ಶ್ರೀರಾಮ ನವಮಿ ಮಹತ್ವ

ಶ್ರೀರಾಮ ನವಮಿ ಮಹತ್ವ

ಇಂದು ರಾಮನವಮಿಯ ಶುಭದಿನ. ಈ ದಿನದಂದು ನಾವು ಮರ್ಯಾದಾ ಪುರುಷೋತ್ತಮನ ಶ್ರೀರಾಮನ ಗುಣಗಳನ್ನು ತಿಳಿಯೋಣ. ರಾಮ ನವಮಿಯ ದಿನ ಪ್ರಸ್ತುತ ನಾವು ಅನುಭವಿಸುತ್ತಿರುವ ಕೊರೋನಾ ಮಹಾಮಾರಿಯಿಂದ ಬಹುಬೇಗನೇ ಮುಕ್ತರಾಗುವ ಎಂದು ಪ್ರಾರ್ಥಿಸೋಣ.

ರಾಮಾಯ ರಾಮ ಭದ್ರಾಯ ರಾಮ ಚಂದ್ರಾಯ ವೇದಸೆ

ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ

ಶ್ರೀ ವಿಷ್ಣುವಿನ ಏಳನೆಯ ಅವತಾರವಾದ ಶ್ರೀರಾಮನ ಜನ್ಮಪ್ರಿತ್ಯರ್ಥವಾಗಿ ಶ್ರೀರಾಮನವಮಿಯನ್ನು ಆಚರಿಸುತ್ತಾರೆ. ಚೈತ್ರ ಶುಕ್ಲ ನವಮಿಯನ್ನು ರಾಮನವಮಿ ಎನ್ನುತ್ತಾರೆ. ಈ ದಿನ ಪುಷ್ಯ ನಕ್ಷತ್ರದಲ್ಲಿ, ಮಧ್ಯಾಹ್ನ ಕಾಲದಲ್ಲಿ, ಕರ್ಕ ಲಗ್ನದಲ್ಲಿ ಸೂರ್ಯಾದಿ ಪಂಚಗ್ರಹಗಳಿದ್ದಾಗ, ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಜನನವಾಯಿತು.

ಶ್ರೀರಾಮ ನವಮಿ ಮಹತ್ವ

ದೇವತೆಗಳು ಮತ್ತು ಅವತಾರಗಳ ಜನ್ಮತಿಥಿಯಂದು ಭೂಮಿಯ ಮೇಲೆ ಅವರ ತತ್ತ್ವವು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಶ್ರೀರಾಮ ನವಮಿಗೆ ಶ್ರೀರಾಮತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಶ್ರೀರಾಮ ನವಮಿಗೆ ‘ಶ್ರೀರಾಮ ಜಯ ರಾಮ ಜಯ ಜಯ ರಾಮ|’ ನಾಮಜಪ, ಹಾಗೆಯೇ ಶ್ರೀರಾಮನ ಇತರ ಉಪಾಸನೆಗಳನ್ನು ಭಾವಪೂರ್ಣವಾಗಿ ಮಾಡುವುದರಿಂದ ಶ್ರೀರಾಮತತ್ತ್ವದ ಲಾಭವನ್ನು ಆದಷ್ಟು ಹೆಚ್ಚು ಪಡೆಯಲು ಸಹಾಯವಾಗುತ್ತದೆ.

ಅನೇಕ ರಾಮಮಂದಿರಗಳಲ್ಲಿ ಚೈತ್ರ ಶುಕ್ಲ ಪಾಡ್ಯದಿಂದ ಒಂಬತ್ತು ದಿನಗಳ ಕಾಲ ಈ ಉತ್ಸವವು ಜರಗುತ್ತದೆ. ರಾಮಾಯಣದ ಪಾರಾಯಣ, ಹರಿಕಥೆ, ಕೀರ್ತನೆಗಳ ಆಯೋಜನೆ ಮತ್ತು ರಾಮನ ಮೂರ್ತಿಗೆ ವಿವಿಧ ಶೃಂಗಾರಗಳು, ರಥದಲ್ಲಿ ಮೆರವಣಿಗೆ ಮುಂತಾದ ವಿಧಗಳಲ್ಲಿ ಈ ಉತ್ಸವವು ಆಚರಿಸಲ್ಪಡುತ್ತದೆ. ನವಮಿಯಂದು ಮಧ್ಯಾಹ್ನ ರಾಮಜನ್ಮದ ಹರಿಕಥೆ ಯಾಗುತ್ತದೆ. ಮಧ್ಯಾಹ್ನ ಕುಂಚಿಗೆ (ಕುಲಾವಿ) ಹಾಕಿದ ತೆಂಗಿನಕಾಯಿಯನ್ನು ತೊಟ್ಟಿಲಿನಲ್ಲಿಟ್ಟು ತೂಗುತ್ತಾರೆ. ಭಕ್ತರು ಅದರ ಮೇಲೆ, ಗುಲಾಲು ಮತ್ತು ಹೂಗಳನ್ನು ಅರ್ಪಿಸುತ್ತಾರೆ.

ರಾಮ ನವಮಿ ಶ್ರೀರಾಮನ ಜನ್ಮದಿನ. ಆದ್ದರಿಂದಲೇ ಹಿಂದೂಗಳಿಗೆ ರಾಮನವಮಿ ಒಂದು ಮಹತ್ವಪೂರ್ಣ ಹಬ್ಬವಾಗಿದೆ. ರಾಮ ನಾಮವನ್ನು ಜಪಿಸಿದರೆ ಅವನು ನಮ್ಮನ್ನು ಸದಾ ಸಂರಕ್ಷಿಸಿ, ಕಾಪಾಡುತ್ತಾನೆ. ರಾಮನ ಧ್ಯಾನಕ್ಕೆ ರಾಮನಾಮ ಬರೆಯುವುದು ಒಂದು ಉತ್ತಮ ಸಾಧನ. ರಾಮ ನವಮಿಯ ದಿನ ರಾಮ ನಾಮ ಬರೆದರೆ ಅತಿ ಉತ್ತಮ. ಭಜನೆ, ಕೀರ್ತನೆಗಳು ಮತ್ತು ಮೆರವಣಿಗೆ ಹಬ್ಬದ ಪ್ರಮುಖ ಭಾಗಗಳಾಗಿವೆ. ಮೆರವಣಿಗೆ ಹಬ್ಬದ ಪ್ರಮುಖ ಆಕರ್ಷಣೆಯಾಗಿರುತ್ತದೆ. ಶ್ರೀರಾಮ ದೇವರು, ಸೀತಾಮಾತೆ, ಲಕ್ಷ್ಮಣ, ಹನುಮಂತ ದೇವರುಗಳ ಪ್ರತಿಮೆಗಳನ್ನು ರಥದಲ್ಲಿ ಸಿಂಗರಿಸಿ ಪ್ರತಿಷ್ಟಾಪಿಸುತ್ತಾರೆ. ನಂತರ ಬೀದಿಯ ಉದ್ದಕ್ಕೂ ಮೆರವಣಿಗೆಯಲ್ಲಿ ರಥವನ್ನು ಎಳೆದುಕೊಂಡು ಹೋಗುತ್ತಾರೆ.

ಮರ್ಯಾದಾ ಪುರುಷೋತ್ತಮ, ಆದರ್ಶ ಪುತ್ರ :

