ಶ್ರೀಸಾಮಾನ್ಯನ VIP ಕಥೆಗಳು- ಚಿನ್ನ, ಬೆಳ್ಳಿ, ಈರುಳ್ಳಿ
“ಜಾಗತಿಕ ತೈಲ ಬೆಲೆ ಏರಿಕೆ ಹಿನ್ನಲೆಯಲ್ಲಿ, ಭಾರತದಾದ್ಯಂತ ಪೆಟ್ರೋಲ್- ಡೀಸೆಲ್ ದರ ಏರಿಕೆಯಾಗಿದ್ದು, ದಿನಬಳಕೆ ಪದಾರ್ಥಗಳ ಬೆಲೆ ಕೂಡ ಏರಿಕೆಯಾಗುವ ನಿರೀಕ್ಷೆಯಿದೆ” ಎಂಬ ವಾರ್ತಾಪ್ರಸಾರ ಕೇಳಿದ ರಂಗರಾಯರು, “ಥೂ, ಏನು ಕಾಲ ಬಂತಪ್ಪ. ದಿನಾ ಬೆಲೆ ಏರಿಕೆ, ಬೆಲೆ ಏರಿಕೆ. ಒಳ್ಳೆ ಸುದ್ದೀನೇ ಇಲ್ಲ ಈ ಟಿವಿ ಚ್ಯಾನೆಲ್ ನೋರಿಗೆ ಕೊಡೋಕೆ. ಅಲ್ಲಾ, ಹಿಂಗೆ ದಿನ ಬೆಲೆ ಏರುತ್ತಾ ಹೋದ್ರೆ ಹೆಂಗೆ ಅಂತಾ? ಅಕಸ್ಮಾತ್ ಬೆಲೆ ಏರಿ, ಏರಿ ಯಾರಿಗೂ ಕೊಂಡುಕೊಳ್ಳೋಕೆ ಆಗದಿದ್ದರೆ, ಏನ್ ಮಾಡ್ತಾರೆ ಇವರೆಲ್ಲ?”. ಅದಕ್ಕೆ ಸುಬ್ಬಮ್ಮ, “ಅಲ್ರೀ, ಹಿಂಗೆ ಬೆಲೆ ಏರ್ತು ಅಂತ ಸುಮ್ಮನೆ ಊಟ ಬಿಟ್ಟುಬಿಡೋಕಾಗುತ್ಯೆ? ಹೇಗೋ ನಿಭಾಯಿಸಬೇಕಪ್ಪ. ಈಗ ನೋಡಿ ನೀವು ಯಾವ್ಯಾವಾಗ್ ಹೆಂಗೆಂಗ್ ಆಡ್ತಿರೋ ಅದನ್ನೆಲ್ಲಾ ಸಹಿಸಿಕೊಂಡು ನಾ ಸಂಸಾರ ಮಾಡ್ತಿಲ್ವೇ? ಹಾಗೇ ಇದುನೂ.” ಇದನ್ನ ಕೇಳಿ ರಂಗರಾಯರ ಮುಖ ರೇಗಿ ಕೆಂಪಾದರೂ, ಕಾಫಿ ಇನ್ನೂ ಬರದಿದ್ದ ಕಾರಣ , ಈಗ ತಡವಿಕೊಂಡರೆ ಎಲ್ಲಿ ಅದಕ್ಕೂ ಕಲ್ಲು ಬೀಳುತ್ತದೋ ಎಂದು ಸುಮ್ಮನಾಗುತ್ತಾರೆ.
