ಶ್ರೀಕೃಷ್ಣ ಬಾಲಲೀಲೆ - ಶಕಟಾಸುರ ವಧೆ

ಶ್ರೀಕೃಷ್ಣ ಬಾಲಲೀಲೆ - ಶಕಟಾಸುರ ವಧೆ

ಮಹಾ ವಿಷ್ಟುವು ದ್ವಾಪರಾಯುಗದಲ್ಲಿ ಧರ್ಮ ರಕ್ಷಣೆಗಾಗಿ ಶ್ರೀಕೃಷ್ಣನ ಅವತಾರವನ್ನು ತಾಳುತ್ತಾನೆ. ಶ್ರೀಕೃಷ್ಣನ ಬಾಲ ಲೀಲೆಗಳು ಬಹಳ ಸುಂದರ. ಕಂಸನ ತಂಗಿ ದೇವಕಿಯ ಎಂಟನೇ ಗರ್ಭದಲ್ಲಿ ಜನಿಸಿದ ಮಗುವೇ ಅವನ ಸಾವಿಗೆ ಕಾರಣವಾಗುತ್ತಾನೆ ಎಂಬ ಅಶರೀರವಾಣಿಗೆ ಹೆದರಿದ ಕಂಸ ದೇವಕಿ ಹಾಗೂ ಅವಳ ಗಂಡನಾದ ವಾಸುದೇವನನ್ನು ಬಂಧನದಲ್ಲಿರಿಸುತ್ತಾನೆ. ಕೃಷ್ಣ ಜನಿಸಿದಾಗ ಅವನನ್ನು ಮಥುರಾ ನಗರಕ್ಕೆ ಹೋಗಿ ನಂದ-ಯಶೋಧೆಯ ಮಡಿಲಿಗೆ ಹಾಕುತ್ತಾನೆ ವಾಸುದೇವ. ಹೀಗೆ ದೇವಕಿಯ ಹೊಟ್ಟೆಯಲ್ಲಿ ಹುಟ್ಟಿ ಯಶೋಧೆಯ ಮಮತೆಯಲ್ಲಿ ಬೆಳೆದವನೇ ಶ್ರೀಕೃಷ್ಣ. 

ತನ್ನ ಸಾವಿಗೆ ಕಾರಣನಾಗ ಬಲ್ಲ ತನ್ನ ಸೋದರಳಿಯ ಶ್ರೀಕೃಷ್ಣನನ್ನು ಸಾಯಿಸಲು ಕಂಸ ಹಲವಾರು ತಂತ್ರಗಳನ್ನು ಮಾಡುತ್ತಾನೆ. ಪೂತನಿ ಎಂಬ ರಾಕ್ಷಸಿಯನ್ನು ಕಳಿಸುತ್ತಾನೆ. ಅವಳನ್ನು ಕೃಷ್ಣ ಕೊಂದು ಬಿಡುತ್ತಾನೆ. ಶ್ರೀಕೃಷ್ಣನ ಬಾಲಲೀಲೆಗಳಾದ ಕಾಳಿಂಗ ಮರ್ಧನ, ಬೆಣ್ಣೆಯನ್ನು ಕದಿಯುವುದು, ಗೋಪಿಕಾ ಸ್ತ್ರೀಯರಿಗೆ ಸತಾಯಿಸುವುದು, ಕೃಷ್ಣ ಸುದಾಮ ಗೆಳೆತನ, ಗೋವರ್ಧನ ಗಿರಿಯನ್ನು ಎತ್ತಿ ಇಂದ್ರನ ಅಹಂಕಾರ ಮುರಿದದ್ದು ಎಲ್ಲವೂ ನಿಮಗೆ ತಿಳಿದೇ ಇರುತ್ತದೆ. ಕಂಸ ಶ್ರೀಕೃಷ್ಣನನ್ನು ಕೊಲ್ಲಲು ಶಕಟಾಸುರ ಎಂಬ ರಾಕ್ಷಸನನ್ನು ಕಳಿಸುತ್ತಾನೆ. ಈ ಬಗ್ಗೆ ಬಹುತೇಕ ಎಲ್ಲಾ ಮಹಾಭಾರತ ಕತೆಗಳಲ್ಲಿ ಉಲ್ಲೇಖವಿದೆ. ಆದರೆ ಶಕಟಾಸುರ ಬಗ್ಗೆ ಅಧಿಕ ಮಾಹಿತಿಗಳಿಲ್ಲ. 

