ಶ್ರೀಮಂತ ಬಡವರು

ಶ್ರೀಮಂತ ಬಡವರು

ಇಂದು ನಾವು ಶ್ರೀಮಂತ ಬಡವರು ಎಂದರೆ ಯಾರು...? ಎಂದು ತಿಳಿದುಕೊಳ್ಳೋಣ. ಒಬ್ಬ ವ್ಯಕ್ತಿ ಗ್ರೀಕ್ ದೇಶದ ಅಥೆನ್ಸ್ ಪಟ್ಟಣದಲ್ಲಿದ್ದ. ಆತ ಸಾಕ್ರೆಟಿಸ್ ನ ಬಳಿ ಹೋಗಿ ಕೇಳುತ್ತಾನೆ. "ಶ್ರೀಮಂತ ಎಂದರೆ ಯಾರು ?." ಎಂದು. ಆಗ ಬಹಳ ಸುಂದರವಾಗಿ ಸಾಕ್ರೆಟಿಸ್ ಹೇಳುತ್ತಾನೆ, "ಶ್ರೀಮಂತನಾಗಬೇಕಾದರೆ ಮನಸ್ಸು ತೃಪ್ತವಾಗಿರಬೇಕು, ತೃಪ್ತಿ ಇಲ್ಲದ ಸಂಪತ್ತು ಬಡತನದ ಲಕ್ಷಣ". ಜಗತ್ತಿನಲ್ಲಿ ನಾವು ನೋಡ್ತಾ ಇದ್ದೀವಿ. ಸುತ್ತಮುತ್ತ ನೋಡುತ್ತಾ ಇದ್ದೀವಿ. ಶ್ರೀಮಂತ ದರಿದ್ರರು ಇದ್ದಾರೆ ವಿನಹ ಶ್ರೀಮಂತ ಶ್ರೀಮಂತರಿಲ್ಲ. ಶ್ರೀಮಂತರು ಇದ್ದಾರೆ ಆದರೆ ಪಕ್ಕ ಬಡವರಿದ್ದಾರೆ. ಬಡವ ಶ್ರೀಮಂತರು ಜಗತ್ತಿನಲ್ಲಿ ಕಡಿಮೆ. ಶ್ರೀಮಂತ ಬಡವರೇ ಹೆಚ್ಚು. ಕೆಲವೇ ಕೆಲವು ಬಡವರು ಆದರೆ ಶ್ರೀಮಂತರು. 

ಸಾಕ್ರೆಟಿಸ್ ಹೇಳುವುದು, ಜಗತ್ತಿನಲ್ಲಿ ಎರಡು ಗುಂಪು. ಒಂದು ಶ್ರೀಮಂತ ಬಡವರು. ಇನ್ನೊಂದು ಬಡವ ಶ್ರೀಮಂತರು. ಸಾಕ್ರೆಟಿಸ್ ನ ಸೂತ್ರ ಬಳಸಿ ನೋಡಿದರೆ, ನಾವು ಶ್ರೀಮಂತ ಬಡವರೊ ಅಥವಾ ಬಡವ ಶ್ರೀಮಂತರೊ ತಿಳಿಯುತ್ತದೆ. ಹೊರಗಡೆ ನಾವು ಶ್ರೀಮಂತರು, ಮನಸ್ಸಿನಲ್ಲಿ ಬಡವರು. ಭವ್ಯವಾದ ಮನೆ, ಆ ಮನೆ ಅದ್ಭುತ. ಕಲಾಕೌಶಲ್ಯದಿಂದ ಕೂಡಿದೆ. ಬೆಲೆಬಾಳುವ ಪೀಠೋಪಕರಣಗಳು. ಆದರೆ ಮಾಲೀಕ ತಲೆ ಮೇಲೆ ಕೈ ಹಿಡಿದು