ಶೌಚ - ಸಂತೋಷ (ಭಾಗ 2)

ಶೌಚ - ಸಂತೋಷ (ಭಾಗ 2)

ಒಬ್ಬ ಮಹಾರಾಜ, ಅಶ್ವಮೇಧ ಯಜ್ಞ ಮಾಡಿದ. ಕುದುರೆಗೆ ಅಶ್ವಮೇಧ ಎಂದು ನಾಮಫಲಕ ಹಾಕಿ ಬಿಟ್ಟ. ಅದು ಹೋದ ಜಾಗದಲ್ಲಿ ಯಾರೂ ಕಟ್ಟಿ ಹಾಕಲಿಲ್ಲ ಎಂದರೆ, ಆ ರಾಜ ಶರಣಾಗಿ, ಸಾಮಂತನಾಗಿ, ಕಪ್ಪ ಕಾಣಿಕೆ ಕೊಡುತ್ತಿದ್ದರು. ಯಾರಾದರೂ ಕಟ್ಟಿ ಹಾಕಿದರೆ ಯುದ್ಧ ಶುರು. ಹೀಗೆ ಕುದುರೆ ಹೋದಲೆಲ್ಲ ಕನಿಷ್ಠ 20 ಮಂದಿ ಸಾಮಂತರಾದರು. ಒಬ್ಬ ಶರಣಾಗಲಿಲ್ಲ. ಕುದುರೆ ಕಟ್ಟಿ ಹಾಕಿದ. ಯುದ್ಧ ನಡೆಯಿತು. ಈತನದು ದೊಡ್ಡ ಸಾಮ್ರಾಜ್ಯ. ಕುದುರೆ ಕಟ್ಟಿ ಹಾಕಿದವನದು ಸಣ್ಣ ಸಾಮ್ರಾಜ್ಯ. ಆದರೆ ಬಲಿಷ್ಠ. ಸೋಲಲಿಲ್ಲ. ಆಗ ರಾಜ ವಾಪಸ್ಸು ಬಂದು ಹಾಸಿಗೆ ಮೇಲೆ ಮಲಗಿದ. ಏನಪ್ಪಾ ನನ್ನ ಜೀವನ ಅಂದ. ಒಬ್ಬ ಸಣ್ಣ ರಾಜನನ್ನು ಸೋಲಿಸಲು ಆಗಲಿಲ್ಲ, ಜೀವನ ವ್ಯರ್ಥ ಎಂದನು. ಬಹಳ ತಾಪ ಮಾಡಿಕೊಂಡಿದ್ದನು. ಇಷ್ಟು ದೊಡ್ಡ ರಾಜ್ಯ ಇದ್ದರೂ ಸಮಾಧಾನ ಆಗಲಿಲ್ಲ. ಆತ ಸಾಮಂತ ಮಾಡಿಕೊಳ್ಳಲು ಪ್ರಯತ್ನಿಸಿದನು, ಮಿತ್ರ ಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ. ಮಿತ್ರ ಆದರೆ ಎಲ್ಲರೂ ನಮ್ಮವರೇ, ಮಾಂಡಲಿಕ ಆಗಬೇಕಾದರೆ ತಕರಾರು. ನಾವು ಹೋಲಿಸಿಕೊಂಡು ಸಂಕಟಪಡುತ್ತೇವೆ. ದೊಡ್ಡವರನ್ನು ನೋಡಿದಾಗ ನೀವು ದೊಡ್ಡ ಮಾಲೀಕರು, ನಾನು ಸಣ್ಣ ಮಾಲೀಕ, ಅಂದ್ರೆ ಸಮಾಧಾನ. ರಾಜ ಹೀಗೆ ತಾಪ ಮಾಡಿಕೊಂಡು ಹಾಸಿಗೆ ಹಿಡಿದನು. ಸಾಯುವ ಕಾಲದಲ್ಲಿ ಮಕ್ಕಳನ್ನು ಕರೆದು ಹೇಳಿದನು. ನನ್ನ ಇಚ್ಛೆ ಪೂರ್ತಿ ಆಗಲಿಲ್ಲ, ಅವನನ್ನು ಸೋಲಿಸಿ ಎಂದು ಹೇಳಿದನು. ರಾಜ್ಯ ಇದೆ, ಇಪ್ಪತ್ತು ಜನ ಮಾಂಡಲಿಕರು ಇದ್ದಾರೆ. ಸಮಾಧಾನ ಇಲ್ಲ. ಇಷ್ಟು ರಾಜ್ಯ ಇದೆ, ಇಷ್ಟು ಜನ ಸಾಮಂತರ ಇದ್ದಾರೆ ಅಂದಿದ್ದರೆ ಸಮಾಧಾನ ಇರುತ್ತಿತ್ತು. ಸಂತೋಷ ಆಗುತ್ತಿತ್ತು. ಇದು ದೃಷ್ಟಿಕೋನ. ಅದರ ಬದಲು ನಿನ್ನ ಶೂರತನ ಮೆಚ್ಚಿಕೊಂಡಿದ್ದೇನೆ ಅಂದಿದ್ದರೆ ಆತ ಗೆಳೆಯನೇ ಆಗುತ್ತಿದ್ದನು. 

