ಶ್ರೀ ರಾಮಕೃಷ್ಣ ಪರಮಹಂಸರು ಹೇಳಿದ ಕಥೆಗಳು 1.ಸಂಸಾರದ ಕಾನನದಲ್ಲಿ

ಶ್ರೀ ರಾಮಕೃಷ್ಣ ಪರಮಹಂಸರು ಹೇಳಿದ ಕಥೆಗಳು 1.ಸಂಸಾರದ ಕಾನನದಲ್ಲಿ

ಒಂದು ಸಲ ಒಬ್ಬ ಕಾಡಿನ ಮೂಲಕ ನಡೆದುಕೊಂಡು ಹೋಗುತ್ತಿದ್ದ. ಆಗ ಮೂರು ಜನ ದರೋಡೆಕೋರರು ಅವನ ಮೇಲೆ ಆಕ್ರಮಣ ಮಾಡಿ, ಅವನಲ್ಲಿ ಇದ್ದುದನ್ನೆಲ್ಲ ಕಸಿದುಕೊಂಡರು. ಅವರಲ್ಲಿ ಮೊದಲನೇ ದರೋಡೆಕೋರ, "ಇವನನ್ನು ಉಳಿಸಿ ಏನು ಪ್ರಯೋಜನ” ಎಂದು ಹೇಳುತ್ತ ಅವನನ್ನು ಕೊಲ್ಲಲು ತಯಾರಾದ.

ಆಗ ಎರಡನೇ ದರೋಡೆಕೋರ "ಅವನನ್ನು ಕೊಂದು ಏನು ಪ್ರಯೋಜನ? ಅವನ ಕೈಕಾಲು ಕಟ್ಟಿ ಇಲ್ಲೇ ಬಿಡೋಣ" ಎಂದ. ಅಂತೆಯೇ ದರೋಡೆಕೋರರು ಅವನ ಕೈಕಾಲು ಕಟ್ಟಿ ಅಲ್ಲೇ ಬಿಟ್ಟು ಹೋದರು.

ಸ್ವಲ್ಪ ಸಮಯದ ನಂತರ ಮೂರನೇ ದರೋಡೆಕೋರ ಹಿಂತಿರುಗಿ ಬಂದು, “ಅಯ್ಯೋ, ನನಗೆ ಬಹಳ ವ್ಯಥೆಯಾಗಿದೆ. ನಿನಗೆ ತುಂಬಾ ನೋವಾಗಿದೆಯೇ? ನಾನು ನಿನ್ನನ್ನು ಬಂಧನದಿಂದ ಬಿಡಿಸುತ್ತೇನೆ” ಎಂದ. ಅವನನ್ನು ಬಿಡಿಸಿದ ನಂತರ, ಆ ದರೋಡೆಕೋರ "ನನ್ನ ಜೊತೆ ಬಾ. ನಾನು ನಿನ್ನನ್ನು ರಾಜಮಾರ್ಗಕ್ಕೆ ಕರೆದುಕೊಂಡು ಹೋಗಿ ಬಿಡುತ್ತೇನೆ” ಎಂದ.  ಇಬ್ಬರೂ ಅರ್ಧ ಗಂಟೆ ನಡೆದಾಗ ರಾಜಮಾರ್ಗ ಕಾಣಿಸಿತು. ಆಗ ಪ್ರಯಾಣಿಕನು ”ನೀನು ನನಗೆ ಬಹಳ ಉಪಕಾರ ಮಾಡಿದ್ದಿ. ದಯವಿಟ್ಟು ನನ್ನ ಮನೆಗೆ ಬಾ" ಎಂದು ಕೇಳಿಕೊಂಡ. ಆಗ ಮೂರನೇ ದರೋಡೆಕೋರ "ಬೇಡ  ಬೇಡ, ಅದು ಸಾಧ್ಯವಿಲ್ಲ. ಯಾಕೆಂದರೆ ಪೊಲೀಸರು ನನ್ನನ್ನು ಗುರುತಿಸಿ ಬಂಧಿಸುತ್ತಾರೆ” ಎಂದ.

ಈ ಪ್ರಪಂಚವೇ ಒಂದು ಕಾಡು. ಇಲ್ಲಿ ನಮಗೆ ಕಾಟ ಕೊಡುತ್ತಿರುವ ಮೂರು ದರೋಡೆಕೋರರೇ ಸತ್ವ, ರಜಸ್ಸು ಮತ್ತು ತಮಸ್ಸು ಎಂಬವರು. ಮನುಷ್ಯರೆಲ್ಲರೂ ಈ ಕಾಡಿನಲ್ಲಿ ಸಿಕ್ಕಿಕೊಂಡಿರುವ ಪ್ರಯಾಣಿಕರು. ತಮಸ್ಸು ಪ್ರಯಾಣಿಕರನ್ನು ಕೊಲ್ಲಲು ಪ್ರಯತ್ನಿಸುವುದು. ರಜಸ್ಸು ಅವರನ್ನು ಕಟ್ಟಿ ಹಾಕುವುದು. ಸತ್ವ ಅವನನ್ನು ತಮಸ್ಸು ಮತ್ತು ರಜಸ್ಸಿನ ಬಂಧನದಿಂದ ಪಾರು ಮಾಡುವುದು. ಸತ್ವ ರಕ್ಷಿಸುವಾಗ ಕಾಮ ಕ್ರೋಧಾದಿಗಳ ಬಂಧನದಿಂದ ಪಾರು ಮಾಡುವುದು. ಆದರೆ ಸತ್ವ ಕೂಡ ಒಬ್ಬ ದರೋಡೆಕೋರನೇ. ಯಾಕೆಂದರೆ ಇದು ಮನುಷ್ಯನಿಗೆ ಪರಮ ಸಾಯುಜ್ಯ ಪದವಿಯನ್ನು ಕೊಡಲಾರದು. ಇದು ನಮಗೆ ಆ ದಾರಿಯ ಕಡೆಗೆ ಹೋಗಲು ದಾರಿ ತೋರಿಸುವುದು. ಪ್ರಯಾಣಿಕನನ್ನು ಸತ್ವ ಬಿಡುಗಡೆ ಮಾಡಿ, “ನೋಡು ಅಲ್ಲಿದೆ, ನಿನ್ನ ಮನೆ" ಎಂದು ತೋರಿಸುತ್ತದೆ. ಆದರೆ, ಸತ್ವವು ಕೂಡ ಬ್ರಹ್ಮಜ್ನಾನಕ್ಕಿಂತ ಮಿಗಿಲಾದುದಲ್ಲ; ಅದಕ್ಕಿಂತ ಕೆಳಮಟ್ಟದಲ್ಲಿದೆ ಸತ್ವ.

ಪ್ರಾತಿನಿಧಿಕ ಫೋಟೋ: ಸತ್ವ - ರಜಸ್ - ತಮಸ್‌ನಂತೆ ಮೂವರು