ್ಟಿದ್ದವು. ಆ ತೋಟ ಕಾಯಲು ಒಬ್ಬ ಸೇವಕ ಇದ್ದನು. ಗುಬ್ಬಿಗೆ ಹಸಿವಾಗಿತ್ತು. ಹಣ್ಣುಗಳನ್ನು ನೋಡಿ, ತಿನ್ನಲು ಬಂತು. ಸೇವಕ ಗುಬ್ಬಿಗೆ ಕಲ್ಲು ಹೊಡೆದನು. ಗುಬ್ಬಿ ಹಾರಿ ಹೋಯಿತು. ಪುನಃ ಗುಬ್ಬಿ ಬಂತು. ಹೀಗೆ ಸುಮಾರು 10, 20 ಸಲ ಆಯಿತು. ಅದೇ ದಾರಿಯಲ್ಲಿ ಒಬ್ಬ ಸಂತ ಹೋಗುತ್ತಿದ್ದನು. ಇದನ್ನು ನೋಡಿದ. ಗುಬ್ಬಿ ಕಂಡು ಕನಿಕರ ಅನಿಸಿತ್ತು. ಗುಬ್ಬಿಗೆ ಹೇಳಿದ, ಏನು ನಿನ್ನ ಕಷ್ಟ?. ಅಷ್ಟೊತ್ತಿನಿಂದ ನೋಡ್ತಾ ಇದ್ದೇನೆ. ನೀನು ಬರ್ತೀಯಾ, ಆತ ಕಲ್ಲು ಹೊಡೆಯುತ್ತಾನೆ. ನೀನು ಹಾರುತ್ತೀಯ, ಮತ್ತೆ ಬರುತ್ತೀಯ, ಮತ್ತೆ ಕಲ್ಲು ಹೊಡೆಯುತ್ತಾನೆ, ಹೀಗೆ ಹತ್ತು ಇಪ್ಪತ್ತು ಸಲ ಆಯಿತು. ನಿನ್ನ ಪರಿಸ್ಥಿತಿ ನೋಡಿ ನನಗೆ ದುಃಖವಾಯಿತು ಅಂದ. ಆಗ ಗುಬ್ಬಿ ಹೇಳಿದ್ದು, "ನನಗೆ ಹಣ್ಣು ಕಾಣಿಸುತ್ತದೆ ವಿನಃ, ಕಲ್ಲು ಕಾಣಿಸುತ್ತಿಲ್ಲ. ಅವನಿಗೆ ಕಲ್ಲು ಕಾಣಿಸುತ್ತದೆ ಅದಕ್ಕೆ ಆತ ಹೊಡೆಯುತ್ತಾನೆ. ನನಗೆ ಕಾಣಿಸುವುದು ಚೆರ್ರಿ ಹಣ್ಣು, ಅವಕಾಶ ಸಿಕ್ಕರೆ ಒಂದು ಹಣ್ಣು ತಿಂದೆ ಬಿಡ್ತೀನಿ" ಅಂತು. ದೃಷ್ಟಿಕೋನ ಎಷ್ಟು ಚಂದ ಇದೆ. ಹೊಡೆಯುವುದರ ಕಡೆ ಲಕ್ಷ್ಯ ಕೊಟ್ಟರೆ, ತಿನ್ನಲಿಕ್ಕೆ ಆಗುವುದಿಲ್ಲ. ಅವರು ಹೊಡೆಯುತ್ತಾ ಇರಲಿ, ನಾನು ತಿನ್ನುತ್ತಾ ಇರುತ್ತೇನೆ ಎಂದಿತು. ನಮ್ಮ ಕವಡೆ ಕಲ್ಲಿಗೆ ಪಾಪ ಪಕ್ಷಿಗಳು ಎಲ್ಲಿ ಬದುಕುತ್ತವೆ. ಪಕ್ಷಿಗಳು ಹೇಳುತ್ತವೆ, "ನಮಗೆ ಏನು ಬೇಕು ಅದು ಗೊತ್ತಿದೆ. ಮನುಷ್ಯನಿಗೆ ಏನು ಬೇಡ ಅದು ಅವನಿಗೆ ಗೊತ್ತಿದೆ. ಇದ್ದಿದ್ದರಲ್ಲಿ ಸಂತೋಷ ಪಡೋದು ನಮಗೆ ಗೊತ್ತಿದೆ. ಇಲ್ಲದಿದ್ದಾಗ ದುಃಖ ಪಡೋದು ಅವನಿಗೆ ಗೊತ್ತಿದೆ. ಸಂತೋಷಪಡುವುದು ಒಂದು ಕಲೆ, ನಮ್ಮದು ಏನೆಂದರೆ ನಾವು ಗುರಿ ಹಾಕಿಕೊಂಡು ಇರುತ್ತೇವೆ. ಇಷ್ಟು ಸಾಧಿಸಬೇಕು ಅಂತ ಗುರಿ ಇರುತ್ತದೆ. ಜೀವನದಲ್ಲಿ ಗುರಿ ಮುಟ್ಟದೆ ಸಂತೋಷ ಇಲ್ಲ. ಅಂದರೆ ದುಃಖ. ಜೀವನಪೂರ್ತಿ ಅಸಂತೋಷ. ಅದನ್ನು ಬಿಟ್ಟು ಗುರಿ ಇದ್ರು, ಅದರ ಕಡೆ ಲಕ್ಷ್ಯ ಕೊಡದೆ, ಸಾಧನೆ ಮಹತ್ವ ಅಂತ ಭಾವಿಸಿ, ಸಾಧಿಸಲು ತೊಡಗಿದರೆ, ಸಾಧಿಸಿದ್ದು ಸಂತೋಷ ಕೊಡುತ್ತದೆ. ಎಷ್ಟು ಸಾಧಿಸುತ್ತೇವೋ ಅದು ಸಂತೋಷ ಕೊಡುತ್ತದೆ. ಮನುಷ್ಯ ಸಂತೋಷ ಪಡಲು ಜಗತ್ತೆಲ್ಲ ಇರಬೇಕು ಅಂತ ಅಲ್ಲ. ನಾವು ಇತಿಹಾಸದ ಪುಟ ಪುಟ ನೋಡಿದರೆ ಬಹಳ ವಿಚಿತ್ರ ಜೀವನ ಸಾಧಿಸಿದ್ದು ಕಾಣಿಸುತ್ತದೆ.
(ಇನ್ನೂ ಇದೆ)
-ಎಂ.ಪಿ. ಜ್ಞಾನೇಶ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