ಹಿಂದೆ ಅಲೆಕ್ಸಾಂಡರ್ ವಿಶ್ವ ಗೆಲ್ಲಬೇಕೆಂದು, ಎಲ್ಲಾ ಕಡೆ ಗೆದ್ದು ಭಾರತಕ್ಕೆ ಬಂದಿದ್ದನು. ಭಾರತದಲ್ಲಿ ಪೋರಸನನ್ನು ಸೋಲಿಸಿದ. ಸೈನಿಕರು ಪೋರಸ್ ನನ್ನು ಅಲೆಕ್ಸಾಂಡರ್ ಮುಂದೆ ನಿಲ್ಲಿಸಿದರು. ಆಗ ಅಲೆಕ್ಸಾಂಡರ್ ಕೇಳಿದ, ನಿನ್ನನ್ನು ಹೇಗೆ ನಡೆಸಿಕೊಳ್ಳಬೇಕು ಎಂದು. ಅಲೆಕ್ಸಾಂಡರ್ ಒಳ್ಳೆಯವನೆ. ಆತನ ಗುರು ಶ್ರೇಷ್ಠ ತತ್ವಜ್ಞಾನಿ ಅರಿಸ್ಟಾಟಲ್. ಅರಿಸ್ಟಾಟಲ್, ಸಾಕ್ರೆಟಿಸ್ ನ ಶಿಷ್ಯನ ಶಿಷ್ಯ. ಆಗ ಪೋರಸ್ ಹೇಳಿದನು, ನನ್ನನ್ನು ರಾಜನನ್ನಾಗಿ ನೋಡಿಕೊಳ್ಳಬೇಕು. ನಾನು ನಿನ್ನ ಗೆಳೆಯ ಎಂದು ಭಾವಿಸು. ಸೋತವನಲ್ಲ. ಸೈನ್ಯ ದೊಡ್ಡದಿತ್ತು, ಗೆಲ್ತಾರೆ. ಸೈನ್ಯ ಸಣ್ಣದಿತ್ತು, ಸೋಲುತ್ತಾರೆ. ಸೋತಿದ್ದು ಸೈನ್ಯ, ನಾನಲ್ಲ. ಒಂದು ಪ್ರಸಂಗ ಬರುತ್ತದೆ, ಸೋಲು ಗೆಲುವು ಇರುತ್ತದೆ. ಅಲೆಕ್ಸಾಂಡರ್ ಹೇಳಿದ ಇಂಥ ರಾಜ ಇರೋದು ನಮ್ಮ ಹೆಮ್ಮೆ ಎಂದು ಹೇಳಿದ. ನನ್ನ ಮಿತ್ರ ಅಂದ. ಅಲೆಕ್ಸಾಂಡರ್ ಪೋರಸ್ ನ ರಾಜ್ಯ ಬಿಟ್ಟು ಹೊರಟು ಹೋದ. ಹೀಗೂ ಇದೆ. ಅಳಬೇಕೆಂದರೆ ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ಕಾರಣ ಸಿಗುತ್ತದೆ. ನಗಬೇಕೆಂದರೆ ಅಷ್ಟೇ ಕಾರಣಗಳು ಸಿಗುತ್ತವೆ. ನಾವು ಆಯ್ಕೆ ಮಾಡಿಕೊಳ್ಳಬೇಕು. ಹೇಗೆ ನಾವು ಆಯ್ಕೆ ಮಾಡಿಕೊಂಡಿದ್ದೇವೆ, ಹಾಗೆ ನಮ್ಮ ಜೀವನ ಆಗುತ್ತದೆ. ಚೆನ್ನಾಗಿರುವುದನ್ನು ಆಯ್ಕೆ ಮಾಡಿಕೊಂಡರೆ, ಚೆನ್ನಾಗಿರುತ್ತದೆ. ಕೆಟ್ಟದ್ದನ್ನು