ಹೀಗೆ ಕೆಲವು ದಿನ ಕಳೆದಂತೆ ಬೆಲೆಗಳು ಗಗನದ ದಿಕ್ಕಿಗೆ ಏರುತ್ತಲೇ ಹೋಗುತ್ತದೆ. ಅದರಲ್ಲೂ ಈರುಳ್ಳಿ, ಚಾಂಪಿಯನ್ ದುಬಾರಿ ಪದಾರ್ಥವಾಗಿ ಹೊರಹೊಮ್ಮಿದ ಮೇಲೆ, ಎಲ್ಲೆಲ್ಲೂ ಅದರದ್ದೇ ಮಾತು. ಇದೆಲ್ಲಾ ತೈಲ ಬೆಲೆ ಏರಿಕೆ ನಡುವೆ ಭಾರತ ಈರುಳ್ಳಿ ಆಮದು ನಿಷೇಧಿಸಿದ್ದು ಸೇರಿ ಈರುಳ್ಳಿ ಬೆಲೆ ಏರಿಕೆಗೆ ಏಣಿ ಹಾಕಿಕೊಟ್ಟಂತೆ ಆಯಿತು. ಈ ಸುವರ್ಣಕಾಲದಲ್ಲಿ ಈರುಳ್ಳಿ ಬೆಳೆದವನು ಯಾವ ರಾಜನಿಗೂ ಕಡಿಮೆಯಿಲ್ಲ. ಹೋದಲ್ಲಿ ಬಂದಲ್ಲಿ ಈ ಮಹಾನುಭಾವರು ತಮಗೆ ಮೆಚ್ಚುಗೆಯಾದವರಿಗೆ, ಹಿಂದೆ ರಾಜರು ತಮ್ಮ ಕೊರಳ ಸರವೋ, ಕೈ ಉಂಗುರವೋ ಕೊಡುತ್ತಿದ್ದಂತೆ, ಈಗ ತಮ್ಮ ಕಿಸೆಯಿಂದ ಎರಡು ಈರುಳ್ಳಿ ತೆಗೆದು ದಯಪಾಲಿಸಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸುವ ಮಟ್ಟಿಗೆ ಈ ಈರುಳ್ಳಿ ಅಮೂಲ್ಯವಾಯಿತು. ಹಾಗೆ ಈ ಬರಗಾಲದಲ್ಲಿ ಬಂದೊದಗಿದ ಈರುಳ್ಳಿ ಬವಣೆಯನ್ನು ನಿವಾರಿಸಲು ಯಾರೋ ಒಂದು ದೇವಿಯನ್ನೂ ಪ್ರತಿಷ್ಠಾಪಿಸಿದರಂತೆ, ಒಂದು ಹಳ್ಳಿಯಲ್ಲಿ. ಆ ಊರಿನ ಮಾಂತ್ರಿಕನ ಮೈ ಮೇಲೆ ಅಮ್ಮ ಬಂದು ತಾನು ಈರುಳ್ಳಿ ಅಮ್ಮನೆಂದೂ, ತನಗೆ ಯಾರೂ ಸ್ಥಾನ ಕೊಡದೆ, ಪೂಜೆ ಮಾಡದ್ದಕ್ಕೆ ಹೀಗೆ ಈರುಳ್ಳಿಯ ಬರ ಬಂದಿದೆ ಎಂದೂ ಹೇಳಿದಳಂತೆ. ಸರಿ ಎಂದು ಎಲ್ಲರೂ ಒಂದು ದೇವಸ್ಥಾನ ನಿರ್ಮಿಸಿ ಈರುಳ್ಳಿಯಮ್ಮ ಎಂದು ಹೆಸರಿಡಬೇಕು ಎಂದುಕೊಂಡರೂ ಯಾರೋ ಹೇಳಿದರಂತೆ, ಈ ‘ ಈರುಳ್ಳಿಯಮ್ಮ’ ‘ ಉಳ್ಳಾಗಡ್ಡಿಯಮ್ಮ’ ಅಂತ ಹೆಸರಿಟ್ಟರೆ ಬರುವ ಕಾಸು ಬೇವಿನಸೊಪ್ಪಿಗೂ ಸಾಲೋದಿಲ್ಲ, ಆದ್ದರಿಂದ ಸ್ವಲ್ಪ ಸ್ಟಾಂಡರ್ಡ್ ಆಗಿರೋ ಹೆಸರಿಡಿ ಎಂದಮೇಲೆ, ‘ಸುಕಂದಕ ಲಕ್ಷ್ಮೀ’ ಅಂತ ಹೆಸರಿಟ್ಟರಂತೆ. ಕೆಲವರು ಇದು ದೇವಿಯ ಬ್ರಾಹ್ಮಣಿಕರಣ, ಸಂಸ್ಕೃತ ಹೇರಿಕೆ ಎಂದೆಲ್ಲಾ ಗಲಾಟೆ ಮಾಡಿದರೂ, ದೇವಸ್ಥಾನ ಕಮಿಟಿಯಲ್ಲಿ ಸೇರಿಕೊಂಡಮೇಲೆ ತಣ್ಣಗಾದರಂತೆ. ದೇವಿಗೆ ಪ್ರತಿವಾರ ಈರುಳ್ಳಿ ಅಲಂಕಾರ. ಈ ಕಾಲದಲ್ಲಿ ದೇವಿಗೆ ಈರುಳ್ಳಿ ಅಲಂಕಾರ ಮಾಡಿಸುವಷ್ಟು ಶ್ರೀಮಂತರಿದ್ದಾರಲ್ಲ ಎಂದು ಭಕ್ತರು ಆಶ್ಚರ್ಯ ಪಟ್ಟಿದ್ದೇ ಪಟ್ಟಿದ್ದು. ಇನ್ನು ನಗರಗಳಲ್ಲಿ ಕಳ್ಳರು ಚಿನ್ನ, ಬೆಳ್ಳಿ ಬದಲು ಈರುಳ್ಳಿ ಕಳ್ಳತನ ಪ್ರಾರಂಭಿಸಿದ್ದಾರೆ ಎಂಬ ಸುದ್ದಿಯೂ ಅಲ್ಲಲ್ಲಿ ಹರಿದಾಡಿದವು.
ಹೀಗೆ ಗುರಿಯಿರದೆ ಬಿಟ್ಟ ರಾಕೆಟ್ ನಂತೆ ಸುಮ್ಮನೆ ಗಗನಕ್ಕೇರಿದ ಈರುಳ್ಳಿ ಬೆಲೆ ನೆನೆದು ಸಂಕಟಪಡುತ್ತಿದ್ದ ರಂಗರಾಯರಿಗೆ ಹೆಂಡತಿ ಸುಬ್ಬಮ್ಮ ಒಂದು ಕಿಲೋ ಈರುಳ್ಳಿ ತನ್ನಿ ಎಂದಾಗ ಆಕೆ ಬಂಗಾರಕ್ಕೂ ಪಟ್ಟು ಹಿಡಿದು ಕೂತಾಗ ಆಗದಿದ್ದ ಸಂಕಟ, ಈಗಾಗತೊಡಗಿತು. ಈ ಸಂಕಟ ಹೆಂಡತಿ ದುಬಾರಿ ಪದಾರ್ಥ ಕೇಳಿದಳು ಎಂದಲ್ಲ. ಈರುಳ್ಳಿ ಕೆಡಬಲ್ಲ ಪದಾರ್ಥ. ಅಂಥ ಪದಾರ್ಥಕ್ಕೆ ಇಷ್ಟು ದುಡ್ಡು ಕೊಟ್ಟು ತರುವುದುಂಟೆ ಎಂದು ಬೇಸರ. ಈಗ ಕೇಳಿದ್ದು ತರಲಿಲ್ಲವೆಂದರೆ ಅದಕ್ಕಿನ್ನೇನು ಅನುಭವಿಸಬೇಕೋ ಎಂದು ಹೆದರಿ ತರುವುದೇ ಲೇಸೆಂದು ನಿರ್ಧರಿಸಿ ಮನೆಯ ಹತ್ತಿರದ ಮಾರ್ಕೆಟ್ಟಿಗೆ ರಂಗರಾಯರು ದಂಡೆತ್ತಿ ಹೋಗುತ್ತಾರೆ. ಮಾರ್ಕೆಟ್ಟಿಗೆ ಹೋಗಿ ಈರುಳ್ಳಿ ಕೊಳ್ಳೋಕೆ ನಿಂತು ಎಷ್ಟಪ್ಪಾ? ಎಂದು ಕೇಳಿದಾಗ ಬಂದ ಉತ್ತರ, “150 ಸ್ವಾಮಿ”. ದಂಗು ಬಡಿದು ಹೋದರು ರಂಗರಾಯರು. “ಅಲ್ಲಯ್ಯ, ನೆನ್ನೆ ತಾನೇ 120ರೂ ಇತ್ತಲ್ಲ? ಏನು ಇಷ್ಟು ಏರಿಸಿದ್ದೀಯ?” ಎಂದ ರಂಗರಾಯರಿಗೆ, ಅಂಗಡಿಯಾತ, “ ಸ್ವಾಮಿ, ನಮ್ಗೇನ್ ರೇಟ್ ಬೀಳ್ತದೋ ಹಂಗೇ ಕೊಡ್ಬೇಕಲ್ವಾ?” ಎನ್ನುತ್ತಾನೆ. ರಂಗರಾಯರು, “ರೇಟ್ ಜಾಸ್ತಿಯಾಯ್ತು, ಸ್ವಲ್ಪ ಕಡಿಮೆ ಮಾಡಿಕೊಳ್ಳಪ್ಪ. 100ರೂ ಮಾಡಿಕೋ ಬರುತ್ತೆ” ಎಂದದ್ದಕ್ಕೆ ಅಂಗಡಿಯವನ ಸಿಟ್ಟು ನೆತ್ತಿಗೇರಿ, “ಯಾಕೆ ಅಂಗಡಿನೆ ಕೊಡ್ತೀನಿ ಬಂದ್ಬಿಡಿ. ಅಲ್ರೀ 50ರೂ ಕಾಲ್ಕೇಜಿ ಮಾರ್ತಾಯಿದಿನಿ ಇಲ್ಲಿ, ಅಂತಾದ್ರಲ್ಲಿ 150ರೂ ಕೆಜಿಗೆ ಕೊಡ್ತೀನಿ ಅಂದ್ರೆ, 100ರೂ ಕೇಳ್ತಿರಲ್ಲ ಏನ್ ಹೇಳನ? ಸುಮ್ನೆ ಮುಂದಕ್ಕೆ ಹೋಗ್ರಿ.” ರಂಗರಾಯರಿಗೆ ಈತ ಭಿಕ್ಷೆಬೇಡಿ ಬಂದವರಿಗೆ ಅಟ್ಟುವ ರೀತಿ ಅಟ್ಟುತ್ತಾನಲ್ಲ ಎಂದು ಸುಮ್ಮನೆ ಇವರ ಬಳಿ ಗುದ್ದಾಡೋಕಿಂತ ದೊಡ್ಡ ಮಾರ್ಕೆಟ್ಟಿಗೆ ಹೋದರೆ ಕಡಿಮೆಗೆ ತರಬಹುದು ಎಂದೆಣಿಸಿ ದೊಡ್ಡ ಮಾರ್ಕೆಟ್ ಬಸ್ಸಿಗೆ ಕಾಯುತ್ತ ನಿಲ್ಲುತ್ತಾರೆ. ಎಷ್ಟೋ ಹೊತ್ತಾದಮೇಲೆ ಬರುವ ಬಸ್ಸಿಗೆ ಹತ್ತೋಣವೆಂದರೆ ಹತ್ತುವುದಿರಲಿ ಕಾಲಿಡಲೂ ಜಾಗವಿಲ್ಲದೆ, ಕಡೆಗೆ ಆಟೋದಲ್ಲಿ ಹೋಗೋಣವೆಂದು ಆಟೋ ನಿಲ್ಲಿಸುತ್ತಾರೆ. ಆಟೋದವ, “ದೊಡ್ಡ ಮಾರ್ಕೆಟ್ ಗೆ 120ರೂ ಆಗ್ತದೆ ಸ್ವಾಮಿ.” “ಯಾಕಯ್ಯ ಅಷ್ಟು? ಇಲ್ಲಿಂದ ಬರೀ 50ರೂ ಅಲ್ವಾ?” ಎಂದು ಕೇಳಿದರೆ, “ಹೌದು ಸ್ವಾಮಿ, ಆದರೆ ನಾನು ಬೇರೆ ಕಡೆ ಹೋಗ್ತಾಯಿದಿನಿ, ಆ ಕಡೆ ಹೋಗಿ ಹೋದರೆ ದೂರ ಆಗುತ್ತೆ. ಮೇಲಾಗಿ ಅಲ್ಲಿಂದ ಸರಿಯಾಗಿ ಬಾಡಿಗೆ ಸಿಗಲ್ಲ.” ಎಂದದ್ದಕ್ಕೆ ಬೇಡ ಎಂದು ಹೇಳಿ ರಂಗರಾಯರು ಮತ್ತೊಂದೆರಡು ಆಟೋ ನಿಲ್ಲಿಸಿ ಸುಮಾರು ಇದೇ ಉತ್ತರವನ್ನು ಪಡೆದು ಕಡೆಗೆ 100ರೂ ಆಟೋ ಮಾತಾಡಿ ದೊಡ್ಡ ಮಾರ್ಕೆಟ್ ಗೆ ಹೋಗುತ್ತಾರೆ. ಅಲ್ಲಿ ತಿರುಗಾಡಿ ತಿರುಗಾಡಿ, 70ರೂ ಕಿಲೋ ಹಂಗೇ 5ಕಿಲೋ ಈರುಳ್ಳಿ ಕೊಂಡು ಹರ್ಷದಿಂದ ಚೀಲದಲ್ಲಿ ತುಂಬಿಸಿ ಹೊರನಡೆಯುತ್ತಾರೆ. ಹೊರಬಂದು ಮತ್ತೆ ಆಟೋ ಹಿಡಿದರೆ ಇಷ್ಟು ದೂರ ಬಂದದ್ದಕ್ಕೆ ಗಿಟ್ಟುವುದಿಲ್ಲ ಎಂದು ತಿಳಿದು ಬಸ್ ಹತ್ತಿ ಕೂರುತ್ತಾರೆ. ದೊಡ್ಡ ಮಾರ್ಕೆಟ್ ಆದ್ದರಿಂದ ಬಸ್ ಗಳನೇಕ ಅಲ್ಲಿಂದಲೇ ಹೊರಡುವುದರಿಂದ ಸೀಟ್ ಖಾಲಿ ಸಿಕ್ಕಿ ರಂಗರಾಯರು ಖುಷಿಯಾಗಿ ತಮ್ಮ ಹೆಂಡತಿಗೆ ಇಂದಿನ ವಿಜಯದ ಸುದ್ದಿಯನ್ನು ಮುಟ್ಟಿಸಲು ಕಾತರರಾಗಿರುತ್ತಾರೆ. ತಮ್ಮ ಸ್ಟಾಪ್ ಬರುವುದಕ್ಕೆ ಇನ್ನೂ ಸಾಕಷ್ಟು ಕಾಲವಿರುವುದರಿಂದ ಹಾಗೆ ಕಿಟಕಿಗೆ ವಾಲಿಕೊಂಡು ನಿದ್ದೆ ಹತ್ತಿ ರಂಗರಾಯರು ಮಲಗಿಬಿಡುತ್ತಾರೆ. ಎಚ್ಚರಾಗಿ ನೋಡಿದಾಗ ತನ್ನ ಸ್ಟಾಪ್ ಇನ್ನೂ ಬಂದಿಲ್ಲ ಎಂದು ತಿಳಿದು ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದು ಮನಸ್ಸಿನಲ್ಲೇ ಸಂತೋಷಪಡುತ್ತಾರೆ. ಆದರೆ ಆ ಸಂತೋಷ ಅಲ್ಪಾವಧಿ ಎಂದು ತಿಳಿಯಲು ಅಲ್ಪಕಾಲವೂ ತೆಗೆದುಕೊಳ್ಳುವುದಿಲ್ಲ. ತಮ್ಮ ಕಾಲುಗಳ ನಡುವಿನಲ್ಲಿ ಚೀಲ ಇಟ್ಟುಕೊಂಡು ಮಲಗಿದ್ದ ರಂಗರಾಯರು ಈಗ ನೋಡಿದರೆ, ಚೀಲ ಅಲ್ಲಿಲ್ಲ. ಎಲ್ಲಾದರೂ ಬಿದ್ದಿರಬಹುದೇ ಎಂದು ಹಿಂದು ಮುಂದಿದ್ದವರನ್ನೆಲ್ಲಾ ಕೇಳುತ್ತಾರೆ. ಆದರೆ ಎಲ್ಲೂ ಇಲ್ಲ. “ಅಯ್ಯೋ ನನ್ನ ಈರುಳ್ಳಿ ಚೀಲ! ಈರುಳ್ಳಿ ಚೀಲ!” ಎಂದು ರಂಗರಾಯರು ಕೂಗುತ್ತಿದ್ದಂತೆ ಬಸ್ ಕಂಡಕ್ಟರ್ ಜನರ ಮಧ್ಯೆ ನುಸುಳಿಕೊಂಡು ಬಂದು, “ಯೋ, ಮುಚ್ಚಿಕೊಳ್ಳಯ್ಯ ನಿನ್ನ ಬಾಯಿ. ಅದೇನು ಕೂಗ್ತೀಯ. ಕಾಣ್ತಿಲ್ವಾ ಬಸ್ ತುಂಬಿಕೊಂಡಿರೋದು? ಎಲ್ಲಯ್ಯ ಹುಡುಕ್ತಿ ನಿನ್ನ ಈರುಳ್ಳಿ ಇದ್ರಲ್ಲಿ. ಜನ ಕಡಿಮೆ ಆಗೋತನಕ ಸುಮ್ನೆ ಕೂತ್ಕೋ, ಇಲ್ಲಾಂದ್ರೆ ಕೆಳಗಿಳಿಸ್ತೀನಿ. ಬೆಳ್ಳಿ, ಬಂಗಾರ ಕಳಕೊಂಡೋರೂ ನಿನ್ನಂಗೆ ಆಡೋದಿಲ್ಲ.” ಎಂದು ಗದರಿದ ಮೇಲೆ ರಂಗರಾಯರು ಬಸ್ ನಲ್ಲಿ ಜನ ಕಡಿಮೆಯಾಗಲಿ ಎಂದು ಕಾಯುತ್ತಾ ಕೂರುತ್ತಾರೆ. ಅಷ್ಟರಲ್ಲೂ ಅವರಿವರನ್ನು ಕೇಳುವುದು ಬಿಡುವುದಿಲ್ಲ. ಹಾಗೂ ಹೀಗೂ ಜನ ಕಡಿಮೆಯಾದ ಮೇಲೆ ಬಸ್ಸೆಲ್ಲಾ ಹುಡುಕಿದರೂ ಈರುಳ್ಳಿ ಚೀಲ ಮಾತ್ರ ಸಿಗುವುದಿಲ್ಲ. ಕಳೆದೇಹೋಯಿತು ಎಂದು ನಿರಾಸೆಯಿಂದ ಮನೆ ದಾರಿ ಹಿಡಿದು ಬಿಸಿಲಲ್ಲಿ ನಡೆದು ಮನೆ ತಲುಪುತ್ತಾರೆ.
ಸುಬ್ಬಮ್ಮ ರಂಗರಾಯರು ಕೈ ಬೀಸಿಕೊಂಡು ಬಂದದ್ದನ್ನು ನೋಡಿ, “ನೀವು ಈರುಳ್ಳಿ ತರದಿದ್ದುದು ಒಳ್ಳೇದೇ ಆಯ್ತು.” “ಯಾಕೆ?” ಎಂದು ರಂಗರಾಯರು ಕೇಳಿದ್ದಕ್ಕೆ, “ನಮ್ಮ ಮನೆ ಹತ್ರಾನೇ ಯಾರೋ ರೈತ ಅಂತೆ, ಗಾಡೀಲಿ ರಾಶಿ ಈರುಳ್ಳಿ ಹಾಕ್ಕೊಂಡು ತಂದು 70ರೂ ಕಿಲೋ ಮಾರಿ ಹೋದ. ನಾನು ಐದು ಕಿಲೋ ಕೊಂಡುಕೊಂಡೆ.” ಎಂದಾಗ ರಂಗರಾಯರು ಸುಸ್ತಾಗಿ ಬೀಳುತ್ತಾರೆ.
-ವಿಶ್ವನಾಥ್