ಶ್ರದ್ಧಾ

ಶ್ರದ್ಧಾ

ಬರಹ

ಪಂಚಮುಖಿ ತಂಡವರಿಂದ ದಿ||ವಾಸುದೇವಜೋಶಿ ಅವರಿಗೆ ವಿಶೇಷ ಶ್ರದ್ಧಾಂಜಲಿ

ಎರಡು ತಿಂಗಳ ಹಿಂದಷ್ಟೇ ನಮ್ಮನ್ನು ಬಿಟ್ಟಗಲಿದ ಚಿತ್ರ ನಿರ್ಮಾಪಕ ಶ್ರೀ ವಾಸುದೇವ ಜೋಶಿ ಅವರ ಸವಿನೆನಪಿನಲ್ಲಿ ಮತ್ತು ಅವರ ಶ್ರದ್ಧಾಂಜಲಿಯನ್ನು ಅವರ ಪುತ್ರ ಶ್ರೀ ವಿನಾಯಕ ಜೋಶಿ ವಿಶೇಷವಾಗಿ ಅರ್ಪಿಸಿದರು. ರಂಗಶಂಕರದಲ್ಲಿ ಶ್ರದ್ಧಾ ಎಂಬ ನಾಟಕದಲ್ಲಿ.

ಉಗ್ರರೂಪಿ ತಂದೆಗೆ ಇರುವ ಶೀನು (ಶ್ರೀನಿವಾಸ) ಎಂಬ ಸದಾ ಚೇಷ್ಟೆ ಮಾಡುವ ಮಗ ಬೆಳೆಬೆಳೆಯುತ್ತಾ ತನ್ನ ತಂದೆಯ ಬಗ್ಗೆ ತಾಳುವ ಗೌರವ, ಅವರು ತೀರಿಕೊಂಡ ಬಳಿಕ ಮಾಘ ಮಾಸದ ಶುಕ್ಲ ಪಕ್ಷದ ದ್ವಾದಶಿಯ ದಿನದಂದು ತನ್ನ ತಂದೆಯ ಶ್ರಾದ್ಧದ ದಿನ. ಅಂದಿನ ದಿನ ವಿಶೇಷವಾಗಿ ತನ್ನ ತಂದೆಯ ನೆನಪು ತೀವ್ರವಾಗುತ್ತಾ ಹೋಗುತ್ತದೆ. ಅಂದಿನ ದಿನ ಅವನು ತನ್ನ ತಂದೆಯ ಜೊತೆ ತನ್ನ ಸಂಬಂಧ ಮತ್ತು ತನ್ನ ತಂದೆಯ ಸಂಬಂಧ ತನ್ನ ಜೊತೆ ಹೇಗೆ ಇತ್ತು. ಅವರು ತೀರಿಕೊಂಡ ಬಳಿಕ ತನ್ನನ್ನು ಹೇಗೆ ಕಾಡಿತು ಎಂಬುದನ್ನು ಪ್ರೇಕ್ಷಕರೊಂದಿಗೆ ಹಂಚಿಕೊಳ್ಳುತ್ತಾನೆ. ತೀರಿಹೋದ ತಂದೆಯ ನೆನಪನ್ನು ಮಾಡಿಕೊಂಡು ಪ್ರೀತಿಯಿಂದ ಎರಡು ಹನಿ ಕಣ್ಣೀರಿಡುವುದೇ ಅವರಿಗೆ ಶ್ರದ್ಧೆಯಿಂದ ಸಲ್ಲಿಸುವ ನಿಜವಾದ ಶ್ರಾದ್ಧ ಎಂಬುದು ನಾಟಕದ ತಿರುಳು. ಬಹಳ ಶ್ರದ್ಧೆಯಿಂದ ಈ ನಾಟಕವನ್ನ ಶ್ರೀ ವಿನಾಯಕ ಜೋಶಿ ನಿರ್ದೇಶಿಸಿದ್ದಾನೆ. ತಂದೆಯ ಪಾತ್ರದಲ್ಲಿ ತಾನೇ ಒಳ್ಳೆಯ ಅಭಿನಯ ಕೂಡಾ ನೀಡಿದ್ದಾನೆ.

