ಶೌಚ - ಸ್ವಾಧ್ಯಾಯ
ಇಂದು ಪಾತಂಜಲ ಮಹರ್ಷಿಯ ಎರಡನೇ ಪಾದ, ಎರಡನೇ ಮೆಟ್ಟಿಲು, ನಾಲ್ಕನೇ ಉಪಾಂಗ ಸ್ವಾಧ್ಯಾಯದ ಬಗ್ಗೆ ತಿಳಿದುಕೊಳ್ಳೋಣ. ಸ್ವಾಧ್ಯಾಯ ಅಂದರೆ ಸ್ವ ಅಧ್ಯಾಯ - ತಿಳಿದುಕೊಳ್ಳುವುದು, ಓದುವುದು. ಬಲ್ಲವರ ಮಾತನ್ನು ಓದುವುದು, ಕೇಳುವುದು. ಪದೇ ಪದೇ ಓದಿದರೆ, ಪದೇ ಪದೇ ಕೇಳಿದರೆ, ಪದೇ ಪದೇ ಮಾಡಿದರೆ, ಜ್ಞಾನ ಡಾಲಾಗಿ ಪ್ರಕಾಶಿಸುತ್ತದೆ. ಜ್ಞಾನದ ಎಲ್ಲ ಮುಖ ಸ್ಪಷ್ಟವಾಗುತ್ತದೆ. ಬೆಳಿಗ್ಗೆ ಎದ್ದಾಗ ಮತ್ತು ಮಲಗುವ ಮುಂಚೆ ಓದೋದು, ಕೇಳುವುದು. ಉದಾಹರಣೆಗೆ ಭಗವದ್ಗೀತೆಯಲ್ಲಿ ಒಂದು ಮಾತು ಬರುತ್ತದೆ. "ಬಲ್ಲವರು ಬರುವ ವಸ್ತುಗಳಿಗಾಗಲಿ, ಹೋದ ವಸ್ತುಗಳಿಗಾಗಲಿ ಚಿಂತಿಸುವುದಿಲ್ಲ. ಓ ಮನುಷ್ಯನೇ ನೀನು ಜಾಣ. ನೀನು ಏಕೆ ಚಿಂತಿಸುವೆ"?.ಇಂತಹದನ್ನು ಓದಿದರೆ, ಆ ದಿನವೆಲ್ಲ ಸಂತೋಷ ತುಂಬಿರುತ್ತದೆ. ದಿನಕ್ಕೆ ಒಂದಾದರೂ ಒಳ್ಳೆಯ ಮಾತನ್ನು ಓದಬೇಕು ಅಥವಾ ಕೇಳಬೇಕು. ಶರಣರ ವಚನಗಳು ಹೆಚ್ಚಿಲ್ಲ ಕೇವಲ ನಾಲ್ಕು ಸಾಲು ಮಾತ್ರ. ಉದಾಹರಣೆಗೆ "ಆಸೆಯೆಂಬುದು ಅರಸಂಗೆ ಅಲ್ಲದೆ ಶಿವಭಕ್ತರಿಗೆ ಉಂಟೇ". ವಿಜ್ಞಾನ, ತತ್ವ ಜ್ಞಾನ ಯಾವುದೇ ಇರಲಿ ಓದಬೇಕು. ಅದರಲ್ಲಿ ಸತ್ಯ ಇದೆಯಾ ಅನ್ನುವುದು ಬಹಳ ಮುಖ್ಯ. ಪಾತಂಜಲ ಇದನ್ನೇ ಓದು ಎಂದು ಹೇಳುವುದಿಲ್ಲ. ಏನು ಒಳ್ಳೆಯದಿದೆ?. ಅದನ್ನು ಓದು, ಅಂತ ಹೇಳುತ್ತಾನೆ. ಯಾವುದನ್ನು ಓದಿದರೆ ಮನಸ್ಸು ನಿರ್ವೀಕಾರವಾಗುತ್ತದೆ, ಸಮಾಧಾನ ಸಿಗುತ್ತದೆ, ಅಂತಹದನ್ನು ಓದಬೇಕು. ಓದಲು ಆಗದಿದ್ದರೆ ಕೇಳಬೇಕು. ಓದಿದ್ದನ್ನು ಕೇಳಿದ್ದನ್ನು ಇನ್ನೊಬ್ಬರಿಗೆ ಹೇಳಬೇಕು.
