ಶ್ರೀ ಕೃಷ್ಣದೇವರಾಯ

ಶ್ರೀ ಕೃಷ್ಣದೇವರಾಯ

ಪುಸ್ತಕದ ಲೇಖಕ/ಕವಿಯ ಹೆಸರು
ಸು ರುದ್ರಮೂರ್ತಿ ಶಾಸ್ತ್ರಿ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ. ೬೫೦.೦೦, ಮುದ್ರಣ: ೨೦೨೪

ವಿಜಯನಗರದ ಸಾಮ್ರಾಟರಾಗಿದ್ದ ಕೃಷ್ಣ ದೇವರಾಯರಿಗೆ ಭಾರತದ ಇತಿಹಾಸದಲ್ಲಿ ತಮ್ಮದೇ ಆದ ಸ್ಥಾನವಿದೆ. ಇವರ ಬಗ್ಗೆ ಈಗಾಗಲೇ ಹಲವಾರು ಪುಸ್ತಕಗಳು ಬಂದಿದ್ದರೂ ಸು ರುದ್ರಮೂರ್ತಿಯವರು ಬರೆದ ‘ಶ್ರೀ ಕೃಷ್ಜದೇವರಾಯ’ ಮರೆಯಲಾಗದ ಸಾಮ್ರಾಜ್ಯದ ಸಾಮ್ರಾಟ ಎನ್ನುವ ಕಾದಂಬರಿ ಅವರ ಬಗ್ಗೆ ಹೊಸ ಲೋಕವನ್ನೇ ತೆರೆದಿಡುತ್ತದೆ. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಬರಹಗಾರರಾದ ಆರ್ ಶೇಷಶಾಸ್ತ್ರಿ. ಅವರು ಬರೆದ ಮುನ್ನುಡಿಯಿಂದ ಆಯ್ದ ಭಾಗ ನಿಮ್ಮ ಓದಿಗಾಗಿ…

“ಭಾರತದ ಅರಸರುಗಳಲ್ಲಿ ಶ್ರೀಕೃಷ್ಣದೇವರಾಯನಿಗೆ ವಿಶಿಷ್ಟವಾದ ಸ್ಥಾನವಿದೆ. ಸಮರ್ಥ ಆಡಳಿತಗಾರ, ವಿಜಯನಗರ ಸಾಮ್ರಾಜ್ಯವನ್ನು ವಿಸ್ತರಿಸಿದ ಪರಾಕ್ರಮಿ; ಕಲೆ, ಸಾಹಿತ್ಯ ರಂಗಗಳ ಪೋಷಕ; ತಾನು ವೈಷ್ಣವ ಧರ್ಮವನ್ನು ಅನುಸರಿಸಿದರೂ ಇತರ ಧರ್ಮಗಳ ಬಗ್ಗೆ ಒಬ್ಬ ರಾಜ ನಡೆದುಕೊಳ್ಳುವ ರೀತಿಯಲ್ಲಿ ನಡೆದುಕೊಂಡ ಸಂಯಮಿ. ತನ್ನನ್ನು ಕನ್ನಡ ರಾಯನೆಂದು ಕರೆಸಿಕೊಂಡ ಭಾಷಾಪ್ರೇಮಿ. ಯವನ ರಾಜ್ಯ ಸ್ಥಾಪಕನೆಂಬ ಬಿರುದನ್ನು ಪಡೆದ ರಣಧೀರ. ಬಹುಶಃ ಈತನ ಬಗ್ಗೆ ಪ್ರಚಲಿತದಲ್ಲಿರುವಷ್ಟು ದಂತ ಕಥೆಗಳು ಬೇರಾವ ರಾಜನ ಬಗ್ಗೆಯೂ ಇಲ್ಲ.