ಕುಳಿತಿದ್ದಾನೆ. ಮುಖದ ಮೇಲೆ ಸಂತೋಷ ಇಲ್ಲ. ಮನೆಯಲ್ಲಿ ದಾನ್ಯ ತುಂಬಿದೆ, ತಿಜೋರಿಯೊಳಗೆ ಚಿನ್ನ ಬೆಳ್ಳಿ ತುಂಬಿದೆ. ತಲೆ ಮನಸ್ಸಿನಲ್ಲಿ ಬಡತನ ತುಂಬಿದೆ. ಇಂತಹವರೇ ಅಧಿಕ. ಶರಣರು ಹೇಳಿದರು "ಮನೆ ನೋಡ ಬಡವರು, ಮನ ನೋಡ ಬಲ್ಲಿದರು. ಧನದಲ್ಲಿ ದರಿದ್ರರು, ಘನಮನ ಸಂಪನ್ನರು. ನಮ್ಮ ಕೂಡಲಸಂಗಮ ಶರಣರು" ಎಂದರು. ಸಣ್ಣ ಮನೆಯಾಗ ಭಾರಿ ಶ್ರೀಮಂತ ವಾಸ ಮಾಡಿದ್ದಾನೆ. ಅಂದರೆ ಮನೆ ಸಣ್ಣ. ಆಭರಣಗಳಿಲ್ಲ ಆದರೆ ಮನಸ್ಸು ತುಂಬಿದೆ. ಮನಸ್ಸು ಸಂತೃಪ್ತವಾಗಿದೆ. ಆದ್ದರಿಂದ ಸದಾ ಸಂತೋಷಗಳು ಅವರ ಮುಖದಲ್ಲಿ. ಅಷ್ಟು ಪ್ರಸನ್ನತೆ ಇದೆ. ಸಂತರು, ಶರಣರು, ಋಷಿಗಳು, ಮುನಿಗಳು ಮತ್ತು ಜ್ಞಾನಿಗಳು ಹೀಗೆ ಬಾಳಿದರು. ಇದು ಭಾರತೀಯ ಸಂತರಂತಲ್ಲ, ಜಗತ್ತಿನ ಎಲ್ಲ ಸಂತರು ಹಾಗೆಯೇ ಸದಾ ಸಂತೋಷಿಗಳು. ಮನುಷ್ಯ ಬಡವ ಆಗಬೇಕಂತಲ್ಲ, ಶ್ರೀಮಂತನಾಗಬೇಕು. ಬಡವನಾಗಿ ಇರಬಾರದು, ಶ್ರೀಮಂತನಾಗಿ ಇರಬೇಕು. ಮನುಷ್ಯ ದುಡಿದು ಹೊರಗೆ ಶ್ರೀಮಂತನಾಗಬೇಕು. ಆದರೆ ಮನಸ್ಸು ಬಡವಾಗಬಾರದು. ಸಂಪತ್ತು ಹೆಚ್ಚಿದಂತೆ ಬಡತನ ಹೆಚ್ಚಬಾರದು. ಬಡತನ ಕಡಿಮೆಯಾಗಬೇಕು. ಇದರ ಅರ್ಥ ಮುಖದಲ್ಲಿ ಪ್ರಸನ್ನತೆ, ಮನಸ್ಸಿನಲ್ಲಿ ಸಂತೋಷ ಹೆಚ್ಚಬೇಕು. ಸಂತೋಷಪಡುವುದು ಮನಸ್ಸು. ಆದ್ದರಿಂದ ಮನಸ್ಸು ತುಂಬಿರಬೇಕು. ಮನಸ್ಸು ತುಂಬಿದ್ದು ಸಂತೋಷ ಕೊಡುತ್ತದೆ ವಿನಃ ಹೊರಗಡೆ ಸಂಗ್ರಹಿಸಿದ್ದು ಅಲ್ಲ. 

