ಶ್ರೀರಾಮಕೃಷ್ಣ ಪರಮಹಂಸರು

ಶ್ರೀರಾಮಕೃಷ್ಣ ಪರಮಹಂಸರು

ಬರಹ

ಶ್ರೀರಾಮಕೃಷ್ಣ ಪರಮಹಂಸರು
`ಸತ್ಸಂಗಿ`, ಹೊಳೆನರಸೀಪುರ
( ಇಂದು ದಿ: 09-03-2008 - ಹಿಂದೂ ಪಂಚಾಂಗದ ಪ್ರಕಾರ ಇಂದು ಪರಮಹಂಸರ ಜನ್ಮದಿನವಾಗಿದೆ.
ಆದ್ದರಿಂದ ಅವರ ಸ್ಮರಣೆಗಾಗಿ ಈ ಸಂಕ್ಷಿಪ್ತ ಲೇಖನವನ್ನು ಪ್ರಕಟಿಸಿ ಅವರಿಗೆ ವಂದನೆಗಳನ್ನು ಸಲ್ಲಿಸಿರುವೆ)
ಶ್ರೀರಾಮಕ್ರಿಷ್ಣ ಪರಮಹಂಸರು ನವಯುಗದ ಅವತಾರವಾಗಿದ್ದಾರೆ. ಹಿಂದೆಲ್ಲಾ ಭಗವಂತನು ದುಷ್ಟರ ಶಿಕ್ಷಣೆಗಾಗಿ ಹಾಗೂ ಶಿಷ್ಟರ ರಕ್ಷಣೆಗಾಗಿ ಹಲವಾರು ಅವತಾರಗಳನ್ನು ಎತ್ತಿದ್ದನೆಂಬ ವಿಚಾರ ನಮಗೆಲ್ಲಾ ತಿಳಿದೇ ಇದೆ. ಆ ಅವತಾರಗಳಲ್ಲಿ ಆತ ದುಷ್ಟರನ್ನು ಸಂಹಾರ ಮಾಡಿಯೇ ಶಿಷ್ಟರ ರಕ್ಷಣೆಯನ್ನು ಮಾಡಲಾಗಿದೆ. ಆದರೆ ಭಗವಂತನ ಈ ಅವತಾರವಾದರೋ ಅಂತಿರದೆ ಇಲ್ಲಿ ವಿಶೇಷತೆಯಿರುವುದು ಕಂಡುಬಂದಿದೆ. ಇಲ್ಲಿ ಅವನು ಗುರುವಿನ ರೂಪದಲ್ಲಿ ಬಂದಿದ್ದು, ಇಲ್ಲಿ ದುಷ್ಟರನ್ನು ಕೊಲ್ಲಲಿಲ್ಲ. ಬದಲಿಗೆ ಕೇವಲ ದುಷ್ಟತನವನ್ನು ಕೊಂದು ವ್ಯಕ್ತಿಯಲ್ಲಿ ಕೇವಲ ಸಾತ್ವಿಕತನ ಮಾತ್ರ ಉಳಿಯುವಂತೆ ಮಾಡಲಾಗಿದೆ. ಪರಮಹಂಸರು ತಮ್ಮ ಬಳಿಗೆ ಬಂದವರೆಲ್ಲರ ಅಂತಃಕರಣವನ್ನೇ ಪ್ರವೇಶಿಸಿ ಆಮೂಲಾಗ್ರವಾದ ಬದಲಾವಣೆ ಉಂಡಾಗುವಂತೆ ಮಾಡಿದ ಗುರುದೇವರಾಗಿದ್ದಾರೆ.
ಪರಮಹಂಸರು ಭಾರತಮಾತೆಯ ಮಡಿಲಿನಲ್ಲಿರುವ ಪಶ್ಚಿಮಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಾಮಾರಪುಕುರವೆಂಬ ಪುಟ್ಟಗ್ರಾಮವೊಂದರಲ್ಲಿ 1836 ರ ಫಬ್ರವರಿ 18ನೇ ದಿನಾಂಕದಂದು ಜನಿಸಿದರು. ತಂದೆ ಖುದಿರಾಮ ಚಟ್ಟೋಪಾಧ್ಯಾಯರು, ತಾಯಿ ಚಂದ್ರಮಣಿದೇವಿಯವರು. ಆ ಬಡ ಕುಟುಂಬದಲ್ಲಿ ನಾಲ್ಕನೆಯ ಮಗುವಾಗಿ ಜನಿಸಿದ ಅವರಿಗೆ ಇಡಲಾದ ಬಾಲ್ಯನಾಮ `ಗದಾಧರ`. ಬಾಲ್ಯದಲ್ಲಿ ಅವರಿಗೆ ಅಣಕು ಮಾಡುವ ಪ್ರತಿಭೆ ಅಗಾಧವಾಗಿತ್ತು. ಒಮ್ಮೆ ನೋಡಿದ ನಾಟಕದ ಎಲ್ಲ ಪಾತ್ರಗಳನ್ನೂ ಅಂತೆಯೇ ಅಭಿನಯಿಸುತ್ತಿದ್ದರು. ಅವರು ತಮ್ಮ ಮನೆಯವರಿಗೆ ಮಾತ್ರವಲ್ಲದೇ ನೆರೆಹೊರೆಯವರಿಗೂ ಅಚ್ಚುಮೆಚ್ಚಿನ ಬಾಲಕರಾಗಿದ್ದರು. ಆದರೆ ಅವರಿಗೆ ಶಾಲೆಯಲ್ಲಿನ ವಿದ್ಯಾಭ್ಯಾಸ ಮಾತ್ರ ಹಿಡಿಸಲೇ ಇಲ್ಲ. ಅವರು ಹೆಚ್ಚಿನ ಶಿಕ್ಷಣ ಪಡೆದದ್ದು ಪ್ರಕ್ರುತಿಮಾತೆಯಿಂದ ಹಾಗೂ ಕೇಳಿದ ಹರಿಕಠೆಗಳು, ನೋಡಿದ ನಾಟಕಗಳಂದ ಮಾತ್ರ.
ಅವರು ಮುಂದೆ ತಮ್ಮ ಅಣ್ಣನೊಂದಿಗೆ ದಕ್ಷಿಣೇಶ್ವರದಲ್ಲಿ ಗಂಗೆಯ ದಡದಲ್ಲಿ ರಾಣಿ ರಾಸಮಣಿದೇವಿ ಕಟ್ಟಿಸಿದ ಕಾಳೀ ದೇವಾಲಯದಲ್ಲಿ ಪೂಜೆ ಮಾಡಲು ನೆರವಾಗಲು ತೆರಳುತ್ತಾರೆ. ಅಲ್ಲಿ ತನ್ನೊಂದಿಗೆ ಮಂತ್ರಗಳನ್ನು ಕಲಿತುಕೊಂಡು ಊರಲ್ಲಿನ ಮನೆಗಳಲ್ಲಿ ಪೂಜೆಗಳನ್ನು ಮಾಡಿಸಿ ಹಣ ದುಡಿಯುವಂತೆ ಅವರ ಅಣ್ನ ಹೇಳಿದಾಗ, ನನಗೆ ಗೊಟುಕಟ್ಟುವ ವಿದ್ಯ ಬೇಕಾಗಿಲ್ಲವೆಂದು ತಿಳಿಸಿದರು- ತಾವೇ ತಾವಾಗಿ ಉಳಿದರು. ಮುಂದೆ ಅಪ್ರತಿಮ ಸಾಧನೆ ಮಾಡಿದ ಅವರು ಕಾಳೀಮಾತೆಯನ್ನು ಸಾಕ್ಷಾತ್ಕರಿಸಿಕೊಂಡದ್ದೇ ಅಲ್ಲದೆ ಎಲ್ಲ ದೇವರುಗಳೂ ಒಂದೇ ಮೂಲತತ್ವದ ಬೇರೆ ಬೇರೆ ರೂಪಗಳು ಮಾತ್ರ ಎಂಬುದನ್ನು ತೋರಿಸಿಕೊಟ್ಟರು.
ದೇವರನ್ನು ಸಾಕ್ಷಾತ್ರಿಸಿಕೊಳ್ಳಲು ಇರುವ ಎಲ್ಲರೀತಿಯ ಸಾಧನೆಗಳನ್ನೂ ಮಾಡಿದ ಅವರು ಎಲ್ಲಾ ಮತೀಯರು ನಡೆಸುವ ುಪಾಸನಾ ವಿಧಾನಗಳನ್ನೂ ಸಹ ಅನುಸರಿಸಿ ಸಾಧನೆ ಮಾಡಿ ಆಯಾಯಾ ಮತಗಳ ದೇವರುಗಳನ್ನೆಲ್ಲಾ ಸಾಕ್ಷಾತ್ಕರಿಸಿಕೊಂಡು ಆ ಎಲ್ಲಾ ದೇವರುಗಳೂ ಬೇರೆಯಲ್ಲವೆಂಬುದನ್ನು ನಿರೂಪಿಸಿ ತೋರಿಸಿದರು.