ಅವನ ಮಗನ ಪಾತ್ರದಲ್ಲಿ ಮೂರು ಹುಡುಗರು ನಟಿಸಿದ್ದಾರೆ. ವಸಂತಶಾಸ್ತ್ರಿ, ಶ್ರೀಪತಿ ಮತೊಬ್ಬನ ಹೆಸರು ತಿಳಿದಿಲ್ಲ. ನಾಟಕದಲ್ಲಿ ಇರುವುದು ಕೇವಲ ಆರೇ ಪಾತ್ರ. ಒಂದು ವಿಶೇಷ ಪಾತ್ರ ಇದೆ. ಅದು ನಾಟಕದಲ್ಲಿ ಬರುವ ಶೀನು ಮತ್ತು ಅವನ ತಂದೆಯ ಮನಸ್ಸು. ಶಿಜು ಎನ್ನುವ ಯುವಕ ಆ ಪಾತ್ರವನ್ನು ಬಹಳ ಚೆನ್ನಾಗಿ ನಿಭಾಯಿಸಿದ್ದಾನೆ. ಮತ್ತೊಂದು ತಾಯಿಯ ಪಾತ್ರ ಆಕೆ ಸಹ ತನ್ನ ಇತಿಮಿತಿಯಲ್ಲಿ ಆ ಪಾತ್ರದಲ್ಲಿ ಚೆನ್ನಾಗಿ ನಟಿಸಿದ್ದಾರೆ.

ಸಂಗೀತ ಸಹ ಅಷ್ಟೇ ಶ್ರದ್ಧೆಯಿಂದ ಕೂಡಿದೆ (ಪ್ರವೀಣ್ ಬಿ.ವಿ ಮತ್ತು ರಾಜ್‍ಗುರು)
ಬೆಳಕು ಅರುಣ್ ಮೂರ್ತಿ: ರೈಲಿನಲ್ಲಿ ಮುಂಬೈಗೆ ಹೊರಡುವ ದೃಶ್ಯದಲ್ಲಂತೂ ಪ್ರೇಕ್ಷಕರೂ ಸಹ ರೈಲಿನಲ್ಲಿ ಪಯಣಿಸುತ್ತಿದ್ದಾರೇನೋ ಎಂಬಷ್ಟು ಅದ್ಭುತವಾಗಿ ಸಂಯೋಜಿಸಿದ್ದಾರೆ.

ಇವರೆಲ್ಲರೂ ದಿ||ವಾಸುದೇವ ಜೋಶಿ ಅವರಿಗೆ ಒಳ್ಳೆಯ ರೀತಿಯಲ್ಲಿ ಶ್ರದ್ಧಾಂಜಲಿಯನ್ನ ಅರ್ಪಿಸಿದ್ದಾರೆ. ಇದಕ್ಕಾಗಿ ಈ ನಾಟಕವನ್ನು ನಿರ್ಮಾಣ ಮಾಡಿರುವ ಪಂಚಮುಖಿ ನಾಟಕ ತಂಡದವರಿಗೆ ಕೃತಜ್ಞತೆ ಸಲ್ಲಲೇಬೇಕು. ಶ್ರದ್ಧಾ ಇಳ್ಳೆಯ ನಾಟಕ ಎಲ್ಲಾ ತಂದೆಯರಿಗೂ ಇದು ಅರ್ಪಣೆಯಾಗಿದೆ. ಸಮಯ ಸಿಕ್ಕರೆ ಎಲ್ಲರೂ ಈ ನಾಟಕವನ್ನು ನೋಡಲೇಬೇಕು. ಒಳ್ಳೆಯ ನಾಟಕಗಳಿಗೆ ಪ್ರಶಂಸೆ ನೀವುಗಳು ನೀಡಲೇಬೇಕು. ಪಂಚಮುಖಿ ನಾತಕ ತಂಡದವರಿಗೆ ಶುಭವಾಗಲಿ ಅವರು ನಿರ್ಮಿಸುವ ಪ್ರತಿಯೊಂದು ನಾಟಕವೂ ಇಂತಹ ಸಭಿರುಚಿಯಾದ್ದಂತಾಗಿರಲಿ ಎಂದು ನಾವೆಲ್ಲರೂ ಕೂಡಿ ಹಾರೈಸೋಣ. ನೀವೂ ಸಹ ಈ ನಾಟಕವನ್ನ ನೋಡಿ ಶ್ರೀ ವಾಸುದೇವ ಜೋಶಿಯವರಿಗೆ ಶ್ರದ್ಧೆಯಿಂದ ಶ್ರದ್ಧಾಂಜಲಿ ಅರ್ಪಿಸಿ.

ಶ್ರೀಚಂದ್ರ