ಶ್ರೀಗುರು ವಚನಾಮೃತ
ರೇವಣ ಸಿದ್ದಯ್ಯ ಹಿರೇಮಠ ಇವರು ‘ಶ್ರೀಗುರು ವಚನಾಮೃತ’ ಎನ್ನುವ ಸೊಗಸಾದ ವಚನಗಳ ಸಂಗ್ರಹವನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಈ ಕೃತಿಗೆ ಡಾ. ರಾಮಚಂದ್ರ ಗಣಾಪುರ ಅವರು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಅವರ ಸುದೀರ್ಘವಾದ ಮುನ್ನುಡಿಯ ಆಯ್ದ ಭಾಗಗಳು ಇಲ್ಲಿವೆ…
ಗಾನಕೋಗಿಲೆ ರೇವಣಸಿದ್ದಯ್ಯ ಹಿರೇಮಠರವರ|
'ಶ್ರೀಗುರು ವಚನಾಮೃತ'ದ ಸುಧೆಯೊಳಗೆ
ಈ ಜೀವನ ದೇವರು ನಮಗೆ ನೀಡಿದ ವರದಾನ ಹಾಗೂ ಹಲವು ವಿಸ್ಮಯಗಳ ಆಗರ. ಈ ಭುವಿಗೆ ಬಂದ ಮನುಷ್ಯ ತನ್ನ ಸಾರ್ಥಕ ಕೊಡುಗೆಯನ್ನು ಸಮಾಜಕ್ಕೆ ಧಾರೆಯೆರೆದಾಗ ಮಾತ್ರ ಜೀವನ ಅರ್ಥಪೂರ್ಣವಾಗುತ್ತದೆ, ಮೌಲಿಕವಾಗುತ್ತದೆ. ವ್ಯಕ್ತಿ ಬರುವುದು, ಇರುವುದು, ಹೋಗುವುದರ ನಡುವೆ ಅಚ್ಚಳಿಯದ ಛಾಪನ್ನು ದಾಖಲಿಸುವುದರ ಮೂಲಕ ಮಾನವ ಮಹಾಮಾನವನಾಗುತ್ತಾನೆ. ಆದ್ದರಿಂದ ಇರುವ ಅಮೂಲ್ಯ ಸಮಯದಲ್ಲಿಯೇ ಮಾಡುವ ಸಮಾಜಮುಖಿ, ಜೀವಪರ ಕಾರ್ಯ, ಸಾಹಿತ್ಯ, ಸಂಗೀತ ಸೇವೆ ನೀಡಿದ್ದು ಮಾತ್ರ ಆಚಂದ್ರಾರ್ಕವಾಗಿರುತ್ತದೆ. ಅಂತಹ ಸಾಧಕರ, ಮಹಾನುಭಾವರ ಹೆಸರು ಚಿರಸ್ಥಾಯಿಯಾಗಿರುತ್ತದೆ. ಅಂತಹ ಸಾರ್ಥಕ ಜೀವನ ಸಾಗಿಸುತ್ತಿರುವ ಮಹಾನುಭಾವರಲ್ಲಿ ಗಾನಗಂಧರ್ವ, ಗಾನಕೋಗಿಲೆ, ಸಾಹಿತಿ ಶ್ರೀ ರೇವಣಸಿದ್ದಯ್ಯ ಹಿರೇಮಠರವರು ಒಬ್ಬರು.
