ಶ್ರದ್ಧೆ-ವಾಸ್ತವಗಳ ಮಿಳಿತದ ಕಾಲಮಿತಿ

ಶ್ರದ್ಧೆ-ವಾಸ್ತವಗಳ ಮಿಳಿತದ ಕಾಲಮಿತಿ

ಕಾಲಮಿತಿ ಯಕ್ಷಗಾನದ ಮಾತುಕತೆಗಳು ಮರುಜೀವ ಪಡೆಯುತ್ತಿದೆ. ಶ್ರದ್ಧೆಯ ನೆರಳಿನಲ್ಲಿ ಕಟು ವಿಚಾರಗಳು ತೀಕ್ಷ್ಮವಾಗಿರುತ್ತದೆ. ಕಲೆಯೊಂದರ ಔನ್ನತ್ಯಕ್ಕಿದು ಒಳಸುರಿ. ವಾಸ್ತವಕ್ಕೆ ಬಂದಾಗ ರಾಜಿಯ ಛಾಯೆ. ಸಾಂಸ್ಕೃತಿಕ ಪಲ್ಲಟಗಳ ಮಧ್ಯೆ ಪರಂಪರೆಯ ಸೌಂದರ್ಯವನ್ನು ಉಳಿಸಿಕೊಳ್ಳುವ ಎಚ್ಚರ. ಹಾಗಾಗಿ ಶ್ರದ್ಧೆ ಮತ್ತು ವಾಸ್ತವಗಳನ್ನು ಮಿಳಿತಗೊಳಿಸಲೇ ಬೇಕಾಗಿದೆ.
ಆಟವೇ ಇರಲಿ, ಕೂಟವೇ ಇರಲಿ, ರಾತ್ರಿಯಿಡೀ ನಡೆಯುವ ಕಲಾಪ. ಪ್ರದರ್ಶನದ ಹಿಂದು ಮುಂದಿನ ವಿಮರ್ಶೆಗಳಲ್ಲಿ ಸಾಂಸ್ಕೃತಿಕ ಗಟ್ಟಿತನಗಳಿದ್ದ ಕಾಲಕ್ಕೆ ಹಿರಿಯರು ಸಾಕ್ಷಿಗಳಾಗುತ್ತಾರೆ. ಅಲ್ಲೋ ಇಲ್ಲೋ ರಾತ್ರಿಯಿಡೀ ಬಿಟ್ಟರೆ ತಾಳಮದ್ದಳೆಗಳು ಕಾಲಮಿತಿಗೊಂಡಿವೆ. ಆಟಗಳೂ ಅದೇ ಜಾಡಿನಲ್ಲಿ ಜಾರಿವೆ, ಜಾರುತ್ತಿವೆ.
ರಾತ್ರಿಯ ಪ್ರದರ್ಶನಗಳಲ್ಲಿ ಯಕ್ಷಗಾನೀಯವಾದ ರಸ ಸಂದರ್ಭಗಳು ವೈಭವ ಪಡೆಯುತ್ತವೆ. ಪಾತ್ರಕ್ಕಿರುವ ಎಲ್ಲಾ ಸಾಧ್ಯತೆಗಳನ್ನು ಸೂರೆಗೊಳ್ಳಲು ಯಥೇಷ್ಟ ಅವಕಾಶ. ಈ ಉಪಾಧಿಯಲ್ಲಿಯೇ ಕಲಾವಿದ ಸಶಕ್ತನಾಗಿ ಬೆಳೆಯುತ್ತಾನೆ. ಬಾಲಗೋಪಾಲ ವೇಷದಿಂದ ತೊಡಗಿ ಮುಖ್ಯ ಪಾತ್ರಗಳ ತನಕ ರಂಗವೇ ಗುರುಕುಲ. ಕಲಾವಿದರ ಒಡನಾಟವೇ ಪಠ್ಯ. ಅನಿವಾರ್ಯವಾದ ಅಲಿಖಿತ ಪದ್ಧತಿಗಳು ಕಲಾವಿದರ ಬೆಳವಣಿಗೆಯ ಸಿದ್ಧಾಹಾರ.