ಕೃಷ್ಣದೇವರಾಯನಂತಹ ಆಶ್ರಯದಾತ ದೊರೆತು ತೆನಾಲಿ ರಾಮಕೃಷ್ಣ ಖ್ಯಾತ ನಾದನೋ, ತೆನಾಲಿ ರಾಮಕೃಷ್ಣನಂತಹ ವಿಕಟಕವಿಗೆ ಆಶ್ರಯ ನೀಡಿ ಶ್ರೀಕೃಷ್ಣದೇವರಾಯ ಜನಪದರಲ್ಲಿ ಜನಪ್ರಿಯನಾದನೋ ಹೇಳುವುದು ಕಷ್ಟ. ಅವರಿಬ್ಬರ ನಡುವೆ ನಡೆದ ಸ್ವಾರಸ್ಯಕರ ಪ್ರಸಂಗಗಳು ದಂತಕತೆಗಳಾಗಿ ದೇಶದಲ್ಲಿ ವ್ಯಾಪ್ತಿ ಹೊಂದಿವೆ. ಹಂಪಿಯಲ್ಲಿ ತೆನಾಲಿ ರಾಮಕೃಷ್ಣನ ಮಂಟಪವೆಂದು ಐತಿಹ್ಯವಿರುವ ಸ್ಥಳವೂ ಇದೆ. ಅವು ಬಹುಮಟ್ಟಿಗೆ ಚಾರಿತ್ರಿಕ ಸತ್ಯಗಳಲ್ಲ ಎಂದು ತಿಳಿದಿದ್ದರೂ ಆ ಕಥೆಗಳಲ್ಲಿನ ಭಾವಸತ್ಯ ನಮ್ಮನ್ನು ಆಕರ್ಷಿಸಿ ಚಾರಿತ್ರಿಕ ಸತ್ಯವೆಂದು ಭಾವಿಸುವಂತೆ ಮಾಡುತ್ತವೆ. ಶ್ರೀಕೃಷ್ಣದೇವರಾಯನ ಕಾಲದಲ್ಲಿ ತೆನಾಲಿ ರಾಮಕೃಷ್ಣ ಎಂಬ ಕವಿ ಇದ್ದದ್ದು ನಿಜ.ವಿಜಯನಗರ ಸಾಮ್ರಾಜ್ಯ ಎಂದಕೂಡಲೇ ನೆನಪಿಗೆ ಬರುವುದು ಶ್ರೀಕೃಷ್ಣದೇವರಾಯ ಮತ್ತು ಚಾಣಕ್ಯನಷ್ಟೇ ಚತುರನಾದ, ಶ್ರೀಕೃಷ್ಣದೇವರಾಯನಿಗೆ ಶ್ರೀರಕ್ಷೆಯಾಗಿ ನಿಂತ ಆತನ ಮಂತ್ರಿ ಮಹಾಮಂತ್ರಿ ತಿಮ್ಮರಸು. ಇವರಿಬ್ಬರ ನಡುವೆಯೂ ಹಲವಾರು ದಂತಕಥೆಗಳು ಹುಟ್ಟಿಕೊಂಡಿವೆ.

ಶ್ರೀಕೃಷ್ಣದೇವರಾಯನನ್ನು ಕುರಿತು ಹಲವಾರು 'ಚಾಟು ಪದ್ಯ'ಗಳು (ಒಂದು ಸ್ವಾರಸ್ಯಕರ ಪ್ರಸಂಗವನ್ನು ನಿರೂಪಿಸುವ ಪದ್ಯಗಳು, ಮುಕ್ತಕಗಳು) ತೆಲುಗು ಮತ್ತು ಸಂಸ್ಕೃತ ಭಾಷೆಗಳಲ್ಲಿ ಹಲವಾರು ದೊರೆಯುತ್ತವೆ, ಈ ಹಿಂದೆ ಹೇಳಿದಂತೆ ಇವೆಲ್ಲವೂ ಕೇವಲ ಭಾವಸತ್ಯಗಳಷ್ಟೇ.

ಶ್ರೀಕೃಷ್ಣದೇವರಾಯನೇ ಹಾಕಿಸಿದ ಕನ್ನಡ ತೆಲುಗು ಮತ್ತು ತಮಿಳು ಭಾಷೆಗಳ ಶಾಸನಗಳು ದಕ್ಷಿಣ ಭಾರತಾದ್ಯಂತ ದೊರೆಯುತ್ತವೆ. ಇವುಗಳ ಜೊತೆಗೆ ಶ್ರೀ ಕೃಷ್ಣದೇವ ರಾಯನೇ ರಚಿಸಿದನೆಂದು ಭಾವಿಸಲಾದ 'ಜಾಂಬವತಿ ಕಲ್ಯಾಣ' ಎಂಬ ಸಂಸ್ಕೃತ ನಾಟಕ ಮತ್ತು 'ಆಮುಕ್ತಮಾಲ್ಯದ' ಎಂಬ ತೆಲುಗು ಕಾವ್ಯಗಳಿವೆ. ಇದು ತಮಿಳುನಾಡಿನ ಕಥೆ, ಬರೆದವನು ಕನ್ನಡಿಗ, ಬರೆದ ಭಾಷೆ ತೆಲುಗು. ಇದರಲ್ಲಿ ಶ್ರೀಕೃಷ್ಣದೇವರಾಯನ ಜೀವನಾನುಭವ ದಾಖಲಾಗಿದೆ.

ಇಂಥಾ ಶ್ರೀಕೃಷ್ಣದೇವರಾಯ ತೆಲುಗಿನವನೆ? ಕನ್ನಡಿಗನೇ? ಎಂಬುದರ ಬಗ್ಗೆ ಸಂಶೋಧನೆಗಳು ಭಾವನಾತ್ಮಕ ಮಟ್ಟದಲ್ಲಿ ನಡೆದಿವೆ. ಕನ್ನಡಿಗರಿಗಿಂತಲೂ ಶ್ರೀಕೃಷ್ಣದೇವ ರಾಯನ ಬಗ್ಗೆ ಅಭಿಮಾನ ಹೊಂದಿರುವವರು ತೆಲುಗು ಭಾಷಿಕರೆ. ಇದಕ್ಕೆ ಮುಖ್ಯ ಕಾರಣ ಆತನು ತೆಲುಗು ಕವಿಗಳಿಗೆ ನೀಡಿದ ಪ್ರೋತ್ಸಾಹ ಮತ್ತು ಆಶ್ರಯ. ಇಂದಿಗೂ ತೆಲುಗರಿಗೆ ಸಾಂಸ್ಕೃತಿಕ ವೀರನೆಂದರೆ ಶ್ರೀಕೃಷ್ಣದೇವರಾಯನೇ ಹೊರತು ಬೇರಲ್ಲ. ಆತನ ಹೆಸರಲ್ಲಿ ಅನೇಕ ಸಾಂಸ್ಕೃತಿಕ ಸಂಸ್ಥೆಗಳು, ಒಂದು ವಿಶ್ವವಿದ್ಯಾಲಯ ಆಂಧ್ರದಲ್ಲಿವೆ. ಶ್ರೀಕೃಷ್ಣದೇವರಾಯನ ಆಸ್ಥಾನಕ್ಕೆ ಭುವನವಿಜಯವೆಂಬ ಹೆಸರಿತ್ತು. ಅಲ್ಲಿ ಅಂದು ನಡೆದುದೆಂದು ಊಹಿಸಲಾದ ಕವಿತಾ ಪ್ರಸಂಗಗಳನ್ನು. ಅಷ್ಟ ದಿಗ್ಗಜ ಕವಿಗಳ ಚತುರ ಸಂಭಾಷಣೆಯನ್ನು, ಅದನ್ನು ನಿರ್ವಹಿಸುತ್ತಿದ್ದ ಶ್ರೀಕೃಷ್ಣದೇವರಾಯನ ಸಾಹಿತ್ಯಾಭಿರುಚಿ ಯನ್ನು ಸಾರುವ 'ಭುವನವಿಜಯ' ಎಂಬ ರೂಪಕವನ್ನು ಒಂದು ಪ್ರದರ್ಶನ ಕಲೆಯಾಗಿ ನಡೆಸುತ್ತಾರೆ

