ಶ್ರೀರಾಮ ಜಯರಾಮ ಜಯ ಜಯರಾಮ

ಶ್ರೀರಾಮ ಜಯರಾಮ ಜಯ ಜಯರಾಮ

*ಪ್ರಾತ: ಸ್ಮರಾಮಿ ರಘುನಾಥಮುಖಾರವಿಂದಂ*

*ಮಂದಸ್ಮಿತಂ ಮೃದುಲಭಾಷಿ ವಿಶಾಲಭಾಲಂ/*

*ಕರ್ಣಾವಲಂಬಿಚಲಕುಂಡಲಶೋಭಿಗಂಡಂ*

*ಕರ್ಣಾಂತದೀರ್ಘನಯನಂ ನಯಾನಾಭಿರಾಮಂ//*

 

*ರಾಮೇತಿ ರಾಮಭದ್ರೇತಿ ರಾಮಚಂದ್ರೇತಿ ವಾ ಸ್ಮರನ್/*

*ನರೋ ನ ಲಿಪ್ಯತೇ  ಪಾಪೈರ್ಭುಕ್ತಿಂ ಚೈವ ಸ ವಿಂದತಿ*//

 

*ಶ್ರೀ ರಾಘವಂ ದಶರಥಾತ್ಮ ಜಮಪ್ರಮೇಯಂ*

*ಸೀತಾಪತಿಂ ರಘುಕುಲಾನ್ವಯರತ್ನದೀಪಂ*/

*ಅಜಾನುಬಾಹುಮರವಿಂದದಳಾಯತಾಕ್ಷಂ*

*ರಾಮಂ ನಿಶಾಚರವಿನಾಶಕರಂ ನಮಾಮಿ*//

 

*ಮಾತಾ ರಾಮೋ ಮತ್ಪಿತಾ ರಾಮಚಂದ್ರ:*

*ಭ್ರಾತಾ ರಾಮೋ ಮತ್ಸಖಾ ರಾಮಚಂದ್ರ*/

*ಸರ್ವಸ್ವಂ ಮೇ ರಾಮಚಂದ್ರೋ ದಯಾಲು*

*ರ್ನ್ಯಾನ್ಯಂ ದೈವಂ ನೈವ ಜಾನೇ ನ ಜಾನೇ*//

ಸಣ್ಣ ವಯಸ್ಸಿನ ಮಕ್ಕಳಿಗೆ ‘ರ’ ಹೇಳಲು ಬಾರದಿದ್ದಾಗ ‘ಮರ ಮರ’ ಹೇಳಿಸುವುದಿದೆ. ‘ಆ ಮರ, ಈ ಮರ’ ಹೇಳಿಸುವುದೂ ಇದೆ. ಕಡೆಗೆ ಮರಮರ ಹೇಳಿಸಿ, ‘ರಾಮರಾಮ’ ಹೇಳಿಸ್ತೇವೆ. ‘ರಾಮ’ ಎಂಬ ಎರಡಕ್ಷರದಿ ‘ಮನಸ್ಸಿನ ಶಾಂತಿ, ನೆಮ್ಮದಿ ಅಡಗಿದೆ ಎಂದರೂ ತಪ್ಪಾಗಲಾರದು. ನಮಗೆ ಹೆದರಿಕೆಯಾದರೆ, ಭಯವಾದರೆ, ಮನಕೆ ಆಘಾತವಾದರೆ, ಸಹಿಸಲಸಾಧ್ಯವಾದ ನೋವಾದರೆ ಶ್ರೀರಾಮ ಜಯರಾಮ ಜಯ ಜಯರಾಮ ಹೇಳ್ತೇವೆ, ಪುಟ್ಟ ಮಕ್ಕಳಿಗೂ ಹೇಳಿಸುತ್ತೇವೆ. ರಾಮನಾಮ ತಾರಕಮಂತ್ರ ಸದಾಕಾಲ ಜಪಿಸಬಹುದು.