ಬೆಳೆವ ಸಿರಿ ಮೊಳಕೆಯಲ್ಲೇ ನೋಡು ಎಂಬಂತೆ ಶ್ರೀ ರೇವಣಸಿದ್ದಯ್ಯ ಹಿರೇಮಠರವರಿಗೆ ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳ ಸಂಸ್ಕಾರದಲ್ಲಿ ಬೆಳೆದಿದ್ದರಿಂದ ಸಾಹಿತ್ಯದೊಂದಿಗೆ ಸಂಗೀತ ಸಂಸ್ಕಾರವನ್ನು ಕ್ರಮಬದ್ಧವಾಗಿ, ಶಾಸ್ತ್ರೀಯವಾಗಿ ಪಡೆದವರು. ವೃತ್ತಿಯಲ್ಲಿ ಸಂಗೀತ ಶಿಕ್ಷಕರಾಗಿದ್ದ ಶ್ರೀ ರೇವಣಸಿದ್ದಯ್ಯ ಹಿರೇಮಠರವರು ಪ್ರವೃತ್ತಿಯಲ್ಲಿ ಪ್ರಬುದ್ಧ ವಾಗ್ನಿಗಳು, ಪ್ರವಚನಕಾರರು ಹಾಗೂ ಸಾಹಿತಿಗಳು. ಸಾಹಿತ್ಯ ಲೋಕದಲ್ಲಿ ಕಾವ್ಯ, ಲೇಖನಗಳನ್ನು ಸಾಹಿತ್ಯ ಲೋಕಕ್ಕೆ ಧಾರೆಯೆರೆದ ಬರಹಗಾರರೂ ಕೂಡ. ಸಾಹಿತ್ಯ ಹಾಗೂ ಸಂಗೀತ ಎರಡನ್ನೂ ಮೈಗೂಡಿಸಿಕೊಂಡಂತಹ ಹಿರಮಠರು ಇಲ್ಲಿಯವರೆಗೆ ಹಳ್ಳಿಯಿಂದ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಂತಹ ಬೃಹತ್ ನೂರಾರು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ ಸಾಧಕರು. ಸುಮಾರು ೨೫ ವರ್ಷಗಳಿಂದ ನಿರಂತರವಾಗಿ ಹಾಡುಗಾರಿಕೆಯಲ್ಲಿ ತಲ್ಲೀನರಾಗಿದ್ದಾರೆ. 'ಸಾಹಿತ್ಯದೊಂದಿಗೆ ಸಂಗೀತ ಸೇರಿದರೆ ಚಿನ್ನದ ಹೂವಿಗೆ ಪರಿಮಳ ಬಂದಂತೆ' ಎಂಬ ಮಾತಿನಂತೆ ಸಂಗೀತ ಕ್ಷೇತ್ರದ ಅಸಾಮಾನ್ಯ ಸಾಧಕರಾದ ಶ್ರೀ ರೇವಣಸಿದ್ದಯ್ಯ ಹಿರೇಮಠರವರು ವೃತ್ತಿಯಲ್ಲಿ ಸಂಗೀತ ಶಿಕ್ಷಕರು, ಪ್ರವೃತ್ತಿಯಲ್ಲಿ ಅಪೂರ್ವ ಸಾಹಿತಿಗಳು, ಅಪಾರ ಲೋಕಾನುಭವವನ್ನು ಹೊಂದಿರುವಂತಹ ಇವರು 'ಗುರು ಪುಟ್ಟ ರಸಿಕಪ್ರಭು' ಅಂಕಿತದಲ್ಲಿ ಸಾಹಿತ್ಯ ಲೋಕಕ್ಕೆ ೧೫೫ ಆಧುನಿಕ ವಚನಗಳುಳ್ಳ 'ಶ್ರೀಗುರು ವಚನಾಮೃತ' ಎಂಬ ಮಹತ್ವದ ಹೊತ್ತಿಗೆ ಕನ್ನಡ ಸಾಹಿತ್ಯದ ಗಣಿಗೆ ಧಾರೆಯೆರೆದು ವಾಗ್ಗೇವಿಯ ಭಂಡಾರವನ್ನು ಶ್ರೀಮಂತಗೊಳಿಸಿದ್ದಾರೆ. ಹಸಿಗೋಡೆಯಲ್ಲಿ ಹರಳೊಗೆದಂತೆ ಇಲ್ಲಿನ ವಚನಗಳು ಪ್ರಖರ ವಿಚಾರಗಳಿಂದ ಗಮನಸೆಳೆಯುತ್ತವೆ. ಸುಂದರ ಸಮಾಜಕ್ಕಾಗಿನ ಹಿರೇಮಠರವರ ಪ್ರಾಂಜಲಭಾವ, ಕಾಳಜಿ ಅವರ ವಚನಗಳಲ್ಲಿ ಎದ್ದು ಕಾಣುತ್ತದೆ. ಮೊನಚಾದ ವಿಡಂಬನೆಯ ಮಾತುಗಳು ಎಂತಹ ದಪ್ಪ ಚರ್ಮದ ವ್ಯಕ್ತಿಯನ್ನೂ ಚುಚ್ಚಿ ಸನ್ಮಾರ್ಗಕ್ಕೆ ಕೊಂಡೊಯ್ಯುವಲ್ಲಿ ಪೂರಕವಾಗಿವೆ. ತಮ್ಮ ರಸವತ್ತಾದ ಜೀವನಾನುಭವಗಳನ್ನು ಆಧುನಿಕ ವಚನಗಳಲ್ಲಿ ದಾಖಲಿಸಿದ್ದಾರೆ.
