ಶ್ರೀ ರಾಮಕೃಷ್ಣ ಪರಮಹಂಸರು ಹೇಳಿದ ಕಥೆಗಳು 2: ನಮ್ಮ ಸಂಸಾರದ ಆನಂದದ ಮರೆಯಲ್ಲಿರುವ ಹುಲಿ

ಒಬ್ಬ ಪ್ರಯಾಣಿಕನು ವಿಶಾಲವಾದ ಬಯಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದನು. ಕೆಲವು ಗಂಟೆಗಳ ಕಾಲ ಬಿಸಿಲಿನಲ್ಲಿ ನಡೆದು ಅವನಿಗೆ ಬಹಳ ದಣಿವಾಯಿತು. ಅವನ ಮೈಯೆಲ್ಲ ಬೆವರಿತ್ತು. ಒಂದು ಮರದ ನೆರಳಿನಲ್ಲಿ ವಿಶ್ರಮಿಸಿಕೊಳ್ಳಲಿಕ್ಕಾಗಿ ಕುಳಿತುಕೊಂಡ.
ಈಗ ನನಗೆ ಮಲಗಿಕೊಳ್ಳಲು ಒಂದು ಮೆತ್ತನೆಯ ಹಾಸಿಗೆ ಇದ್ದರೆ ಎಷ್ಟು ಚೆನ್ನಾಗಿತ್ತು ಎಂಬ ಯೋಚನೆ ಅವನ ಮನಸ್ಸಿನಲ್ಲಿ ಮೂಡಿತು. ತಕ್ಷಣವೇ ಅಲ್ಲಿ ಒಂದು ಮೆತ್ತನೆಯ ಹಾಸಿಗೆ ಪ್ರತ್ಯಕ್ಷವಾಯಿತು! ಯಾಕೆಂದರೆ ಅವನೊಂದು ಕಲ್ಪವೃಕ್ಷದ ನೆರಳಿನಲ್ಲಿ ವಿರಮಿಸುತ್ತಿದ್ದ; ಆದರೆ ಅವನಿಗೆ ಅದು ತಿಳಿಯಲಿಲ್ಲ. ಅವನು ಆ ಹಾಸಿಗೆಯಲ್ಲಿ ವಿರಮಿಸಿದ. ಆಗ ಅವನಲ್ಲಿ ಇನ್ನೊಂದು ಯೋಚನೆ ಮೂಡಿತು - ಈಗ ನನ್ನ ಕಾಲನ್ನು ಒಬ್ಬ ತರುಣಿ ಒತ್ತುತ್ತಿದ್ದರೆ ಎಷ್ಟು ಚೆನ್ನಾಗಿರುತ್ತದೆ ಎಂಬುದಾಗಿ. ತಕ್ಷಣವೇ, ಒಬ್ಬಳು ಚಂದದ ತರುಣಿ ಅಲ್ಲಿ ಪ್ರತ್ಯಕ್ಷಳಾಗಿ ಅವನ ಕಾಲನ್ನು ಒತ್ತತೊಡಗಿದಳು.
ಆಗ ಅವನಿಗೆ ಹಸಿವಾಯಿತು. "ನಾನು ಯೋಚಿಸಿದ್ದೆಲ್ಲ ನನಗೆ ಸಿಕ್ಕಿದೆ. ಈಗ ರುಚಿಯಾದ ಊಟ ಸಿಕ್ಕೀತೇ?” ಎಂದು ಯೋಚಿಸಿದ. ತಕ್ಷಣವೇ ರುಚಿರುಚಿಯಾದ ಖಾದ್ಯಗಳಿರುವ ಊಟದ ತಟ್ಟೆ ಅವನೆದುದು ಪ್ರತ್ಯಕ್ಷ. ಅವನ್ನೆಲ್ಲ ತೃಪ್ತಿಯಾಗುವ ತನಕ ತಿಂದು, ಪುನಃ ಹಾಸಿಗೆಯಲ್ಲಿ ಮಲಗಿಕೊಂಡ. ಬೆಳಗ್ಗೆಯಿಂದ ತನಗಾದ ಅನುಭವ ಮೆಲುಕು ಹಾಕುತ್ತಿದ್ದಾಗ, “ಈಗೊಂದು ಹುಲಿ ಬಂದು ನನ್ನ ಮೇಲೆ ಬಿದ್ದರೆ ಏನು ಗತಿ?" ಎಂದು ಯೋಚಿಸಿದ. ತಕ್ಷಣವೇ ಅಲ್ಲಿ ಪ್ರತ್ಯಕ್ಷವಾದ ಹುಲಿ ಅವನ ಕತ್ತನ್ನು ಕಚ್ಚಿ ರಕ್ತ ಹೀರಿ, ಅವನನ್ನು ಕೊಂದು ಹಾಕಿತು.
ಸಾಧಾರಣ ಜನರ ಸ್ವಭಾವವೇ ಹೀಗೆ. ನೀವು ಧ್ಯಾನ ಮಾಡುತ್ತಿರುವಾಗ, ಹಣಕಾಸು, ಪ್ರಾಪಂಚಿಕ ವಸ್ತುಗಳು, ಕೀರ್ತಿ ಇವುಗಳನ್ನು ಆಶೆ ಪಟ್ಟರೆ ನಿಮ್ಮ ಆಶೆಯೇನೋ ಈಡೇರುತ್ತದೆ. ಆದರೆ, ಅದರ ಹಿನ್ನೆಲೆಯಲ್ಲಿ ಭಯಾನಕವಾದ ಹುಲಿ ಇರುತ್ತದೆ. ರೋಗ, ಬಂಧುಬಳಗದವರ ಸಾವು, ನಿಮ್ಮ ಮಾನಮರ್ಯಾದೆ, ಹಣ ಮತ್ತು ಸೊತ್ತುಗಳ ನಷ್ಟ ಇತ್ಯಾದಿಗಳೇ ಆ ಹುಲಿ. ನೆನಪಿರಲಿ, ಇವು ಹುಲಿಗಿಂತ ಸಾವಿರ ಪಾಲು ಉಗ್ರವಾದವುಗಳು.