ಇಂದಿಗೂ ಜನಮಾನಸದಲ್ಲಿ ನೆಲಸಿರುವ ವರ್ಣರಂಜಿತ ಐತಿಹಾಸಿಕ ವ್ಯಕ್ತಿ ಶ್ರೀಕೃಷ್ಣದೇವರಾಯ ಈತನನ್ನು ಕುರಿತು ಈತನ ನಂತರದ ಕಾಲದಲ್ಲಿ ಕುಮಾರ ಧೂರ್ಜಟಿ ಎಂಬ ತೆಲುಗು ಕವಿ 'ಕೃಷ್ಣರಾಯ ವಿಜಯ' ಎಂಬ ಕಾವ್ಯವನ್ನು ಬರೆದಿದ್ದಾನೆ. ಇದರಲ್ಲಿ ಶ್ರೀಕೃಷ್ಣದೇವರಾಯನ ದಿಗ್ವಿಜಯಗಳ ಹಿನ್ನೆಲೆಯಲ್ಲಿ ಆತನ ಚರಿತೆಯನ್ನು ವರ್ಣಿಸಲಾಗಿದೆ.

ಶ್ರೀಕೃಷ್ಣದೇವರಾಯನ ಜೀವನದ ಬಗ್ಗೆ ತಿಳಿಸುವ ಮತ್ತೊಂದು ಕೃತಿ 'ರಾಯವಾಚಕಮು'. ಇದರ ಕನ್ನಡ ರೂಪ 'ಶ್ರೀಕೃಷ್ಣದೇವರಾಯ ದಿನಚರಿ' ಎಂಬುದು. ಈ ಗ್ರಂಥಗಳೆರಡೂ ಪ್ರಕಟವಾಗಿವೆ. ಶ್ರೀಕೃಷ್ಣದೇವರಾಯನ ಕಾಲದಲ್ಲಿ ಮಧುರೆಯಲ್ಲಿಯೇ ಇದ್ದ ಸ್ಥಾನಪತಿಯೊಬ್ಬ ಮಾಹಿತಿಗಳನ್ನು ಸಂಗ್ರಹಿಸಿ ಬರೆದಿದ್ದಾನೆ. ಈ ಕೃತಿಯಲ್ಲಿ ವಿಜಯನಗರ ಸಾಮ್ರಾಜ್ಯದ ಶಂಕುಸ್ಥಾಪನೆಯ ವಿವರ, ವಿದ್ಯಾರಣ್ಯರ ಪ್ರಶಂಸೆ, ಕೃಷ್ಣರಾಯ ನಿಗೆ ಮಂತ್ರಿಗಳ ಉಪದೇಶ, ಲೋಕದ ವ್ಯವಹಾರಗಳನ್ನು ತಿಳಿಯುವ ಸಲುವಾಗಿ ಏರ್ಪಡಿಸಿದ್ದ ಗೂಢಚರ್ಯದ ವ್ಯವಸ್ಥೆ, ಕೃಷ್ಣರಾಯನ ಪಟ್ಟಣ ಶೋಧ ಸಂಚಾರ, ಸೇನಾ ವಿವರಣೆ, ಸಾಳುವ ತಿಮ್ಮರಸನ ಪ್ರಶಂಸೆ ಮುಂತಾದ ಅಂಶಗಳನ್ನು ಕಾಣಬಹುದು. ಇವೆಲ್ಲವೂ ಈ ಕೃತಿಕಾರ ತನ್ನ ಕಾಲದ ಜನರಲ್ಲಿ ಪ್ರಚಲಿತವಿದ್ದ ಮಾಹಿತಿಗಳನ್ನು ಆಧರಿಸಿರುವಂತಹವು.