ಒಬ್ಬ ತಾಯಿ ಬಟ್ಟೆಹರಿದಿದೆ. ಗುಡಿಸಲು. ಮರದ ತೊಟ್ಟಿಲಿಲ್ಲ. ಆ ಮಗುವಿನ ಮೇಲೆ ಆ ತಾಯಿಗೆ ಅಷ್ಟು ಪ್ರೀತಿ. ಆ ಪ್ರೀತಿ ಹಾಡಾಗಿ ಬಂದಿದೆ. ಬಾಯಿ ಪಾಠ ಮಾಡಿದ ಹಾಡಲ್ಲ. ಸಂಗೀತ ಗೊತ್ತಿಲ್ಲ. ಸಂಗೀತ ಕಲಿತ ಹಾಡಲ್ಲ. ಪ್ರೀತಿ, ಪ್ರೀತಿ ಮನಸ್ಸನ್ನು ತುಂಬಿ ಬಂದ ಹಾಡು. ಆ ಹಾಡು ಕೇಳಿ ಮಗು ನಗುತಿದೆ. ನಗುತಾ ನಗುತಾ ಆನಂದದಲ್ಲಿ ತೇಲುತ್ತಾ ಗಾಢ ನಿದ್ರೆಗೆ ಜಾರಿದೆ. ಅರಮನೆ ಬಂಗಾರದ ತೊಟ್ಟಿಲು. ಮಗುವಿಗೆ ಆಭರಣ ತೋಡಿಸಿದ್ದಾಳೆ. ಚಾಮರದಲ್ಲಿ ಗಾಳಿ ಬೀಸುತ್ತಿದ್ದಾರೆ. ತೂಗುವುದಕ್ಕೆ ಸೇವಕರಿದ್ದಾರೆ. ಮಗು ಅಳುತ್ತಿದೆ. ನಿದ್ರೆ ಮಾಡುತ್ತಿಲ್ಲ. ಈ ಎರಡು ಘಟನೆ ಯಿಂದ ಮನಸ್ಸು ತುಂಬಿದ ಪ್ರೀತಿಯ ಮಹತ್ವ ಎಷ್ಟು?. ಅಂತ ತಿಳಿಯುತ್ತದೆ. ಮನೆಯನ್ನು ಸ್ವರ್ಗ ಮಾಡೋದು ಸಂತೋಷದ ಭಾವ.

ಕಾಶ್ಮೀರ ದೇಶದ ರಾಣಿ ಬೋಂತಾದೇವಿ. ಆಕೆ ರಾಣಿ. ಭಾರೀ ಶ್ರೀಮಂತರು. ಒಂದು ದಿನ ಎಲ್ಲಾ ಆಭರಣ ತೊರೆದು, ಅರಮನೆ ಬಿಟ್ಟು, ಹೊರಗೆ ಬರುತ್ತಾಳೆ. ಇದು ಸುಮಾರು 800 ವರ್ಷಗಳ ಹಿಂದೆ ಜರಗಿದ್ದು. ಅರಮನೆಯ ಉಸಿರುಗಟ್ಟಿದ ವಾತಾವರಣ ಆಕೆಗೆ ಬೇಡವಾಗಿತ್ತು. ಅರಮನೆಯಲ್ಲಿ ಹೇಗೆ ನಡಿಬೇಕು? ಅಂತ ನಿಯಮ. ಊಟ ಮಾಡಿದರೆ, ಏನು ತಿನ್ನಬೇಕು? ಹೇಗೆ ತಿನ್ನಬೇಕು?. ಅಂತ ನಿಯಮ. ಹಾಡಿದರೆ, ಯಾರು ಹಾಡಬೇಕು? ಅಂತ ನಿಯಮ. ರಾಣಿ ಹಾಡುವುದಲ್ಲ, ಬರೀ ಕೇಳುವುದು. ಇಂತಹದ್ದನ್ನು ಬಿಟ್ಟು ಕಲ್ಯಾಣಕ್ಕೆ ಗಂಡ ಹೆಂಡತಿ ಬರುತ್ತಾರೆ. ಹೊರಗೆ ಎಷ್ಟು ಸ್ವಾತಂತ್ರ?. ಎಷ್ಟು