ರಾಮನು ತಂದೆಯ ಆಜ್ಞೆಯನ್ನು ಪಾಲಿಸಿದನು; ಆದರೆ ಸಂದರ್ಭ ಬಂದಾಗ ಹಿರಿಯರಿಗೂ ಉಪದೇಶ ಮಾಡಿದನು. ಉದಾ. ವನವಾಸದ ಪ್ರಸಂಗದಲ್ಲಿ ದುಃಖಿತರಾಗಬೇಡಿ ಎಂದು ತಂದೆತಾಯಿಗೆ ಹೇಳಿದನು. ಹದಿನಾಲ್ಕು ವರ್ಷಗಳ ಕಾಲ ವನವಾಸವನ್ನು ಅನುಭವಿಸಲು ಕಳುಹಿಸಿದ ಕೈಕೇಯಿ ಮಾತೆಯನ್ನು ವನವಾಸದಿಂದ ಹಿಂತಿರುಗಿ ಬಂದ ರಾಮನು ನಮಸ್ಕರಿಸಿ ಪ್ರೇಮದಿಂದ ಮಾತನಾಡಿಸಿದನು.

ಆದರ್ಶ ಸಹೋದರ :

ಇಂದಿಗೂ ಆದರ್ಶ ಸಹೋದರರ ಪ್ರೇಮಕ್ಕೆ ರಾಮ-ಲಕ್ಷ ಣರ ಉಪಮೆಯನ್ನೇ ಕೊಡುತ್ತಾರೆ.

ಆದರ್ಶ ಪತಿ :

ಶ್ರೀರಾಮನು ಏಕಪತ್ನಿ ವ್ರತಸ್ಥನಾಗಿದ್ದನು. ಸೀತೆಯನ್ನು ತ್ಯಾಗ ಮಾಡಿದ ನಂತರ ರಾಮನು ವಿರಕ್ತ ಜೀವನವನ್ನು ನಡೆಸುತ್ತಿದ್ದನು. ಮುಂದೆ ಯಜ್ಞವನ್ನು ಮಾಡುವಾಗ ಪತ್ನಿಯ ಅವಶ್ಯಕತೆ ಇದ್ದರೂ ಬೇರೆ ಪತ್ನಿಯನ್ನು ಸ್ವೀಕರಿಸದೇ ಸೀತೆಯ ಪ್ರತಿಮೆಯನ್ನು ತನ್ನ ಪಕ್ಕದಲ್ಲಿ ಇರಿಸಿಕೊಂಡಿದ್ದನು. ಇದರಿಂದ ರಾಮನ ಏಕಪತ್ನಿ ವ್ರತವು ಕಂಡು ಬರುತ್ತದೆ. ಆ ಕಾಲದಲ್ಲಿ ರಾಜರು ಹಲವಾರು ಸ್ತ್ರೀಯರನ್ನು ವರಿಸುವ ವಾಡಿಕೆಯಿತ್ತು. ಈ ಹಿನ್ನೆಲೆಯಲ್ಲಿ ರಾಮನ ಏಕಪತ್ನಿ ವ್ರತವು ವಿಶಿಷ್ಟವಾಗಿದೆ.

ಆದರ್ಶ ಮಿತ್ರ :

ರಾಮನು ಸುಗ್ರೀವ, ವಿಭೀಷಣ ಮುಂತಾದವರಿಗೆ ಅವರ ಸಂಕಟದ ಸಮಯದಲ್ಲಿ ಸಹಾಯ ಮಾಡಿದನು.

ಆದರ್ಶ ರಾಜ :

ಪ್ರಜೆಗಳು ಸೀತೆಯ ಬಗ್ಗೆ ಸಂಶಯ ವ್ಯಕ್ತಪಡಿಸಿ ದಾಗ ರಾಮನು ತನ್ನ ವೈಯಕ್ತಿಕ ಸುಖದ ಬಗ್ಗೆ ಚಿಂತಿಸದೇ, ರಾಜನ ಧರ್ಮವೆಂದು ತನ್ನ ಧರ್ಮಪತ್ನಿ ಯನ್ನು ತ್ಯಜಿಸಿದನು. ಇದರ ಬಗ್ಗೆ ಕಾಳಿದಾಸನು ಕೌಲಿನ ಭೀತೇನ ಗೃಹನ್ನಿರಸ್ತಾ ನ ತೇನ ವೈದೇಹ ಸುತಾ ಮನಸ್ತಃ | (ಅರ್ಥ : ಜನರ ಆಪಾದನೆಯ ಭಯದಿಂದ ರಾಮನು ಸೀತೆಯನ್ನು ಮನೆಯಿಂದ ಹೊರಗೆ ಹಾಕಿದನು, ಮನಸ್ಸಿನಿಂದ ಅಲ್ಲ.) ಎನ್ನು ವಂತಹ ಮಾರ್ಮಿಕ ಶ್ಲೋಕವನ್ನು ರಚಿಸಿದ್ದಾನೆ.