ಬೆರಳೆಣಿಕೆಯ ಮೇಳಗಳಲ್ಲಿ ಇಂತಹ ಶೈಕ್ಷಣಿಕ ರೂಢನೆಯಿದೆ. ಮಿಕ್ಕಂತೆ ಕಲಿಕೆ ಎನ್ನುವುದು ಹೆಜ್ಜೆ, ದಿಂಞಣಗಳಿಗೆ ಸೀಮಿತವಾಗಿದೆ. ವೇಗದ ಬದುಕಿನಲ್ಲಿ ಐದಾರು ತಿಂಗಳಲ್ಲೇ ದಿಢೀರ್ ಕಲಾವಿದರಾಗಬಹುದು! ಕಂಠ, ಸೊಂಟ ತ್ರಾಣಗಳಿದ್ದರೆ ಸಾಕು. ಪ್ರೇಕ್ಷಕರೂ ಇಂತಹ ಕಲಾವಿದರ ಸ್ವಾಗತಕ್ಕೆ ಸಜ್ಜಾಗುತ್ತಾರೆ! ಆಗ ರಂಗಕಲಿಕೆಯ ಆಯುಸ್ಸು ಇಳಿಜಾರಿನತ್ತ ನೋಡಲುಪಕ್ರಮಿಸುತ್ತದೆ. ಎಂಟೋ ಒಂಭತ್ತೋ ಘಂಟೆಗೆ ಶುರುವಾಗುವ ಪೂರ್ವರಂಗಕ್ಕೆ ಆಕಳಿಕೆಯ ಮಾಲೆ. ಇಡೀರಾತ್ರಿ ಕುಳಿತು ಆಟ ನೋಡುವ ಮನಃಸ್ಥಿತಿಯೂ ಮಂಕಾಗುತ್ತಿದೆ.
ಯಕ್ಷಗಾನದ ಸೌಂದರ್ಯ ವೈಭವ - ಪೂರ್ವರಂಗವೂ ಸೇರಿ - ದರ್ಶನಕ್ಕೆ ರಂಗ ಮತ್ತು ಕಲಾವಿದರ ಶ್ರಮ ಗುರುತರ. ಕಲೆಯ ಪ್ರಾಕಾರವೊಂದು ಅನುಷ್ಠಾನಗೊಂಡಾಗಲೇ ಬೆಳೆಯುತ್ತದೆ, ಉಳಿಯುತ್ತದೆ. ಅದನ್ನು ಬೆಂಬಲಿಸುವ, ಅದರಲ್ಲಿ ಸೌಂದರ್ಯವನ್ನು ಕಾಣುವ ಅರಿವು ಮತ್ತು ಮನಃಸ್ಥಿತಿಯನ್ನು ಪ್ರೇಕ್ಷಕರಾದ ನಾವು ರೂಢಿಸಿಕೊಳ್ಳಬೇಕು. ಅಭಿಮಾನದ ಹೊನಲು ರಂಗದ ಉಳಿವಿಗೆ ಪೂರಕವಾಗಬೇಕು. ವಿಪರೀತ ಅಭಿಮಾನವು ಕಲಾವಿದನ ಬೌದ್ಧಿಕ ಸ್ರೋತಕ್ಕೆ ತಡೆಯಾಗುತ್ತದೆ.
