ಶ್ರೀರಾಮ ನವಮಿಯ ದಿವಸ

ಶ್ರೀರಾಮ ನವಮಿಯ ದಿವಸ

ಬರಹ

 ರಾಮನಾಮಾಮೃತದ ಜೊತೆ ಜೊತೆಗೆ

ನೀರೊಸರುವ ಹಣ್ಣುಗಳ ನೈವೇದ್ಯ

ಜೇನು, ಕಾಯಿತುರಿ, ಸಕ್ಕರೆಯಾರೋಗಣೆ

ಬಡಬಾಗ್ನಿಗೆ ಸಿಕ್ಕ ಎಲ್ಲವೂ ಭಸ್ಮ.

ಕಾದ ಕಾವಲಿ ಮಣ್ಣ ಮೇಲಿನ ಪದರ

ಸೀದು ಕರಕಲಾಗುತ್ತಿದೆ ಜೀವದಾಧಾರ

ಆಕಾಶದುದ್ದಕ್ಕೂ ಮೋಡವರಸುವ ಕಣ್ಣು

ಕನಸುತ್ತಲೇ ಇದೆ ಹೆಣ್ಣು, ಹೊನ್ನು, ಮಣ್ಣು.

ಕಣ್ಬಿಟ್ಟ ಪುಟ್ಟ ಮಗುವಿಗೂ ಧಾವಂತ

ನಿಘಂಟಿನಲ್ಲಷ್ಟೇ ಉಳಿದು  ಏಕಾಂತ

ಸಿಲಿಕಾನ್ ಸಿಟಿಯ ಹಿತ್ತಿಲಲ್ಲಿ ನೆಟ್ಟಿದ್ದೆಲ್ಲವೂ

ಆಗುವುದು ಮುಂದೊಂದು ದಿನ ಔಷಧದ ಸರಕು?

ನಡುಗುತ್ತಿದೆ ಗಾಂಧಿ ಹಚ್ಚಿದ ಸೊಡರು

ಜಾಗತೀಕರಣದ ಬೀಸು ಗಾಳಿಗೆ ಬೆದರಿ

ಏನೆಲ್ಲ ತಿಳಿದಿದ್ದರೂ ಮತ್ತೆ ಗೊತ್ತಾಗದೇ

ನುಗ್ಗುವ ಸುನಾಮಿಯಂಥ ಸಾವ ನೆರಳು.

ಸರಕಾರಿ ಸುತ್ತೋಲೆಗಳ ಕಬಂಧ ಬಾಹುವಿನೊಳಗೆ

ನಲುಗುತ್ತಲೇ ನವೆಯುತ್ತಿರುವ ಮುಗ್ಧ

ದಶಾವತಾರಗಳ ಮುಖಗಳನ್ನರಸುತ್ತಿದ್ದರೂ

ಯಾವಾಗ ಸಿಗುವನೋ ಮಂದಸ್ಮಿತ ಬುದ್ಧ?

ದಶರಥಾತ್ಮಜನ ಹುಟ್ಟೂರ ಹೆಸರು

ಕಾಲಚಕ್ರಕ್ಕೆ ಮೆತ್ತಿದ ಹಸಿ, ಹಸೀ ಕೆಸರು

ಉರುಳಿದ್ದೇ ತಡ, ಮಸೀದಿಯ ಬುರುಜು

ನೀರಿನಾಳದಲ್ಲೆಲ್ಲೋ ಮುಳುಗಿ ಗುರುತೇ ಸಿಗದ ಜಹಜು

ಕೃತಕ ದೀಪದಡಿಯಲ್ಲಿ ನಿತ್ಯ ಓಡಾಟ

ಒಳಿತು-ಕೆಡಕುಗಳ ವ್ಯತ್ಯಾಸ ಸ್ಪಷ್ಟವಾಗುವುದಿಲ್ಲ

ಹಗಲೇ ಹೊತ್ತಿಸಿದ ಸರ್ಚ್ ಲೈಟಲ್ಲೂ

ಹೊರಬೀಳುವುದೇ ಇಲ್ಲ ನವ ನಾಯಕರ ಚರಿತ.                                                                                                      

                                                                                  

ಓಟು-ನೋಟಿನ ನಡುವೆ ಖಾದಿತೊಟ್ಟವರಿಗೆಲ್ಲ

ಠಸ್ಸೆ, ಮತಪತ್ರ, ಜಾತಿ ಕಾವಲಿನ ದೊಣ್ಣೆ

ಅಧಿಕಾರದಂಧತ್ವಕ್ಕೆ ಉಂಡುಟ್ಟ ಮನೆಗೇ ಬೆಂಕಿ

ಸಮೂಹ ಸನ್ನಿಗೆ ಅಮಾಯಕರ ಸರತಿ ಸಾಲು!

ರಾಮಬಾಣದ ಮೊನಚು,ಸರಿ. ಗುರಿಗೆ

ಬಲಿಯಾದ ತಲೆಗಳ ಸಂಖ್ಯೆ ಎಣಿಸದವರುಂಟೆ?

ಬೈದರೆ ನಗುವ, ನೆಗೆದು ಮೈಮೇಲೇರುವ

ಆದಿ ಮಾನವ ಬುದ್ಧಿ ನಿರಂತರದ ಸೂತ್ರ.

ಮನೆ, ಮನಗಳ ಕಿರುತೆರೆಯ ಮೇಲೆಲ್ಲ

ಹಸಿ, ಹಸೀ ರಕ್ತ ಕಲೆ, ಧಮನಿ, ಧಮನಿಯಲ್ಲಿ

ಸುತ್ತ ನಡೆದುದೆಲ್ಲವ ಕಂಡು ಕೊರಗುವನೀತ

ಚರಿತ್ರೆ ಮರೆತೇ ಬಿಟ್ಟ ಶ್ರೀ ಸಾಮಾನ್ಯ!

ಅಷ್ಟಾವಕ್ರ ಸಂತಾನಗಳ ಸುರಿಮಳೆಯ ಹೊಡೆತಕ್ಕೆ

ತತ್ತರಿಸುತ್ತಲೇ ಇದೆ ಶ್ರೀರಾಮನಾದರ್ಶ

ಮೆತ್ತಗಾಗದೇ ಮನಸು ಒಪ್ಪೀತೇನು

ಭಾವೇಕತೆಯ ರಾಮ, ರಹೀಮನಾಗುವುದನ್ನು?

==========೦========                     

(ಅಡಿಗರ ಕ್ಷಮೆ ಕೋರಿ)