ಜ್ಞಾನ ಮಹತ್ವದ್ದು. ನಾವು ಯಾವುದರಲ್ಲಾದರೂ ಯಶಸ್ವಿಯಾಗಬೇಕಾದರೆ ಜ್ಞಾನ ಬೇಕು. ಯಾವುದನ್ನು ಪಡೆಯಬೇಕು ಅನ್ನುತ್ತೀರಿ, ಅದರ ಸ್ಪಷ್ಟ ಜ್ಞಾನ ಇರಬೇಕು. ಅದರ ಮಾರ್ಗದ ಸ್ಪಷ್ಟ ತಿಳುವಳಿಕೆ ಇರಬೇಕು. ಆಮೇಲೆ ಮಾರ್ಗ ಸಾಧನೆಯ ಕಲ್ಪನೆ ಇರಬೇಕು. ನಾವು ಎವರೆಸ್ಟ್ ಏರಬೇಕೆಂದು ಹೊರಟರೆ, ಎವರೆಸ್ಟ್ ಎಂದರೆ ಏನು?. ಅದು ಹೇಗಿದೆ?. ಅದು ಎಷ್ಟು ಎತ್ತರ ಇದೆ?. ಅದು ಎಲ್ಲಿದೆ?. ಇದನ್ನೆಲ್ಲಾ ನಾವು ತಿಳಿದುಕೊಳ್ಳಬೇಕು. ಆ ಬಳಿಕ ಮಾರ್ಗ ಯಾವುದು?. ಅಲ್ಲಿ ಬರುವ ತೊಂದರೆಗಳೇನು?. ಇದನ್ನೆಲ್ಲ ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಮಾರ್ಗದಲ್ಲಿ ಬರುವ ತೊಂದರೆ ಏನು? ತಿಳಿದಿರಬೇಕಾಗುತ್ತದೆ. ಏನು ಗೊತ್ತಿಲ್ಲದ ಮನುಷ್ಯ, ಎವರೆಸ್ಟ್ ಏರುವ ಕನಸು ಕಂಡರೆ, ಅದು ಸಾಧ್ಯವಾಗುವುದಿಲ್ಲ. ಜ್ಞಾನ ಬಹಳ ಬಹಳ ಮಹತ್ವದ್ದು. ಮನುಷ್ಯನನ್ನು ಮನುಷ್ಯನನ್ನಾಗಿ ರೂಪಿಸಿರುವುದೇ ಜ್ಞಾನ. ಆಕಾಶಕ್ಕೆ ಏರಬೇಕಾದರೆ ಸುಮ್ಮನೆ ಏರಲು ಸಾಧ್ಯವಿಲ್ಲ. ಅದರ ಜ್ಞಾನ ಸಂಪೂರ್ಣವಾಗಿ ಇರಬೇಕು. ಇದೆಲ್ಲ ಒಂದು ದಿನದಲ್ಲಿ ತಿಳಿದುಕೊಳ್ಳಲು ಸಾಧ್ಯವಿಲ್ಲ. ಮನುಷ್ಯ ಸಾವಿರಾರು ವರ್ಷಗಳಿಂದ ಈ ಜಗತ್ತನ್ನು, ಈ ಜಗತ್ತಿನ ನೀತಿ ನಿಯಮಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾ ಇದ್ದಾನೆ. ಜ್ಞಾನ ಸಂಗ್ರಹಿಸುತ್ತ ಸಂಗ್ರಹಿಸುತ್ತಾ ಬಂದಿದ್ದಾನೆ. ಹಾಗೆ ಸಂಗ್ರಹಿಸಿದ್ದನ್ನು ಮುಂದಿನ ತಲೆಮಾರಿಗೆ ಕೊಡ್ತಾ ಬಂದಿದ್ದಾನೆ. ನಾವು ಈಗ ಜ್ಞಾನದ ಸಾಗರದಲ್ಲಿ ತೇಲುತ್ತಾ ಇದ್ದೀವಿ. ನಮ್ಮ ನಮ್ಮ ಕ್ಷೇತ್ರದಲ್ಲಿ ನಾವು ಏನು ಸಾಧಿಸಬೇಕು ಅಂತ ಇದ್ದೇವೆ ಅದರ ಜ್ಞಾನ ಬಹಳ ಅವಶ್ಯಕ. ಜ್ಞಾನ ಹೇಗೆ ಬರುತ್ತದೆ?. ಜ್ಞಾನ ವಿವಿಧ ರೂಪಗಳಲ್ಲಿ ಬರುತ್ತದೆ. ಜ್ಞಾನವು, ಮಾಡಿ ಬರುತ್ತದೆ, ನೋಡಿ ಬರುತ್ತದೆ, ಚಿಂತಿಸಿ ಬರುತ್ತದೆ, ಕೇಳಿ ಬರುತ್ತದೆ, ಓದಿ ಬರುತ್ತದೆ, ಸಂಘದಿಂದ ಬರುತ್ತದೆ. ಜ್ಞಾನದ ಮಾರ್ಗ ಬಹಳಷ್ಟು ಇವೆ. ನಾವು ಮುಕ್ತವಾಗಿದ್ದರೆ ಜ್ಞಾನ ತನ್ನಷ್ಟಕ್ಕೆ ತಾನೇ ಹರಿದು ಬರುತ್ತದೆ.
ಕಣ್ಣು ತೆರೆದರೆ ರೂಪಜ್ಞಾನ ಬರುತ್ತದೆ. ಕಿವಿ ತೆರೆದರೆ ಶಬ್ದದ ಜ್ಞಾನ ಬರುತ್ತದೆ. ಮನಸ್ಸು ತೆರೆದರೆ ಭಾವನೆಗಳ ದರ್ಶನ ಉಂಟಾಗುತ್ತದೆ. ಬುದ್ಧಿ ಬಳಸಿದರೆ ಹಲವಾರು ಆಲೋಚನೆಗಳು ಹೊಳೆಯುತ್ತವೆ. ನಾವು ಹೀಗೆ ಎಲ್ಲಾ ರೀತಿಯಿಂದ ಇಂದ್ರಿಯಗಳನ್ನು ಬಳಸಿಕೊಂಡು ಜ್ಞಾನವನ್ನು ಪಡೆಯಬೇಕಾಗುತ್ತದೆ. ಅದಕ್ಕಾಗಿ ಸ್ವಾಧ್ಯಾಯ. ಜ್ಞಾನ ನಿಧಾನವಾಗಿ ಬರುತ್ತದೆ. ಕ್ರಮ ಕ್ರಮವಾಗಿ ಬರುತ್ತದೆ. ಹಿಡಿಯಾಗಿ ಒಮ್ಮಲೇ ಬರುವುದಿಲ್ಲ. ನಿಧಾನವಾಗಿ ಜ್ಞಾನ ಬರುತ್ತದೆ. ಮನುಷ್ಯ ನಿಧಾನವಾಗಿ ವ್ಯವಧಾನದಿಂದ ಪಡೆಯಬೇಕು. ಅದು ಸರಿಯಾದ ಜ್ಞಾನ ಪಡೆಯಬೇಕು. ಅದು ಬಹಳ ಮಹತ್ವ. ನಾವು ಬಹಳಷ್ಟು ತಿಳಿದುಕೊಂಡಿರುತ್ತೇವೆ. ಕೆಲವೊಮ್ಮೆ ಅದರಲ್ಲಿ ಸತ್ಯ ಕಡಿಮೆ ಇರುತ್ತದೆ. ತಪ್ಪು ತಪ್ಪು ಜ್ಞಾನಪಡೆದರೆ ಲಾಭವಿಲ್ಲ. ಜ್ಞಾನ ವಾಸ್ತವಿಕ ಇರಬೇಕು. ಅದರಲ್ಲಿ ಸತ್ಯ ಇರಬೇಕು. ವಸ್ತು ಹೇಗಿದೆಯೋ ಹಾಗೆ ಜ್ಞಾನ ಇರಬೇಕು. ಇರುವುದು ಒಂದು ರೀತಿ, ನಾವು ತಿಳಿದುಕೊಳ್ಳುವುದು ಒಂದು ರೀತಿಯಾದರೆ, ಅದು ಬದುಕು ಕಟ್ಟಿಕೊಳ್ಳಲು ಸಹಾಯ ಮಾಡುವುದಿಲ್ಲ. ಉದಾಹರಣೆಗೆ 100 ಮೂಟೆ ಸಿಮೆಂಟ್ ತಂದಿದ್ದಾನೆ. ಅದರಲ್ಲಿ ಸಿಮೆಂಟ್ ಅಂಶ ಇಲ್ಲ ಎಂದಾಗ, ಅದರಿಂದ ಕಟ್ಟಡ ಕಟ್ಟಲು ಸಾಧ್ಯವೇ?. ಜ್ಞಾನದಲ್ಲಿ ಸತ್ಯಾಂಶ ಬಹಳ ಮುಖ್ಯ. ಆ ಸತ್ಯಾಂಶ ಬರಬೇಕಾದರೆ ಸರಿಯಾಗಿ ನೋಡಬೇಕು, ಸರಿಯಾಗಿ ಕೇಳಬೇಕು, ಸರಿಯಾಗಿ ಯೋಚಿಸಬೇಕು, ಎಲ್ಲದಕ್ಕೂ ಸರಿ ಸರಿ ಇರಬೇಕಲ್ಲ, ಹಾಗಿದ್ದಾಗ ಜ್ಞಾನ ಬದುಕನ್ನು ಶ್ರೀಮಂತ ಮಾಡಿಸುತ್ತದೆ. ಇಂತಹ ಜ್ಞಾನವನ್ನು ಪಾತಂಜಲ ಮಹರ್ಷಿ ಹೇಳುತ್ತಾರೆ ಸ್ವಾಧ್ಯಾಯದಿಂದ ಪಡೆಯಬೇಕು. ಒಳ್ಳೆಯ ಮಾತುಗಳನ್ನು ಓದಬೇಕು, ಕೇಳಬೇಕು, ಚಿಂತನೆ ಮಾಡಬೇಕು. ಯಾವುದನ್ನು ಮತ್ತೆ ಮತ್ತೆ ನೋಡುತ್ತೇವೆ, ಮತ್ತೆ ಮತ್ತೆ ಕೇಳುತ್ತೇವೆ, ಮತ್ತೆ ಮತ್ತೆ ಮಾಡುತ್ತೇವೆ, ಮತ್ತೆ ಮತ್ತೆ ಚಿಂತನೆ ಮಾಡುತ್ತೇವೆ, ಆ ಜ್ಞಾನ ನಮ್ಮ ಮನಸ್ಸಿನಲ್ಲಿ ಜೀರ್ಣವಾಗುತ್ತದೆ, ಮೈಗೂಡುತ್ತದೆ, ತನ್ನದಾಗುತ್ತದೆ.