ಆದರ್ಶ ಶತ್ರು :

ರಾವಣನ ಮೃತ್ಯುವಿನ ನಂತರ ರಾವಣನ ತಮ್ಮನಾದ ವಿಭೀಷಣನು ಅಣ್ಣನಿಗೆ ಅಗ್ನಿಸಂಸ್ಕಾರವನ್ನು ಮಾಡಲು ನಿರಾಕರಿಸಿದಾಗ, ರಾಮನು ಮರಣದೊಂದಿಗೆ ಶತ್ರುತ್ವವೂ ಮುಗಿದು ಹೋಗುತ್ತದೆ, ನೀನು ರಾವಣನ ಅಂತ್ಯಸಂಸ್ಕಾರವನ್ನು ಮಾಡದಿದ್ದರೆ ನಾನೇ ಮಾಡುತ್ತೇನೆ; ಅವನು ನನಗೂ ಸಹೋದರನೇ ಆಗಿದ್ದಾನೆ ಎಂದು ಹೇಳಿದನು.

ಧರ್ಮಪಾಲಕ :

ರಾಮನು ಧರ್ಮದ ಎಲ್ಲ ನಿಯಮಗಳನ್ನು ತಪ್ಪದೆ ಪಾಲಿಸುತ್ತಿದ್ದುದ ರಿಂದ ಅವನನ್ನು ಮರ್ಯಾದಾ ಪುರುಷೋತ್ತಮ ಎನ್ನುತ್ತಾರೆ.

ಏಕವಚನೀ :

ಯಾವುದೇ ಒಂದು ವಿಷಯವನ್ನು ಸತ್ಯವಾಗಿದೆ ಎಂದು ಒತ್ತಿ ಹೇಳ ಬೇಕಾದರೆ, ನಾವು ಅದನ್ನು ಮತ್ತೆ ಮತ್ತೆ ಹೇಳುತ್ತೇವೆ ಅಥವಾ ನಾನು ತ್ರಿವಾರ ಸತ್ಯ ಹೇಳುತ್ತೇನೆ ಎನ್ನುತ್ತೇವೆ. ಶಾಂತಿಃ | ಶಾಂತಿಃ | ಶಾಂತಿಃ | ಹೀಗೂ ಮೂರು ಬಾರಿ ಹೇಳುತ್ತಾರೆ. ತ್ರಿವಾರ ಸತ್ಯದಲ್ಲಿನ ತ್ರಿವಾರ ಈ ಶಬ್ದವನ್ನು ಮುಂದಿನ ಎರಡು ಅರ್ಥಗಳಲ್ಲಿ ಉಪಯೋಗಿಸಲಾಗಿದೆ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಮೇಲೆ ಆಣೆ ಇಟ್ಟು ಹೇಳುತ್ತೇನೆ. ಹಾಗೆಯೇ ಮೂರು ಬಾರಿ ಯಾವುದೇ ವಿಷಯವನ್ನು ಕೇಳಿದರೆ ಅದು ಸತ್ಯವೆಂದು ತಿಳಿಯಬೇಕು.

ಏಕಬಾಣೀ :

ರಾಮನ ಒಂದೇ ಬಾಣವು ಗುರಿಯನ್ನು ಭೇದಿಸುತ್ತಿತ್ತು. ಆದುದರಿಂದ ಅವನು ಎರಡನೆಯ ಬಾಣವನ್ನು ಪ್ರಯೋಗಿಸುತ್ತಿರಲಿಲ್ಲ.