ಆಯ್ಕೆ ಮಾಡಿಕೊಂಡರೆ, ಕೆಟ್ಟದು ಆಗುತ್ತದೆ. ಬದುಕು ಸುಂದರ ಆಗುವುದನ್ನು, ಸಂತೋಷ ಕೊಡುವುದನ್ನು ಆಯ್ಕೆ ಮಾಡಿಕೊಳ್ಳಬೇಕು. ದುಃಖ ಕೊಡುವುದನ್ನು ಆಯ್ಕೆ ಮಾಡಿಕೊಂಡರೆ, ಹೇಗೆ ಸಂತೋಷ ಆಗುತ್ತದೆ. ಇರುವುದರ ಕಡೆ ಗಮನ ಹರಿಸಬೇಕು. ಇರುವುದನ್ನ ಅನುಭವಿಸಬೇಕು. (ಚಿತ್ರ ನೋಡಿ)

ಸಾಕ್ರೆಟಿಸ್ ನೋಡಲು ಕುರೂಪ. ಜಾಂತಪಿಯನ್ನು ವಿವಾಹವಾಗಲು ತೀರ್ಮಾನ ಮಾಡಿದ. ಜಾಂತಪಿ ಸುಂದರಿ ಆಗಿದ್ದಳು. ಆಗ ಗೆಳತಿಯರು ಹೇಳಿದರು, ನೀನು ಯಾಕೆ ಈ ಕುರೂಪಿಯನ್ನು ವಿವಾಹ ಆಗುತ್ತಿ, ಆತ ಬಡವ, ಏನಿಲ್ಲಾ ಅಂದರು. ಆಗ ಜಾಂತಪಿ ಹೇಳಿದ್ದು, "ಆತ ಕುರೂಪಿ ಇರಬಹುದು, ಮನಸ್ಸು ಸುಂದರ ಇದೆ. ಆತನ ಜೇಬು ಖಾಲಿ ಇರಬಹುದು, ಆತನ ಮನಸ್ಸು ಜ್ಞಾನದಿಂದ ತುಂಬಿದೆ. ಇದಕ್ಕಿಂತ ಇನ್ನೇನು ಬೇಕು" ಎಂದಳು. ಆಕೆ ಜಗಳಗಂಟಿ. ಲಗ್ನ ಆಯಿತು. ಪತಿ ಶ್ರೇಷ್ಠ ಸಂತ. ಜಾಂತಪಿ ದಿನಾಲೂ ತನ್ನ ಗಂಡನನ್ನು ಬಯ್ಯುತ್ತಿದ್ದಳು. ಆತ ಬೈಸಿಕೊಳ್ಳುತ್ತಿದ್ದ. ಗೆಳತಿಯರು ಜಾಂತಪಿಗೆ ಹೇಳಿದರು, ನಾವು ಆಗಲೇ ಹೇಳಿದ್ದೇವೆ ನೀನು ಏಕೆ ಮದುವೆಯಾದೆ..? ಆಗ ಜಾಂತಪಿ ಹೇಳಿದಳು. "ಅವನು ಬೈಸಿಕೊಳ್ಳುತ್ತಾನೆ, ತಿರುಗಿ ಬಯ್ಯುವುದಿಲ್ಲ, ಹೊಡೆಯುವುದಿಲ್ಲ. ನೀವು ನಿಮ್ಮ ಪತಿಗೆ ಬೈದು ನೋಡಿ, ಆಗ ಗೊತ್ತಾಗುತ್ತದೆ" ಎಂದಳು. ಇಂತಹವನು ನಿಮಗೆ ಎಲ್ಲಿ ಸಿಗುತ್ತಾರೆ ಅಂದಳು. ನೋಡುವ ದೃಷ್ಟಿ ಅಷ್ಟು ಅದ್ಭುತ. ಆಕೆ ಕೊಳಕು ಮುಸುರೆ ತಂದು ಆತನ ಮೇಲೆ ಸುರಿಯುತ್ತಾ ಇದ್ದಳು. ಆತ ನಗುತ್ತಾ ಇರುತ್ತಿದ್ದನು. ಸಂತೋಷದಿಂದ ಮಾತನಾಡುತ್ತಾ ಇದ್ದನು. ಗೆಳೆಯರು ಹೇಳಿದರು. ನೀನು ಏಕೆ ಮದುವೆಯಾದೆ?. ದಿನ ಬೈಗಳು ಕೇಳುತ್ತ ಇದಿಯಲ್ಲ ಎಂದರು. ಆಗ ಸಾಕ್ರೆಟಿಸ್ ಹೇಳಿದನು, ಊರೆಲ್ಲಾ ಹೊಗಳುವಾಗ ಒಬ್ಬರಾದರೂ ಬಯ್ಯೋದು ಬೇಡವೇ ಎಂದನು. ಇದೇ ದೃಷ್ಟಿ ಆತ ಸಂತನನ್ನಾಗಿ ಮಾಡಿದ್ದು. ಕೊನೆಗೆ ಸಾಕ್ರೆಟಿಸ್ ನ ಜೊತೆ ಜಾಂತಪಿ ಹೆಸರು ಉಳಿಯಿತು. ಯಾವ ಪ್ರಖ್ಯಾತ ರಾಜನ ಪತ್ನಿ ಹೆಸರಿದೆ ಹೇಳಿ. ಕೋಟ್ಯಾಧಿಪತಿ ಮದುವೆಯಾದರೂ ಜಾಂತಪಿ ಹೆಸರು ಉಳಿಯುತ್ತಿರಲಿಲ್ಲ. ಜಾಂತಪಿ ಹೇಳುತ್ತಾಳೆ, ಆಯ್ಕೆ ಮಾಡುವಾಗ ಯಾವುದು ನಮಗೆ ಸರಿಯಾಗುತ್ತೋ, ಅದನ್ನೇ ಆಯ್ಕೆ ಮಾಡಬೇಕು ಎಂದು. ನಾವು ಇರುವುದರ ಕಡೆ ಗಮನ ಹರಿಸುವುದಿಲ್ಲ. ಇಲ್ಲದರ ಕಡೆ ಗಮನ ಹರಿಸುತ್ತೇವೆ. ಇರುವುದನ್ನ ಎಣಿಸುತ್ತೇವೆ. ಮತ್ತೊಬ್ಬರೊಂದಿಗೆ ಹೋಲಿಸುತ್ತೇವೆ. ಇದೇ ತಾಪ. ವಸ್ತು ಇರುವುದು ಎಣಿಸಲು ಅಲ್ಲ, ಹೋಲಿಸಲು ಅಲ್ಲ, ಅನುಭವಿಸೋಕೆ. ಅನುಭವಿಸಿದರೆ ಸಾಕಲ್ಲ. ಅದೇ ತೃಪ್ತಿ. ಮತ್ತೊಂದು, ಸಮಸ್ಯೆ ನಮಗೆ ಏಕೆ ಆಯಿತು ಅಂತ, ಸಮಸ್ಯೆಯನ್ನೇ ಚಿಂತಿಸುತ್ತೇವೆ. ಆದರೆ ಪರಿಣಹಾರ ಕುರಿತು ಚಿಂತಿಸಿದರೆ, ಸಂತೋಷ. ಹೀಗೆ ನಾವು ಚೆನ್ನಾಗಿರುವುದನ್ನೇ ಆಯ್ಕೆ ಮಾಡಿಕೊಳ್ಳಬೇಕು. ಅಲ್ಲವೇ?

(ಮುಗಿಯಿತು)

-ಎಂ.ಪಿ. ಜ್ಞಾನೇಶ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