ಶಕಟ ಎಂದರೆ ‘ಬಂಡಿ' ಎಂದರ್ಥ. ಒಂದರ್ಥದಲ್ಲಿ ಎತ್ತಿನ ಗಾಡಿ ಅಥವಾ ಕುದುರೆ ಗಾಡಿ ಎಂದೂ ಕರೆಯಬಹುದು. ಬಂಡಿಯ ಆಕಾರದಲ್ಲಿರುವ ಅಸುರ ಅಂದರೆ ಶಕಟಾಸುರ. ಆ ರಾಕ್ಷಸನಿಗೆ ಈ ಹೆಸರು ಬರಲೂ ಒಂದು ಕಾರಣ ಇದೆ. ಪುರಾಣ ಕಥೆಗಳ ಪ್ರಕಾರ ಶಕಟಾಸುರ ಹಿರಣ್ಯಾಕ್ಷನ ಪುತ್ರ. ಅವನ ನಿಜವಾದ ನಾಮಧೇಯ ಉತ್ಕಜ. ಅವನು ಋಷಿ, ಮುನಿ ಹಾಗೂ ಸಜ್ಜನ ಸಾಧು ಸಂತರಿಗೆ ಬಹಳ ಕಾಟ ನೀಡುತ್ತಿದ್ದ. ಒಮ್ಮೆ ಲೋಪಶ್ರೀ ಎಂಬ ಮುನಿಯ ಆಶ್ರಮಕ್ಕೆ ಹೋಗಿ ಅಲ್ಲಿಯ ಫಲಭರಿತ ಮರಗಳನ್ನು ಹಾಗೂ ಸುಂದರವಾದ ಹೂತೋಟವನ್ನು ಹಾಳು ಮಾಡುತ್ತಾನೆ. ಅದನ್ನು ನೋಡಿ ಋಷಿ ಸಿಟ್ಟಿಗೆದ್ದು, ಅವನಿಗೆ ಶಾಪ ನೀಡುತ್ತಾರೆ. ನೀನು ಶರೀರವಿಲ್ಲದವನಾಗು ಎಂದು ಶಾಪ ನೀಡುತ್ತಾರೆ. ಇದರಿಂದ ಭಯಗೊಂಡ ರಾಕ್ಷಸನು ಮುನಿಗಳಲ್ಲಿ ಶಾಪ ವಿಮೋಚನೆಯ ಮಾರ್ಗ ಕೇಳಿದಾಗ, ಮುನಿಯು ದ್ವಾಪರಾಯುಗದಲ್ಲಿ ಶ್ರೀಕೃಷ್ಣನ ಪಾದಸ್ಪರ್ಶದಿಂದ ನಿನಗೆ ಮುಕ್ತಿ ಸಿಗುತ್ತದೆ ಎಂದು ಶಾಪ ವಿಮೋಚನೆಗೆ ಪರಿಹಾರ ಸೂಚಿಸುತ್ತಾರೆ. ಆ ಸಮಯದಿಂದ ಅವನು ತನಗೆ ಬೇಕಾದ ವಸ್ತುವಿನಲ್ಲೆ ಸೇರಿ ಅದರ ಆಕಾರವನ್ನು ಹೊಂದುತ್ತಿದ್ದ. ಬಾಲಕ ಶ್ರೀಕೃಷ್ಣನನ್ನು ಕೊಲ್ಲಲು ಅವನು ಶಕಟ ಅಥವಾ ಬಂಡಿಯ ಆಕಾರ ಧರಿಸಿದ್ದರಿಂದ ಅವನಿಗೆ ಶಕಟಾಸುರ ಎಂಬ ಹೆಸರು ಬಂತು. 

ಕಂಸನು ಶ್ರೀಕೃಷ್ಣನನ್ನು ಕೊಲ್ಲಲು ಈ ರಾಕ್ಷಸನನ್ನು ಕಳಿಸಿದ್ದ. ರಾಕ್ಷಸ ಬಂಡಿಯ ರೂಪ ಧರಿಸಿ ಶ್ರೀಕೃಷ್ಣನಿಗಾಗಿ ಅವನ ಮನೆಯ ಎದುರು ಕಾಯುತ್ತಿದ್ದ. ಅದೇ ಸಮಯ ಬಾಲಕೃಷ್ಣನು ಎಲ್ಲಾ ಮಕ್ಕಳಂತೆ ಬೋರಲು ಮಲಗುವುದನ್ನು (ಬೀಳುವುದನ್ನು) ಯಶೋಧೆ ಕಂಡು ಸಂತೋಷದಿಂದ ಎಲ್ಲರನ್ನೂ ಕರೆಯುತ್ತಾಳೆ. ಮಗು ಮೊದಲ ಬಾರಿಗೆ ಬೋರಲು ಬೀಳುವುದು ಎಲ್ಲಾ ತಾಯಂದಿರಿಗೂ ಸಂಭ್ರಮದ ಕ್ಷಣ. ಯಶೋಧೆ ಈ ಸುಸಂದರ್ಭದ ಕ್ಷಣವನ್ನು ಆನಂದಿಸಲು ಒಂದು ಸಮಾರಂಭವನ್ನು ಏರ್ಪಡಿಸಿ ಎಲ್ಲಾ ಗೋಪಿಕೆಯರನ್ನು ಕರೆಯುತ್ತಾಳೆ. ಮಂಗಳ ವಾದ್ಯಗಳು ಮೊಳಗಿ ಪುರೋಹಿತರ ಮಂತ್ರದ ಫೋಷಣೆಯಲ್ಲಿ ಬಾಲಕೃಷ್ಣನಿಗೆ ಆರತಿ ಎತ್ತಲಾಗುತ್ತದೆ. ಬ್ರಾಹ್ಮಣರು ಆಶೀರ್ವಾದ ಮಾಡುತ್ತಾರೆ.. 

