ಶ್ರಾವಣ ಮಾಸ ಹಬ್ಬಗಳ ತೋರಣ

ಶ್ರಾವಣ ಮಾಸ ಹಬ್ಬಗಳ ತೋರಣ

ಆಷಾಢ ಕಳೆದು ಶ್ರಾವಣಮಾಸ ಬಂದೊಡನೆ ಸಾಲು ಸಾಲು ಹಬ್ಬಗಳು, ದಿನ ವಿಶೇಷಗಳ ಆಚರಣೆ, ಸಂಭ್ರಮ ಸಡಗರವನ್ನು ನಾವು ಕಾಣಬಹುದು. ಶ್ರವಣ ಎಂದರೆ ಶ್ರವಣಕ್ಕೆ ಮಹತ್ವ. ಕರ್ಣಗಳಿಗೆ ಕೆಲಸ. ಶ್ರಾವಣ ಮಾಸದಲ್ಲಿ ಕೆಲವು ಧಾರ್ಮಿಕ ಕ್ಷೇತ್ರದಲ್ಲಿ, ಸ್ಥಳೀಯ ಭಜನಾ ಮಂದಿರಗಳಲ್ಲಿ ಮಾಸವಿಡೀ ಪುರಾಣ ಪ್ರವಚನ, ಗಮಕವಾಚನ, ಮಹಾಭಾರತ, ರಾಮಾಯಣ, ಭಾಗವತ ವಾಚನವಿರುತ್ತದೆ. ಇದು ಶಿವನ ಮಾಸ. ಮಹಾ ಶಿವನೇ ಈ ಮಾಸದ ಆರಾಧ್ಯ ದೇವರು, ಜೊತೆಗೆ ಗೌರೀ ದೇವಿ, ಲಕ್ಷ್ಮೀಮಾತೆಯ ಪೂಜೆ, ಭೂಮಿ ಪೂಜೆ ಸಹ ಇರುತ್ತದೆ. ರುದ್ರ ಪಾರಾಯಣ ಶಿವ ಮಂದಿರಗಳಲ್ಲಿ, ಮನೆಗಳಲ್ಲಿ ನಡೆಯುತ್ತದೆ. ಲಯಾಧಿಕಾರಿಯಾದ ಪರಶಿವನನ್ನು ನಾಮವನ್ನು ಪಠಿಸುವುದರಿಂದ ಭಕ್ತರ ಕಷ್ಟಗಳು ನೀಗುತ್ತವೆ, ಒಲುಮೆ ಸಿಗುತ್ತದೆಂಬ ನಂಬಿಕೆಯಿದೆ . ಭಯನಿವಾರಕ ದೇವನಾತ. ರುದ್ರ ಪಠಣ ಮಾಡುವುದರಿಂದ ವಾತಾವರಣದಲ್ಲಿ ಸಕಾರಾತ್ಮಕ ಸ್ಪಂದನ ಉಂಟಾಗಬಹುದೆಂಬ ವಿಶ್ವಾಸ ಭಕ್ತರದ್ದಾಗಿದೆ.

ಶ್ರಾವಣದ ಹಬ್ಬಗಳ ಪರ್ವದತ್ತ ಬರೋಣ. ಸನಾತನ ಸಂಸ್ಕೃತಿಯಲ್ಲಿ ಆಚಾರ-ವಿಚಾರಗಳಿಗೆ ಅದರದ್ದೇ ಆದ ಮಹತ್ವವಿದೆ. ಜಾತಿಧರ್ಮಗಳನ್ನು ಮೀರಿದ ದೃಷ್ಟಿಕೋನವಿದೆ. ಇಲ್ಲಿ ಬಡವ-ಶ್ರೀಮಂತ ಭೇದಭಾವವಿಲ್ಲ .ಶ್ರದ್ಧಾಭಕ್ತಿ ಮುಖ್ಯ. ಮುಂದಿನ ಪೀಳಿಗೆಗೆ ಈ ಆಚರಣೆಗಳ ವರ್ಗಾವಣೆ ಆಗಬೇಕೆಂಬ, ಆಗಬಹುದೆಂಬ ನಂಬಿಕೆಯೂ ಅಡಗಿದೆ.ಇದು ನಮ್ಮ ಕರ್ತವ್ಯವೂ ಹೌದು. ಶ್ರಾವಣಮಾಸದ ಮೊದಲ ಶುಕ್ರವಾರ, ಮೊದಲ ಶನಿವಾರ ಲಕ್ಷ್ಮೀ ಮತ್ತು ಗೌರೀ ದೇವಿಯರ ಪೂಜೆಯನ್ನು ಮಾಡುವ ಸಂಪ್ರದಾಯವಿದೆ. ಸಕಲ ಸಂಪತ್ತಿನ ಪ್ರಾಪ್ತಿಗಾಗಿ ಪೂಜೆ, ನೈವೇದ್ಯ, ಆರತಿ ಮಾಡಿ ಭಕ್ತಿಯಿಂದ ನಮಿಸುತ್ತಾರೆ. ‘ಸಂಪತ್ ಶನಿವಾರ’ ಎಂದೂ ಕರೆಯುವ ವಾಡಿಕೆಯಿದೆ.