ಪಾತಂಜಲ ಮಹರ್ಷಿ ಹೇಳುತ್ತಾರೆ ಆವೃತ್ತಿ, ಅಧ್ಯಾಯ ಎನ್ನುವ ಎರಡು ಪದ. ಆವೃತ್ತಿ ಎಂದರೆ ಮತ್ತೆ ಮತ್ತೆ ಎಂದರ್ಥ, ಮತ್ತೆ ಮತ್ತೆ ಓದುವುದು, ಮತ್ತೆ ಮತ್ತೆ ಕೇಳುವುದು, ಮತ್ತೆ ಮತ್ತೆ ನೋಡುವುದು, ಮತ್ತೆ ಮತ್ತೆ ಮಾಡುವುದು. ಸ್ವ ಅಂದರೆ ಮನಸ್ಸನ್ನು ಮಗ್ನಗೊಳಿಸಿ, ಅಧ್ಯಯನ ಮಾಡುವುದು, ಮತ್ತು ಭಾವಿಸಿಕೊಳ್ಳುವುದು. ಮನಸ್ಸಿನ ಬೆಳವಣಿಗೆ ಆಗಬೇಕಾದರೆ ಸ್ವಾಧ್ಯಾಯ ಬೇಕಾಗುತ್ತದೆ. ಎಲ್ಲಿ ಆವೃತ್ತಿ ಇಲ್ಲ, ಅಧ್ಯಯನ ಇಲ್ಲ, ಜ್ಞಾನದ ಸ್ಪರ್ಶ ಆಗುವುದಿಲ್ಲ. ನನಗೆ ಸೂರ್ಯನ ಬೆಳಕು ಆಗಬೇಕಾದರೆ ಮನೆಯಿಂದ ಹೊರಗೆ ಬರಬೇಕು. ಆಗ ಸೂರ್ಯನ ಬೆಳಕು ಸ್ಪರ್ಶ ಮಾಡುತ್ತದೆ, ಚೇತನ ಕೊಡುತ್ತದೆ. ಹಾಗೆ ಕಣ್ಣು, ಕಿವಿ, ನಾಲಿಗೆ, ಮೂಗು, ಮನಸ್ಸು ಮತ್ತು ಬುದ್ಧಿಯನ್ನು ಮುಕ್ತವಾಗಿ ತೆರೆದಿಟ್ಟರೆ, ಜ್ಞಾನ ಹರಿದು ಬರಲು ಪ್ರಾರಂಭವಾಗುತ್ತದೆ. ಕಣ್ಣು ಮುಚ್ಚಿದ್ದರೆ ಜಗತ್ತಿನ ಸೌಂದರ್ಯ ಜ್ಞಾನ ಆಗುವುದಿಲ್ಲ. ಕಿವಿ ಮುಚ್ಚಿದರೆ ಶಬ್ದ ಜ್ಞಾನ ಆಗುವುದಿಲ್ಲ. ಮನಸು ಮುಚ್ಚಿದರೆ ಅನುಭವ ಆಗುವುದು ಹೇಗೆ?. ಬುದ್ಧಿಮುಚ್ಚಿಟ್ಟರೆ ಜ್ಞಾನ ಆಗುವುದು ಹೇಗೆ? ಜ್ಞಾನ ಪೂರ್ವದ್ದಾದರೇನು?, ಪಶ್ಚಿಮದ್ದಾದರೇನು?, ಮೇಲಿನದಾದರೆ ಏನು?, ಕೆಳಗಿನದಾದರೇನು?. ಬಿಳಿಯರ ದಾದರೇನು?. ಕರಿಯರದಾರೇನು?, ಜ್ಞಾನ ಮುಖ್ಯನೇ ವಿನಹ ಬೇರೆನಿಲ್ಲ. ಆ ಜ್ಞಾನ ಈ ಜ್ಞಾನ ಅಲ್ಲ. ಸತ್ಯ ಎಲ್ಲಿಂದ ಬಂದರೇನು?. ಮನಸ್ಸಿಗೆ ಶಕ್ತಿ ಬರುವುದು ಸ್ವಾಧ್ಯಾಯದಿಂದ, ಆವೃತ್ತಿಯಿಂದ. ಒಂದು ಸಲ ಅಲ್ಲ, ಎರಡು ಸಲ ಅಲ್ಲ, ಮತ್ತೆ ಮತ್ತೆ ನೋಡಬೇಕು, ಕೇಳಬೇಕು, ಮಾಡಬೇಕು. ಮತ್ತೆ ಮತ್ತೆ ಮಾಡುವುದರಿಂದ ಸುಲಭವಾಗುತ್ತದೆ ಹಾಗೂ ಮೈಗೂಡುತ್ತದೆ. ಮತ್ತೆ ಮತ್ತೆ ನೋಡುತ್ತಾ ಇದ್ದರೆ ಅದರ ಹೊಸ ಮುಖಗಳು ಗೊತ್ತಾಗುತ್ತದೆ. ಒಂದು ಸಲ ನೋಡಿದ ಕೂಡಲೇ ಜ್ಞಾನ ಆಗುವುದಿಲ್ಲ.
ನ್ಯೂಟನ್ ಒಂದು ಹಣ್ಣು ಕೆಳಗೆ ಬಿದ್ದುದ್ದನ್ನು ನೋಡಿದ. ಜ್ಞಾನ ಆಗಲಿಲ್ಲ. ಪ್ರಶ್ನಿಸಿದ. ಏಕೆ ಬಿತ್ತು?. ಅಲ್ಲೇ ಏಕೆ ಬಿತ್ತು?. ಮೇಲೆ ಏಕೆ ತೇಲಲಿಲ್ಲ?, ಸುತ್ತಾಡಲಿಲ್ಲ ಏಕೆ?. ಹೀಗೆ ಪ್ರಶ್ನೆ ಕೇಳಿದ ಉತ್ತರ ಸಿಗಲಿಲ್ಲ. ಅದನ್ನೇ ಮತ್ತೆ ವರ್ಷಾನುಗಟ್ಟಲೆ ಚಿಂತಿಸಿದ, ಚಿಂತಿಸುತ್ತಲೇ ಇದ್ದ. ಮನಸ್ಸನ್ನು ಕೇಂದ್ರೀಕರಿಸಿ ಮತ್ತೆ ಮತ್ತೆ ಚಿಂತನೆ ಮಾಡಿದ. ಆಗ ಒಂದು ದಿನ ಹೊಳೆಯಿತು. ಅದ್ಭುತವಾದ ಶಕ್ತಿ ಹೊಂದಿದೆ, ಅದು ಗುರುತ್ವಾಕರ್ಷಣ ಶಕ್ತಿ. ಇಡೀ ಜಗತ್ತನ್ನ ಹಿಡಿದಿಟ್ಟಿರುವುದು. ಯಾವುದು ಇರುವುದರಿಂದ ಆಕಾಶದಲ್ಲಿರುವ ಸೂರ್ಯ, ಚಂದ್ರ, ನಕ್ಷತ್ರಗಳು ಸುತ್ತುತ್ತಾ ಇದ್ದಾವೆ, ಆ ಸಿದ್ಧಾಂತ ಗೊತ್ತಾಗಿತ್ತು. ನಿಯಮ ಗೊತ್ತಾಗಿತ್ತು. ನಮಗೆ ಅವಸರ. ಒಂದು ಸಾರಿ ಓದಬೇಕು. ಅದು ನೆನಪಾಗಬೇಕು. ಅದು ನೆನಪಾಗುವುದಿಲ್ಲ. ಪಾತಂಜಲ ಮಹರ್ಷಿ ಹೇಳಿದ್ದು ಮತ್ತೆ ಮತ್ತೆ ಓದಬೇಕು, ಕೇಳಬೇಕು, ಮಾಡಬೇಕು, ಅವಸರ ಮಾಡಿದರೆ ಆಗುವುದಿಲ್ಲ. ಏಕ್ ದಂ ಓದಿದರೆ ಆಗುವುದಿಲ್ಲ, ಕೇಳುವುದಿದ್ದರೆ ಒಂದೊಂದೇ ಶಬ್ದವನ್ನು ಕೇಳಬೇಕು. ಜಾತ್ರೆಯಲ್ಲಿ ಸಾವಿರ ಶಬ್ದ ಇರುತ್ತದೆ. ಯಾವುದಾದರೂ ಅರ್ಥ ಆಗುತ್ತದೆಯೇ?. ಒಂದೊಂದೇ ಶಬ್ದ ಕೇಳಬೇಕು. ಊಟ ಮಾಡುವಾಗ ಒಂದೊಂದೇ ತುತ್ತು ತಿನ್ನುತ್ತೇವೆ. ಏಕದಂ ಅರ್ಧ ಕೆಜಿ ತಿನ್ನಲಾಗುವುದಿಲ್ಲ, ಸಾಧ್ಯವಿಲ್ಲ. ಸಾವಕಾಶವಾಗಿ ತುತ್ತು ತುತ್ತು ತಿನ್ನುತ್ತಾ ಹೋಗುತ್ತೇವೆ. ಎಷ್ಟೇ ಅವಸರ ಇದ್ದರೂ ತುತ್ತೇ ತಿನ್ನಬೇಕು. ಗಿಡಗಳಿಗೆ ಹನಿ ಹನಿಯಾಗಿ ನೀರು ಹಾಕಿದರೆ ಚೆನ್ನಾಗಿ ಕುಡಿಸಿದಂತೆ ಆಗುತ್ತದೆ. ಸಣ್ಣ ಮಕ್ಕಳಿಗೆ ತಿನಿಸುವುದನ್ನು ನೋಡಿದ್ದೀರಿ. ಒಂದು ಚಮಚ ಸಾವಕಾಶವಾಗಿ ತಿನ್ನಿಸುತ್ತೇವೆ, ನಂತರ ಮತ್ತೊಂದು ಚಮಚ. ಹೀಗೆ ಜ್ಞಾನ ಕ್ಷೇತ್ರದಲ್ಲಿ ಏಕ್ ದಮ್ ಜ್ಞಾನಿಯಾಗಲು ಸಾಧ್ಯವಿಲ್ಲ. ನಿಧಾನವಾಗಿ ನಿಧಾನವಾಗಿ ಇಷ್ಟಿಷ್ಟೇ ಇಷ್ಟಿಷ್ಟೇ ಜ್ಞಾನ ಮಾಡಿಕೊಳ್ಳುತ್ತಾ ಹೋದರೆ ಜ್ಞಾನದ ಭಂಡಾರ ತಯಾರಾಗುತ್ತದೆ. ಅವಸರ ಮಾಡಿದರೆ ಅದು ಚೆಲ್ಲುತ್ತದೆ. ಮೈ ಹಿಡಿಯುವುದಿಲ್ಲ. ಈ ಸ್ವಾಧ್ಯಾಯದಲ್ಲಿ ನಾಲ್ಕು ಪ್ರಕಾರ.
1. ವೇದ ಸ್ವಾಧ್ಯಾಯ
2. ಮಂತ್ರ ಸ್ವಾಧ್ಯಯ
3. ನಾದ ಸ್ವಾಧ್ಯಾಯ
4.ಆತ್ಮ ಸ್ವಾಧ್ಯಾಯ
ಪ್ರತಿಯೊಂದನ್ನು ಮುಂದಿನ ಲೇಖನದಲ್ಲಿ ನೋಡೋಣ ಅಲ್ಲವೇ?
-ಎಂ.ಪಿ. ಜ್ಞಾನೇಶ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