ಶ್ರೀ ಪುರಂದರ ದಾಸರ ಆರಾಧನೆ

ಶ್ರೀ ಪುರಂದರ ದಾಸರ ಆರಾಧನೆ

ಪುಷ್ಯ ಬಹುಳ ಅಮವಾಸ್ಯೆಯ ದಿನವನ್ನು ಸಂಗೀತದ ಪಿತಾಮಹ ಶ್ರೀ ಪುರಂದರ ದಾಸರ ಆರಾಧನೆಯ ರೂಪದಲ್ಲಿ ಆಚರಿಸಲಾಗುತ್ತದೆ. ‘ಹಸಿರು ಹಂಪೆ’ ಎಂಬ ಪುಸ್ತಕದ ಒಂದು ಅಧ್ಯಾಯ ಇಲ್ಲಿದೆ.ಓದಿ...

ದೂರದಿಂದ ಬಂದವರು

ನಾವಿಲ್ಲಿಗೆ ಬಂದ ಹೊಸತರಲ್ಲಿ ನಮ್ಮನ್ನು ಹಾಗೇ ಕರೆಯುತ್ತಿದ್ದವರು...ದೂರದಿಂದ ಬಂದವರು. ತೀರ್ಥಹಳ್ಳಿಯ ಸಮೀಪದ ಆರಗದ ಕ್ಷೇಮಾಪುರದಿಂದ  ಕಾಲುನಡಿಗೆಯಿಂದ ಬಂದವರಿಗೆ...ಹಂಪೆ ದೂರವೇ.

‘ಸರಸ್ವತೀ..ಹೊರಡು ವಿಜಯನಗರಕ್ಕೆ ಹೋಗೋಣ, ಅಲ್ಲಿ ಸಾಹಿತ್ಯದ, ಸಂಗೀತದ ಮೂಲಕ ಶ್ರೀಹರಿಯ ಸೇವೆ ಮಾಡೋಣ ಎಂದಾಗ, ಸಂತೋಷದಿಂದ ನಾನೂ ಮಕ್ಕಳೊಂದಿಗೆ ಹೊರಟೇಬಿಟ್ಟೆ. ಇವರು ಶ್ರೀನಿವಾಸ ನಾಯಕರಾಗಿದ್ದಾಗ, ವಜ್ರದ ಮತ್ತು ಲೇವಾದೇವಿಯ ವ್ಯವಹಾರಕ್ಕೆ ಹಂಪೆಗೆ ಹೋಗುತ್ತಿದ್ದಾಗ ಇವರ ಸಿರಿತನಕ್ಕೆ ತಕ್ಕಂತೆ ರಾಜಮರ್ಯಾದೆ ಸಿಗುತ್ತಿತ್ತಂತೆ. ಇವರು ನವಕೋಟಿ ನಾರಾಯಣರಾಗಿದ್ದುದೂ ಇಲ್ಲಿಂದಲೇ ತಾನೇ.

ಕೃಷ್ಣದೇವರಾಯರ ಪಟ್ಟಾಭಿಷೇಕ ನಡೆದಾಗ ರಾಜ್ಯದ ಪರಿಸ್ಥಿತಿ ಇನ್ನೂ ಅತಂತ್ರದಲ್ಲಿತ್ತಂತೆ. ಸಾಮ್ರಾಜ್ಯದಲ್ಲಿ ಒಳದಂಗೆ, ಉತ್ತರಕ್ಕೆ  ತುರುಕರ ಕಾಟ, ಖಾಲಿಯಾದ ಖಜಾನೆ, ಸಂಬಳವಿಲ್ಲದೆ ಅಧೀರರಾಗಿದ್ದ ಸೈನಿಕರು. ಪಟ್ಟಾಭಿಷೇಕ ಮಾಡಲೇ ಬೇಕಾದ ಅನಿವಾರ್ಯತೆ, ಹೊಂಚುಹಾಕುತ್ತಿದ್ದ ಶತ್ರುಗಳಿಂದ ರಾಜ್ಯವನ್ನು ಉಳಿಸಿಕೊಳ್ಳಲು….ಎಂದೆಲ್ಲಾ ವಿಜಯನಗರದ ಪರಿಸ್ಥಿತಿಯನ್ನು ವಿವರಿಸುತ್ತಲೇ ಬಂದರು ಹಂಪೆ ತಲುಪುವವರೆಗೂ. ಕೃಷ್ಣದೇವರಾಯರ ಹೆಸರು ಹೇಳುತ್ತಲೇ ಇವರಿಗೆ ಎಲ್ಲಿಲ್ಲದ ಉತ್ಸಾಹ..

'ಸರಸ್ವತಿ.. ಅಂತಹ ಎದೆಗಾರನನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ' ಎಂದು ಅವರ ಸಾಹಸ, ಶೌರ್ಯಗಳ ವೃತ್ತಾಂತವನ್ನೇ ಬಿಚ್ಚಿಡುತ್ತಿದ್ದರು. 

ಕೃಷ್ಣದೇವರಾಯರ ಮೊದಲ ಆದ್ಯತೆ ಒಂದು ಒಳ್ಳೆಯ ಸೈನ್ಯ ಕಟ್ಟುವುದಾಗಿತ್ತಂತೆ. ಸೈನಿಕರ ತರಬೇತಿಗೆ, ಅರಬ್ಬೀ ದೇಶದ ಕುದುರೆಗಳನ್ನು, ದಕ್ಷಿಣದಿಂದ ಆನೆಗಳನ್ನು ತರಲು ಹಣದ ಕೊರತೆಯಿದ್ದಾಗ ನಮ್ಮವರಿಂದ ಆರ್ಥಿಕ ಸಹಾಯ ಪಡೆದರಂತೆ. ಸಹಾಯ ? ಉಹುಂ, ಇವರದು ಸಹಾಯಮಾಡುವ ಜಾಯಮಾನವೇ ಅಲ್ಲ..ಆಗ, ಶ್ರೀನಿವಾಸ ನಾಯಕರಾಗಿದ್ದಾಗ. ಶುಧ್ಧ ವ್ಯವಹಾರದ ಲೆಕ್ಕಾಚಾರ ಇವರದ್ದು. ಕೃಷ್ಣದೇವರಾಯರಿಂದಲೇ ಮುಂದೆ ಕರ್ನಾಟಕ ಸಾಮ್ರಾಜ್ಯದ ಸಂಪತ್ತು ವೃಧ್ಧಿಸಲಿದೆ ಎನ್ನುವ ಬಲವಾದ ನಂಬಿಕೆ ಮತ್ತು ಆಗ ಬರಬಹುದಾದ ಇಮ್ಮಡಿ, ಮುಮ್ಮಡಿ ಗಾತ್ರದ ಲಾಭದ ಆಸೆ. ಅದು ಹಾಗೇ ಆಯಿತು ಕೂಡ. 'ಕುದುರೆ ಶೆಟ್ಟರು' ಎನ್ನುವ ವ್ಯಾಪಾರಿಗಳ ಗುಂಪಿಗೆ ಧಾರಾಳವಾಗಿ ಸಾಲ ಕೊಟ್ಟರಂತೆ. ಇವರು ಅರಬ್ಬೀ ದೇಶದಿಂದ ಕುದುರೆಗಳನ್ನು ತರಿಸಿ ವಿಜಯನಗರದ ಸೈನ್ಯಕ್ಕೆ ಕೊಡುತ್ತಿದ್ದರಂತೆ. ಮುಂದಿನ ಯುಧ್ಧಕ್ಕೆ ಸೈನ್ಯ ಸನ್ನಧ್ಧವಾಗಿದ್ದೇ ತಡ ಕರ್ನಾಟಕ ಸಾಮ್ರಾಜ್ಯದ ವಿಸ್ತರಣೆಯ ಪ್ರಕ್ರಿಯೆ ಶುರು. ಕೃಷ್ಣದೇವರಾಯರೇ ಮಂಚೂಣಿಯಲ್ಲಿ ನಿಂತು ವೀರಾವೇಶದಿಂದ ಹೋರಾಡಿ ಆ ಪ್ರಾಂತ್ಯದ ರಾಜರನ್ನು ಸೋಲಿಸಿ ಅಲ್ಲಿಯ ಸಂಪತ್ತನ್ನು ವಿಜಯನಗರದ ಬೊಕ್ಕಸಕ್ಕೆ ತುಂಬಿಸಿಬಿಟ್ಟಿರುತ್ತಿದ್ದರಂತೆ. ತೀರ್ಥಹಳ್ಳಿಯಿಂದ ಮುಂದಿನ ಸಲ ವಜ್ರದ ವ್ಯಾಪಾರಕ್ಕೆ ಹೋದಾಗ ಇಮ್ಮಡಿ ಗಾತ್ರದ ಧನರಾಶಿ ಇವರಿಗೆ ಖುದ್ದಾಗಿ ಕೃಷ್ಣದೇವರಾಯರೇ ಒಪ್ಪಿಸುತ್ತಿದ್ದರಂತೆ.

ಈಗ  ಅದೆಲ್ಲಾ ತುಂಬಾ ಹಳೆಯ ವಿಷಯ. 

ನನ್ನ ‘ಮೂಗುತಿಯ ಪ್ರಸಂಗದ' ನಂತರ ನಡೆದ ಘಟನಾವಳಿಗಳು ಜಗಜ್ಜಾಹೀರಾದ ಸಂಗತಿ. ಅದನ್ನೆಲ್ಲಾ ಇಲ್ಲೇನು ಹೇಳುವುದು? ಅದನ್ನೆಲ್ಲಾ ಬಿಚ್ಚುತ್ತಾ ಹೋದರೆ ವಿಜಯನಗರದ ವೃತ್ತಾಂತವೇ ಮರೆತು ಹೋಗುತ್ತದೇನೋ. ಆದರೂ ಆ ಶ್ರೀಮನ್ನಾರಯಣನೇ ಬಡ ಬ್ರಾಹ್ಮಣನ ವೇಷದಲ್ಲಿ ನಮಗೆ ಕಣ್ಣೆದುರೇ ಬಂದು ನಿಂತದ್ದರೂ ಅರಿವಾಗಲಿಲ್ಲ, ಅದು ಮನವರಿಕೆ ಆಗುವಷ್ಟತ್ತಿಗೆ ಅದೃಷ್ಯನಾಗಿ ಹೋದವನನ್ನು ಇನ್ನೂ ಅರಸುತ್ತಲೇ ಇದ್ದೇವೆ ಸಂಗೀತದ ಮೂಲಕ.

“ಆದದ್ದೆಲ್ಲ ಒಳಿತೆ ಆಯಿತು ನಮ್ಮ

ಶ್ರೀಧರ ಸೇವೆ ಮಾಡಲು ಸಾಧನ ಸಂಪತ್ತಾಯಿತು;”

ಎಂದು ಎಂದು ಮೊಟ್ಟ ಮೊದಲಿಗೆ ಇವರು ಹಾಡಲು ಶುರು ಮಾಡಿಕೊಂಡಾಗ ನನಗೇ ಆಶ್ಚರ್ಯವಾಯಿತು…       

“ಹೆಂಡತಿ ಸಂತತಿ ಸಾವಿರವಾಗಲಿ

ದಂಡಿಗೆ ಬೆತ್ತ ಹಿಡಿಸಿದಳಯ್ಯ….”

ಎಂದಾಗಲಂತೂ ನಾನು ನಾಚಿಕೆಯಿಂದ ಕುಗ್ಗುತ್ತಿದ್ದೆ. 

