ಶ್ರೀ ಭಾರತಿ ಕಲಾಕೇಂದ್ರ.

ಶ್ರೀ ಭಾರತಿ ಕಲಾಕೇಂದ್ರ.

ಬರಹ

ಬಣ್ಣಗಳ ಸಾಮರಸ್ಯದಲ್ಲಿ ಕಲೆ ಆವಿರ್ಭವಿಸುವಂತೆ, ಸ್ವರಗಳ ಸಾಮರಸ್ಯದಲ್ಲಿ ಸಂಗೀತ ಜನ್ಯ ವಾಗುವಂತೆ, ಪುಟ್ಟ ಮಕ್ಕಳ ಕಿಲಕಿಲದನಿಗಳೊಂದಿಗೆ
ನಗುವಿನ ನಾದಗಳೊಂದಿಗೆ, ಜ್ಞಾನದ, ವಿಜ್ಞಾನದ ಬೆಳಕಿನೊಂದಿಗೆ, ಭಾವೈಕ್ಯದ ಮೇಳದೊಂದಿಗೆ, ಸಂಸ್ಖತಿಯ ಬೇರಿನೊಂದಿಗೆ ಆರಂಭವಾಗಿದ್ದು ಶ್ರೀ ಭಾರತಿ
ಕಲಾಕೇಂದ್ರ. ಉತ್ತರಕನ್ನಡದ ಕುಮಟಾ ತಾಲೂಕಿನ ಮೂರುರು ಗ್ರಾಮದಲ್ಲಿ28-04-2004 ರಂದು, ಶ್ರೀ ರಾಮಚಂದ್ರಾಪುರ ಮಠದ, ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಕನಸಿನ ಕೂಸಾಗಿ ಶ್ರೀ ವಿದ್ಯಾನಿಕೇತನ ಸಂಸ್ಥೆಯ ಅಡಿಯಲ್ಲಿ ಆರಂಭವಾದ ಶ್ರೀ ಭಾರತೀ ಕಲಾಕೇಂದ್ರ, ಮೂರೂರಿನ ಪ್ರಗತಿ ವಿದ್ಯಾಲಯದ
ಶಾಂತ, ಸುಂದರ ಪೃಕೃತಿಯ ನಡುವೆ ನಾಲ್ಕೇ ವರ್ಷಗಳಲ್ಲಿ ಬೆಳೆದುನಿಂತಿದೆ.

ಹಳೆಬೇರು ಹೊಸಚಿಗುರು ಕೂಡಿರಲು ಮರಸೊಬಗು ಅನ್ನುವಂತೆ ಶೈಕ್ಷಣಿಕವಾಗಿ, ಅಧ್ಯಾತ್ಮಿಕ ವಾಗಿ ಸಂಸ್ಖತಿಯ ಬೇರುಗಳಾದ ನಮ್ಮ ಪೂರ್ವ ದ ಕಲೆ, ಸಂಗೀತಗಳನ್ನು ಅಳವಡಿಸಿಕೊಂಡರೆ ಅದು ಭಾರತೀಯತೆಯ ಮೂಲ ತತ್ವಗಳನ್ನು ಅಳವಡಿಸಿಕೊಂಡಂತೆ. ಅದೇ ಆಧಾರದ ಮೇಲೆ ಈ ಕಲಾಕೇಂದ್ರ ನಿಂತಿದೆಯೆಂದರೆ
ತಪ್ಪಲ್ಲ. ಸಂಗೀತ, ಭರತನಾಟ್ಯ, ಯಕ್ಷಗಾನ ಮತ್ತು ತಬಲಾ ಈ ನಾಲ್ಕು ವಿಧದ ಕಲಾಪ್ರಕಾರಗಳನ್ನು ಇಲ್ಲಿ ನಾಲ್ಕು ವರ್ಷಗಳಿಂದ ಕಲಿಸಲಾಗಿತ್ತಿದ್ದು ವರ್ಷ ಸುಮಾರು ಎಂಬತ್ತು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಾರದ ಶನಿವಾರ ಹಾಗೂ ಭಾನುವಾರಗಳು ಇಲ್ಲಿ ಕಲಾ ಕ್ಲಾಸುಗಳು ನಡೆಯುತ್ತವೆ. ಬೆಂಗಳೂರಿನಂತಹ
ನಗರಗಳಲ್ಲಿ ಕಲೆಗಳು ವ್ಯಾಪರಗಳಾಗಿರುವಾಗ ಹಳ್ಳಿಯ ಈ ಪುಟ್ಟ ಮಕ್ಕಳ ಪ್ರತಿಭೆಗಳಿಗೆ ಬೆಲೆಕಟ್ಟಲು ಸಾಧ್ಯವೇ? ಅನ್ನಿಸುವಂತೆ ಕಲಾಕೇಂದ್ರದ ಮಕ್ಕಳು
ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ. ಓಡುತ್ತಿರುವ ವೇಗದ ಬದುಕಿಗೆ, ಬದುಕಿನ ಜಂಜಾಟಕ್ಕೆ ಹೊರತಾಗಿ ಮನವ ಆಹ್ಲಾದಗೊಳಿಸಿವ , ಜೀವ ಭಾವ ತಂಪು ತಂಪು ಗೊಳಿಸುವ
ಯಾವ ಒತ್ತಡ, ಹೇರುವಿಕೆಯಿಲ್ಲದೇ ಅವರಿಗಿಷ್ಟವಾದ ಪ್ರಕಾರಗಳ ಅಭ್ಯಾಸ ಮಾಡುತ್ತಿರುವ ಪುಟಾಣಿಗಳ ನೋಡಿದರೆ ಎಂಥವರಿಗೂ ಮನತುಂಬುತ್ತದೆ. ನಮ್ಮ ಭಾವೀ
ಭಾರತದ ಪ್ರಜೆಗಳ ಹೀಗೆ ತಾನೆ ನಾವು ಬೆಳಸಬೇಕಾದದ್ದು.?

ಇಂದು ವಿದ್ಯೆಯು ಒಂದು ವ್ಯಾಪಾರವಾಗಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಒಂದು ಕಲಾಕೇಂದ್ರ ನಿರ್ವಹಿಸುವುದು ಸಾಮಾನ್ಯವಾದ ಕೆಲಸವಲ್ಲ.
ಸಾವಿರ ಸಾವಿರ ಕೊಟ್ಟು ಕಳಿಸುವ, ತಮ್ಮ ಮಕ್ಕಳನ್ನು ಹಠಕ್ಕೆಬಿದ್ದು ಸ್ಕೂಲುಗಳಿಗೆ ನೂಕುವ ಪಾಲಕರ ಸಂಖ್ಯೆ ಇಲ್ಲ ಈ ಊರಿನಲ್ಲಿ. ಇರುವ ಅಲ್ಪ ಫೀಸಿಗೆ
ಪರದಾಡುವ ಜನ. ಆದರೂ ಪ್ರತಿಭೆಗೆ ಮನ್ನಣೆ ಕೊಡುವ ಜನ. ಹಾಗಾಗೇ ಊರಿನ ಸಮಸ್ತ ಪಾಲಕರೂ ತಮ್ಮ ಮಕ್ಕಳನ್ನು ಕಳಿಸಿ ಈ ಕಲಾಕೇಂದ್ರದ ಬೆಳವಣಿಗೆಯಲ್ಲಿ ಪಾಲುದಾರರಾಗಿದ್ದಾರೆ. ಹಾಗೇ ಕಲಾಕೇಂದ್ರದ ಮಕ್ಕಳು ಅನೇಕ ಒಳ್ಳೆಯ ಪ್ರೊಗ್ರಾಮ್ ಗಳನ್ನು ನೀಡಿ ಕೇಂದ್ರಕ್ಕೆ ಕೀರ್ತಿ ಗಳಿಸಿಕೊಟ್ಟಿದ್ದಾರೆ.