ಶ್ರೀರಾಮನವಮಿ-ರಾಮಾಯಣ ಮಹತ್ವ

ರಾಮಾಯಣ ಶಬ್ದವು ರಂ + ಅಯನ ಈ ಎರಡು ಶಬ್ದಗಳಿಂದ ನಿರ್ಮಾಣವಾಗಿದೆ. ರಮ್ ರಮಯತೇ ಎಂದರೆ ತಲ್ಲೀನರಾಗುವುದು, ‘ಸಾಧನೆಯಲ್ಲಿ ತಲ್ಲೀನರಾಗುವುದು’. ಅಯನ ಎಂದರೆ ಸಪ್ತಲೋಕಗಳು. ಸಾಧನೆಯಲ್ಲಿ ತಲ್ಲೀನರಾಗಿ ಆನಂದದಲ್ಲಿದ್ದು, ಸಪ್ತಲೋಕ ಗಳನ್ನು ದಾಟಿ ಮೋಕ್ಷಕ್ಕೆ ಹೋಗುವುದನ್ನು ರಾಮಾಯಣದಲ್ಲಿ ಹೇಳಲಾಗಿದೆ. ‘

ಶ್ರೀರಾಮ ಮಂತ್ರವೊಂದಿರಲು ಸಾಕು..

ಶ್ರೀರಾಮನಾಮ ಸ್ಮರಣೆ ಮಾತ್ರದಿಂದ ಕಪಿ ಸೈನ್ಯ ರಾಮೇಶ್ವರದಿಂದ ಲಂಕೆಗೆ ಸೇತುವೆಯನ್ನೇ ಕಟ್ಟಿತು… ದುಷ್ಟ ರಾವಣ, ಸಮುದ್ರಕ್ಕೆ ಎಸೆದ ಕಲ್ಲೂ ತೇಲಿತು.. ಇಲ್ಲಿದೆ ರಾಮಾಯಣದ ಸ್ವಾರಸ್ಯಕರ ಕಥೆ..

ಶ್ರೀರಾಮ ಮಂತ್ರದಲ್ಲೇ ಪ್ರಚಂಡ ಶಕ್ತಿ ಅಡಗಿದೆ ಹೀಗಾಗೇ ಕನ್ನಡ ಕುಲ ಪುಂಗವ ಹನುಮಂತ ಶ್ರೀರಾಮ ಜಪ ಮಾಡಿ ಭಗವಂತನೇ ಆದ. ಶ್ರೀರಾಮ ನಾಮದ ಶಕ್ತಿಯನ್ನು ನಿರೂಪಿಸುವ ಪ್ರಸಂಗವೂ ರಾಮಾಯಣದಲ್ಲಿದೆ. ದಶಕಂಠನಾದ ರಾವಣ ಸೀತಾ ಮಾತೆಯನ್ನು ಅಪಹರಿಸಿದ್ದ. ಶ್ರೀರಾಮ ಕಪಿ ಸೈನ್ಯದ ನೆರವಿನಿಂದ ಲಂಕೆಯ ಮೇಲೆ ಯುದ್ಧಕ್ಕೆ ಹೊರಟ.ರಾವಣನಿಗೆ  ದೂತರು ಈ ಸುದ್ದಿ ಮುಟ್ಟಿಸಿದರು. ಅಯ್ಯಾ ರಾವಣ, ಕಪಿಗಳು ಲಂಕೆಗೆ ಸೇತುವೆ ಕಟ್ಟುತ್ತಿದ್ದಾರೆ. ಕಲ್ಲಿನ ಮೇಲೆ ಶ್ರೀರಾಮ, ಜಯರಾಮ ಎಂದು ಬರೆದು ಸಾಗರಕ್ಕೆ ಎಸೆಯುತ್ತಿದ್ದಾರೆ. ಏನಾಶ್ಚರ್ಯ ಆ ಕಲ್ಲುಗಳು ತೇಲುತ್ತಿವೆ. ಸೇತುವೆ ಕಾರ್ಯ ನಿರ್ವಿಘ್ನವಾಗಿ ಸಾಗಿದೆ.