ಒಂದು ಕಾಲದಲ್ಲಿ ನನ್ನ ದೈವಭಕ್ತಿ ಇವರಿಗೆ ಸಿಡುಕಿನ ವಿಷಯವಾಗಿತ್ತು. ಈಗ ನನ್ನ ದೈವಭಕ್ತಿಯನ್ನು ಹೊಗಳಿದ್ದೇ ಹೊಗಳಿದ್ದು. ಯಾರಾದರೂ ಈ ಹಂತಕ್ಕೆ ಬದಲಾಗುವುದು ಸಾಧ್ಯವೇ ಅಂತಾ.. ಇವರು ಇರುವುದೇ ಹಾಗೇ, ಏನು ಮಾಡಿದರೂ ಒಂದು ಹುಚ್ಚು, ತೀವ್ರತೆ ಮತ್ತು ಆಸ್ಥೆಯಿಂದ ಮಾಡುತ್ತಾರೆ. ವಜ್ರದ ವ್ಯಾಪಾರದಲ್ಲಿ, ಲೇವಾದೇವಿ ವ್ಯವಹಾರದಲ್ಲಿ  ಕೋಟಿ ಕೋಟಿ ಗಳಿಸಿದರು. ಆದೇನು ಢೌಲಿನ ಜೀವನ ನಡೆಸುತ್ತಿದ್ದರು, ಎಂಜಲು ಕೈಯಲ್ಲಿ ಕಾಗೆಯನ್ನೂ ಓಡಿಸದ ಜಿಪುಣ ಜಾಯಮಾನದವರು ಆದರೆ ಇದೆಲ್ಲಾ ನಶ್ವರ..ಮಾಯೆ ಆ ಹರಿಯೇ ಎಲ್ಲಾ ಎಂದೆನಿಸಿದ ಕೂಡಲೇ ಕಿಂಚಿತ್ತೂ ಯೋಚಿಸದೆ ಎಲ್ಲವನ್ನೂ ತ್ಯಜಿಸಿ ಭಕ್ತಿಯ ಸಾಗರದಲ್ಲಿ ಮುಳುಗಿ ಹೋದರು.

ಸದ್ಯ ಅಂತೂ ಹಂಪೆಗೆ ಬಂದು ತಲುಪಿದೆವು. ಕೃಷ್ಣದೇವರಾಯರನ್ನು ಭೇಟಿ ಮಾಡಿದಾಗ ದೇವರಾಯರಿಗೆ ಎಲ್ಲಿಲ್ಲದ ಆಶ್ಚರ್ಯ, 

'ಏನು ಶ್ರೀನಿವಾಸ ನಾಯಕರೇ..ನನಗೇ ಸಾಲ ಕೊಡುವಷ್ಟು ಶ್ರೀಮಂತರಾಗಿದ್ದವರು ಎಲ್ಲವನ್ನೂ ತ್ಯಾಗ ಮಾಡಿ ಇದೇನು ಅವತಾರ?' ಎಂದಾಗ

'ನಿಮಗೆ ಬೇಕಾಗಿರುವುದು ರಾಜ್ಯ, ನನಗೆ ಹರಿ ಸ್ಮರಣೆಯಷ್ಟೇ ಸಾಕು..' ಎಂದುಬಿಡೋದೇ!

ಇವರ ಉತ್ತರದಿಂದ ದಂಗಾದ ರಾಯರು ಸ್ವಲ್ಪ ಹೊತ್ತು ಹಾಗೇ ಕಣ್ಣು ಮುಚ್ಚಿಕೊಂಡು ಆಲೋಚನೆಯಲ್ಲಿ ಮುಳುಗಿ ಹೋದರು. ಬಹುಷಃ ‘ ನನಗೂ ಇವರಂತೆ ವಿರಕ್ತಿಯುಂಟಾದರೆ ಸಾಮ್ರಾಜ್ಯದ ಗತಿಯೇನು’? ಎನಿಸಿತ್ತಿರಬಹುದೇನೊ, ಕಣ್ಣು ತೆರೆದವರೇ ಎದ್ದು ಇವರಿಗೆ ಕಾಲಿಗೆರಗುತ್ತಾ

“ ಆ ಶ್ರೀಮನ್ನಾರಯಣನೇ ನಿಮ್ಮ ಮನೆಗೆ ಬಂದಿದ್ದನೆಂದರೆ ಅದೆಂತಹ ಪುಣ್ಯವಂತರು ನೀವುಗಳು, ನೀವು ಇಲ್ಲಿಗೆ ಬಂದದ್ದು ನಮ್ಮ ಪುಣ್ಯ” ಎಂದರು ಭಾವುಕರಾಗಿ.