ತನ್ನ ತಾನು ತಿಳಿದ ಮೇಲೆ ಇನ್ನೇನಿನ್ನೇನೋ ಎಂಬಂತೆ ಈ ಅಮೂಲ್ಯವಾದ ಜೀವನದಲ್ಲಿ ಇನ್ನೊಬ್ಬರಿಗೆ ಹಾನಿಯಾಗದಂತೆ, ಧಕ್ಕೆಯಾಗದಂತೆ ಜೀವಪರ ಕಾಳಜಿಯಿಂದ ಬಾಳಬೇಕು. ಇನ್ನೊಬ್ಬರನ್ನು ತುಳಿದು ಬದುಕುವದಕ್ಕಿಂತ ತಿಳಿದು ಬದುಕಬೇಕೆಂಬ ಮಾರ್ಮಿಕ ಜೀವಪರ ಕಾಳಜಿಯನ್ನು ಸಮಾಜಕ್ಕೆ ಅರುಹುತ್ತಾರೆ.
ತಿಳಿದು ಬದುಕುವ ತಿಳುವಳಿಕೆಯೇ ಶ್ರೇಷ್ಠ
ತುಳಿದು ಬದುಕುವ ಚಾಳಿಯೇ ಕನಿಷ್ಠ
ತಿಳುವಳಿಕೆಗಿಂತ ಉತ್ತಮ ನಡವಳಿಕೆಯೇ
ಜೀವನದಲ್ಲಿ ಪರಮ ಶ್ರೇಷ್ಠನೆಂದಾತ ನಮ್ಮ
ಪುಟ್ಟರಸಿಕ ಪ್ರಭುವೆ |
ಜೀವನವೇ ಒಂದು ನಾಟಕರಂಗವಿದ್ದಂತೆ ಬಾಹ್ಯ ಆಡಂಬರಕ್ಕಾಗಿ ನಾನಾ ವೇಶಗಳನ್ನು, ಧರ್ಮ ಲಾಂಛನಗಳನ್ನು ಹಾಕುವುದುಂಟು. ಅದಕ್ಕೆ ಬದ್ಧರಾಗಿ ನಡೆಯುವುದು ದುರ್ಲಭ. ನಡೆ-ನುಡಿ ಒಂದಾದಾಗ ಮಾತ್ರ ಯುಗಪುರುಷರಾಗಲು ಸಾಧ್ಯವೆಂಬ ಮಾರ್ಮಿಕವಾದ ಮಾತನ್ನು ಇಲ್ಲಿ ದಾಖಲಿಸಿದ್ದಾರೆ.