ತಂತ್ರವಿದ್ಯೆ, ಅಧ್ಯಾತ್ಮವಿದ್ಯಗಳನ್ನೂ ಅಭ್ಯಸಿಸಿದ ಅವರು ತಮಗೆ ಗುರುಗಳಾಗಿ ಕಲಿಸಬಂದವರಿಗೇ ಗುರುವಾದರು. ಮುಂದೆ ತಾವೇ ಸೂಚಿಸಿದ ಕನ್ಯೆ `ಶಾರದೆ` ಯೊಡನೆ ವಿವಾಹವಾದರೂ ಆ ಮಹಾಸತಿ ಶಾರದಾಮಾತೆಯವರನ್ನು ತನ್ನ ಹೆತ್ತತಾಯಿ ಎಂಬಂತೆ ಕಂಡ ಮಹಾನುಭಾವ ಅವರು. ಅಷ್ಟೇ ಅಲ್ಲದೇ ತನ್ನ ಮಡದಿಯನ್ನೇ ದೇವಿಯನ್ನು ಕುಳ್ಳಿರಿಸುವ ಸ್ಥಳದಲ್ಲಿ ಕುಳ್ಳಿರಿಸಿ ಪೂಜಿಸಿದ ಮಹಾಮಹಿಮರವರು.
ಅವರು ಶಿಷ್ಯರೆಂದು ಯಾರನ್ನೆಲ್ಲಾ ಪರಿಗಣಿಸಿದರೋ ಅವರೆಲ್ಲಾ ಮುಂದೆ ಅಪ್ರತಿಮ ಸಂನ್ಯಾಸಿಗಳಾಗಿಯೂ ಇಲ್ಲವೇ ಅಪ್ರತಿಮ ವಿರಾಗಿಗಳಾಗಿಯೂ ಬಾಳಿ ಅವರ ಉಪದೇಶಗಳನ್ನು ದೇಶವಿದೇಶಗಳಲ್ಲಿ ಪ್ರಚುರಪಡಿಸಿದ್ದಾರೆ. ಅಂತಹವರಲ್ಲಿ ಭಾರತಮಾತೆಯ ಹೆಮ್ಮೆಯ ಪುತ್ರ ವೀರಸಂನ್ಯಾಸಿ ವಿವೇಕಾನಂದರೂ ಒಬ್ಬರು.
ದಕ್ಷಿಣೇಶ್ವರದಲ್ಲಿಯೇ ಕೊನೆಯವರೆಗೂ ಕಾಳೀಮಾತೆಯ ಮಡಿಲಲ್ಲೇ ಇದ್ದು ಉಪದೇಶಿಸಿದ ಅವರು ಜಾತಿ-ಮತಗಳ ಬೇಧಭಾವವನ್ನು ಬಹುದೂರವಿಟ್ಟವರಾಗಿದ್ದರು. 1886 ರ ಆಗಸ್ಟ್ 16 ರಂದು ಅವರು ವಿಶ್ವಾತ್ಮರಾದರೂ ಅವರ ಚೇತನ ಇಂದಿಗೂ ಅವರನ್ನು ನೆನೆಸಿಕೊಂಡವರನ್ನೆಲ್ಲಾ ಸಲಹುತ್ತಾ ಸಾಗಿರುವ ಸಂಜೀವಿನಿಯಾಗಿದೆ.
ಅವರ ಜೀವನ, ಸಾಧನೆ ಹಾಗೂ ಉಪದೇಶಗಳ ಬಗೆಗೆ ಅರಿಯಬೇಕಾದಲ್ಲಿ ಕೆಳಗೆ ಸೂಚಿಸಿರುವ ಕೆಲ ಗ್ರಂಥಗಳನ್ನು ಅಗತ್ಯವಾಗಿ ಓದಲು ಸೂಚಿಸಬಹುದಾಗಿದೆ.
1. ಶ್ರೀರಾಮಕೃಷ್ಣ ವಚನವೇದ- ಮಹೇಂದ್ರನಾಥ ಗುಪ್ತ.
2. ಯುಗಾವತಾರ ಶ್ರೀರಾಮಕೃಷ್ಣ - ಸ್ವಾಮಿ ಪುರುಷೋತ್ತಮಾನಂದ.

ಕೃತಙ್ಞತೆ: ಪ.ಪೂ. ಶ್ರೀ ಶ್ರೀ ಸ್ವಾಮಿ ವಿರಜಾನಂದಜೀ ಮಹಾರಾಜ್ ರವರ ಪ್ರವಚನಗಳು
`ದಿವ್ಯ ತ್ರಯರು` - ಸ್ವಾಮಿ ಸೋಮನಾಥಾನಂದಜೀ.

ಜೈ ಶ್ರೀರಾಮಕೃಷ್ಣ
ಶ್ರೀರಾಮಕೃಷ್ಣ ಪರಬ್ರಹ್ಮಣೇ ನಮಃ