ಆಗ ರಾವಣ ಹೇಳಿದ. ಇದ್ಯಾವ ದೊಡ್ಡ ವಿಷಯ. ನಾನೂ ಕೂಡ ಸಮುದ್ರಕ್ಕೆ ಕಲ್ಲು ಎಸೆದರೆ ಅದೂ ತೇಲುತ್ತದೆ. ಎಲ್ಲರಿಗೂ ಆಶ್ಚರ್ಯ ಆಯಿತು. ಅಲ್ಲ ರಾವಣ ಹೇಳಿ ಕೇಳಿ ರಾಕ್ಷಸ. ದುಷ್ಟ. ಇವನು ಎಸೆದ ಕಲ್ಲು ತೇಲಲು ಸಾಧ್ಯವೇ ಎಂದು ಅನುಮಾನಗೊಂಡರು. ಸಭಾಸದರ ಮುಖದಲ್ಲಿ ಮೂಡಿದ ಪ್ರಶ್ನೆಯನ್ನು ಗ್ರಹಿಸಿದ ರಾವಣ ಎಲ್ಲರನ್ನೂ ಉದ್ದೇಶಿಸಿ, ನಿಮಗೆ ಅನುಮಾನ ಬೇಡ. ನನ್ನೊಂದಿಗೆ ಸಾಗರದ ತೀರಕ್ಕೆ ಬನ್ನಿ, ಕಲ್ಲು ಎಸೆಯುತ್ತೇನೆ. ಅದು ತೇಲುವುದನ್ನು ನೀವೇ ಕಣ್ಣಾರೆ ಕಾಣುವಿರಂತೆ ಎಂದು ಎಲ್ಲರನ್ನೂ ಕರೆದೊಯ್ದ.

ಅಲ್ಲೇ ಬಿದ್ದಿದ್ದ ಒಂದು ದೊಡ್ಡ ಕಲ್ಲು ಬಂಡೆಯನ್ನು ಕೈಗಳಲ್ಲಿ ಹಿಡಿದು ಮೇಲೆತ್ತಿ ಸಮುದ್ರಕ್ಕೆ ಎಸೆದ, ಆ ಹೆಬ್ಬಂಡೆ ದೋಣಿಯಂತೆ ಸಾಗರದಲ್ಲಿ ತೇಲಿತು. ಎಲ್ಲರೂ ಆಶ್ಚರ್ಯ. ನಮ್ಮ ರಾವಣನೇನು ಕಡಿಮೆ ಇಲ್ಲ. ರಾಮನಿಗೆ ಇವನು ಸರಿಸಾಟಿ ಎಂದು ಜಯಘೋಷ ಮಾಡಿದರು.

ರಾವಣನ ಮಡದಿ ಮಂಡೋದರಿಗೂ ಇದು ಆಶ್ಚರ್ಯ ಎನಿಸಿತು. ತನ್ನ ಪತಿ ರಾವಣ ಘಾತುಕ. ರಾವಣ ಎಸೆದ ಕಲ್ಲು ಹೇಗೆ ತೇಲಲು ಸಾಧ್ಯ. ಈ ಮರ್ಮ ಅರಿಯಲೇಬೇಕೆಂದು ಮಂಡೋದರಿ ಏಕಾಂತದಲ್ಲಿದ್ದಾಗ ರಾವಣನನ್ನೇ ಈ ಬಗ್ಗೆ ಕೇಳುತ್ತಾಳೆ. ಮಡದಿಯ ಒತ್ತಾಯಕ್ಕೆ ಮಣಿದ ರಾವಣ ಸತ್ಯ ಹೇಳುತ್ತಾನೆ.

