ಶ್ರೀನರಸಿಂಹ ಜಯಂತಿ

ಶ್ರೀನರಸಿಂಹ ಜಯಂತಿ

"ದುಷ್ಟರು, ಭೂಮಿಯ ಮೇಲೆ ತಲೆ ಎತ್ತಿ ಧರ್ಮವನ್ನು ನಾಶ ಮಾಡಿ ಸಾಧು ಸಂತರಿಗೆ, ಜನರಿಗೆ ಹಿಂಸೆ ಉಂಟುಮಾಡಿ  ಭೂಮಿಗೆ ಭಾರವೆನಿಸಿದಾಗ, ಅವರನ್ನು ಸಂಹರಿಸಲು ಮತ್ತು ಧರ್ಮ ಸ್ಥಾಪನೆಗೆ ನಾನು ಯುಗ ಯುಗಗಳು  ಕಳೆದರೂ  ಅವತಾರವೆತ್ತಿ ಬರುತ್ತೇನೆ" ಎಂದು ಭಗವದ್ಗೀತೆಯಲ್ಲಿ ಹೇಳಿರುವಂತೆ (ಪರಿತ್ರಾಣಾಯ ಸಾದೂನಾಮ್ ವಿನಾಶಾಯಚ  ದುಷ್ಕೃತಾಮ್ l ಧರ್ಮ ಸಂಸ್ಥಾಪನಾರ್ಥಾಯ  ಸಂಭವಾಮಿ ಯುಗೇ ಯುಗೇ l)  ಶ್ರೀ ಮಹಾ ವಿಷ್ಣುವು ೪ನೆಯ  ಅವತಾರದಲ್ಲಿ, ನರಸಿಂಹ ಅವತಾರವೆತ್ತಿ, ಭೂಮಿಯ ಮೇಲಿದ್ದ  ರಾಕ್ಷಸನನ್ನು ಸಂಹರಿಸಲು ಅರ್ಧ ಮನುಷ್ಯ ಮತ್ತು ಅರ್ಧ ಸಿಂಹ ರೂಪ ತಾಳಿ (ನರ-ಸಿಂಹ)  ಇಂದು (೨೫-೦೫-೨೦೨೧) ಧರೆಗೆ ಇಳಿದು ಬಂದ  ಪುಣ್ಯ ದಿನ. ಇಂದು ವೈಶಾಖ ಮಾಸದ ಶುಕ್ಲ ಪಕ್ಷ ಚತುರ್ದಶಿ. ಇದನ್ನು ವೈಶಾಖ ಚತುರ್ದಶಿ ಎನ್ನಾಲಾಗಿದೆ. ಭೂಮಿಯ ಮೇಲಿನ ಅಧರ್ಮವನ್ನು  ಅಳಿಸಿ ಧರ್ಮ ಸ್ಥಾಪನೆ ಮಾಡಿ ಆ ಮಾರ್ಗದಲ್ಲಿ ನಡೆಯುವಂತೆ ಮಾಡುವುದೇ ಈ ನರಸಿಂಹಾವತಾರದ ಮುಖ್ಯ ಉದ್ದೇಶವಾಗಿರುತ್ತದೆ. ಇಂದು ಭಕ್ತಿ ಭಾವದಿಂದ ಯಾರು ಉಪವಾಸ ವ್ರತ ಕೈಗೊಂಡು ಸ್ವಾಮಿಯನ್ನು ಪೂಜಿಸುವರೋ, ಅಂತಹವರು ತಮ್ಮ ಜೀವನದ ನಿರಾಶಾದಾಯಕ ಭಾವನೆಗಳನ್ನು ಕಳೆದುಕೊಂಡು ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳುತ್ತಾರೆ. ದ್ವೇಷಭಾವನೆ ಹೊಂದಿರುವವರನ್ನು ಇಂದು ಗೌರವಿಸಿದರೆ, ಶ್ರೀ ನರಸಿಂಹ ಸ್ವಾಮಿಯನ್ನು ಗೌರವಿಸಿದಂತೆ ಎಂದೂ, ಸ್ವಾಮಿಯು ನಮ್ಮ ವೈರಿಗಳೆನಿಸಿಕೊಳ್ಳುವಂತಹವವರ ಕ್ರೂರ ದೃಷ್ಟಿಯಿಂದ ರಕ್ಷಿಸುತ್ತಾನೆ ಎಂದೂ ಹೇಳಲಾಗಿದೆ. ಇಂದು ಸೂರ್ಯೋದಯಕ್ಕೆ ಮುಂಚೆ ಎದ್ದು, ನಿತ್ಯ ಕರ್ಮಗಳ ನಂತರ, ಸ್ನಾನಾದಿಗಳನ್ನು ಮಾಡಿ  ಶ್ರೀ ನರಸಿಂಹ ಸ್ವಾಮಿಯವರ ಫೋಟೋ ಮುಂದೆ ಕುಳಿತು. ಹೂವು, ಅರಿಶಿನ, ಕುಂಕುಮ ಚಂದನಾದಿಗಳೊಂದಿಗೆ ಯಥಾ ಶಕ್ತಿ  ಶ್ರೀ ನರಸಿಂಹ - ಗಾಯತ್ರಿ ಮಂತ್ರವನ್ನು ಪಠಿಸುತ್ತಾ ಪೂಜಿಸಬೇಕು. ತೆಂಗಿನ ಕಾಯಿ ಒಡೆದು, ದೇವರಿಗೆ ಮಂಗಳಾರತಿ ಮಾಡುವುದರೊಂದಿಗೆ ನರಸಿಂಹ ಸ್ವಾಮಿ ಪೂಜೆ ಮುಗಿದಂತೆ. ಈ ದಿವಸ ಕೆಲವರು ಇಡೀ ದಿವಸ  ಉಪವಾಸವಿದ್ದು, ದೇವರ ಧ್ಯಾನದಲ್ಲಿ ತೊಡಗಿರುತ್ತಾರೆ. ಪೂಜೆ ಮುಗಿಸಿದ ನಂತರ ತಮ್ಮ ಶಕ್ತಾನುಸಾರ ಬೆಳ್ಳಿ ಬಂಗಾರದೊಂದಿಗೆ ಎಳ್ಳು ಧಾನವನ್ನು ಮಾಡುತ್ತಾರೆ. 

ಪುರಾಣಗಳ ಪ್ರಕಾರ, ಪೂರ್ವ ಕಾಲದಲ್ಲಿ ಕಶ್ಯಪ ಋಷಿಗಳು ಅವರ ತಮ್ಮ ಪತ್ನಿ ದಿತಿ ಎಂಬ ದಂಪತಿಗಳು, ಹಿರಣ್ಯಾಕ್ಷ ಮತ್ತು ಹಿರಣ್ಯ ಕಶುಪು ಎಂಬ ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಇವರ ಮಕ್ಕಳು, ಜನರಿಗೆ ಕಷ್ಟಗಳನ್ನು ಕೊಡುತ್ತಿದ್ದುದರಿಂದ ಶ್ರೀ ಮಹಾ ವಿಷ್ಣುವು ವರಾಹ ಅವತಾರವೆತ್ತಿ ಹಿರಣ್ಯಾಕ್ಷನನ್ನು ಸಂಹಾರ ಮಾಡುತ್ತಾನೆ. ಅಣ್ಣನನ್ನು . ಕೊಂದುದಕ್ಕಾಗಿ ದುಃಖಗೊಂಡ ತಮ್ಮನಾದ ಹಿರಣ್ಯಕಷಿಪು ದೊರೆತ ಅಧಿಕಾರವನ್ನು ದುರುಪಯೋಗಿಸಿಕೊಂಡು  ಶ್ರೀ ಹರಿಯ ಮೇಲೆ ಸೇಡು ತೀರಿಸಿಕೊಳ್ಳಲು ಜನರಿಗೆ ಹಿಂಸಿಸತೊಡಗಿದನು ಬಹು ಬೇಗ ಸ್ವರ್ಗ ಮತ್ತು ಇಂದ್ರ ಲೋಕವನ್ನು ಮುತ್ತಿಗೆ ಹಾಕಿ ಅವುಗಳ ಮೇಲೆ ನಿಯಂತ್ರಣ ಪಡೆದನು, ದೇವಾಧಿದೇವತೆಗಳನ್ನು ತನ್ನ ಕೈ ಗೊಂಬೆ ಮಾಡಿಕೊಂಡು ಅವರನ್ನು ತನ್ನ ತಾಳಕ್ಕೆ ಕುಣಿಯುವಂತೆ ಮಾಡಿದನು. ದೇವತೆಗಳು ನಡೆಸುತ್ತಿದ್ದ ಯಜ್ಞ ಯಾಗಾದಿಗಳು, ನಡೆಯದಂತೆ ವಿಘ್ನಗಳನ್ನು ತಂದೊಡ್ಡುತ್ತಿದ್ದನು.  ಹಿರಣ್ಯ ಕಶಿಪುವು ಶ್ರೀ ಮಹಾ ವಿಷ್ಣುವಿನ ಮೇಲೆ ಪ್ರತೀಕ ತೀರಿಸಿಕೊಳ್ಳಲೆಂದೇ, ಸಾಧು ಸಂತರು ಋಷಿಗಳು, ಮುನಿಗಳು ಮತ್ತು ಯಾರೇ ಪ್ರಜೆಗಳಾಗಲಿ ವಿಷ್ಣುವಿನ ಹೆಸರನ್ನೂ ಸಹಾ ಉಚ್ಛರಿಸದಂತೆ ಕಟ್ಟಪ್ಪಣೆ ಮಾಡಿದನು ಇವನ ಆಡಳಿತದಲ್ಲಿ ಇವನು ನೀಡುವ ಉಪಟಳ ಕ್ರಮೇಣ ಅಧಿಕವಾಗತೊಡಗಿತು.ಈ ಮಧ್ಯೆ ಹಿರಣ್ಯ ಕಶಿಪುವಿನ ಪತ್ನಿ ಕಯಾದು ಗಂಡು ಮಗುವಿಗೆ ಜನನ ನೀಡಿದಳು. ಆ  ಮಗವನ್ನು ಪ್ರಹ್ಲಾದನೆಂದು ಕರೆದು ಮುದ್ದಾಗಿ ಬೆಳೆಸಿದರು, ಹುಟ್ಟಿನಿಂದಲೇ ಆ ಮಗುವು ವಿಷ್ಣು ವೈರಿ ಕುಟುಂಬದಲ್ಲಿ ಜನಿಸಿದರೂ ಯಾವಾಗಲೂ ಮಹಾ ವಿಷ್ಣುವಿನ ಧ್ಯಾನದಲ್ಲಿಯೇ ಮುಳುಗಿರುತ್ತಿತ್ತು. ರಾಜನು, ಮಗವು ಮುಂದೆ ದೊಡ್ಡದಾಗಿ ಬೆಳೆದಂತೆ, ವೈರಿ ಸ್ಮರಣೆಯನ್ನು ಮರೆಯುವನೆದು ಭಾವಿಸಿದನು. ಇದರ ಮೊದಲ ಪ್ರಯತ್ನವಾಗಿ, ಮಗುವನ್ನು  ಗುರುಕುಲಕ್ಕೆ ವಿದ್ಯಾಭ್ಯಾಸಕ್ಕೆ  ಕಳುಹಿಸಿ, ಅಲ್ಲಿನ ಗುರುಗಳಿಗೆ ವಿಶೇಷವಾಗಿ, ಮಗನು ಶ್ರೀ ಹರಿಯ ಜಪ ಮಾಡದಂತೆ ನೋಡಿಕೊಳ್ಳಲು ಕಟ್ಟಪ್ಪಣೆ ಮಾಡಿದನು. ಗುರುಗಳ ಹಿತ ವಚನ ಮತ್ತು ತಂದೆಯ ಮಾತುಗಳನ್ನು ಲೆಕ್ಕಿಸದೆ ಬಾಲಕನು ಮಹಾ ವಿಷ್ಣುವಿನ ಜಪ  ಮಾಡುವುದನ್ನು ಬಿಡಲಿಲ್ಲ. ರಾಜ್ಯದಲ್ಲಿ ತನ್ನ ಸ್ವಂತ ಮಗನೇ ವಿಷ್ಣುವನ್ನು ಜಪಿಸುತ್ತಿರುವಾಗ ಶ್ರೀ ಹರಿಯ ವಿರೋಧಿಯಾದ ಹಿರಣ್ಯ ಕಶುಪು  ಕಂಗಾಲಾಗಿ, ದಿಕ್ಕೇ ತೋಚದಂತಾದನು. ಕೊನೆಗೆ ಮಗನನ್ನು ಕೊಲ್ಲುವುದೊಂದೇ ಉಪಾಯವೆಂದು ಬಗೆದನು. ಕೊನೆಯ ಅವಕಾಶವಾಗಿ, ಮಗನನ್ನು ಕರೆಸಿ, ಶ್ರೀ ಹರಿಯ ಸ್ಮರಣೆ ಬಿಡುವಂತೆ ಪರಿಪರಿಯಾಗಿ ಹೇಳುವನು. ತಾಯಿಯೂ ಸಹಾ ತಂದೆಗೆ ಸಮಾಧಾನವಾಗಲು ಮಗನನ್ನು ಕುರಿತು ಶ್ರೀ ಹರಿಯ ಜಪ ಬಿಡಲು ಹೇಳಿದಳು. ಯಾವುದೇ ಮಾತುಗಳನ್ನು ಲೆಕ್ಕಿಸದೆ ಪ್ರಹ್ಲಾದನು ಮಾಮೂಲಿಯಾಗಿ ಪ್ರತಿದಿನವೂ ಶ್ರೀಹರಿ ಭಜನೆ, ಪೂಜೆ ಮತ್ತು ಧ್ಯಾನಗಳಲ್ಲಿ  ತೊಡಗಿರುತ್ತಿದ್ದನು. ಹೃದಯವನ್ನು ಕಲ್ಲು ಮಾಡಿಕೊಂಡು ರಾಜ ಭಟರನ್ನು ಕರೆಸಿ, ಮಗುವನ್ನು ವಿಷದ ಹಾವಿನಿಂದ ಕಚ್ಚಿಸಿದರು. ಹಾವುಗಳು ಬಂದು ಕಚ್ಚದೇ ನಾರಾಯಣನ ಅಣತಿಯಂತೆ. ಮಾಯವಾದವು. ಮರುದಿನ ರಾಜ ಭಟರಿಂದ, ಸಮುದ್ರದಲ್ಲಿ ಎಸೆದ ಮಗನನ್ನು ಮಹಾ ವಿಷ್ಣುವು ಕಾಪಾಡಿ ಅರಮನೆಗೆ ತಂದನು, ಮತ್ತೊಮ್ಮೆ ಮಗನನ್ನು  ಸಾಯಿಸುವ ಪ್ರಯತ್ನದಲ್ಲಿ ಭಟರನ್ನು ಕರೆದು ಆನೆಗಳಿಂದ ತುಳಿಸುವಂತೆ  ಹೇಳಿದನು. ಪ್ರಹ್ಲಾದನನ್ನು ಉರಿಯುವ ಬೆಂಕಿಯಲ್ಲಿ ಹಾಕಿ ಸುಡುವ ಪ್ರಯತ್ನ, ಎತ್ತರದ  ಬೆಟ್ಟದಿಂದ ಮಗವನ್ನು ನೂಕುವಂತೆ ಮಾಡಿದ ಪ್ರಯತ್ನಗಳೆಲ್ಲಾ ವಿಫಲವಾಯಿತು. ಶ್ರೀ ಹರಿಯ ಕೃಪಾ ಕಟಾಕ್ಷದಿಂದ ಪ್ರಹ್ಲಾದನನ್ನ ಸಾಯಿಸಲು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾದವು. ತಂದೆಯ ಪ್ರತಿಯೊಂದು, ಪ್ರಯತ್ನದಲ್ಲಿ ಶ್ರೀ ಹರಿಯನ್ನು ಧ್ಯಾನ ಮಾಡುತ್ತಿದ್ದಂತೆಯೇ, ಎಂದಿನಂತೆ ಧ್ಯಾನದಲ್ಲಿ ತೊಡಗಿದ್ದ, ಪ್ರಹ್ಲಾದನನ್ನು ಕುರಿತು  ಕೋಪದಿಂದ, ನೀನು ಭಜಿಸುವ ಶ್ರೀ ಹರಿ ಯಾರು? ಅವನು ಎಲ್ಲಿರುವನು? ಅವನನ್ನು ನನಗೆ ತೋರಿಸುವೆಯಾ ?  ಎಂದು ಕೇಳಲು ಪ್ರಹ್ಲಾದನು, "ಶ್ರೀ ಹರಿಯು  ಸರ್ವವ್ಯಾಪಿ, ಸರ್ವಾಂತರ್ಯಾಮಿ ಮತ್ತು ಸರ್ವಜ್ಞ. ಭೂಮಿಯ ಮೇಲೆ ಅವನಿಲ್ಲದ ಸ್ಥಳವೇ ಇಲ್ಲ, ಜೀವಿಗಳ ಪ್ರತಿಯೊಂದು ಕಣದಲ್ಲೂ, ಪ್ರಕೃತಿಯಲ್ಲಿಯ ಗಾಳಿ ನೀರುಗಳಲ್ಲಿ, ಜಡ ಚೇತನ ವಸ್ತುಗಳಲ್ಲಿಯೂ   ಇರುವನು. ಶ್ರೀ ಹರಿಯೇ ಈ ಜಗತ್ತಿನ ರಕ್ಷಕ, ಅವನ ಅಪ್ಪಣೆಯಿಲ್ಲದೆ ಭೂಮಿಯ ಮೇಲೆ ಒಂದು ಹುಲ್ಲಿನ ಗರಿಯು ಕದಲುವುದಿಲ್ಲ"  ಎಂದು ಕೊಂಡಾಡಲು ಹಿರಣ್ಯ ಕಶಿಪುವಿನ ಕೋಪ ಮುಗಿಲು ಮುಟ್ಟಿತು. ಹೆಗಲ ಮೇಲೆ ಹೊತ್ತಿದ್ದ ಗದೆಯನ್ನು ಹತ್ತಿರವಿದ್ದ ಕಂಬವೊಂದಕ್ಕೆ ರಭಸವಾಗಿ ಬೀಸಿದನು. ಒಡೆದ ಕಂಬದಿಂದ ನಿನ್ನ ಶ್ರೀ ಹರಿಯನ್ನು ತೋರಿಸು ಎಂದು ಅಬ್ಬರಿಸಿದನು. ಹಿರಣ್ಯ ಕಶಿಪು ಆಶ್ಚರ್ಯಚಕಿತನಾಗಿ ನೋಡು ನೋಡುತ್ತಲೇ ಇರುವಾಗ, ಸಿಂಹದ  ತಲೆಯ ನರರೂಪದ ಆಕೃತಿಯೊಂದು ಕಂಬದಿಂದ  ಬರುವುದನ್ನು ಕಂಡನು. ಹಿರಣ್ಯ ಕಶಿಪು ಈ ಹಿಂದೆ ಬ್ರಹ್ಮನನ್ನು ಕುರಿತು, ತನಗೆ ಯಾವ ಪ್ರಾಣಿಗಳಿಂದಲೂ, ಮನುಷ್ಯರಿಂದಲೂ ಯಾವುದೇ ಸಮಯದಲ್ಲೂ, ಮನೆಯ ಹೊರಗಾಗಲಿ, ಒಳಗಾಗಲಿ ಯಾವ ದೇವಾಸುರರಿಂದಾಗಲಿ, ಭೂಮಿಯ ಮೇಲಾಗಲಿ, ಅಂತರಿಕ್ಷದಲ್ಲಾಗಲಿ, ಯಾವುದೇ ಆಯುಧಗಳಿಂದಾಗಲಿ ಸಾವುಂಟಾಗದಂತೆ  ವರವನ್ನು ಪಡೆದಿದ್ದನು. ಆದ್ದರಿಂದಲೇ ಬ್ರಹ್ಮನು ನೀಡಿದ ವರಗಳ ಯಾವುದೇ ಷರತ್ತುಗಳನ್ನು ಉಲ್ಲಂಘಿಸದೆ, ಉಗ್ರ ರೂಪಿಯಾದ ನರಸಿಂಹಾವತಾರದ ಶ್ರೀ ಹರಿಯು ಕ್ಷಣಾರ್ಧದಲ್ಲೇ, ಹಿರಣ್ಯ ಕಶಿಪುವನ್ನು ಹೊತ್ತು ಅರಮನೆಯ ಹೊಸ್ತಿಲು (ಒಳಗೂ ಅಲ್ಲ, ಹೊರಗೂ ಅಲ್ಲ) ಮೇಲೆ ಕುಳಿತು ತೊಡೆಯ ಮೇಲೆ (ನೆಲವೂ ಅಲ್ಲ ಅಂತರಿಕ್ಷವೂ ಅಲ್ಲ) ಹಾಕಿಕೊಂಡು ತನ್ನ ಉಗುರುಗಳನ್ನೇ ಆಯುಧವಾಗಿ ಮಾಡಿಕೊಂಡು ಹೊಟ್ಟೆಯನ್ನು ಬಗೆದು ಅವನು ಮಾಡಿದ ಪಾಪ ಕೃತ್ಯಗಳಿಗೆ ಅಂತ್ಯ ಹಾಡಿದನು. ಹಿರಣ್ಯ ಕಶಿಪುವನ್ನು ಸಂಹಾರ ಮಾಡಿದ ನಂತರ, ಪ್ರಹ್ಲಾದನನ್ನು ರಕ್ಷಿಸಿ ಆ ದೇಶಕ್ಕೆ ರಾಜನನ್ನಾಗಿ ಮಾಡಿದನು. ಅನೇಕ ವರ್ಷಗಳು ಜನರು, ಸಾಧುಸಂತರು ಸಂತೋಷದಿಂದಿರುವ ಆಡಳಿತವನ್ನು ನೀಡಿದನು  ಇಂತಹ  ವಿಶೇಷ ಚತುರ್ದಶಿಯಂದು ವಿಶ್ವಕ್ಕೆ ಉಂಟಾಗಿರುವ ಕೊರೋನ ಸೋಂಕನ್ನು ತೊಡೆದು ಹಾಕುವಂತೆಯೂ ಮತ್ತು ಶ್ರೀ  ನರಸಿಂಹ ಸ್ವಾಮಿಯು  ನಕಾರಾತ್ಮಕ ಭಾವಗಳನ್ನು ತೊಡೆದು ಹಾಕಿ ಶಾಂತಿ ಮತ್ತು ಸಂತೋಷವನ್ನು, ಕೊಡಲೆಂದು ನಾವೆಲ್ಲರೂ  ಪ್ರಾರ್ಥಿಸೋಣವೇ ?

ಓಂ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿಯೇ ನಮಃ

(ವಾಟ್ಸಾಪ್ ಸಾರ ಸಂಗ್ರಹಿತ)

ಚಿತ್ರ: ಶ್ರೇಯಸ್ ಕಾಮತ್, ಬೆಂಗಳೂರು, 

ಮತ್ತು ಅಂತರ್ಜಾಲ ತಾಣ