ಮಾಡಿದರೆ ಯೋಗ ಮಾಡದಿದ್ದರೆ ರೋಗ
ಹಾಡಿದರೆ ರಾಗ ಹಾಡದಿದ್ದರೆ ಹೋಗ ಯೋಗ
ಮಾಡು ಈಗ ರಾಗ ಹಾಡು ಬೇಗ ಜಾಗ ನೋಡಿ ಯೋಗ ರಾಗ ಮಾಡಿರೆಂದ
ನಮ್ಮ ಗುರು ಪುಟ್ಟ ರಸಿಕ ಪ್ರಭುವು||
ಜೀವನದಲ್ಲಿ ಹಾಸಿಗೆಯಿದ್ದಷ್ಟು ಕಾಲು ಚಾಚಬೇಕು, ಕಾಲಿದ್ದಷ್ಟು ಹಾಸಿಗೆಯಿರಬೇಕೆನ್ನುವವರೇ ಇಂದು ಹೆಚ್ಚಾಗಿದ್ದಾರೆ. ಹೀಗಾಗಿ ನಮ್ಮ ನಮ್ಮ ಆರ್ಥಿಕ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಜೀವನ ಸಾಗಿಸಬೇಕೆಂಬ ಮಹತ್ವದ ಸಂಗತಿಯನ್ನು ಇಲ್ಲಿ ನಿರ್ಭಿಡೆಯಿಂದ ವಚನಕಾರರು ಹೇಳಿದ್ದಾರೆ. ಹಾಗೆ ರೋಗಕ್ಕೆ ತಕ್ಕಂತೆ ಪಥ್ಯ, ವಿದ್ಯೆಗೆ ತಕ್ಕಂತೆ ವಿವೇಕವಿರಬೇಕೆಂಬ ವಿಚಾರವನ್ನು ಮನಮುಟ್ಟುವಂತೆ ತುಂಬಾ ಮಾರ್ಮಿಕವಾಗಿ ತಿಳಿಸಿದ್ದಾರೆ.
ಆಯಕ್ಕೆ ತಕ್ಕಂತೆ ವ್ಯಯ ಮಾಡಬೇಕು
ರೋಗಕ್ಕೆ ತಕ್ಕಂತೆ ಪಥ್ಯ ಪಾಲಿಸಬೇಕು
ವಿದ್ಯೆಗೆ ತಕ್ಕಂತೆ ವಿವೇಕಿಯಾಗಬೇಕು
ಅಂದಾಗ ಬದುಕಿಗೆ ಸಾರ್ಥಕತೆಯ ಬೆಲೆ ಬರುವುದೆಂದು
ಹೇಳಿದ ನಮ್ಮ ಗುರು ಪುಟ್ಟರಸಿಕ ಪ್ರಭುವು||
ಇಂದಿನ ಆಡಂಬರದ ಜೀವನಶೈಲಿ, ಮುಖವಾಡಗಳ ಜಗತ್ತಿನಲ್ಲಿ ಅನೇಕ ಜನರು ಬರೀ ಕೀರ್ತಿಶನಿಯ ಬೆನ್ನು ಹತ್ತಿದ್ದಾರೆ. ಕೆಲವರಿಗೆ ಪ್ರಚಾರದ ಹುಚ್ಚು ಹತ್ತಿ ತಮ್ಮ ಸ್ವಂತಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಒಳ್ಳೆಯವರು ಯಾವ ಮೂಲೆಯಲ್ಲಿರುತ್ತಾರೋ ಗೊತ್ತಿಲ್ಲ. ಆದರೆ ಸಾಧಕರಿಗೆ, ಸೇವಕರಿಗೆ, ಸಮರ್ಥ ವ್ಯಕ್ತಿಗಳಿಗೆ ಸೂಕ್ತ ಸ್ಥಾನ ಸಿಗಬೇಕೆಂಬ ಕಾಳಜಿ ಲೇಖಕರದ್ದಾಗಿದೆ.