ಇತಿಹಾಸಕಾರರು ಗತಕಾಲವನ್ನು, ಗತಕಾಲದ ವ್ಯಕ್ತಿಗಳನ್ನು ಆ ಕಾಲಘಟ್ಟದಲ್ಲಿ ನಡೆದ ಸಂಘಟನೆಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತಾರೆ. ಕಾವ್ಯಧೋರಣೆಯನ್ನು ಹೊಂದಿರುವ ಕಥೆಗಾರರು, ಕಾದಂಬರಿಕಾರರು ಆ ಚಾರಿತ್ರಿಕ ಘಟನೆಗಳ, ಪ್ರಸಂಗಗಳ ಹಿಂದಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವ್ಯಕ್ತಿಗಳನ್ನು ವಿಶ್ಲೇಷಿಸುತ್ತಾರೆ. ಯಾವುದನ್ನು ಸಂಶೋಧನೆಯ ಚೌಕಟ್ಟಿನಲ್ಲಿ ಹೇಳಲಾಗುವುದಿಲ್ಲವೋ, ಅಂತಹ ಮಾನವಸಂಬಂಧ, ಸಂಘರ್ಷಗಳನ್ನು, ತಮ್ಮ ಕಲ್ಪನೆಯ ಮೂಸೆಯಲ್ಲಿ ಪುಟವಿಟ್ಟು ಪಾತ್ರಗಳನ್ನು, ಸನ್ನಿವೇಶಗಳನ್ನು ನಮಗೆ ಕಟ್ಟಿಕೊಡುತ್ತಾರೆ.

ಈ ಕಾದಂಬರಿಯಲ್ಲಿ ಮಿತ್ರ ಶ್ರೀ ಸು. ರುದ್ರಮೂರ್ತಿಶಾಸ್ತ್ರಿ ಶ್ರೀಕೃಷ್ಣದೇವರಾಯನ ಚರಿತ್ರೆಯನ್ನು ನಿರೂಪಿಸುವುದಕ್ಕಿಂತಲೂ ಆತನ ಚಾರಿತ್ರ್ಯವನ್ನು ನಿರೂಪಿಸುವುದರತ್ತ ಹೆಚ್ಚು ಗಮನಹರಿಸಿದ್ದಾರೆ. ಶ್ರೀಕೃಷ್ಣದೇವರಾಯ ಈ ಕಾದಂಬರಿಯ ಪ್ರಧಾನ ಪಾತ್ರ ಆದರೆ ಎಲ್ಲ ಪಾತ್ರಗಳ ಒಳಹೊರ ಚಾರಿತ್ರ್ಯಗಳನ್ನು ಗಮನಿಸಿ ಎಲ್ಲ ಪಾತ್ರಗಳನ್ನೂ ನಮ್ಮ ಮುಂದಿರಿಸಿದ್ದಾನೆ. ಬಹುಶಃ ಈ ಕಾರಣದಿಂದ ಶ್ರೀಕೃಷ್ಣದೇವರಾಯನ ಬದುಕಿನ ಸುತ್ತ ಹೆಣೆದುಕೊಂಡಿರುವ ಹಲವಾರು ಅಸಂಗತಗಳು ತಮ್ಮಷ್ಟಕ್ಕೆ ತಾವೇ ಕಳಚಿಕೊಂಡಿವೆ.

ಗೆಳೆಯ ಸು. ರುದ್ರಮೂರ್ತಿ ಶಾಸ್ತಿ ನನ್ನಿಂದ ಸ್ನೇಹವನ್ನು ಬಿಟ್ಟು ಏನೊಂದನ್ನೂ ಬಯಸುವವನಲ್ಲ, ತುಂಬ ಮುಜುಗರದಿಂದ "ನೋಡಪ್ಪ, ಇದಕ್ಕೆ ನೀನು ಮುನ್ನುಡಿ ಬರಿತೀಯೇನೋ' ಎಂದು ನವಿರಾಗಿ ಹೇಳುತ್ತಾನೆ. ನನಗೆ ಮುನ್ನುಡಿ ಬರೆಯುವ ಯೋಗ್ಯತೆ, ಅರ್ಹತೆ ಇದೆ ಎಂದಲ್ಲ; ಬೇರಾರೂ ಬರೆಯುವುದಿಲ್ಲ ಎಂದೂ ಅಲ್ಲ... ನನ್ನ ಬಗ್ಗೆ ಅವನಿಗಿರುವ ಮಮತೆ ಅಂತಹುದು. ಇದು ನಾನು ಅವನ ಮೂರನೆಯ ಪುಸ್ತಕಕ್ಕೆ ಬರೆಯುತ್ತಿರುವ ಮುನ್ನುಡಿ."