ಶ್ಯಾಮನು ಬಾರನೇ..
ಕವನ
ಆತುರ ತುಂಬಿದೆ ಶ್ಯಾಮನ ಕಾಣಲು
ಕಾತರವರಿಯನೆ ಶ್ರೀಹರಿಯೂ
ಚಾತಕ ಪಕ್ಷಿಯ ತರದಲಿ ಕಾದಿಹೆ
ಮಾತಿಗೆ ನಿಲುಕದ ಭಾವನೆಯೂ
ಮುರಳಿಯ ನಾದವು ಕೇಳುತಲಿರುವುದು
ಮರೆಯಲಿ ನಿಂತನೆ ಕಾಣಿಸದೆ
ಕರುಣೆಯ ಮೂರುತಿ ಮಾಧವಗೀದಿನ
ತರುಣಿಯ ಪ್ರೇಮವು ಮರೆತಿಹುದೆ
ಹುಣ್ಣಿಮೆ ಚಂದ್ರನ ಕಾಂತಿಯು ಚೆಲ್ಲಿದೆ
ತಣ್ಣನೆ ಗಾಳಿಯು ಬೀಸುತಿದೆ
ಕಣ್ಣಿಗೆ ಕಾಣದೆ ಕೇಶವನವಿತಿಹ
ಸಣ್ಣನೆ ವೇದನೆ ಕಾಡುತಿದೆ
ಬಾರನೆ ಈದಿನ ಯಮುನೆಯ ತೀರಕೆ
ಕಾರಣವರಿಯದೆ ಬೆಂದಿರುವೆ
ತೋರುತ ಕರುಣೆಯ ಬೇಗನೆ ಬಾರೆಯ
ದಾರಿಯ ಕಾಯುತ ನೊಂದಿರುವೆ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
(ಚಿತ್ರ ಕೃಪೆ ಅಂತರ್ಜಾಲ)
ಚಿತ್ರ್