ಕಲಾವಿಭಾಗದ ಸಂಚಾಲಕರಾಗಿ ಖ್ಯಾತ ಯಕ್ಷಗಾನ ಕಲಾವಿದ ಕೋಣಾರೆ ಸುಬ್ರಹ್ಮಣ್ಯ ಹೆಗಡೆ ನೋಡಿಕೊಳ್ಳುತ್ತಿದ್ದಾರೆ. ಹಿಂದೂಸ್ಥಾನೀ ಸಂಗೀತವನ್ನು ಖರ್ವಾದ
ವಿಶ್ವೇಶ್ವರ್ ಭಟ್, ತಬಲಾವನ್ನು ಶ್ರೀ ವಿನೋದ ಭಂಡಾರಿ. ಯಕ್ಷಗಾನವನ್ನು ಸರ್ವೇಶ್ವರ್ ಹೆಗಡೆ ಹಾಗೂ ಭರತ ನಾಟ್ಯವನ್ನು ಶ್ರೀಮತಿ ಪಲ್ಲವಿ ಅಶ್ವತ್ ಅವರು
ಹೇಳಿಕೊಡುತ್ತಿದ್ದಾರೆ. ಕಲಾಕೇಂದ್ರದಲ್ಲಿ ಪ್ರತೀವರ್ಷ ಮಕ್ಕಳ ಪ್ರತಿಭೆಗೆ ವೇದಿಕೆಯಾಗಿ ಕಲೋತ್ಸವವನ್ನು ನಡೆಸಿಕೊಡುತ್ತಾರೆ. ಹಾಗೇ ವಿದ್ಯಾರ್ಥಿಗಳಿಗೆ ರಾಜ್ಯ,
ರಾಷ್ಟ್ರಮಟ್ಟದ ಖ್ಯಾತ ಕಲಾವಿದರಿಂದ ಮಾರ್ಗದರ್ಶನವು ಸಿಗುತ್ತಿದೆ.

ಪ್ರಗತಿ ವಿದ್ಯಾಲಯದ ಶಾಲಾ ಪರಿಸರದಲ್ಲಿರುವ ಕಲಾಕೇಂದ್ರ ಶಾಲಾ ಮಕ್ಕಳ ಚೈತನ್ಯಕ್ಕೂ ಸ್ಫೂರ್ತಿಯಾಗಿದೆ.ಗುರುಕುಲ ಮಾದರಿಯ ಈ ಕಲಾಕೇಂದ್ರ
ನಮ್ಮೊಳಗೆ ಪರಂಪರೆಯ ಜ್ಯೋತಿ ಹೊತ್ತಿಸುವುದರಲ್ಲಿ ಸಂದೇಹವಿಲ್ಲ. ಪ್ರಗತಿಯ ಪಥದಲ್ಲಿ ಸಾಗುವ ಮಕ್ಕಳ ಬದುಕಿಗೆ ಈ ಕಲೆಗಳು ಜೀವನೋತ್ಸಾದ ಧಾರೆಯೆರೆಯುತ್ತಿವೆ ಅಂದರೆ ತಪ್ಪಲ್ಲ. ಸುತ್ತಲೂಹಸಿರಾದ, ವಿದ್ಯಾಥೀರ್ಥದ ಜುಳುಜುಳು ನೀರಿನ ಕಲರವದೊಂದಿಗೆ ಇಲ್ಲಿನ ಮಕ್ಕಳ ಗೆಜ್ಜೆಯ ನಾದ,
ಸಂಗೀತದ ರಾಗ, ತಬಲಾದ ತಾಳ ಹಾಗೂ ಯಕ್ಷಗಾನದ ಹಿಮ್ಮೇಳ ಸೇರಿ ಅನನ್ಯವಾದ ಪರಿಸರ ನಿರ್ಮಿಸಿವೆ.ಕಂಪ್ಯೂಟರಿನ ಮೌಸನ್ನೂ,ತಕದಿಮಿ ತಾಳವನ್ನೂ
ಮೇಳೈಸಿದ ಈ ಸಂಸ್ಥೆಗೆ ಸಾಧ್ಯವಾದರೆ ನೀವೂ ಒಂದು ಭೇಟಿಕೊಡಿ. ಈ ಮಕ್ಕಳ ನೋಡಿ ಆನಂದಿಸಿ.