ನೋಡು ಪ್ರಿಯೆ, ಇದು ರಾಜಕೀಯ ಮರ್ಮ. ರಾಮ ನನ್ನ ಮೇಲೆ ಯುದ್ಧ ಸಾರಲು ಬರುತ್ತಿದ್ದಾನೆ. ಈಗ ನನ್ನ ಸೈನಿಕರಿಗೆ ಧೈರ್ಯ ತುಂಬಬೇಕು. ನಾನೂ ರಾಮನಿಗೆ ಕಡಿಮೆ ಇಲ್ಲ ಎಂದು ನಿರೂಪಿಸಬೇಕಿತ್ತು. ಹೀಗಾಗಿ ನಾನು ಕಲ್ಲು ತೇಲುವಂತೆ ಮಾಡಲೇ ಬಿಕಿತ್ತು. ಅನಿವಾರ್ಯವಾಗಿ ಈ ಪರೀಕ್ಷೆಗೆ ನನ್ನನ್ನು ನಾನು ಒಡ್ಡಿಕೊಂಡೆ ಎಂದ.

ಆಗ ಮಂಡೋದರಿ ಅದೆಲ್ಲಾ ಸರಿ. ಆದರೆ, ನೀವು ಸಮುದ್ರಕ್ಕೆ ಹಾಕಿದ ಕಲ್ಲು ತೇಲಿದ್ದರ ಗುಟ್ಟೇನು? ಎಂದು ಕೇಳಿದಳು. ಆಗ ರಾವಣ ಹೇಳುತ್ತಾನೆ. ಇದು ರಾಜ ರಹಸ್ಯ ಯಾರಿಗೂ ಹೇಳಬೇಡ. ನನಗೂ ಕೂಡ ನಾನು ಹಾಕುವ ಕಲ್ಲು ತೇಲಲ್ಲ ಮುಳುಗತ್ತೆ ಅಂತ ಗೊತ್ತಿತ್ತು. ಹೀಗಾಗಿ ನಾನು ಕಲ್ಲನ್ನು ಸಮುದ್ರಕ್ಕೆ ಹಾಕುವ ಮುನ್ನ ಈ ಕಲ್ಲು ತೇಲದಿದ್ದರೆ ಶ್ರೀರಾಮ ಚಂದ್ರನ ಮೇಲಾಣೆ ಎಂದು ಹೇಳಿ ಹಾಕಿದೆ. ಕಲ್ಲು ತೇಲಿತು ಎಂದ.

ಅಂದರೆ ಶತ್ರುವಾದ ರಾವಣನಿಗೂ ರಾಮನ ಮಹಿಮೆ ತಿಳಿದಿತ್ತು. ಅಂಥದರಲ್ಲಿ ನಾವು ರಾಮನ ಪೂಜಿಸದಿದ್ದರೆ ಅದು ಸರಿಯಾದೀತೆ? ಇದು ಮಂತ್ರಾಲಯ ಮಠದ ಕಿರಿಯ ಸ್ವಾಮಿಗಳಾಗಿದ್ದ ಸುವಿದ್ಯೇಂದ್ರ ತೀರ್ಥರು 14 ವರ್ಷಗಳ ಹಿಂದೆ ಹೇಳಿದ ಕಥೆ ಇದು.

ದುಷ್ಟನಾಶಕನಾದ ಶಿಷ್ಟರಕ್ಷಕನಾದ ಹನುಮಂತನ ಸ್ವಾಮಿಯಾದ

ಶ್ರೀ ಸೀತಾರಾಮಚಂದ್ರನನ್ನು ಭಕ್ತಿಯಿಂದ ಸ್ಮರಿಸಿದರೆ ಮಹಾಪಾಪಗಳೂ ಪರಿಹಾರವಾಗುತ್ತವೆ.

  “ಶ್ರೀರಾಮ ಜಯರಾಮ ಜಯ ಜಯ ರಾಮ”

(ವಾಟ್ಸಾಪ್ ಮೂಲಕ ಸಂಗ್ರಹಿತ ಬರಹ, ಅಜ್ಞಾತ ಲೇಖಕರಿಗೆ ವಂದನೆಗಳು)

ಚಿತ್ರ ಕೃಪೆ: ಅಂತರ್ಜಾಲ ತಾಣ