ಕೆಲವು ಬಯಲಾಟವನ್ನು ನೋಡುತ್ತಿದ್ದೇನೆ. ಸಂಘಟಕರ ಶ್ರಮದಿಂದಾಗಿ ಪ್ರೇಕ್ಷಕ ಗಡಣ ತುಂಬಿರುತ್ತದೆ. ಆದರಾತಿಥ್ಯಗಳಲ್ಲಿ ಕಾಂಚಾಣ ಸದ್ದು ಮಾಡುತ್ತಿರುತ್ತದೆ. ಪ್ರದರ್ಶನವೂ ರೈಸುತ್ತದೆ. ಅದ್ದೂರಿತನ ನಗುತ್ತದೆ. ಈ ಭಾಗ್ಯ ಎಷ್ಟು ಪ್ರದರ್ಶನಗಳಿಗಿವೆ? ಎಷ್ಟು ಮೇಳಗಳಿಗಿವೆ? ಆರಂಭಕ್ಕೆ ಸಾವಿರಾರು ಮಂದಿ ಸೇರಿದ್ದರೂ ಮಧ್ಯರಾತ್ರಿ ಕಳೆಯುವಾಗ ಕರಗುತ್ತದೆ. ಮುಂಜಾವಿಗಾಗುವಾಗ ಹತ್ತೋ ಇಪ್ಪತ್ತು ಮಂದಿ. ಉದಾ: ಮಧು ಕೈಟಭರ ಸನ್ನಿವೇಶದಲ್ಲಿ ಕಿಕ್ಕಿರಿದ ಜನಸಂದಣಿ. ಮಹಿಷಾಸುರ ಪ್ರವೇಶಕ್ಕೆ ಅಬ್ಬರದ ಆಟೋಪ. ಯಾವಾಗ ಮಹಿಷ ವಧೆ ಆಯಿತೋ ಆಗ ನೋಡಬೇಕು, ಅಲ್ಲಿದ್ದ ದ್ವಿಚಕ್ರಗಳ ಸದ್ದು ಮಾಡುವ ಪರಿ! ನಂತರದ ಕಥಾಭಾಗಕ್ಕೆ ಕಲ್ಪನೆಯ ಸ್ಪರ್ಶ. ವಾಟ್ಸಪ್ಪಿನಲ್ಲಿ ಚಾಟ್.
ಕಾಲಮಿತಿಯು ಪಟ್ಟಣಿಗರಿಗೆ ಖುಷಿ. ರಾತ್ರಿ ಹತ್ತರೊಳಗೆ ಮುಗಿಯುವ ಆಟವನ್ನು ಯಕ್ಷಪ್ರಿಯರು ತಪ್ಪಿಸಿ ಕೊಳ್ಳುವುದಿಲ್ಲ. ಇಲ್ಲಿರುವ ತೊಡಕು ಒಂದೇ. ನಾಲ್ಕು ಗಂಟೆಯಲ್ಲಿ ಮೂರು ಪ್ರಸಂಗಗಳನ್ನು ಮುಗಿಸುವ ಧಾವಂತ! ರಂಗದ ವೇಗವನ್ನು ಗ್ರಹಿಸುವ ತಾಕತ್ತು ಪ್ರೇಕ್ಷಕನ ಚಿತ್ತಕ್ಕಿರುವುದಿಲ್ಲ. ಔಚಿತ್ಯದ ಮಾತಿಗೂ ತಿಣುಕಾಡುವ ಪಾತ್ರಗಳು! ಒಂದೇ ಪ್ರಸಂಗವನ್ನು ಕಾಲಮಿತಿಯಲ್ಲಿ ಸರ್ವಾಂಗಸುಂದರವಾಗಿ ಮೂಡಿಸಲು ಸಾಧ್ಯವಾದರೆ ಇಡೀರಾತ್ರಿಯ ಪರಿಣಾಮ ಕಾಲಮಿತಿಯಲ್ಲಿ ತರಬಹುದು. ಹಾಗೆ ಆದೀತೆಂದು ನನಗಂತೂ ವಿಶ್ವಾಸವಿಲ್ಲ.