ನಾಗರಚೌತಿ, ನಾಗರ ಪಂಚಮಿಯಂದು ಕಲ್ಲಿನ ನಾಗನಿಗೆ ಹಾಲೆರೆಯುತ್ತಾರೆ. ಅಣ್ಣತಮ್ಮಂದಿರ ದೀರ್ಘಾಯುಷ್ಯಕ್ಕಾಗಿ ಶೇಷನನ್ನು ಉಪವಾಸ ವ್ರತವಿದ್ದು,ಸಹೋದರಿಯರು ಪೂಜಿಸುತ್ತಾರೆ. ಮಂಗಳಗೌರಿ ವ್ರತವನ್ನು ಮದುವೆಯಾದ ಮುತ್ತೈದೆಯರು ಗಂಡನ ಆಯುಷ್ಯವೃದ್ಧಿಗಾಗಿ, ಮಾಂಗಲ್ಯ ಭಾಗ್ಯ ಗಟ್ಟಿಯಾಗಿರಲು ಪಾರ್ವತಿ ಪರಮೇಶ್ವರರನ್ನು ಪೂಜಿಸಿ ಭಜಿಸುವರು. ವರಮಹಾಲಕ್ಷ್ಮೀ ವ್ರತವನ್ನು ಲಕ್ಷ್ಮೀನಾರಾಯಣ ಸಹಿತವಾಗಿ ಹೆಂಗಳೆಯರು ಆಚರಿಸುವರು. ಶ್ರಾವಣ ಸೋಮವಾರ ಅತ್ಯಂತ ಮಹತ್ವವುಳ್ಳದ್ದು. ರುದ್ರ ಶಿವನ ಆರಾಧನೆ ಅಭಿಷೇಕ ಮಾಡುವರು. ದೇವಾಲಯಗಳಲ್ಲಿ ವಿಶೇಷ ಪೂಜೆಯಿರುವುದು. ಮಂಗಳಗೌರಿ ವ್ರತವನ್ನು ವಿಜೃಂಭಣೆಯಿಂದ, ಶ್ರದ್ಧೆಯಿಂದ ಆಚರಿಸುವರು. ರಕ್ಷಾಬಂಧನ ಸಹ ಇದೇ ಮಾಸದಲ್ಲಿ ಬರುವುದು. ಸನಾತನ ಸಂಸ್ಕೃತಿಯಲ್ಲಿ ಮಹಿಳೆಗೆ ಉನ್ನತ ಸ್ಥಾನಮಾನಗಳಿವೆ. ಆಕೆಯನ್ನು ಸದಾ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುವುದು ಸಹೋದರರು, ತಂದೆ ಅಥವಾ ಕೈಹಿಡಿದ ಪತಿ, ಮಗ. ಇದು ಅವರ ಆದ್ಯ ಕರ್ತವ್ಯ ಸಹ. ಶ್ರಾವಣದ ಪೌರ್ಣಿಮೆಯಂದು ‘ನಾನಿದ್ದೇನೆ’ ಎಂದು ಧೈರ್ಯ ಹೇಳುತ, ಅಭಯನೀಡುವುದೇ ರಕ್ಷಾಬಂಧನದ ಮಹತ್ವ.