ದೇಹವೆಂಬ ದೇಗುಲ ದೇವ ಮಂದಿರವಾಗಬೇಕು
ದೇಹವೆಂಬ ದೇಗುಲ ರೋಗ ಮಂದಿರವಾಗಬಾರದು
ದೇಹವೆಂಬ ದೇಗುಲ ಶಾಂತಿ ಕಾಂತಿಯಿಂದ ಹೊಳೆಯಬೇಕು
ದೇಹವೆಂಬ ದೇಗುಲ ಶಾಂತಿ ಚಿಂತೆ ಸಂಕಟದ ಗೂಡಾಗಬಾರದು
ದೇಹವು ದೇವ ಮಂದಿರವೆಂದು ಭಾವಿಸಿ
ಬ್ರಹ್ಮಚಾರಿಯಾಗಿ ಭುವನವೆಲ್ಲ ಬೆಳಗಿದ ನಮ್ಮ
ಸಂಗೀತ ಶ್ರೀಗುರು ಪುಟ್ಟರಸಿಕ ಪ್ರಭುವು।।
ಅರಿತು ಬಾಳುವವನಿಗೆ ಜೀವನ ಒಂದು ಕಲೆ, ಅರಿಯದೆ ಬಾಳಿದರೆ ಜೀವನ ಒಂದು ಬಲೆ. ಹೀಗಾಗಿ ದೇವರು ನೀಡಿದ ಅಮೂಲ್ಯ ಜೀವನವನ್ನು ಸಾರ್ಥಕ ಮಾಡಿಕೊಂಡಾಗ ಮಾತ್ರ ಹುಟ್ಟಿದ್ದಕ್ಕೂ ಸಾರ್ಥಕವಾಗುತ್ತದೆ. ಇಲ್ಲದಿದ್ದರೆ ಆ ಜೀವನಕ್ಕೆ ಅರ್ಥವಿರುವುದಿಲ್ಲ. ಹಾಗಾಗಿ ಇನ್ನೊಬ್ಬರಿಗೆ ಭಾರವಾಗದ ಬದುಕು ನಮ್ಮದಾಗಬೇಕು. ಸಮಾಜಕ್ಕೆ ಮಾರಕವಾಗದ ಜೀವನ ನಮ್ಮದಾಗಬೇಕೆಂಬ ಅರ್ಥಪೂರ್ಣ ಸಂದೇಶವನ್ನು ಶ್ರೀ ರೇವಣಸಿದ್ದಯ್ಯ ಹಿರೇಮಠರವರು ಸಮಾಜಕ್ಕೆ ನೀಡಿದ್ದಾರೆ.
ಆ ನಂಬಿಕೆಯನ್ನು ಗುರುಗಳಾದವರು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಹಿಂದಿನಕ್ಕಿಂತ ಇಂದು ಅವಶ್ಯಕವಾಗಿದೆ. ಆ ನಿಟ್ಟಿನಲ್ಲಿ ಶ್ರೀ ರೇವಣಸಿದ್ದಯ್ಯ ಹಿರೇಮಠರವರು ಕಾಯಕನಿಷ್ಠೆಯ ಆದರ್ಶ ಗುರುಗಳು. ಇಲ್ಲಿ ಅವರ ಅಗಾಧವಾದ ವಚನಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಅವರ ಜೀವನಾನುಭವ ತುಂಬಾ ದೊಡ್ಡದು ಅವರ ಲೇಖನಿಯಿಂದ ಇಂತಹ ಅನೇಕ ಮೌಲಿಕ ವಚನಗಳು ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಲಿ. ಅವರ ಇಂಪಾದ ಸಂಗೀತದಂತೆ ಅವರ ಸಾಹಿತ್ಯ ಸೊಂಪಾಗಿ ಕಂಗೊಳಿಸಲಿ ಎಂದು ಬಯಸುವೆ.”
Comments
ಈ ಶ್ರೀಗುರು ವಚನಾಮೃತಾ ಪುಸ್ತಕವು…
ಈ ಶ್ರೀಗುರು ವಚನಾಮೃತಾ ಪುಸ್ತಕವು ಸಾಹಿತ್ಯ ಲೋಕಕ್ಕೆ ಒಂದು ಅದ್ಬುತವಾದ ಕೃತಿ