ತಿರುಪತಿಯಿಂದ ವ್ಯಾಸತೀರ್ಥರನ್ನು ಮಹಾರಾಜರೇ ಕರೆದುಕೊಂಡು ಬಂದು 'ರಾಜಗುರು' ಪಟ್ಟವನ್ನಲಂಕರಿಸಲು ಮನವಿ ಮಾಡಿಕೊಂಡ ಮೇಲೆ ವ್ಯಾಸರಾಯರು ಮಾಡಿದ ಮೊದಲ ಕಾರ್ಯವೆಂದರೆ ಇವರಿಗೆ 'ಪುರಂದರ ದಾಸ' ಎಂದು ವೈಷ್ಣವ ದೀಕ್ಷೆ ನೀಡಿದ್ದು. ದೇವಭಾಷೆಯಾದ ಸಂಸ್ಕೃತದಲ್ಲಿ ಹುದುಗಿದ ನೀತಿಸಂಹಿತೆಗಳು, ಆಚಾರ ವಿಚಾರಗಳನ್ನು ಜನಸಮಾನ್ಯರಿಗೆ ಅರ್ಥ ವಾಗುವಂತೆ ಸರಳವಾದ ಗೀತೆಗಳು, ದೇವರನಾಮಗಳು, ಕೀರ್ತನೆಗಳನ್ನು ರಚಿಸುವಂತೆ ಇವರಿಗೆ ನಿರ್ದೇಶಿಸಿದರು. ವಿಜಯ ವಿಠ್ಠಲ ದೇವಸ್ಥಾನದ ಸಮೀಪವೇ ನಮಗೆ ವಸತಿ ವ್ಯವಸ್ಥೆಯನ್ನೂ ಮಾಡಿಕೊಟ್ಟರು.

ಹಂಪೆಯಲ್ಲಿ ನಡೆಯುವ ನವರಾತ್ರಿಯ ಆಚರಣೆಯ ಸಮಾರಂಭ ದೇಶ ವಿದೇಶಗಳಲ್ಲೆಲ್ಲಾ ಪ್ರಸಿದ್ಧಿ ಪಡೆದಿದೆಯಂತೆ. ಮೊದಲ ಸಲ ನೋಡಿದಾಗ ಅಲ್ಲಿಯ ವೈಭವವನ್ನು ಕಂಡು ಬೆರಗಾಗಿ ಹೋದೆವು. ಅಂತಹ ಅಧ್ಭುತ ಅನುಭವದ ಮಧ್ಯದಲ್ಲೇ ಒಂದು ನವರಾತ್ರಿಯ ಸಮಾರಂಭದಂದು ನಮಗೇ ಎಂದು  'ಪುರಂದರ ಮಂಟಪ' ದ ಉಧ್ಘಾಟನೆಯಾಯಿತು.  ವಿಜಯ ವಿಠ್ಠಲ ಮಂದಿರದ ಬಳಿ ತುಂಬಿ ಹರಿಯುತ್ತಿದ್ದ ತುಂಗಾನದಿಯ ತೀರದ ಪ್ರಶಾಂತವಾದ ವಾತಾವರಣದಲ್ಲಿ ಕಟ್ಟಿಸಿದ ಈ ವಿಶಾಲವಾದ ಮಂಟಪದಿಂದ ಎತ್ತ ನೋಡಿದರೂ ಪೃಕೃತಿಯ ವೈಭವ ಮೈವೆತ್ತಿ ಮೆರೆಯುತ್ತಿತ್ತು.

ಹರಿಯುತ್ತಿರುವ ನದಿಯ ಜುಳು ಜುಳು ಶಬ್ದದೊಂದಿಗೆ ಬೆರೆತು ಹೋಗುತ್ತಿದ್ದ ಹಕ್ಕಿಗಳ ಕಲರವ. ಭಕ್ತಿ ಸಂಗೀತ ಅವಿರತವಾಗಿ ಹರಿಯಲು ಪ್ರಶಸ್ತ ಸ್ಥಳ. 

ಇದರ ಉಧ್ಘಾಟನೆಗೆ ಬಂದಿದ್ದ ವ್ಯಾಸತೀರ್ಥರು ಇವರು ರಚಿಸಿದ್ದ ಕೀರ್ತನೆಗಳ ಒಂದು ಹೊತ್ತಿಗೆಯನ್ನು 

 “ಶ್ರೀ ಪುರಂದರೋಪನಿಷತ್ತು”  ಎನ್ನುವ ನಾಮಾಂಕಿತದ ಗ್ರಂಥವನ್ನು ಕೃಷ್ಣದೇವರಾಯರಿಗೆ ಅರ್ಪಿಸುತ್ತಾ…

“ದಾಸರೆಂದರೆ ಪುರಂದರದಾಸರಯ್ಯಾ, ನೀತಿಯೆಲ್ಲವನರಿತು ನಿಗಮವೇದ್ಯನ ನಿತ್ಯವಾತಸುತನಲ್ಲಿಹನ ವರ್ಣಿಸುತಲಿ ಗೀತನರ್ತನದಿಂದ ಕೃಷ್ಣನ್ನ ಪೂಜಿಸುವ ಪೂತಾತ್ಮರಿವರು”

ಎಂದು ಮುಕ್ತಕಂಠದಿಂದ ಹೊಗಳಿದರು.

