ಶ್ರೀಮಂತ ಎಂದರೆ...
ನಮ್ಮ ಈಗಿನ ಸಮಾಜದಲ್ಲಿ ಹೆಚ್ಚು ಹಣ ಆಸ್ತಿ ಇರುವ ವ್ಯಕ್ತಿಗಳನ್ನು ಶ್ರೀಮಂತ ಎಂದು ಕರೆಯಲಾಗುತ್ತದೆ. ಆದರೆ ಹಿಂದೆ, ಇಂದು ಮತ್ತು ಮುಂದೆ ಸಹ ಸಾಂಸ್ಕೃತಿಕವಾಗಿ ಮತ್ತು ವೈಜ್ಞಾನಿಕವಾಗಿ ನಿಜವಾದ ಶ್ರೀಮಂತ " ರೈತ " ಎಂದು ಹೇಳುವ ಕನ್ನಡ ಚಲನಚಿತ್ರವೊಂದು ಇದೇ ಶುಕ್ರವಾರ ದಿನಾಂಕ 19/05/2023 ರಂದು ಕರ್ನಾಟಕ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ರೈತರನ್ನು ಕೇಂದ್ರೀಕರಿಸಿ ನಿರ್ಮಿಸಿದ ಕೆಲವು ಚಲನಚಿತ್ರಗಳು ಈಗಾಗಲೇ ಕನ್ನಡದಲ್ಲಿ ತೆರೆ ಕಂಡಿವೆ. ಆದರೆ ರೈತ, ಕೃಷಿ ಮತ್ತು ಗ್ರಾಮೀಣ ಜೀವನಶೈಲಿಯನ್ನೇ ಸಂಪೂರ್ಣ ಚಿತ್ರಕಥೆಯಾಗಿ ಒಂದು ವೈಚಾರಿಕ ದೃಷ್ಟಿಕೋನದಿಂದ ನಿರ್ಮಿಸಿರುವ ಚಿತ್ರ " ಶ್ರೀಮಂತ ".... ಬೇರೆ ಬೇರೆ ಅನೇಕ ವೃತ್ತಿಗಳ ಹೋಲಿಕೆಯಲ್ಲಿ ಕೃಷಿ ಎಂಬುದನ್ನು ನಿರ್ಲಕ್ಷಿಸಲಾಗಿದೆ ಜೊತೆಗೆ ರೈತ ಎಂಬ ವ್ಯಕ್ತಿಯನ್ನು ಕಡೆಗಣಿಸಲಾಗಿದೆ ಎಂಬ ಆಲೋಚನೆಯನ್ನು ಹೋಗಲಾಡಿಸಲು ಸಿನಿಮಾ ಮಾಧ್ಯಮದ ಮೂಲಕ ಆತ್ಮೀಯ ಗೆಳೆಯರಾದ ನಿರ್ದೇಶಕ ಹಾಸನ್ ರಮೇಶ್ ಅವರು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ.
ಸಾಮಾನ್ಯವಾಗಿ ಮಚ್ಚು ಲಾಂಗು, ಬಂದೂಕು ಬಾಂಬು, ಅಶ್ಲೀಲ ಸಂಭಾಷಣೆ, ಹುಚ್ಚು ಪ್ರೀತಿ, ಅತಿ ಭಯಂಕರ ನಿಗೂಡತೆ, ಅತಿರೇಕದ ಹಿಂಸೆ, ಭಕ್ತಿ ಮೌಡ್ಯದ ಪರಾಕಾಷ್ಠೆ, ಹೆಣ್ಣಿನ ನಗ್ನತೆಗಳನ್ನೇ ಮನರಂಜನೆಯ ಹೆಸರಿನಲ್ಲಿ ಸಿನಿಮಾ ನಿರ್ಮಿಸುವುದು ಸಾಮಾನ್ಯ ವಾಡಿಕೆ. ಅವುಗಳಲ್ಲಿ ಕೆಲವು ಯಶಸ್ವಿಯೂ ಆಗುತ್ತವೆ.
ಆದರೆ " ಶ್ರೀಮಂತ " ಸಿನಿಮಾ ಅವುಗಳನ್ನು ಮೀರಿ ರೈತರೇ ಈ ದೇಶದ ನಿಜವಾದ ಆರ್ಥಿಕ ಮತ್ತು ಸಾಂಸ್ಕೃತಿಕ ರಾಯಭಾರಿಗಳು, ರೈತರಿಲ್ಲದ ಸಮಾಜವನ್ನು ಊಹಿಸಿಕೊಳ್ಳುವುದು ಸಾಧ್ಯವಿಲ್ಲ. ಕೇವಲ ಆಹಾರದ ದೃಷ್ಟಿಯಿಂದ ಮಾತ್ರವಲ್ಲ ಸಂಪೂರ್ಣ ಬದುಕಿನ ಅರ್ಥಪೂರ್ಣತೆಯ ಮೂಲದಿಂದಲೂ ರೈತ ಮಹತ್ವದ ವ್ಯಕ್ತಿ ಎಂದು ಸಾರಲು ಹೊರಟಿದ್ದಾರೆ. ಹೊಟ್ಟೆ ಸೇರಿ ಜೀವ ಉಳಿಸುವ ಆಹಾರ ವಿಷವಾಗುತ್ತಿರುವ ಸಮಯದಲ್ಲಿ, ಕೈಕಾಲು ತೊಳೆಯುವ ಸೋಪು ಶಾಂಪುಗಳು ಕ್ರಿಮಿನಾಶಕಗಳ ರೀತಿಯಲ್ಲಿ ಆರೋಗ್ಯ ಪೂರ್ಣ ಎಂಬ ಭ್ರಮೆ ಸೃಷ್ಟಿಸುತ್ತಿರುವ ಸನ್ನಿವೇಶದಲ್ಲಿ, ಕಂಪ್ಯೂಟರುಗಳೇ ದೇಶದ ಜೀವನಾಡಿಗಳು ಎಂದು ಕರೆಯಲ್ಪಡುವ ಹುಚ್ಚರ ಸಂತೆಯಲ್ಲಿ, ಅನ್ನದಾತ ರೈತನೇ ಈ ದೇಶದ ಬೆನ್ನೆಲುಬು, ಆತನೇ ನಿಜವಾದ ಸಂತ - ಶ್ರೀಮಂತ ಎಂದು ಮತ್ತೆ ಕೃಷಿಯ ಪ್ರಾಮುಖ್ಯತೆ ಸಾರುವ ಈ ಚಿತ್ರವನ್ನು ಸಾರ್ವಜನಿಕರು ನೋಡುವುದು ಒಳ್ಳೆಯದು.
ಈ ರೀತಿಯ ಪ್ರಯೋಗಾತ್ಮಕ ಚಿತ್ರಗಳನ್ನು ಸಹೃದಯರು ಪ್ರೋತ್ಸಾಹಿಸದಿದ್ದರೆ ಅಪಮೌಲ್ಯಗೊಂಡ ಚಿತ್ರಗಳೇ ಪ್ರಾಮುಖ್ಯತೆ ಪಡೆದು ಯುವ ಜನಾಂಗ ದಾರಿ ತಪ್ಪಲು ಕಾರಣವಾಗಬಹುದು. ಆದ್ದರಿಂದ ದಯವಿಟ್ಟು ಸಿನಿಮಾ ವೀಕ್ಷಣೆಯ ಆಸಕ್ತಿ ಇರುವವರು " ಶ್ರೀಮಂತ " ಚಲನಚಿತ್ರವನ್ನು ವೀಕ್ಷಿಸಿ.
ಜಾಗತೀಕರಣದ ಹೊಡೆತಕ್ಕೆ ಸಿಲುಕಿ ಕೃಷಿ ಸಂಸ್ಕೃತಿ ನಾಶವಾಗುತ್ತಿರುವ ಸಂದರ್ಭದಲ್ಲಿ, ನಗರೀಕರಣ ಭಾರದಿಂದ ಬದುಕೇ ಭಾರವಾಗುತ್ತಿರುವ ಸನ್ನಿವೇಶದಲ್ಲಿ ಮತ್ತೆ ಕೃಷಿಗೆ ಹಿಂದಿರುಗಿ ಜೀವನದ ನಿಜವಾದ ಸಾರವನ್ನು ಅನುಭವಿಸಿ ಎಂದು ಅತ್ಯಂತ ಸೌಮ್ಯವಾಗಿ, ಸಭ್ಯವಾಗಿ ಮನರಂಜನೆಯ ಮೂಲಕ ನಿರೂಪಿಸುರುವ ಚಿತ್ರ " ಶ್ರೀಮಂತ "
ರಾಜಕೀಯ ದೊಂಬರಾಟದ ನಡುವೆ ಕರ್ನಾಟಕದ ಜನ ಕನ್ನಡದ ಮಣ್ಣಿನ ಸೊಗಡಿನ ಈ ಸಿನಿಮಾವನ್ನು ಬೇಸಿಗೆಯ ರಜಾ ದಿನಗಳ ಸಮಯದಲ್ಲಿ ಬಿಡುವು ಮಾಡಿಕೊಂಡು ವೀಕ್ಷಿಸಿ. ಅನೇಕ ರೈತ ನಾಯಕರು, ಸಂಘಟನೆಗಳು, ಸಮಕಾಲೀನ ಹೋರಾಟಗಾರರು ಈ ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಸಿನಿಮಾ ನೋಡಿದ ನಂತರ ನೀವು ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ಸಹ ಸ್ವಾಗತಿಸುತ್ತಾ… ಈ ಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸುತ್ತಾ...
ರೈತ ಮತ್ತು ಕೃಷಿಯ ಮೇಲೆ ಆಧಾರಿತ ಚಿತ್ರವಾದ ಕಾರಣ ಇದರ ಬಗ್ಗೆ ಬರೆಯಬೇಕಾಯಿತು.
-ವಿವೇಕಾನಂದ ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