ಇಂದು ಶ್ರೀರಾಮನವಮಿ. ರಾಮಚಂದ್ರ ದೇವ ಜನಿಸಿದ ದಿನ. ಎಲ್ಲೆಲ್ಲೂ ಸಡಗರ ಸಂಭ್ರಮ. ಚೈತ್ರಮಾಸದ ಶುಕ್ಲಪಕ್ಷದಂದು ಅಯೋಧ್ಯೆಯ ಚಕ್ರವರ್ತಿ ದಶರಥ ಮಹಾರಾಜ ಕೌಸಲ್ಯಾ ಮಾತೆಯರಿಗೆ ಪುತ್ರರತ್ನವಾಗಿ ಜನಿಸಿದವನು ರಾಮ. ಮಹಾವಿಷ್ಣುವಿನ ಏಳನೆಯ ಅವತಾರ. ನರರೂಪದ ದೇವಮಾನವ. ತಾನು ಭಗವಂತನೆಂದು ಎಲ್ಲೂ ಹೇಳಿಕೊಳ್ಳದ ಮಹಿಮಾನ್ವಿತ.

ಸೂರ್ಯವಂಶದ, ಸಾಕೇತದ ಕಣ್ಮಣಿ. ‘ರಾ’ ಎಂದರೆ ‘ಬೆಳಕು’, ‘ಮ’ ಎಂದರೆ ನಮ್ಮೊಳಗೆ ಎಂದರೆ ‘ಆತ್ಮ’. ಸೀತೆ ಎಂದರೆ ‘ಮನಸ್ಸು’. ಹನುಮಂತ ನಮ್ಮ ಪ್ರಾಣಶಕ್ತಿ. ರಾವಣ ಅಹಂನ ಪರಮಾವಧಿ. ನಮ್ಮೊಳಗಿನ ಅಹಂ ಅನ್ನು ಹೋಗಲಾಡಿಸಿ, ಮನಸ್ಸನ್ನು ಶುದ್ಧವಾಗಿಡಲು ಬೇಕು. ರಾಮ ಸೀತೆ ಒಂದಾದಲ್ಲಿ ಅಹಂಕಾರದ ಸರ್ವನಾಶ. ‘ರಾಮನಾಮ’ ಸತ್ಯನಡೆ-ನುಡಿ, ಹಿರಿಯರ ಮಾತನ್ನು ಶಿರಸಾ ಪಾಲಿಸಿದ, ಧರ್ಮದ ಪರವಾಗಿ ನಿಂತವ, ವಿಜಯ ಸಾಧಿಸಿದ ಧೀಮಂತ ಶ್ರೀರಾಮ. ಕರುಣಾಸಾಗರನಾದ ಶ್ರೀರಾಮನ ಜನ್ಮ ದಿನವನ್ನು ಪೂಜೆ, ಆರಾಧನೆ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ದಾನಧರ್ಮ ನೀಡಿಕೆ, ಸಂಗೀತ ಇತ್ಯಾದಿಗಳನ್ನು ಹಮ್ಮಿಕೊಂಡು ಸಂಭ್ರಮದಿಂದ ಆಚರಿಸುತ್ತಾರೆ. ಕೆಲವೆಡೆ ಸೀತಾರಾಮ ಕಲ್ಯಾಣೋತ್ಸವ ಏರ್ಪಡಿಸುತ್ತಾರೆ. ರಾಮನವಮಿ ದಿನ ಶ್ರೀರಾಮನನ್ನು ಶ್ರದ್ಧಾಭಕ್ತಿಗಳಿಂದ ಭಜಿಸಿ ಹಾಡಿ ಪಾಡಿದರೆ ಶ್ರೀ ರಾಮತತ್ವ ಸಾವಿರಪಟ್ಟು ಹೆಚ್ಚಾಗುವುದಂತೆ.

ಭಕ್ತರು ಈ ದಿನ ದೇವಾಲಯಗಳಿಗೆ ಭೇಟಿಯಿತ್ತು, ತಮ್ಮ ಮನೋಕಾಮನೆಗಳನ್ನು ಭಗವಂತನೆದುರು ನಿವೇದಿಸುವುದು ಸಾಮಾನ್ಯ. ಶ್ರೀರಾಮನ ಪುಟ್ಟ ಪ್ರತಿಮೆಯನ್ನು ಇಟ್ಟು ಪೂಜೆ ಅಭಿಷೇಕ ಮಾಡುವುದೂ ಇದೆ. ಪಾಯಸ, ಕೋಸಂಬರಿ, ಖೀರು, ಹಲವು ಬಗೆಯ ಸಿಹಿ ಖಾದ್ಯಗಳನ್ನು ತಯಾರಿಸಿ ನೈವೇದ್ಯ ಮಾಡುವರು. ಅಯೋಧ್ಯೆಯ ಸರಯೂ ನದಿಯ ನೀರಿನಲ್ಲಿ ಸ್ನಾನಮಾಡಿ ಪುನೀತರಾಗುವರು.ಆನಂದದಾಯಕ, ಮರ್ಯಾದಾ ಪುರುಷೋತ್ತಮ, ಕೃಪಾಳು, ಸಮಸ್ಥಿತಿ, ಸಮಚಿತ್ತ ಕಾಯುವ ಆದರ್ಶ ಪುರುಷ, ಲೋಕಮಾನ್ಯನು, ಸುರನರವಂದಿತನು, ಲೋಕಮಾತೆ ಸೀತೆಯ ವಲ್ಲಭನು, ಕರುಣಾಳು ಬಂಧುವಾದ ಶ್ರೀರಾಮನ ಪಾದಮೂಲದಲ್ಲಿ ಶಿರಬಾಗಿಸೋಣ. ಶರಣ ವಿಭೀಷಣ ನಂಬಿ ಬಂದಾಗ ಎತ್ತಿ ತೆಕ್ಕೆಯಲಿ ಹಿಡಿದೆತ್ತಿ ಅಭಯವ ನೀಡಿದವನು, ಹೇಳಿದ ಮಾತಿಗೆ ತಪ್ಪದ ಸತ್ಯಪಾಲಕನು.

ದುಷ್ಟರ, ಕೆಟ್ಟವರ, ಲೋಕ ಪೀಡಕರ ಕುಟ್ಟಿದವನು.

*ಆಪದಾಮಪಹರ್ತಾರಂ ದಾತಾರಂ ಸರ್ವ ಸಂಪದಾಂ/*

*ಲೋಕಾಭಿರಾಮಂ ಶ್ರೀರಾಮಂಭೂಯೋ ಭೂಯೋನಮಾ ಮ್ಯಹಂ*//

ರಾಮನೇ ತಂದೆ,ರಾಮನೇ ತಾಯಿ,ರಾಮನೇ ಬಂಧುವು,ರಾಮನೇ ಗುರುವು,ರಾಮನೇ ಸಕಲವು.

*ಕ್ಷಾಮವ ತೊಲಗಿಸಿ ಕ್ಷೇಮವ ಕರುಣಿಸುವ ರಾಮನಾಮವನ್ನು ಜಪಿಸಿ ಕೃತಾರ್ಥರಾಗೋಣ* ಜೈ ಶ್ರೀರಾಮ

-ರತ್ನಾ ಕೆ ಭಟ್,ತಲಂಜೇರಿ*

(ಸಂಗ್ರಹ: ಓದಿದ ನೆನಪಿನ ಪುಟಗಳಿಂದ, ಸ್ತೋತ್ರ ಸಂಗ್ರಹದಿಂದ.)

ಚಿತ್ರ ಕೃಪೆ: ಇಂಟರ್ನೆಟ್ ತಾಣ