ಆ ಮಂಟಪ ಭಕ್ತಿಯ ಕೇಂದ್ರವಾಯಿತು, ಹರಿಭಜನೆಯ ಬೀಡಾಯಿತು. ಕೆಲವು ಸಲ ಕೃಷ್ಣದೇವರಾಯರೂ ಇದರಲ್ಲಿ ಭಾಗವಹಿಸುತ್ತಿದ್ದರು. ದಕ್ಷಿಣದ ತುದಿಯಿಂದ ಕೃಷ್ಣ ಗೋದಾವರಿಗಳನ್ನು ದಾಟಿ ಕಳಿಂಗದ ದೇಶದ ವರೆಗೂ ಹರಡಿರುವ ಕರ್ನಾಟಕ ಸಾಮ್ರಾಜ್ಯದ ಅಧಿಪತಿ...ಪುರಂದರ ಮಂಟಪದಲ್ಲಿ ಒಬ್ಬ ಸಾಮಾನ್ಯ ಭಕ್ತರಂತೆ ಕುಳಿತು ಇವರ ಗಾನಸುಧೆಯಲ್ಲಿ ಮಿಂದು ಹೋಗುತ್ತಿದ್ದರು. 'ಕನ್ನಡ ರಾಜ್ಯ ರಮಾರಮಣ' ಬಿರುದು ಪಡೆದ ಅಪ್ರತಿಮ ವೀರನನ್ನೂ ಭಕ್ತಿಯ ಹೊಳೆಯಲ್ಲಿ ಮೀಯಿಸಿ ಬಿಡುತ್ತಿದ್ದವು “ಕರ್ನಾಟಕ ಸಂಗೀತದ ಪಿತಾಮಹ” ಪುರಂದರ ದಾಸರ ಕೀರ್ತನೆಗಳು.     

ಕಾಲಚಕ್ರ...ಉರುಳುತ್ತಾ ಮುಂದೊಂದು ದಿನ  ತುರುಕರ ದಾಳಿಗೆ ತುತ್ತಾದ ಹಂಪಿಯ ಅವನತಿಯನ್ನೂ ಈ ಕಣ್ಣು ಗಳು ಕಾಣಬೇಕಾಯಿತಲ್ಲಾ ಎನ್ನುವ  ದುಃಖವಂತೂ  ಮರೆಯಲಾಗದ ದುರಂತ.

ವಿಜಯ ವಿಠ್ಠಲನ ಮೂರುತಿಯನ್ನು ಇದೇ ಪುರಂದರ ಮಂಟಪದಲ್ಲಿ ರಕ್ಷಿಸುವ ದುರ್ವಿದಿಯೂ ಬಂದೆರಗಿತು. ಕೃತಜ್ಞತಾ ಭಾವದಿಂದ ವಿಠ್ಠಲನ ಆರಾಧಕರಿಗೆ ಅರ್ಪಪಿಸಿದ ಈ ಮಂಟಪವೇ ಪುರಂದರರ ವಿಠ್ಠಲನ ಮೂರುತಿಗೆ ಆಸರೆಯಾಯಿತು..

ರಕ್ಷಕನನ್ನೇ ರಕ್ಷಿಸುವ ಸೌಭಾಗ್ಯ….

ಒಮ್ಮೆ ವೈಭವದಿಂದ ಮೆರೆದ ಹಂಪೆ ಹಾಳಾಗಿ ಹೋಯಿತು, ಆದರೆ ಪುರಂದರದಾಸರ ಸಂಗೀತ, ಸಾಹಿತ್ಯ ಮತ್ತು ಆಧ್ಯಾತ್ಮ ಹಂಪೆಯ ನೆನಪುಗಳುನ್ನು ಹಸಿರಾಗೇ ಇಟ್ಟಿವೆ.

(ಸಂಗ್ರಹ)