ಮನೆಯ ಗಂಡು ಮಕ್ಕಳು(ಉಪಕರ್ಮ) ಜನಿವಾರ ಧಾರಣೆಯನ್ನು (ಯಜುರುಪಾಕರ್ಮ, ಋಗುಪಾಕರ್ಮ ) ಅವರವರ ಸಂಪ್ರದಾಯದಂತೆ ಆಚರಿಸುವರು. ಹಾಗೆಯೇ ಬುಧ ಬೃಹಸ್ಪತಿ ವ್ರತವನ್ನು ಕೆಲವೆಡೆ ಕೈಗೊಳ್ಳುವರು. ನವಗ್ರಹಗಳಲ್ಲಿ ಈರ್ವರಾದ ಬುಧ ಮತ್ತು ಗುರುವಿನ ಪೂಜೆ. ವಿದ್ಯೆ ಪ್ರಾಪ್ತಿಗಾಗಿ, ಅಧ್ಯಯನಕ್ಕಾಗಿ ಆಚರಿಸುವರು.

ಶ್ರಾವಣಮಾಸದಲ್ಲಿ ಶ್ರೀ ರಾಘವೇಂದ್ರಸ್ವಾಮಿಗಳ ಆರಾಧನೆಯನ್ನು ಮಾಡುವರು. ಭಕ್ತಜನ ಸುರಧೇನು, ಅಸುರಾರಿ, ಮುರವೈರಿ, ದೀನಬಂಧು, ಗುಣಸಿಂಧು, ನಂದ ಕಂದ, ರುಕ್ಮಿಣಿ ವಲ್ಲಭ ಭಗವಾನ್ ಶ್ರೀಕೃಷ್ಣನ ಜನ್ಮೋತ್ಸವ, ಶ್ರಾವಣ ಕೃಷ್ಣ ಅಷ್ಟಮಿ ರೋಹಿಣಿ ನಕ್ಷತ್ರದಲ್ಲಿದೆ. ಈ ದಿನ ಭಜನೆ, ಸಂಕೀರ್ತನೆ, ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ, ಮಲ್ಲಕಂಬ, ಕುಸ್ತಿ ಇತ್ಯಾದಿಗಳನ್ನು ಹಮ್ಮಿಕೊಳ್ಳುವರು. ಹಬ್ಬಗಳ ಪರ್ವ ಶ್ರಾವಣದ ವಿಶೇಷ ಎಲ್ಲರಿಗೂ ಸಂತಸ.

ಉಜ್ಜಯಿನಿ, ಕಾಶಿ, ಶ್ರೀಶೈಲ ಮುಂತಾದ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ ಕಾರ್ಯಕ್ರಮಗಳಿರುತ್ತದೆ. ಈ ರೀತಿಯಾಗಿ ಮಾಸವಿಡೀ ಆಚರಿಸುವ ಹಬ್ಬದಡಿ ಸತ್ವ ಮತ್ತು ಸತ್ಯ ಎರಡೂ ಅಡಗಿದೆ. ಬಾಂಧವ್ಯದ ಬೆಸುಗೆ,ಶಾಸ್ತ್ರ, ಸಂಪ್ರದಾಯ, ನಂಬಿಕೆಯೆಂಬ ವೃಕ್ಷದ ಗಟ್ಟಿ ಬೇರುಗಳಿವೆ. ಬಂಧುಗಳೇ, ನಾವೆಲ್ಲರೂ ಪಾಲ್ಗೊಂಡು ಸಂಭ್ರಮಿಸಿ ದೇವ/ದೇವಿಯರಲ್ಲಿ ಎಲ್ಲವೂ ಎಲ್ಲರಿಗೂ ಒಳ್ಳೆಯದಾಗಲೆಂದು ಪ್ರಾರ್ಥಿಸಿಕೊಳ್ಳೋಣ.

-ರತ್ನಾ ಕೆ ಭಟ್ ತಲಂಜೇರಿ,ಪುತ್ತೂರು.

ಚಿತ್ರ ಕೃಪೆ: ಇಂಟರ್ನೆಟ್ ತಾಣ