ಶ್ರೀ ಕೃಷ್ಣನ ಕಥೆ

ಮಕ್ಕಳಿಗಾಗಿ ಮತ್ತೊಮ್ಮೆ ಶ್ರೀ ಕೃಷ್ಣನ ಕಥೆಯನ್ನು ಹೇಳಲು ಬರುತ್ತಿದ್ದಾರೆ ಹೆಸರಾಂತ ಸಾಹಿತಿ ಸಂಪಟೂರು ವಿಶ್ವನಾಥ್. ಇವರು ಮಕ್ಕಳಿಗಾಗಿ ಶ್ರೀ ಕೃಷ್ಣನ ಕಥೆಯನ್ನು ಬಹಳ ಸೊಗಸಾಗಿ ಹೇಳಿದ್ದಾರೆ. ಈ ಬಗ್ಗೆ ಅವರ ಮಾತುಗಳಲ್ಲೇ ಹೇಳುವುದಾದರೆ “ ಒಬ್ಬನೇ ವ್ಯಕ್ತಿ, ಬೇರೆ ಬೇರೆಯವರಿಗೆ, ಬೇರೆ ಬೇರೆ ಸಂದರ್ಭಗಳಲ್ಲಿ 'ಬೇರೆ ಬೇರೆ'ಯಾಗಿ ಕಾಣಿಸಿಕೊಳ್ಳುವಂತೆ, ಕೃಷ್ಣನು ಬೇರೆ ಬೇರೆ ಆದರ್ಶಗಳನ್ನು ಮೆರೆಯುವ ಮಗ, ಅಣ್ಣ, ತಮ್ಮ, ಶಿಷ್ಯ, ಸಹಪಾಠಿ, ಪ್ರಿಯಕರ, ಬುದ್ದಿ ಪ್ರಚೋದಕ, ವೇಣು ವಿಶಾರದ, ತಂಟೆಕೋರ, ಗೆಳೆಯ, ಶೂರ, ಮನೋಚಿಕಿತ್ಸಕ, ಪ್ರೇಮಿ, ಪತಿ, ಜನನಾಯಕ, ರಾಜ ನೀತಿಜ್ಞ, ಬಡವರ ಬಂಧು, ಅನಾಥರಕ್ಷಕ, ಆಪದ್ಭಾಂಧವ, ಕಪಟ ನಾಟಕ ಸೂತ್ರಧಾರಿ, ಪವಾಡ ಪುರುಷ, ಯೋಗಾಚಾರ್ಯ ಮುಂತಾದ ಹತ್ತಾರು ಮುಖಗಳನ್ನು ತನ್ನ ಲೀಲೆಗಳ ರೂಪದಲ್ಲಿ ತೋರಿಸಿದ್ದಾನೆ.
'ಆಟ, ಚೇಷ್ಟೆ ಖಂಡಿತ ಕಾಲಹರಣವಲ್ಲ, ಜೀವನದ ಪಾಠಗಳನ್ನು ಕಲಿಯುವ, ಕಲಿಸುವ ಚಟುವಟಿಕೆ' ಎನ್ನುವ ಸತ್ಯವನ್ನು ಕೃಷ್ಣ ತನ್ನ ಬಾಲಲೀಲೆಗಳ ಮೂಲಕ ಸೂಚಿಸುತ್ತಾನೆ. ಕೃಷ್ಣನ ಚೇಷ್ಟೆಗಳು, ಯುಕ್ತಿಗಳು, ಸಾಹಸಗಳು ಮಕ್ಕಳ ಮನಸ್ಸಿಗೆ ಮುದ ನೀಡುತ್ತವೆ. ಆದರೆ ಪ್ರತಿಯೊಂದು ಚೇಷ್ಟೆಯ ಕೊನೆಯಲ್ಲಿ ಅವನು 'ಕಾಣಿಸುವ' ನೀತಿ, ಮಾರ್ಗದರ್ಶನದಿಂದ ಕೃಷ್ಣ ನಮ್ಮನ್ನು ಚಕಿತಗೊಳಿಸುತ್ತಾನೆ. ಕೃಷ್ಣನ ಬಹುಮುಖ ಚಾತುರ್ಯವನ್ನು, ದೃಷ್ಟಾಂತಗಳ ಮೂಲಕ ಎಳೆಯರಿಗೆ ಸರಳ ಭಾಷೆಯಲ್ಲಿ ತಿಳಿಸಿದರೆ, ಅವರಿಗೆ ಪಾಠ ಕಲಿಸುವುದು ಸುಲಭ.
'ಕೃಷ್ಣನ ಕಥೆ'ಯನ್ನು ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆಯಲು ನನ್ನನ್ನು ಪ್ರಚೋದಿಸಿದವರು 'ಅಂಕಿತ ಪುಸ್ತಕ'ದ ಮಿತ್ರ ಪ್ರಕಾಶ್ ಕಂಬತ್ತಳ್ಳಿಯವರು. ಇದರಿಂದ ಕೃಷ್ಣನ ಬಾಲ್ಯವನ್ನು ಕುರಿತೇ ಹೆಚ್ಚಾಗಿ ಬರೆದಿದ್ದರೂ, ಅವನ ಸಂಪೂರ್ಣ ವ್ಯಕ್ತಿತ್ವದ ದೃಷ್ಟಿಯಿಂದ ಕೃಷ್ಣಾವತಾರದಲ್ಲಿ ಪ್ರಮುಖವೆನಿಸುವ ಕೆಲವು (ಉದಾ: ಭಗವದ್ಗೀತೆ) ಪ್ರಸಂಗಗಳನ್ನು ಸಂಕ್ಷಿಪ್ತವಾಗಿ ವಿವರಿಸಿದ್ದೇನೆ. ಹೀಗಾಗಿ 'ಶ್ರೀಕೃಷ್ಣನ ಕಥೆ' ನಿಮ್ಮ ಕೈ ಸೇರುತ್ತಿದೆ.”
ಇವು ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದ ಕೃತಿಯಾಗಿದ್ದು, ಕೃಷ್ಣನ ಬಾಲ್ಯವನ್ನು ಕುರಿತೇ ಹೆಚ್ಚಾಗಿ ಬರೆದಿದ್ದರೂ, ಅವನ ಸಂಪೂರ್ಣ ವ್ಯಕ್ತಿತ್ವದ ದೃಷ್ಟಿಯಿಂದ ಕೃಷ್ಣಾವತಾರದಲ್ಲಿ ಪ್ರಮುಖವೆನಿಸುವ ಕೆಲವು (ಉದಾ: ಭಗವದ್ಗೀತೆ) ಪ್ರಸಂಗಗಳನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ೮೦ ಪುಟಗಳ ಈ ಪುಟ್ಟ ಪುಸ್ತಕವನ್ನು ಮಕ್ಕಳು ಅನಾಯಾಸವಾಗಿ ಓದಿ ಮುಗಿಸಬಹುದಾಗಿದೆ.