ಹಳ್ಳಿ, ಪೇಟೆಗಳ ಕಲಾಭಿಮಾನಿಗಳಿಗೆ ಅವರದ್ದೇ ಸಮಸ್ಯಾ ವರ್ತುಲಗಳಿವೆ. ಯಾರಿಗೂ ಪುರುಸೊತ್ತಿಲ್ಲ. ಎಲ್ಲರೂ ಬ್ಯುಸಿ. ಬೆರಳ ತುದಿಯಲ್ಲಿ ಸಾಂಸ್ಕೃತಿಕ ಆಯ್ಕೆಗಳ ನಿಯಂತ್ರಣವೇ ಸಿಂಹಪಾಲು. ಅಲ್ಲಿ ಯಕ್ಷಗಾನಕ್ಕೆ ಕೊನೆಯ ಸಾಲು. ರಾತ್ರಿಯಿಡೀ ಪ್ರೇಕ್ಷಕರು ಉಪಸ್ಥಿತರಿರುವ ವಾತಾವರಣದಲ್ಲಿ ಇಡೀ ರಾತ್ರಿಯ ಪ್ರದರ್ಶನ ಹೊಂದುತ್ತದೆ. ನಗರದಲ್ಲಿ ಕಾಲಮಿತಿಯೇ ಸೂಕ್ತ. ಇಷ್ಟೆಲ್ಲಾ ಹೇಳುವಾಗ ತಂಡದ ನಿರ್ವಹಣೆಯ ವ್ಯವಸ್ಥೆಯ ಸುಖ-ದುಃಖಗಳ ಚಿಂತನೆಯು ಇನ್ನೊಂದು ಮುಖದಿಂದ ಆಗಬೇಕಾಗಿದೆ.
ಶ್ರೀಕ್ಷೇತ್ರ ಧರ್ಮಸ್ಥಳ ಮೇಳವು ಕಾಲಮಿತಿಗೆ ಬದಲಾಗಿದೆ. ಪ್ರಸಿದ್ಧರನ್ನೊಳಗೊಂಡ ಮೇಳದ ಯಶೋಯಾನ ಈಗ ಇತಿಹಾಸ. ಯಾವುದೇ ಒಂದು ಪ್ರಾಕಾರ ಬದಲಾವಣೆಯಾಗುವಾಗ ಪರ-ವಿರೋಧ ಅಭಿಪ್ರಾಯಗಳು ಸಹಜ. ಕಿರಿದು ಸಮಯದಲ್ಲಿ ಉತ್ತಮ ಪ್ರದರ್ಶನವನ್ನು ನೀಡಲು ಮೇಳವು ಸಶಕ್ತವಾಗಲಿ. ಶತಮಾನಗಳ ಇತಿಹಾಸದ ಮೇಳದ ವೈಭವ ಕಾಲಮಿತಿಯಲ್ಲೂ ಮುಂದುವರಿಯಲಿ.
ತಂತ್ರಜ್ಞಾನಗಳು ಕ್ಷಣಕ್ಷಣಕ್ಕೆ ಬದಲಾಗುತ್ತಲೇ ಇರುತ್ತದೆ. ಅದರ ವೇಗವನ್ನು ಹಿಂದಿಕ್ಕಲು ಬದುಕಿನ ವೇಗ ಸಾಕಾಗುತ್ತಿಲ್ಲ. ಯಕ್ಷಗಾನದ ಮೇಲಿನ ಪ್ರೀತಿ ಬೇರೆ. ಆಸಕ್ತಿ ಬೇರೆ. ಅದನ್ನು ಸ್ವೀಕರಿಸುವ ಮನಃಸ್ಥಿತಿ ಬೇರೆ. ಈ ಮೂರರ ತ್ರಿವೇಣಿ ಸಂಗಮವು ಒಂದೇ ಹಳಿಯಲ್ಲಿ ಹರಿಯಬೇಕು. ವ್ಯಕ್ತಿ ಅಭಿಮಾನಕ್ಕಿಂತ ದುಪ್ಪಟ್ಟು ಕಲೆಯ ಅಭಿಮಾನವನ್ನು ರೂಢಿಸಿಕೊಳ್ಳುವುದೇ ಯಕ್ಷಗಾನಕ್ಕೆ ನಾವೆಲ್ಲರೂ ಕೊಡುವ ಕಾಣ್ಕೆ. (ಸಾಂದರ್ಭಿಕ ಚಿತ್ರಗಳು)
 
(ಚಿತ್ರ ಕೃಪೆ : ಡಾ.ಮನೋಹರ ಉಪಾಧ್ಯ)