ಆನಂದ?. ಅಷ್ಟು ಅನುಭವಿಸುತ್ತಾರೆ. ಆಗ ಕಾಶ್ಮೀರದಿಂದ ಇವರನ್ನು ನೋಡಲು ಜನರು ಬಂದಿರುತ್ತಾರೆ. ಇವರು ಗುಡಿಸಲಿನಲ್ಲಿ ವಾಸ. ರಾಜನಾಗಿದ್ದವ ಕಟ್ಟಿಗೆ ಕಡಿದು ಮಾರಾಟ ಮಾಡಿ ಜೀವಿಸುತ್ತಿದ್ದುದ್ದನ್ನು ನೋಡಿ ಹೇಳುತ್ತಾರೆ. ನೋಡಿ, ನೀವು ರಾಜರಾಗಿದ್ದವರು ಆಗಿನ ಸಂಪತ್ತೆಲ್ಲಿ, ಈಗಿನ ಬಡತನ ಎಲ್ಲಿ ? ಎಂದರು. ಆಗ ಬೋಂತಾದೇವಿ ಹೇಳುತ್ತಾಳೆ. ನೀವು ಹೇಳುವುದು ಸರಿ. ಅದನ್ನು ತಿರುವು ಮುರುವು ಮಾಡಿ ಹೇಳಿ ಅಂದಳು. ಅಂದರೆ ಈಗಿನ ಸ್ವಾತಂತ್ರದ ಸಿರಿ ಎಲ್ಲಿ?. ಆಗಿನ ಬಂಧನದ ಬಡತನ ಎಲ್ಲಿ?. ನಾನು ಸ್ವತಂತ್ರಳು. ನಾನು ಸ್ವಚ್ಛಂದವಾಗಿ ಹಾಡ್ತೀನಿ. ಹಕ್ಕಿಗಳ ಭಾಷೆ ತಿಳಿಯಬಲ್ಲೆ. ಮಣ್ಣಿನ ವಾಸನೆ ಅನುಭವಿಸಬಲ್ಲೆ. ಈಗಿನದು ಶ್ರೀಮಂತ ಜೀವನ. ಆಗಿನದು ಬಡತನದ ಬದುಕು. ಆಗ ಹೊರಗೆ ಸಿರಿವಂತಿಕೆ. ಈಗ ಒಳಗೆ ಸಿರಿವಂತಿಕೆ, ಹೊರಗಿನ ಸಿರಿವಂತಿಕೆಗೆ ಜನ ತಲೆ ಬಾಗಿ ನಮಿಸುತ್ತಿದ್ದರು. ಬಲ್ಲವರು ಹೇಳುತ್ತಾರೆ ಏನು ಇದೇ, ಅದರ ಹಿರಿಮೆ ಅರ್ಥ ಮಾಡಿಕೊಂಡಿರಬೇಕು. ಒಂದು ಕಡೆ ಬಂಗಾರದ ಹೂ, ಇನ್ನೊಂದು ಕಡೆ ಸಹಜ ಹೂ. ಸಹಜ ಹೂವಿನ ಬೆಲೆ ಕೇವಲ ರೂಪಾಯಿ. ಬಂಗಾರದ ಬೆಲೆ ಹೆಚ್ಚು. ಲಕ್ಷ ಲಕ್ಷ ಬಂಗಾರ ಇತ್ತು. ಅದನ್ನ ಆನಂದಿಸು. ಬಂಗಾರ ಇಲ್ಲ , ಕೇವಲ ಹೂ ಇದೆ. ಅದನ್ನು ಇನ್ನೂ ಹೆಚ್ಚು ಆನಂದಿಸು. ಹೇಗಂದರೆ ಅದರ ಸೌಂದರ್ಯ, ಸುವಾಸನೆ ಆಸ್ವಾದಿಸು. ಅದು ಬಂಗಾರದ ಹೂವಿನಲ್ಲಿ ಇಲ್ಲ. ಸಹಜ ಜೀವಂತ ಸೌಂದರ್ಯ ಬಂಗಾರದಲ್ಲಿ ಇಲ್ಲ. ಹೀಗೆ ಅರ್ಥ ಮಾಡಿಕೊಳ್ಳಬೇಕು. ಬಂಗಾರದ ಹೂವಿದ್ದರೆ ಭಯ. ಸಹಜ ಹೂ ಇದ್ದರೆ ನಿರ್ಭಯ. ಈ ನಿರ್ಭಯ ಸಂಪತ್ತು ನಮ್ಮಲ್ಲಿ ಕಾರಿಲ್ಲ , ಬೈಸಿಕಲ್ ಇದೆ. ಹೀಗೆ ಅರ್ಥ ಮಾಡಿಕೊಳ್ಳಬೇಕು. ಏನು ಅದ್ಭುತ ಸೈಕಲ್?. ಒಂದು ಹನಿ ಪೆಟ್ರೋಲ್ ಬೇಕಿಲ್ಲ. ಸಣ್ಣ ಕಿರು ದಾರಿಯಲ್ಲಿ ಎಲ್ಲಿ ಬೇಕೆಂದರಲ್ಲಿ ಹೋಗಬಲ್ಲೆ. ಕಳೆದರೆ ಬಹಳಷ್ಟು ಹಾನಿ ಇಲ್ಲ. ಇದರಿಂದ ಆರೋಗ್ಯಕ್ಕೆ ಹಿತ. ವಾತಾವರಣ ಕೆಡಿಸೋದಿಲ್ಲ. ಬಹಳಷ್ಟು ಜನ ನಡೆಯುವಾಗ, ನನ್ನಲ್ಲಿ ಬೈಸಿಕಲ್ ಇದೆಯಲ್ಲ ಅನ್ನಬೇಕು. ಸೈಕಲ್ ಇಲ್ಲ, ನಡೀತಾ ಇದ್ದೀವಿ ಅನ್ನಿ. ಆಗ ಹೀಗೆ ಆಲೋಚಿಸಬೇಕು. ನನ್ನ ಕಾಲು ಎಷ್ಟು ಬಲಿಷ್ಠ ?. ಅದು ಪಂಚರ ಆಗೋದಿಲ್ಲ. ಮನೆ ಒಳಗೆ ಹೊರಗೆ ಮೇಲೆ ಎಲ್ಲಾ ಕಡೆ ಹೋಗಬಹುದು. ಸೈಕಲ್ ತೆಗೆದುಕೊಂಡು ಅಡುಗೆ ಮನೆಗೆ ಹೋಗೋದಕ್ಕೆ ಆಗುತ್ತಾ? ಕಾಲು ಇದ್ರೆ ಕಾಲಿನ ವೈಭವ. ಸೈಕಲ್ ಇದ್ರೆ ಸೈಕಲ್ ವೈಭವ. ಕಾರ್ ಇದ್ರೆ ಕಾರಿನ ವೈಭವ. ನೋಡುವ ಭಾವ ಇದ್ದರೆ ಇರೋದರಲ್ಲಿ ಸಂತೋಷಪಡಬಹುದು. ಇಲ್ಲದೆ ಹೋದ್ರೆ ಹೋಲಿಸಿಕೊಂಡು ದುಃಖ ಪಡುತ್ತೇವೆ. ನಮಗೆ ಹೇಗೆ ಸಂತೋಷವಾಗುತ್ತೋ ಹಾಗೆ ವಿಚಾರ ಮಾಡಬೇಕು. ಬೇರೆಯವರಂತೆ ವಿಚಾರ ಮಾಡಬಾರದು. ಆಗ ಸಂತೋಷಪಡಲು ಸಾಧ್ಯ. ಮನಸ್ಸು ತುಂಬಿದವರು ಹಾಗೆ ಆಲೋಚನೆ ಮಾಡುತ್ತಾರೆ. ಏನು ಮಾಡುತ್ತಾರೋ ಅದರಲ್ಲಿ ಸಂತೋಷ ಪಡುತ್ತಾರೆ. ಮನಸ್ಸು ತುಂಬುವುದು ಅನುಭವದಿಂದ ಅಲ್ಲವೇ? 

-ಎಂ.ಪಿ. ಜ್ಞಾನೇಶ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