ಇವೆಲ್ಲಾ ಮುಗಿದ ಬಳಿಕ ಯಶೋಧೆಯು ಬಾಲ ಕೃಷ್ಣನನ್ನು ಅಲ್ಲೇ ಇದ್ದ ಎತ್ತಿನ ಗಾಡಿಯ (ಶಕಟ) ಅಡಿಯಲ್ಲಿ ಹಾಸಿಗೆ ಹಾಕಿ ಮಲಗಿಸಿ ಗೋಪಿಕಾ ಸ್ತ್ರೀಯರ ಜೊತೆ ಹರಟೆ ಹೊಡೆಯಲು ಪ್ರಾರಂಭಿಸಿದಳು. ಇತ್ತ ಕೃಷ್ಣನಿಗೂ ಸ್ವಲ್ಪ ಸಮಯದ ನಂತರ ಎಚ್ಚರವಾದಾಗ ಯಾರೂ ಇಲ್ಲದ್ದು ಕಂಡು ಗಾಬರಿಯಾಗುತ್ತದೆ. ಆ ಬಂಡಿಯಲ್ಲಿ ತನ್ನನ್ನು ಸೇರಿಸಿಕೊಂಡು ಶಕಟಾಸುರನು ಕೃಷ್ಣನನ್ನು ಕೊಲ್ಲಲು ಹವಣಿಸುತ್ತಿದ್ದ. ಈ ವಿಚಾರ ಕೃಷ್ಣನ ಗಮನಕ್ಕೆ ಬಂತು. ಕೂಡಲೇ ಬಾಲಕೃಷ್ಣನು ತನ್ನ ಪುಟ್ಟದಾದ ಕಾಲಿನಿಂದ ಜೋರಾಗಿ ಬಂಡಿಯನ್ನು ಒದ್ದು ಬಿಟ್ಟ. ಕೃಷ್ಣನ ಕಾಲಿನ ಒಂದೇ ಏಟಿಗೆ ಬಂಡಿ ನುಚ್ಚು ನೂರಾಗಿ ಅದರಲ್ಲಿದ್ದ ಶಕಟಾಸುರ ಮರಣ ಹೊಂದುತ್ತಾನೆ. ಶಕಟಾಸುರನ ಆತ್ಮವು ಶ್ರೀಕೃಷ್ಣನಿಗೆ ನಮಿಸುತ್ತದೆ ಮತ್ತು ತನ್ನ ಶಾಪ ವಿಮೋಚನೆ ಮಾಡಿದುಕ್ಕೆ ಕೃತಜ್ಞತೆಯನ್ನು ತಿಳಿಸಿ ಕೃಷ್ಣನಲ್ಲಿ ಸೇರಿಕೊಳ್ಳುತ್ತದೆ.

ಹೀಗೆ ಬಾಲಕನಾದ ಕೃಷ್ಣನು ತನ್ನ ಸೋದರ ಮಾವ ಕಳುಹಿಸಿದ ರಾಕ್ಷಸರನ್ನು ಒಬ್ಬೊಬ್ಬರಾಗಿ ಕೊಲ್ಲುತ್ತಾನೆ. ಕಡೆಗೊಂದು ದಿನ ಕಂಸನನ್ನೇ ಕೊಂದು ತನ್ನ ತಂದೆ ತಾಯಿಯರನ್ನು ಬಿಡುಗಡೆಗೊಳಿಸುತ್ತಾನೆ. ಹೀಗಿತ್ತು ಬಾಲಕೃಷ್ಣನ ಲೀಲೆಗಳು.

ಪೂರಕ ಸೂಚನೆ: ವಿವಿಧ ಮಹಾಭಾರತದ ಕಥೆಗಳಲ್ಲಿ ಶಕಟಾಸುರನ ಬಗ್ಗೆ ವಿವಿಧ ರೀತಿಯಲ್ಲಿ ವರ್ಣಿಸಲಾಗಿದೆ ಎಂಬುದನ್ನು ದಯಮಾಡಿ ಗಮನಿಸಿ.  

 

ಚಿತ್ರ ಕೃಪೆ: ಅಂತರ್ಜಾಲ ತಾಣದಿಂದ ಸಂಗ್ರಹಿತ